Covid Vaccine: ಕೋವಿಶೀಲ್ಡ್, ಕೋವ್ಯಾಕ್ಸಿನ್‌ ಲಸಿಕೆಗಳನ್ನು ಮಿಕ್ಸ್‌ ಮಾಡಬಹುದಾ? ಈ ಬಗ್ಗೆ ಪ್ರಯೋಗ ನಡೆಸಲು ತಜ್ಞರ ಸಮಿತಿ ಶಿಫಾರಸು

Corona Vaccine: ಮಿಕ್ಸ್ ಆಂಡ್ ಮ್ಯಾಚ್ ತಂತ್ರವನ್ನು ಹೆಟೆರೊಲಾಜಸ್ ಪ್ರೈಮ್ ಮತ್ತು ಬೂಸ್ಟ್‌ ಎಂದು ಕರೆಯಲಾಗುತ್ತದೆ. ಇದನ್ನು ಈ ಹಿಂದೆ ಎಬೋಲಾ ಮತ್ತು ಏಡ್ಸ್‌ನಂತಹ ರೋಗಗಳ ವಿರುದ್ಧ ಬಳಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ದೇಶದಲ್ಲಿ ಕೊರೊನಾ ವೈರಸ್‌ ಹೊಸ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಕೆಲವು ರಾಜ್ಯಗಳಲ್ಲಿ ಸೋಂಕಿತರು ಹೆಚ್ಚಾಗಿರುವುದು ತಲೆನೋವಾಗಿದೆ. ಈ ಹಿನ್ನೆಲೆ ಎಲ್ಲರಿಗೂ ಕೋವಿಡ್ - 19 ವಿರುದ್ಧ ಹೋರಾಡಲು ಲಸಿಕೆ ಪಡೆಯುವಂತೆ ಪ್ರಧಾನಿ ಮೋದಿ, ಆರೋಗ್ಯ ಸಚಿವಾಲಯ, ರಾಜ್ಯ ಸರ್ಕಾರಗಳು ಸೇರಿದಂತೆ ಹಲವರು ಮನವಿ ಮಾಡುತ್ತಲೇ ಇದ್ದಾರೆ. ಇನ್ನು, ದೇಶದಲ್ಲಿ ಸದ್ಯ ಪ್ರಮುಖವಾಗಿ ಬಳಕೆಯಲ್ಲಿರುವ ಹಾಗೂ ಭಾರತ ನಿರ್ಮಿತ ಕೋವಿಶೀಲ್ಡ್‌ (Covishield), ಕೋವ್ಯಾಕ್ಸಿನ್‌ (Covaxin) ಲಸಿಕೆ ಕೊರೊನಾ ಸೋಂಕು ತಡೆಗಟ್ಟುವಲ್ಲಿ ಪರಿಣಾಮ ಬೀರುತ್ತದೆ ಎಂದು ಕೆಲ ಅಧ್ಯಯನಗಳು ಈಗಾಗಲೇ ಹೇಳಿವೆ. ಎರಡೂ ಲಸಿಕೆಗಳು ಕೆಲ ವಿಭಿನ್ನ ಸ್ವರೂಪ ಹೊಂದಿರುವುದರಿಂದ ಎರಡೂ ಲಸಿಕೆಗಳನ್ನು ಮಿಶ್ರಣ ಮಾಡಿ ನೀಡಬೇಕು ಎನ್ನುವ ಮಾತುಗಳು ಸಹ ಕೇಳಿಬರುತ್ತಿದೆ. ಈ ಸಂಬಂಧ ಅಸ್ತಿತ್ವದಲ್ಲಿರುವ ಕೋವಿಡ್ -19 ಪ್ರೋಟೋಕಾಲ್ ನವೀಕರಣಕ್ಕೆ ಸಂಬಂಧಿಸಿದಂತೆ ಕೆಲವು ನಿರ್ಣಾಯಕ ವಿಷಯಗಳ ಬಗ್ಗೆ ಚರ್ಚಿಸಲು ಗುರುವಾರ ಸಭೆ ಸೇರಿದ ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಯ ವಿಷಯ ತಜ್ಞರ ಸಮಿತಿ (SEC) ಲಸಿಕೆ ಪ್ರಮಾಣವನ್ನು ಮಿಶ್ರಣ ಮಾಡಲು ಶಿಫಾರಸು ಮಾಡಿದೆ.


ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್‌ ಲಸಿಕೆ ಪ್ರಮಾಣವನ್ನು ಬೆರೆಸಲು ಮತ್ತು ಹೊಂದಿಸಲು SEC ಒಪ್ಪಿಗೆ ನೀಡಿದೆ ಎಂದು ಮೂಲಗಳು ಸಿಎನ್‌ಎನ್-ನ್ಯೂಸ್ 18 ಗೆ ತಿಳಿಸಿದೆ. ಅಲ್ಲದೆ, ವೆಲ್ಲೂರ್‌ನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು (CMC) ಗೆ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್‌ ಮಿಶ್ರಣ ಮಾಡಿ ಕ್ಲಿನಿಕಲ್ ಪ್ರಯೋಗ ನಡೆಸಲು ಅನುಮತಿ ನೀಡುವಂತೆಯೂ ವಿಷಯ ತಜ್ಞರ ಸಮಿತಿ ಶಿಫಾರಸು ಮಾಡಿದೆ.


ಕೊರೊನಾ ವೈರಸ್‌ ರೂಪಾಂತರಗೊಳ್ಳುತ್ತಾ ಮತ್ತು ವಿಕಾಸಗೊಳ್ಳುತ್ತಿರುವುದರಿಂದ ಎರಡು ವಿಭಿನ್ನ ಲಸಿಕೆಗಳನ್ನು ಬೆರೆಸುವ ದಕ್ಷತೆಯ ಸುತ್ತಲೂ ಹೆಚ್ಚು ಮಾತುಗಳು ಕೇಳಿಬರುತ್ತಿದೆ. ಈ ಹಿನ್ನೆಲೆ ಸಿಎಂಸಿ ವೆಲ್ಲೂರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ತಜ್ಞರ ಸಮಿತಿ ಕೋವ್ಯಾಕ್ಸಿನ್‌ ಮತ್ತು ಕೋವಿಶೀಲ್ಡ್‌ನ ಪರಸ್ಪರ ವಿನಿಮಯ ಪ್ರೋಟೋಕಾಲ್ ಅನ್ನು ವಿವರವಾಗಿ ಚರ್ಚಿಸಿತು. ಇದು ಎರಡು ದೇಶೀಯ ಲಸಿಕೆಗಳ ಮೊದಲ ಮಿಕ್ಸ್ ಅಂಡ್‌ ಮ್ಯಾಚ್‌ ಅಧ್ಯಯನವಾಗಿದೆ. ಎರಡು ವಿಭಿನ್ನ ಪ್ಲಾಟ್‌ಫಾರ್ಮ್‌ಗಳ ಆಧಾರದ ಮೇಲೆ ಲಸಿಕೆಗಳನ್ನು ಬಳಸುವುದರಿಂದ ಲಸಿಕೆ ಪಡೆದ ಫಲಾನುಭವಿಗೆ ಉತ್ತಮ ಇಮ್ಯೂನ್‌ ಪ್ರತಿಕ್ರಿಯೆಯನ್ನು ಪ್ರಚೋದಿಸಬಹುದು ಎಂದು ಕೆಲವು ತಜ್ಞರು ಪ್ರತಿಪಾದಿಸಿದರು.


ಇದನ್ನೂ ಓದಿ: Explained: ಕೊರೊನಾ ಕಡಿಮೆಯಾಗಿದೆ, ಶಾಲೆ ತೆರೆಯಿರಿ ಎನ್ನುತ್ತಿದ್ದಾರೆ... ನಿಜಕ್ಕೂ ಮಕ್ಕಳು ಸೇಫ್ ಆಗಿ ಇರ್ತಾರಾ?

ಮಿಕ್ಸ್ ಆಂಡ್ ಮ್ಯಾಚ್ ತಂತ್ರವನ್ನು ಹೆಟೆರೊಲಾಜಸ್ ಪ್ರೈಮ್ ಮತ್ತು ಬೂಸ್ಟ್‌ ಎಂದು ಕರೆಯಲಾಗುತ್ತದೆ. ಇದನ್ನು ಈ ಹಿಂದೆ ಎಬೋಲಾ ಮತ್ತು ಏಡ್ಸ್‌ನಂತಹ ರೋಗಗಳ ವಿರುದ್ಧ ಬಳಸಲಾಗಿದೆ. ಸಾಂಪ್ರದಾಯಿಕವಾಗಿ, ಒಂದೇ ಲಸಿಕೆಯ ಡೋಸ್‌ಗಳನ್ನು ಏಕರೂಪದ ವರ್ಧಕಗಳಂತೆ ಅನೇಕ ಬಾರಿ ನೀಡಲಾಗುತ್ತದೆ. ಒಂದೇ ರೀತಿಯ ಆ್ಯಂಟಿಜೆನ್‌ ಗಳನ್ನು ಹೊಂದಿರುವ ವಿಭಿನ್ನ ಲಸಿಕೆಗಳೊಂದಿಗೆ ಪ್ರೈಮ್-ಬೂಸ್ಟ್ ಮಾಡಬಹುದು ಎಂದು ಹೊಸ ಸಂಶೋಧನೆಗಳು ಸೂಚಿಸುತ್ತವೆ. ಅನೇಕ ಸಂದರ್ಭಗಳಲ್ಲಿ, ಇಂತಹ ವಿಲಕ್ಷಣ ಪ್ರೈಮ್-ಬೂಸ್ಟ್ ಏಕರೂಪದ ಪ್ರೈಮ್-ಬೂಸ್ಟ್‌ಗಿಂತ ಹೆಚ್ಚು ಇಮ್ಯುನೊಜೆನಿಕ್ ಆಗಿರಬಹುದು ಎಂದೂ ಹೇಳಲಾಗಿದೆ.

ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಆಸ್ಟ್ರಾಜೆನಿಕಾ ಲಸಿಕೆಯ ಮೊದಲ ಡೋಸ್‌ ಪಡೆದ ನಂತರ, ಎರಡನೇ ಡೋಸ್‌ಗೆ ಮಾಡರ್ನಾ ಕೊರೊನಾವೈರಸ್ ಲಸಿಕೆ ಪಡೆದಿದ್ದರು. ಈ ಮೂಲಕ ಕೋವಿಡ್‌ - 19 ಲಸಿಕೆ
ಮಿಕ್ಸ್ ಅಂಡ್‌ ಮ್ಯಾಚ್‌ ಬಗ್ಗೆ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: