ಬೆಂಗಳೂರು(ಏ. 30): ಮೇ 3ರ ನಂತರ ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಕೆ ಪ್ರಕ್ರಿಯೆ ನಡೆಯಬಹುದು ಎಂಬ ಸುಳಿವನ್ನು ಸಿಎಂ ಬಿಎಸ್ ಯಡಿಯೂರಪ್ಪ ನೀಡಿದ್ದಾರೆ. ಮೇ 4ರಿಂದ ಕೈಗಾರಿಕೆಗಳ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು. ಕಂಟೈನ್ಮೆಂಟ್ ಜೋನ್ (ರೆಡ್ ಝೋನ್) ಹೊರತುಪಡಿಸಿ ಉಳಿದ ಕಡೆ ಕೈಗಾರಿಕೆಗಳ ಕಾರ್ಯನಿರ್ವಹಣೆಗೆ ಅನುಮತಿ ನೀಡಲಾಗುವುದು. ಇವತ್ತು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರ ಜೊತೆ ಸಭೆ ನಡೆಸಿ ಈ ವಿಚಾರ ಚರ್ಚಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ಧಾರೆ. ಹಾಗೆಯೇ, ಉದ್ಯಮ ಪ್ರತಿನಿಧಿಗಳ ಜೊತೆಯೂ ಇವತ್ತು ಸಂಜೆ ಸಭೆ ನಡೆಸಿ ಚರ್ಚಿಸುವುದಾಗಿ ತಿಳಿಸಿದ್ಧಾರೆ.
ಆದರೆ, ಲಾಕ್ ಡೌನ್ ಸಂಪೂರ್ಣ ಸಡಿಲಿಕೆ ಇಲ್ಲ ಎಂಬುದನ್ನೂ ಯಡಿಯೂರಪ್ಪ ಈ ವೇಳೆ ಸ್ಪಷ್ಟಪಡಿಸಿದ್ದಾರೆ. ಈ ಕೊರೋನಾ ಪರಿಸ್ಥಿತಿ ಇನ್ನೂ ಮೂರು ತಿಂಗಳು ಇದ್ದರೂ ಆಶ್ಚರ್ಯ ಇಲ್ಲ. ಹೋಟೆಲ್ಗಳನ್ನು ತೆರೆಯಲು ಅನುಮತಿ ನೀಡಲಾಗುತ್ತದೆಯಾದರೂ ಅದು ಕೇವಲ ಪಾರ್ಸಲ್ಗೆ ಮಾತ್ರ ಸೀಮಿತ ಎಂದವರು ಹೇಳಿದ್ಧಾರೆ.
ಇದನ್ನೂ ಓದಿ: ವಾರಕ್ಕೊಮ್ಮೆಯಾದರೂ ಮದ್ಯದಂಗಡಿ ತೆರೆಯಲು ಚಾಮರಾಜನಗರ ಕೈ ಶಾಸಕ ಒತ್ತಾಯ
ಮೇ 3ರಂದು ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಳ್ಳುವ ನಿರ್ಧಾರ ಮತ್ತು ಹೊರಡಿಸುವ ಮಾರ್ಗಸೂಚಿ ಪ್ರಕಾರ ರಾಜ್ಯ ಸರ್ಕಾರ ಮುಂದಿನ ಹೆಜ್ಜೆ ಇರಿಸುತ್ತದೆ ಎಂದು ಯಡಿಯೂರಪ್ಪ ತಿಳಿಸಿದ್ಧಾರೆ. ಮಾಲ್ಗಳು, ಮದ್ಯದಂಗಡಿಗಳು, ಔಷಧ-ದಿನಸಿಯೇತರ ವಸ್ತುಗಳ ಮಾರಾಟದ ಅಂಗಡಿಗಳನ್ನ ತೆರೆಯುವ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಪ್ರಧಾನಿ ಮಾರ್ಗಸೂಚಿ ಪ್ರಕಾರ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.
ಮಾಧ್ಯಮಗಳ ಸುದ್ದಿಗೋಷ್ಠಿಯಲ್ಲಿ ಆರ್ ಅಶೋಕ್ ಕೂಡ ಮಾತನಾಡಿ, ಕಂಟೈನ್ಮೆಂಟ್ ವಲಯ ಬಿಟ್ಟು ಉಳಿದೆಡೆ ಉಪನೊಂದಣಿ ಕಚೇರಿಗಳನ್ನು ತೆರೆಯಲಾಗಿದೆ ಎಂದಿದ್ದಾರೆ. ಬೆಂಗಳೂರಿನಲ್ಲಿ ಸಿಮೆಂಟ್ ಮತ್ತು ಕಬ್ಬಿಣದ ಅಂಗಡಿಗಳನ್ನು ತೆರೆಯಬಹುದು. ಕ್ರಷರ್ಗಳ ಕಾರ್ಯನಿರ್ವಹಣೆಗೆ ಅವಕಾಶ ಇದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಳೆಯಿಂದಾಗಿ ಹಲವು ರಸ್ತೆಗಳು ಹಾಳಾಗಿದ್ದು, ಅವುಗಳ ದುರಸ್ತಿಗೆ ಬಿಬಿಎಂಪಿ ಜೊತೆ ತಾನು ಮಾತನಾಡುವುದಾಗಿ ಕಂದಾಯ ಸಚಿವ ಆರ್. ಅಶೋಕ್ ಈ ವೇಳೆ ಹೇಳಿದ್ಧಾರೆ. ಹಾಗೆಯೇ, ರಾಜ್ಯಾದ್ಯಂತ ಹಲವೆಡೆ ಮಳೆಯಾಗಿದ್ದರೂ ಕೆಲ ಮಳೆಯೇ ಆಗಿಲ್ಲ. ಅಂಥ 49 ತಾಲೂಕುಗಳನ್ನ ಗುರುತಿಸಿ ಬರಪೀಡಿತ ಎಂದು ಘೋಷಿಸಲಾಗಿರುವ ವಿಚಾರವನ್ನು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಕೊರೋನಾಗೆ ಬೆಳಗಾವಿ ತತ್ತರ; ರಾಜ್ಯಾದ್ಯಂತ ಇಂದು 22 ಹೊಸ ಕೇಸ್ ಪತ್ತೆ; ಸೋಂಕಿತರ ಸಂಖ್ಯೆ 557ಕ್ಕೆ ಏರಿಕೆ
ಜನರಿಗೆ ಸಿಎಂ ಅಭಿನಂದನೆ:
ಇನ್ನು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಲಾಕ್ ಡೌನ್ ನಿಯಮ ಪಾಲನೆಯ ವಿಚಾರದಲ್ಲಿ ಸಾರ್ವಜನಿಕರ ಸಹಕಾರವನ್ನು ಪ್ರಶಂಸಿಸಿದ್ದಾರೆ. ಸರ್ಕಾರದ ಪರವಾಗಿ ಸಾರ್ವಜನಿಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಲಾಕ್ ಡೌನ್ ಪಾಲನೆಯಲ್ಲಿ ನಿಮ್ಮ ಕೊಡುಗೆ ಅಪಾರವಾಗಿದೆ ಎಂದಿದ್ಧಾರೆ. ಹಾಗೆಯೇ, ಸಾರ್ವಜನಿಕರು ಭಯಪಡುವ ಮತ್ತು ಖಿನ್ನತೆಗೊಳಗಾಗುವ ಸುದ್ದಿ ಪ್ರಸಾರ ಮಾಡಬೇಡಿ. ಕೊರೋನಾ ವಾರಿಯರ್ಸ್ ಬಗ್ಗೆ ಸಕಾರಾತ್ಮಕ ಸುದ್ದಿಗಳನ್ನ ಬಿತ್ತರಿಸುವಂತೆ ಮಾಧ್ಯಮಗಳಿಗೂ ಸಿಎಂ ತಿಳಿಹೇಳಿದ್ಧಾರೆ.
ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿವೆ. ಸಾರ್ವಜನಿಕರು ಕರ್ಫ್ಯೂ ಪಾಲನೆ ಮಾಡಿದ್ಧಾರೆ. ಸಾಮಾಜಿಕ ಅಂತರ ಕಾಯ್ದುಕೊಂಡಿದ್ಧಾರೆ. ಅವರು ಆತಂಕಕ್ಕೆ ಒಳಗಾಗುವುದು ಬೇಡ. ಚೇತರಿಕೆ ಆದವರಿಗೆ ಮತ್ತು ಕೊರೋನಾ ವಾರಿಯರ್ಸ್ಗೆ ಎದೆಗುಂದದಂತೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ