ಕಲಬುರ್ಗಿ(ಮಾ.31) : ಕೊರೋನಾ ಸೊಂಕು ತಡೆಯಲು ಭಾರತ ಲಾಕ್ ಡೌನ್ ಮಾಡಿರೋದರ ಪರಿಣಾಮ ರೈತನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರ್ಗಿ ಜಿಲ್ಲೆ ಆಳಂದ ತಾಲೂಕಿನ ಲಾಡ್ ಚಿಂಚೋಳಿ ಗ್ರಾಮದಲ್ಲಿ ನಡೆದಿದೆ. ಕಲ್ಲಂಗಡಿ ಹಣ್ಣು ಮಾರಾಟ ಮಾಡಲಾಗದ ಅಸಹಾಯಕತೆಯಿಂದ ಮನನೊಂದ ರೈತ ನೇಣಿಗೆ ಶರಣಾಗಿದ್ದಾನೆ. ಮೃತ ದುರ್ದೈವಿಯನ್ನು ಚಂದ್ರಕಾಂತ ಬಿರಾದಾರ(45) ಎಂದು ಗುರುತಿಸಲಾಗಿದೆ.
ಮೃತ ಬಿರಾದಾರ 3 ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಹಣ್ಣು ಬೆಳೆದಿದ್ದ. ಆದರೆ, ಲಾಕ್ ಡೌನ್ ಹಿನ್ನಲೆ ಸಾಗಾಟ ಮಾಡಲು ಆಗಿರಲಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಕಲ್ಲಂಗಡಿ ಹೊಲದಲ್ಲಿಯೇ ಕೊಳೆತು ಹೋಗುತ್ತಿರುವುದನ್ನು ನೋಡಿ ಮನನೊಂದು ನೇಣಿಗೆ ಶರಣಾಗಿದ್ದಾನೆ. ಘಟನೆ ಬಗ್ಗೆ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊರೋನಾ ಸೋಂಕಿನಿಂದಾಗಿ ಕಾರಣ ಇಡೀ ವಿಶ್ವ ತಲ್ಲಣಗೊಂಡಿದೆ. ಭಾರತದ ಮಟ್ಟಿಗೆ ದೊಡ್ಡ ಗದಾ ಪ್ರಹಾರವಾಗಿ ಪರಿಣಮಿಸಿದೆ. ಜನಸಾಮಾನ್ಯರು ಪರದಾಡುವಂತಾಗಿದೆ. ಇನ್ನು ರೈತರ ಸ್ಥಿತಿ ಹೇಳತೀರದು. ತೋಟಗಾರಿಕೆ ಬೆಳೆದ ರೈತರಿಗೆ ಕೊರೋನಾ ಗಾಯದ ಮೇಲೆ ಬರೆ ಎಳೆದಿದೆ. ಒಂದು ಕಡೆ ತರಕಾರಿ, ಹಣ್ಣು ಇತ್ಯಾದಿಗಳಿಗೆ ನಾಗರೀಕರು ಪರದಾಡುವಂತಾಗಿದೆ. ಆದರೆ ಲಾಕ್ ಡೌನ್ ಕಾರಣದಿಂದಾಗಿ ತಾವು ಬೆಳೆದ ಉತ್ಪನ್ನಗಳನ್ನು ಸಾಗಿಸಲಾಗದ ಸ್ಥಿತಿಯಲ್ಲಿ ರೈತರಿದ್ದಾರೆ.
ಬೇರೆ ಸಾಂಪ್ರದಾಯಿಕ ಉತ್ಪನ್ನಗಳನ್ನು ಹೇಗೋ ಕೆಲ ದಿನ ದಾಸ್ತಾನು ಮಾಡಬಹುದು. ಆದರೆ, ತೋಟಗಾರಿಕಾ ಬೆಳೆಗಳನ್ನು ಪ್ರೌಢಾವಸ್ಥೆಗೆ ಬಂದ ಕೂಡಲೇ ಮಾರಾಟ ಮಾಡಲೇಬೇಕಿದೆ. ಕಲಬುರ್ಗಿ ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಜಿಲ್ಲೆಯಲ್ಲಿ ಸುಮಾರು 3500 ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯಲಾಗಿದೆ. ಬೇಸಿಗೆ ಹಾಗೂ ಮುಂದೆ ಬರಲಿರುವ ರಂಜಾನ್ ದೃಷ್ಟಿಯಲ್ಲಿಟ್ಟುಕೊಂಡು ಕಲ್ಲಂಗಡಿ ಹಾಕಿರುವ ರೈತರು ಕೈ ಸುಟ್ಟುಕೊಳ್ಳುವಂತಾಗಿದೆ.
ಮಾರುಕಟ್ಟೆಗೆ ಕಲ್ಲಂಗಡಿ ಸಾಗಾಟ ಮಾಡಲಾಗದೆ ರೈತರು ಪರಿತಪಿಸುತ್ತಿದ್ದಾರೆ. ಹೀಗಾಗಿ ಕಲ್ಲಂಗಡಿ ಇಟ್ಟಲ್ಲಿಯೇ ಕೊಳೆಯುವಂತಾಗಿದೆ. ಇದರ ಜೊತೆಗೆ ಪಪ್ಪಾಯ ಬೆಳೆಗಾರರೂ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಜಿಲ್ಲೆಯಲ್ಲಿ ಸುಮಾರು 1000 ಎಕರೆ ಪ್ರದೇಶದಲ್ಲಿ ಪಪ್ಪಾಯ ಬೆಳೆ ಹಾಕಲಾಗಿದೆ. ಆದರೆ ಪಪ್ಪಾಯ ಬೆಳೆಯನ್ನು ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಪಪ್ಪಾಯ ಮತ್ತು ಕಲ್ಲಂಗಡಿ ಬೆಳೆಗಳಿಂದ ನೂರಾರು ಕೋಟಿ ನಷ್ಟ ಅನುಭವಿಸುವಂತಾಗಿದೆ. ದ್ರಾಕ್ಷಿ ಬೆಳೆ ಅಂತಿಮ ಹಂತಕ್ಕೆ ಬಂದಿರೋದ್ರಿಂದ, ಬಹಳಷ್ಟು ರೈತರು ಒಣದ್ರಾಕ್ಷಿಗೆ ಮೊರೆ ಹೋಗಿರುವುದರಿಂದ ಒಂದಷ್ಟು ನಿರಾಳರಾಗಿದ್ದಾರೆ. ಟೊಮೆಟೊ ಮತ್ತಿತರ ತರಕಾರಿ ಮಾರುಕಟ್ಟೆಗೆ ಪೂರೈಕೆಯಾಗುತ್ತಿರುವುದರಿಂದ ಅಷ್ಟೇನು ದೊಡ್ಡ ನಷ್ಟವಿಲ್ಲದಂತಾಗಿದೆ.
ಕಾರ್ಮಿಕರಿಗೆ ಮನೆ ಪ್ರವೇಶ ನಿರ್ಬಂಧ
ಹೊರ ರಾಜ್ಯದಿಂದ ವಾಪಸ್ಸಾದ ಕಾರ್ಮಿಕರಿಗೆ ತಾಂಡಾಕ್ಕೆ ಪ್ರವೇಶ ನಿರಾಕರಿಸಿದ ಘಟನೆ ಚಿಂಚೋಳಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಕೊರೋನಾ ಸೋಂಕು ಹತ್ತಿರಬಹುದೆಂಬ ಶಂಕೆಯಿಂದ ಕಾರ್ಮಿಕರನ್ನು ಜನತೆ ತಾಂಡಾ ಒಳಗೆ ಬಿಟ್ಟುಕೊಂಡಿಲ್ಲ. ವೈದ್ಯರು ಪರೀಕ್ಷಿಸಿದ್ದಾರೆ ಎಂದರೂ ಜನ ತಾಂಡಾದೊಳಕ್ಕೆ ಬಿಟ್ಟುಕೊಂಡಿಲ್ಲ. ಚಿಂಚೋಳಿ ತಾಲೂಕಿನ ಯಲಮಾಮಿಡಿ ಮೋನು ನಾಯಕ್ ತಾಂಡಾದಲ್ಲಿ ಘಟನೆ ನಡೆದಿದೆ.
ಮಹಾರಾಷ್ಟ್ರದ ಪುಣೆ, ಪನ್ವೇಲ್ಗಳಿಗೆ ಗುಳೇ ಹೋಗಿದ್ದ ಕಾರ್ಮಿಕರು ವಾಹನ ಸಿಗದೆ ಅನಿವಾರ್ಯವಾಗಿ ಕಾಲ್ನಡಿಗೆಯಲ್ಲಿಯೇ ಊರಿಗೆ ಬಂದಿದ್ದರು. ತಾಂಡಾಕ್ಕೆ ಬಿಟ್ಟುಕೊಳ್ಳದ ಹಿನ್ನೆಲೆ ಮರಗಳ ಕೆಳಗೆ ಜೀವನ ಸಾಗಿಸುವಂತಾಗಿದೆ. ಮರದ ಕೆಳಗೆ ಬದುಕು ಸಾಗಿಸುತ್ತಿರೋ 20ಕ್ಕೂ ಹೆಚ್ಚು ಕಾರ್ಮಿಕರಿಗೆ, ತಾಂಡಾದಲ್ಲಿರೂ ಕುಟುಂಬದ ಇತರೆ ಸದಸ್ಯರು ಊಟ ಪೂರೈಕೆ ಮಾಡುತ್ತಿದ್ದಾರೆ. ಮತ್ತೊಂದೆಡೆ ಚಿಂಚೋಳಿಯ ಚಿಮ್ಮನಚೋಡ ಗ್ರಾಮಸ್ಥರು ತಾಂಡಾ ನಿವಾಸಿಗಳನ್ನು ಊರೊಳಗೆ ಬಿಟ್ಟುಕೊಳ್ಳಲು ನಿರಾಕರಿಸಿದ್ದಾರೆ.
ಇದನ್ನೂ ಓದಿ :
ಪಾಸ್ ದುರ್ಬಳಕೆ; ತಪಾಸಣೆ ವೇಳೆ ಸಿಕ್ಕಿಹಾಕಿಕೊಂಡು ತಪ್ಪಾಯ್ತು ಬಿಟ್ಟುಬಿಡಿ ಎಂದು ಅಂಗಲಾಚಿದ ಪಾಲಿಕೆ ಸದಸ್ಯ
ಗ್ರಾಮದ ಬಸ್ ನಿಲ್ದಾಣದ ಬಳಿ ಬಿದುರು ಕಟ್ಟಿಗೆಯಿಂದ ಅಡ್ಡಗಟ್ಟಿರೋ ಗ್ರಾಮಸ್ಥರು, ಯಾವುದೇ ಕಾರಣಕ್ಕೂ ತಾಂಡಾ ನಿವಾಸಿಗಳು ಪ್ರವೇಶಿಸಬಾರದೆಂದು ಮನವಿ ಮಾಡಿಕೊಂಡಿದ್ದಾರೆ. ನೀವು ನಿಮ್ಮ ತಾಂಡಾಗಳಲ್ಲಿಯೇ ಇರಿ. ಎರಡು-ಮೂರು ವಾರ ಸಹಕಾರ ನೀಡಿ ಅಂತ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಬಹುತೇಕ ತಾಂಡಾ ನಿವಾಸಿಗಳು ಕೆಲಸ ಅರಸಿ, ಪುಣೆ, ಮಹಾರಾಷ್ಟ್ರ, ಹೈದರಾಬಾದ್, ಬೆಂಗಳೂರುಗಳಿಗೆ ಗುಳೇ ಹೋಗುವುದು ಸಾಮಾನ್ಯವಾಗಿರುವುದರಿಂದ ತಾಂಡಾ ನಿವಾಸಿಗಳನ್ನು ಒಳಗೆ ಬಿಟ್ಟುಕೊಳ್ಳುತ್ತಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ