ಕೋವಿಡ್ ಮೂರನೇ ಅಲೆ; ಮಕ್ಕಳಿಗೆ ಸಮರ್ಪಕ ಚಿಕಿತ್ಸಾ ವ್ಯವಸ್ಥೆ ಇಲ್ಲ: ತಜ್ಞರ ಸಮಿತಿ ವರದಿ

ಎರಡನೇ ಅಲೆಯಲ್ಲಿ ಸೃಷ್ಟಿಯಾದ ಅವಾಂತರದ ಅನುಭವದ ಮೇಲೆ ಮೂರನೇ ಅಲೆಯನ್ನ ಸಮರ್ಪಕವಾಗಿ ಎದುರಿಸಲು ತಜ್ಞರ ಸಮಿತಿಯೊಂದು ಕೆಲ ಸಲಹೆಗಳನ್ನ ಶಿಫಾರಸು ಮಾಡಿ ಪ್ರಧಾನಿ ಕಾರ್ಯಾಲಯಕ್ಕೆ ವರದಿ ಸಲ್ಲಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • News18
  • Last Updated :
  • Share this:
ನವದೆಹಲಿ(ಆ. 23): ಕೋವಿಡ್ ಮೂರನೇ ಅಲೆ ಅಕ್ಟೋಬರ್ ತಿಂಗಳಲ್ಲಿ ಗರಿಷ್ಠ ಮಟ್ಟ ಮುಟ್ಟಲಿದೆ. ಮಕ್ಕಳಿಗೆ ಈ ಮೂರನೇ ಅಲೆ ಹೆಚ್ಚು ಬಾಧಿಸಬಹುದು. ಆದರೆ, ಮಕ್ಕಳಿಗೆ ಚಿಕಿತ್ಸೆ ನೀಡಲು ಅಗತ್ಯವಾದ ವೈದ್ಯಕೀಯ ಸೌಲಭ್ಯದ ಕೊರತೆ ಇದೆ ಎಂದು ತಜ್ಞರ ಸಮಿತಿಯೊಂದು ಸಲ್ಲಿಸಿರುವ ವರದಿಯಲ್ಲಿ ಎಚ್ಚರಿಸಲಾಗಿದೆ. ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚು ಬಾಧಿತರಾದಲ್ಲಿ ಅದನ್ನ ಎದುರಿಸಲು ವೈದ್ಯರು, ವೈದ್ಯಕೀಯ ಸಿಬ್ಬಂದಿ, ವೆಂಟಿಲೇಟರ್, ಆಂಬುಲೆನ್ಸ್ ಇತ್ಯಾದಿ ಯಂತ್ರೋಪಕರಣಗಳು ಅಗತ್ಯ ಪ್ರಮಾಣದಲ್ಲಿ ಇಲ್ಲವೇ ಇಲ್ಲ ಎಂದು ಪ್ರಧಾನಿ ಕಾರ್ಯಾಲಯಕ್ಕೆ ಸಲ್ಲಿಸಲಾಗಿರುವ ವರದಿಯಲ್ಲಿ ತಿಳಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ಸ್ಥಾಪಿಸಲಾದ ರಾಷ್ಟ್ರೀಯ ವಿಪತ್ತು ನಿರ್ವಹಣೆ ಸಂಸ್ಥೆಯಿಂದ (NIDM) ರಚಿಸಲ್ಪಟ್ಟ ತಜ್ಞರ ಸಮಿತಿ ಇದಾಗಿದೆ. ಈ ಸಮಿತಿಯನ್ನ ನೀತಿ ಆಯೋಗ್ (NITI Ayog) ಸದಸ್ಯ ವಿ ಕೆ ಪೌಲ್ ಅವರು ಮುನ್ನಡೆಸುತ್ತಿದ್ದಾರೆ.

ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಕೋವಿಡ್ ಎರಡನೇ ಅಲೆ ಬರುವ ಮುನ್ನ ಮಧ್ಯಮ ಮತ್ತು ಹೆಚ್ಚು ತೀವ್ರತೆಯ ರೋಗಲಕ್ಷಣಗಳಿರುವ ಶೇ. 20ರಷ್ಟು ರೋಗಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುವ ಅಗತ್ಯ ಇದೆ ಎಂದು ಇದೇ ಸಮಿತಿ ಅಂದಾಜು ಮಾಡಿತ್ತು. ಈಗ ಮೂರನೇ ಅಲೆಗೆ ಮುನ್ನ ಇಂಥದ್ದೇ ಅಂದಾಜನ್ನು ಸಮಿತಿ ಮಾಡಿದೆ. ಕಳೆದ ತಿಂಗಳು ಸಮಿತಿ ಸಲ್ಲಿಸಿರುವ ವರದಿಯಲ್ಲಿ ಈ ಬಾರಿಯ ಅಲೆಯಲ್ಲಿ ಶೇ. 23ರಷ್ಟು ರೋಗಿಗಳಿಗೆ ಆಸ್ಪತ್ರೆಯ ಅಗತ್ಯ ಬೀಳಬಹುದು ಎಂದು ತಿಳಿಸಿದೆ. ಅಂದರೆ, ಎರಡನೇ ಅಲೆಗಿಂತ ಮೂರನೇ ಅಲೆಯಲ್ಲಿ ಕೋವಿಡ್ ತೀವ್ರತೆ ಹೆಚ್ಚಿರಬಹುದು ಎಂದು ಇದರಿಂದ ಗ್ರಹಿಸಬಹುದಾಗಿದೆ. ಆದರೆ, ಏಪ್ರಿಲ್​ನಿಂದ ಜೂನ್​ವರೆಗೆ ಇದ್ದ ಎರಡನೇ ಅಲೆಯ ವೇಳೆ ಎದುರಾದ ಸವಾಲುಗಳನ್ನ ಗಣನೆಗೆ ತೆಗೆದುಕೊಂಡು ಈಗ ಮೂರನೇ ಅಲೆಗೆ ಹೆಚ್ಚು ಬೆಡ್​ಗಳ ವ್ಯವಸ್ಥೆ ಮಾಡುವಂತೆ ತಜ್ಞರ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಜೂನ್ 1ರಂದು ಎರಡನೇ ಅಲೆಯಲ್ಲಿ ಗರಿಷ್ಠ ಸೋಂಕು ಇತ್ತು. ಆಗ ದೇಶಾದ್ಯಂತ ಸಕ್ರಿಯ ಪ್ರಕರಣಗಳ ಸಂಖ್ಯೆ 18 ಲಕ್ಷದಷ್ಟಿತ್ತು. ಅತಿ ಹೆಚ್ಚು ಪ್ರಕರಣಗಳಿದ್ದ 10 ರಾಜ್ಯಗಳಲ್ಲಿನ ಪ್ರಕರಣಗಳ ಪೈಕಿ ಶೇ. 21.74ರಷ್ಟು ಪ್ರಕರಣಗಳಲ್ಲಿ ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಅಗತ್ಯ ಇತ್ತು. ಎರಡನೇ ಅಲೆಯಲ್ಲಾದ ಅನುಭವದ ಮೇಲೆ ಮೂರನೇ ಅಲೆಯನ್ನ ಎದುರಿಸಲು ಸಜ್ಜಾಗಲಾಗುತ್ತಿದೆ. ಕೇಂದ್ರ ಸರ್ಕಾರ ಈಗಾಗಲೇ ಮೂರನೇ ಅಲೆಯನ್ನ ಎದುರಿಸಲೆಂದೇ 23,123 ಕೋಟಿ ರೂ ತೆಗೆದಿರಿಸಿದೆ. ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚು ಬಾಧಿತರಾಗುವ ಸಾಧ್ಯತೆ ಇರುವುದರಿಂದ ಪೀಡಿಯಾಟ್ರಿಕ್ (ಮಕ್ಕಳ ವೈದ್ಯಕೀಯ ಸೌಲಭ್ಯ) ವ್ಯವಸ್ಥೆಯನ್ನ ಬಲಪಡಿಸಲು ಒತ್ತು ಕೊಡಲಾಗುತ್ತಿದೆ.

ಇದನ್ನೂ ಓದಿ: ಪಾಕಿಸ್ತಾನ ವಹಿಸಿಕೊಂಡು ಬರಬೇಡಿ: ಸಿಧು ಸಲಹೆಗಾರರ ವಿರುದ್ಧ ಪಂಜಾಬ್ ಸಿಎಂ ಆಕ್ರೋಶ

ಆದರೆ, ಕೋವಿಡ್ ಮೂರನೇ ಅಲೆಯು ಮಕ್ಕಳನ್ನ ಹೆಚ್ಚು ಆವರಿಸುತ್ತದೆ ಎಂಬ ಕೆಲ ತಜ್ಞರ ಹೇಳಿಕೆಯನ್ನು ಹಲವರು ಅಲ್ಲಗಳೆಯುತ್ತಾರೆ. ಮಕ್ಕಳಿಗೆ ಮೂರನೇ ಅಲೆ ಹೆಚ್ಚು ಕಷ್ಟಕ್ಕೀಡು ಮಾಡುತ್ತದೆ ಎಂದು ಹೇಳಲು ಸಕಾರಣವಿಲ್ಲ ಎಂಬ ಅಭಿಪ್ರಾಯಗಳಿವೆ. ಆದರೆ, ಮೂರನೇ ಅಲೆ ಮಕ್ಕಳನ್ನ ಬಾಧಿಸುತ್ತದೋ ಇಲ್ಲವೋ ಅದನ್ನ ಒತ್ತಟ್ಟಿಗಿಟ್ಟು ನೋಡಿದರೂ ದೇಶಾದ್ಯಂತ ಮಕ್ಕಳ ಚಿಕಿತ್ಸೆ ಸೌಲಭ್ಯ ಸಮರ್ಪಕವಾಗಿಲ್ಲ ಎಂಬುದು ಬಹಳ ಸ್ಪಷ್ಟವಾಗಿದೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳಾದ್ದರಿಂದ ಮಕ್ಕಳಿಗೆ ವೈದ್ಯಕೀಯ ಸೌಲಭ್ಯವನ್ನು ಬಲಿಷ್ಠಗೊಳಿಸಬೇಕಾದುದು ಬಹಳ ಅಗತ್ಯ ಎಂದು ಹಲವು ತಜ್ಞರು ವಾದಿಸುತ್ತಾರೆ. ಈ ನಿಟ್ಟಿನಲ್ಲಿ ದೇಶಾದ್ಯಂತ ಮಕ್ಕಳಿಗೆ ಇರುವ ಚಿಕಿತ್ಸಾ ಸೌಲಭ್ಯವನ್ನು ಪರಿಶೀಲಿಸಿದಾಗ ಬಹಳ ಕೊರತೆ ಇರುವುದು ಕಂಡು ಬಂದಿರುವುದು ತಜ್ಞರ ಸಮಿತಿಯ ವರದಿಯಿಂದ ವೇದ್ಯವಾಗುತ್ತದೆ.
Published by:Vijayasarthy SN
First published: