ಲಸಿಕೆ ಪಡೆದ ನಂತರವೂ ಕೋವಿಡ್ನಿಂದ ನಾವು ಬಾಧಿತರಾಗುತ್ತೇವೆಯೇ ಎಂಬ ಕಳವಳ ಹೊಂದಿದವರಿಗೆ ಇಲ್ಲೊಂದು ಶುಭ ಸುದ್ದಿಯಿದ್ದು. ಭಾರತದ ಪಾಲಿಗೆ ಕೊಂಚ ನೆಮ್ಮದಿಯ ವಿಚಾರ ಎಂದು ಹೇಳಬಹುದು. ಅಸ್ಟ್ರಾಜೆನೆಕಾದ ಕೋವಿಶೀಲ್ಡ್ ಲಸಿಕೆ ಪಡೆದವರ ಮೇಲೆ ಅಧ್ಯಯನ ನಡೆಸಿದಾಗ ಈ ಲಸಿಕೆಯ ಎರಡೂ ಡೋಸ್ಗಳನ್ನು ಪಡೆದವರಿಗೆ 93% ಕಡಿಮೆ ಸೋಂಕು ಪತ್ತೆಯಾಗಿದೆ. 15.9 ಲಕ್ಷಕ್ಕೂ ಹೆಚ್ಚಿನ ಆರೋಗ್ಯ ಕಾರ್ಯಕರ್ತರು ಹಾಗೂ ಸರಕಾರದಿಂದ ನೇಮಕಗೊಂಡಿರುವ ಆರಕ್ಷಕ ದಳ, ಹೋಮ್ಗಾರ್ಡ್ಗಳಿಗೆ ಕೋವಿಶೀಲ್ಡ್ನ ಎರಡೂ ಡೋಸ್ಗಳನ್ನು ಪೂರ್ಣಗೊಳಿಸಲಾಗಿದ್ದು ಇವರ ಮೇಲೆ ಅಧ್ಯಯನ ನಡೆಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ಸೋಂಕಿನ ಅಂಶ 93% ಇಳಿಕೆಯಾಗಿದೆ ಎಂಬುದು ತಿಳಿದು ಬಂದಿದೆ.
ಬ್ರೇಕ್-ಥ್ರೂ ಸೋಂಕಿನ (ಲಸಿಕೆ ಪಡೆದವರಲ್ಲಿ ಕೋವಿಡ್ ಪರಿಣಾಮಗಳು) ಕುರಿತು ದೇಶದಲ್ಲಿ ಇದುವರೆಗೆ ಮಾಡಿದ ಅಧ್ಯಯನದ ಪ್ರಕಾರ ಲಸಿಕೆಯ ಹೊರತಾಗಿಯೂ ದೇಶದಲ್ಲಿ ಕೊರೋನಾ ದರ 1.6%ರಷ್ಟಿದೆ ಎಂದಾಗಿದೆ. ಅಂದರೆ 1000 ಸಂಪೂರ್ಣ ಲಸಿಕೆ ಪಡೆದವರಲ್ಲಿ 16 ಜನರು ಮತ್ತೆ ಕೊರೋನಾ ಸೋಂಕಿಗೆ ಒಳಗಾಗಬಹುದು ಎಂದಾಗಿದೆ. ಲಸಿಕೆಯ ಎರಡೂ ಡೋಸ್ಗಳನ್ನು ಪಡೆದ ಎರಡು ವಾರಗಳ ನಂತರ ಮಾತ್ರವೇ ವ್ಯಕ್ತಿ ಸಂಪೂರ್ಣ ಲಸಿಕೆ ಪಡೆದಿದ್ದಾನೆ ಎಂಬುದನ್ನು ಖಚಿತಪಡಿಸಲಾಗುತ್ತದೆ. ಬ್ರೇಕ್-ಥ್ರೂ ಸೋಂಕಿನ ದರವನ್ನು ಅಂದಾಜಿಸುವ ಈ ಅಧ್ಯಯನವನ್ನು ಚಂಡೀಗಢದ ಪಿಜಿಐ ಮಾಡಿದ್ದು ಇದನ್ನು ಪ್ರಸಿದ್ಧ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ನಲ್ಲಿ ಪ್ರಕಟಿಸಲಾಗಿದೆ.
ವ್ಯಾಕ್ಸಿನ್ನ ಪರಿಣಾಮದ ಮೇಲೆ ವಿಶ್ವದ ಅತಿ ದೊಡ್ಡ ಅಧ್ಯಯನ
AFMCಯ ಈ ಅಧ್ಯಯನವು ವಿಶ್ವದಲ್ಲಿಯೇ ಇದುವರೆಗೆ ನಡೆಸಲಾದ ಅತಿದೊಡ್ಡ ಅಧ್ಯಯನ ಎಂಬುದಾಗಿ ಪರಿಗಣಿಸಲಾಗಿದೆ. ಸಂಶೋಧಕರ ಪ್ರಕಾರ ಇದುವರೆಗೆ ಮಾಡಿದ ಎಲ್ಲಾ ಅಧ್ಯಯನಗಳ ಮಾದರಿ ಗಾತ್ರವು 10 ಲಕ್ಷಕ್ಕಿಂತ ಕಡಿಮೆ ಎಂದು ತಿಳಿಸಿದ್ದು VIN-WIN cohort ಬಹುಶಃ ಲಸಿಕೆಯ ಪರಿಣಾಮಕಾರಿತ್ವದ ಕುರಿತು ವಿಶ್ವದಾದ್ಯಂತದ ನಡೆಸಿದ ಅತಿದೊಡ್ಡ ಅಧ್ಯಯನಗಳಲ್ಲಿ ಒಂದಾಗಿದೆ ಎಂದು ನಾವು ನಂಬುತ್ತೇವೆ. ಕೋವಿಶೀಲ್ಡ್ ಲಸಿಕೆಯು ಆಕ್ಸ್ಫರ್ಡ್-ಅಸ್ಟ್ರಾಜೆನೆಕಾದ AZD-1222 ಫಾರ್ಮುಲೇಶನ್ನ ಭಾರತದಲ್ಲಿ ತಯಾರಾದ ವಾರಂಟಿ ಹೊಂದಿರುವ ಲಸಿಕೆಯಾಗಿದೆ. ಭಾರತದಲ್ಲಿ ಕೋವಿಡ್-19 ವಿರುದ್ಧ ಬಳಸುತ್ತಿರುವ ಲಸಿಕೆಗಳಲ್ಲಿ ಇದೂ ಒಂದಾಗಿದೆ.
ಅಧ್ಯಯನಗಳಲ್ಲಿ ಪಾಲ್ಗೊಂಡಿರುವವರಲ್ಲಿ 95.4% ಜನರು ಪೂರ್ಣ ಲಸಿಕೆ ಪಡೆದವರು
ಈ ಅಧ್ಯಯನದಲ್ಲಿ ಪಾಲ್ಗೊಂಡ 15,95,630 ಸರಾಸರಿ ಜನರ ವಯಸ್ಸು 27 ವರ್ಷಗಳಾಗಿದ್ದು, 99% ಪುರುಷರಿದ್ದರು. 135 ದಿನಗಳ ಕಾಲ ನಡೆದ ಈ ಅಧ್ಯಯನದಲ್ಲಿ ಪಾಲ್ಗೊಂಡವರಲ್ಲಿ, ಮೇ 30ರ ವೇಳೆಗೆ, ಒಂದೇ ಡೋಸ್ ಪಡೆದ 95.4% ಜನರಿದ್ದರು ಮತ್ತು ಲಸಿಕೆಯ ಎರಡೂ ಡೋಸ್ಗಳನ್ನು ಪಡೆದ 82.2% ಜನರಿದ್ದರು. ಈ ಅಧ್ಯಯನದಲ್ಲಿ ಪಾಲ್ಗೊಂಡವರು ಲಸಿಕೆ ಹಾಕದವರಿಂದ ಭಾಗಶಃ ಲಸಿಕೆ ಹಾಕಿದ ಹಾಗೂ ಪೂರ್ಣ ಲಸಿಕೆ ಪಡೆದ ವಿಭಾಗಕ್ಕೆ ಬದಲಾಗುತ್ತಿದ್ದರು. ಈ ರೀತಿಯಾಗಿ ಪ್ರತಿ ವರ್ಗದ ಪಾಲ್ಗೊಳ್ಳುವವರ ಸಂಖ್ಯೆ ಬದಲಾಗುತ್ತಿತ್ತು. ಪಾಲ್ಗೊಂಡವರು ಲಸಿಕೆ ಪಡೆಯದ, ಲಸಿಕೆಯ ಒಂದು ಡೋಸ್ ಪಡೆದ ಹಾಗೂ ಲಸಿಕೆಯ ಎರಡೂ ಡೋಸ್ಗಳನ್ನು ಪಡೆದ ವರ್ಗಗಳಲ್ಲಿ ಇರುತ್ತಿದ್ದುದರಿಂದ ಅಪಾಯದಲ್ಲಿರುವ ಜನರ ಸಂಖ್ಯೆಯನ್ನು ಅಳೆಯಲು ವಿಶೇಷ ದಿನ ಪರ್ಸನ್-ಡೇ ಅಳವಡಿಸಿಕೊಳ್ಳಲಾಯಿತು.
ಈ ರೀತಿಯಾಗಿ 50 ಪರ್ಸನ್ – ಡೇ ಅರ್ಥವೇನೆಂದರೆ
*50 ಜನ ಒಂದು ದಿನದ ಮಟ್ಟಿಗೆ ಆ ವರ್ಗದಲ್ಲಿ ಇರುವುದು
*1 ವ್ಯಕ್ತಿ 50 ದಿನದವರೆಗೆ ಒಂದೇ ವರ್ಗದಲ್ಲಿರುವುದು
*25 ಜನರು 2 ದಿನದವರೆಗೆ ಒಂದೇ ವರ್ಗದಲ್ಲಿರುವುದು
ಹೀಗೆ ಎಲ್ಲಾ ವರ್ಗಗಳಲ್ಲಿಯೂ ಲೆಕ್ಕಾಚಾರಗಳನ್ನು ಮಾಡಲಾಗಿದೆ.
ಅಧ್ಯಯನದಲ್ಲಿ ಪಾಲ್ಗೊಂಡ 15.9 ಲಕ್ಷ ಜನರಲ್ಲಿ ಕೊರೋನಾದ ಅಂಕಿಅಂಶ
ಲಸಿಕೆ ಹಾಕದವರು – 10,061
ಲಸಿಕೆಯ ಒಂದು ಡೋಸ್ ಪಡೆದವರು – 1,159
ಲಸಿಕೆಯ ಎರಡೂ ಡೋಸ್ ಪಡೆದವರು – 2,512
ಅಧ್ಯಯನದಲ್ಲಿ ಪಾಲ್ಗೊಂಡ 15.9 ಲಕ್ಷ ಜನರಲ್ಲಿಮರಣದ ಪ್ರಮಾಣ
ಲಸಿಕೆ ಪಡೆಯದವರು – 37
ಲಸಿಕೆಯ ಒಂದು ಡೋಸ್ ಪಡೆದವರು – 16
ಲಸಿಕೆಯ ಎರಡೂ ಡೋಸ್ ಪಡೆದವರು – 7
ಲಸಿಕೆಯ ಒಂದು ಡೋಸ್ ಕೊರೋನಾದ ವಿರುದ್ಧ 82% ಪ್ರಭಾವಶಾಲಿಯಾಗಿದೆ
ಈ ತಿಂಗಳ ಆರಂಭದಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್, ತಮಿಳುನಾಡು ಪೊಲೀಸ್ ಇಲಾಖೆ, ಐಸಿಎಂಆರ್-ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಮತ್ತು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್ ನಡೆಸಿದ ಅಧ್ಯಯನದ ಫಲಿತಾಂಶಗಳನ್ನು ವರದಿ ಮಾಡಿದ್ದು ಲಸಿಕೆಯ ಒಂದೇ ಡೋಸ್ 82% ರಷ್ಟು ಪರಿಣಾಮಕಾರಿಯಾಗಿದೆ. ಎರಡೂ ಡೋಸ್ಗಳನ್ನು ತೆಗೆದುಕೊಳ್ಳುವವರಲ್ಲಿ, ಕೊರೊನಾ ವಿರುದ್ಧದ ಪರಿಣಾಮವು 95%ಕ್ಕೆ ಏರಿಕೆಯಾಗಿದೆ.
ಆಸ್ಪತ್ರೆಯಲ್ಲಿ ದಾಖಲಾಗಿರುವ 87.5% ಜನರು ಲಸಿಕೆ ಪಡೆಯದವರು
ಮಹಾರಾಷ್ಟ್ರದ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ನಿರ್ದೇಶಕರು 20 ಸರಕಾರಿ ಕೋವಿಡ್ ಕೇಂದ್ರಗಳಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಕೊರೊನಾದಿಂದ ಆಸ್ಪತ್ರೆಗೆ ದಾಖಲಾದ 87.5% ಜನರು ಲಸಿಕೆ ಪಡೆಯದವರು ಎಂಬುದು ತಿಳಿದುಬಂದಿದೆ.
ಅಧ್ಯಯನದ ಫಲಿತಾಂಶಗಳು ಲಸಿಕೆಯ ವಿರುದ್ಧ ಜನರ ಅನುಮಾನಗಳನ್ನು ನಿವಾರಿಸುತ್ತದೆ
ಅಧ್ಯಯನದ ಸಹ ಲೇಖಕ ಮತ್ತು ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ಮಹಾನಿರ್ದೇಶಕರಾದ ರಜತ್ ದತ್ತಾ, ಈ ಅಧ್ಯಯನದ ಫಲಿತಾಂಶಗಳು ಕೊರೋನಾ ವಿರುದ್ಧ ಲಸಿಕೆಯ ಪರಿಣಾಮದ ಬಗ್ಗೆ ಜನರಿಗೆ ತಿಳಿಸುತ್ತವೆ ಎಂದು ಹೇಳುತ್ತಾರೆ. ಲಸಿಕೆಯ ಬಗ್ಗೆ ಯಾವುದೇ ಸಂದೇಹ ಹೊಂದಿರುವ ಜನರಿಗೆ ಈ ಅಧ್ಯಯನದಿಂದ ಲಸಿಕೆಯ ಮಹತ್ವದ ಅರಿವಾಗುತ್ತದೆ ಮತ್ತು ಅವರನ್ನು ಆವರಿಸಿದ್ದ ಭಯ ದೂರವಾಗುತ್ತದೆ ಎಂದು ತಿಳಿಸಿದ್ದಾರೆ.
ಲಸಿಕೆಯ ನಂತರವೂ ಕೋವಿಡ್ ನಿಯಮಾವಳಿಗಳನ್ನುಅನುಸರಿಸಿ
ನೀತಿ ಆಯೋಗದ ಸದಸ್ಯರಾದ ಡಾ.ವಿ.ಕೆ. ಪಾಲ್ ಹೇಳುವಂತೆ ಕೋವಿಡ್ ವಿರುದ್ಧದ ಹೋರಾಟದಲ್ಲಿ ಲಸಿಕೆಯೊಂದೇ ಪರಿಣಾಮಕಾರಿ ಅಸ್ತ್ರವಾಗಿದೆ ಎಂದು ತಿಳಿಸಿದ್ದಾರೆ. ಲಸಿಕೆ ಪಡೆಯುವುದರಿಂದ ವೈರಾಣುವಿನ ಹುಟ್ಟಡಗಿಸಬಹುದು ಎಂದು ಪಾಲ್ ಸಲಹೆ ನೀಡಿದ್ದು, ಲಸಿಕೆ ಪಡೆದ ನಂತರವೂ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ತಿಳಿಸಿದ್ದಾರೆ. ಕೊರೋನಾದ ವಿರುದ್ಧ ಯಾವುದೇ ಲಸಿಕೆ ಸಂಪೂರ್ಣ ಖಾತರಿ ನೀಡುವುದಿಲ್ಲ, ಆದರೆ ಇದು ಖಂಡಿತವಾಗಿಯೂ ಸೋಂಕಿನ ಗಂಭೀರ ಪರಿಣಾಮಗಳಿಂದ ನಿಮ್ಮನ್ನು ರಕ್ಷಿಸುತ್ತದೆ ಹಾಗಾಗಿ ಲಸಿಕೆ ನೀಡುವುದನ್ನು ಆದಷ್ಟು ಬೇಗನೇ ಪೂರ್ಣಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ