HOME » NEWS » Coronavirus-latest-news » EX MINISTER MB PATIL PARTICIPATES IN VIDEO CONFERENCE WITH KANNDIGAS RESIDING ABROAD SNVS

ಮಾಜಿ ಸಚಿವರ ಜೊತೆ ಸಾಗರೋತ್ತರ ಕನ್ನಡಿಗರಿಂದ ವಿಡಿಯೋ ಸಂವಾದ; ಎರಡೆರಡು ಬಾರಿ ಕ್ವಾರಂಟೈನ್ ಬೇಡವೆಂದು ಮನವಿ

ಕೆಲ ದೇಶಗಳಿಂದ ಕರ್ನಾಟಕಕ್ಕೆ ನೇರ ವಿಮಾನ ಸಂಪರ್ಕ ಇಲ್ಲ. ಮೊದಲು ದೆಹಲಿಗೆ ಬಂದು ಅಲ್ಲಿ ಕ್ವಾರಂಟೈನ್ ಆಗಬೇಕು. ನಂತರ ಬೆಂಗಳೂರಿಗೆ ಬಂದು ಅಲ್ಲಿಯೂ ಕ್ವಾರಂಟೈನ್ ಆಗಬೇಕು. ಇದನ್ನು ತಪ್ಪಿಸಿ ಎಂದು ಸಾಗರೋತ್ತರ ಕನ್ನಡಿಗರು ಎಂಬಿ ಪಾಟೀಲರಿಗೆ ಮನವಿ ಮಾಡಿದರು.

news18-kannada
Updated:June 1, 2020, 8:00 PM IST
ಮಾಜಿ ಸಚಿವರ ಜೊತೆ ಸಾಗರೋತ್ತರ ಕನ್ನಡಿಗರಿಂದ ವಿಡಿಯೋ ಸಂವಾದ; ಎರಡೆರಡು ಬಾರಿ ಕ್ವಾರಂಟೈನ್ ಬೇಡವೆಂದು ಮನವಿ
ಸಾಗರೋತ್ತರ ಕನ್ನಡಿಗರೊಂದಿಗೆ ಎಂಬಿ ಪಾಟೀಲ್ ವಿಡಿಯೋ ಸಂವಾದ
  • Share this:
ವಿಜಯಪುರ(ಜೂ. 01): ಬೆಂಗಳೂರಿಗೆ ನೇರವಾಗಿ ವಿಮಾನ ಇಲ್ಲದ್ದರಿಂದ ದೆಹಲಿ ಮೂಲಕ ತಾಯ್ನಾಡಿಗೆ ವಾಪಸ್ಸಾಗುವ ಜನರಿಗೆ ಎರಡು ಬಾರಿ ಕ್ವಾರಂಟೈನ್ ಮಾಡಲಾಗುತ್ತಿದೆ. ಇದನ್ನು ಸರಿಪಡಿಸಬೇಕು ಎಂದು ವಿದೇಶಗಳಲ್ಲಿರುವ ಕನ್ನಡಿಗರು ಮನವಿ ಮಾಡಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಸಾಗರೋತ್ತರ ಕನ್ನಡಿಗರೊಂದಿಗೆ ಮಾಜಿ ಸಚಿವ ಎಂ.ಬಿ. ಪಾಟೀಲ್ ಏರ್ಪಡಿಸಿದ್ದ ವಿಡಿಯೋ ಸಂವಾದದ ವೇಳೆ ನೆದರ್​ಲೆಂಡ್ಸ್​ನಲ್ಲಿರುವ ಬದಾಮಿ ಮೂಲದ ಅಶೋಕ ಹಟ್ಟಿ ಈ ವಿಷಯ ಗಮನಕ್ಕೆ ತಂದಿದ್ದಾರೆ. 

200 ಕನ್ನಡಿಗರು ಮೇ ತಿಂಗಳಲ್ಲಿ ಕರ್ನಾಟಕಕ್ಕೆ ಆಗಮಿಸಿದ್ದಾರೆ. ನೆದರ್​ಲೆಂಡ್ಸ್​ ನಿಂದ ಕರ್ನಾಟಕಕ್ಕೆ ನೇರ ವಿಮಾನ ಸಂಪರ್ಕವಿಲ್ಲ. ಅಲ್ಲಿಂದ ದೆಹಲಿಗೆ ಬಂದು ಮೊದಲು ಕ್ವಾರಂಟೈನ್ ಆಗಿ ಮತ್ತೆ ಕರ್ನಾಟಕಕ್ಕೆ ಬಂದು ಎರಡನೇ ಬಾರಿ ಕ್ವಾರಂಟೈನ್ ಆಗಬೇಕಿದೆ.  ಇದನ್ನು ಸರಕಾರದ ಗಮನಕ್ಕೆ ತಂದು ಸರಿಪಡಿಸಿ ಎಂದು ಅಶೋಕ್ ಹಟ್ಟಿ ಮನವಿ ಮಾಡಿದರು.

ಆಗ ಮಾತನಾಡಿದ ಎಂ.ಬಿ. ಪಾಟೀಲ ಅವರು ರಾಜ್ಯ ಮುಖ್ಯಕಾರ್ಯದರ್ಶಿಯ ಗಮನಕ್ಕೆ ತಂದು, ಮತ್ತು ಅಗತ್ಯವಿದ್ದರೆ ಸಿಎಂ ಗಮನಕ್ಕೆ ತಂದು ಎರಡು ಬಾರಿ ಕ್ವಾರೈಂಟೈನ್ ಆಗುವದನ್ನು ಸರಿಪಡಿಸಲಾಗುವದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಲಂಡನ್ ಖ್ಯಾತ ವೈದ್ಯ ನೀರಜ್ ಪಾಟೀಲ, ನಾವೆಲ್ಲರೂ ಎಲ್ಲೇ ಇದ್ದರೂ ಬಸವ ಭಕ್ತರಾಗಿದ್ದೇವೆ. ಕೊರೊನಾ ಸಂಕಷ್ಟದಲ್ಲಿ ಬಸವ ತತ್ವಗಳು ಹೆಚ್ಚು ಪ್ರಸ್ತುತವಾಗಿವೆ. ಕಾಯಕ ಮತ್ತು ದಾಸೋಹ ಈ ಸಂಕಷ್ಟದ ಸಮಯದಲ್ಲಿ ಹೆಚ್ಚು ನೆರವಿಗೆ ಬರಲಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಂ.ಬಿ. ಪಾಟೀಲ, ಕನ್ನಡ ನಾಡಿಗೆ ಸೀಮಿತವಾಗಿದ್ದ ಬಸವಣ್ಣನನ್ನು ಜಾಗತಿಕ ಮಟ್ಟದಲ್ಲಿ ಕೊಂಡೊಯ್ದ ಕೀರ್ತಿ ತಮ್ಮದು. ತಾವು ಸಹ ಕೊರೊನಾ ಸೋಂಕಿತರಾಗಿ ಗುಣಮುಖರಾಗಿ ಮತ್ತೆ ವೈದ್ಯಕೀಯ ಸೇವೆಗೆ ಮರಳಿರುವುದು ಸಂತಸ ತಂದಿದೆ ಎಂದು ಖುಷಿಪಟ್ಟರು.

ಇದನ್ನೂ ಓದಿ: ರಾಜ್ಯದಲ್ಲಿ ಕೊರೋನಾಗೆ ಮತ್ತೊಬ್ಬ ಬಲಿ; ಸಾವಿನ ಸಂಖ್ಯೆ 52; ಒಟ್ಟಾರೆ ಪ್ರಕರಣ 3408ಕ್ಕೇರಿಕೆ

ಅಮೇರಿಕಾದ ನ್ಯೂಯಾರ್ಕ್​ನಲ್ಲಿರುವ ಕಲಬುರಗಿ ಮೂಲದ ಬಸವಪ್ರಭು ಪಾಟೀಲ ಮಾತನಾಡಿ, ಈಗ ಇಲ್ಲಿ ಬೆಳಿಗ್ಗೆ 5 ಗಂಟೆಯಾಗಿದೆ, ನಮಗೆ ಈ ಕಾರ್ಯಕ್ರಮ ಇದೆ ಅನ್ನೋದು ಗೊತ್ತಾಗಿ ನಾನು ಇಲ್ಲಿ ಭಾಗವಹಿಸಿದ್ದೇನೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಂ.ಬಿ. ಪಾಟೀಲ, ನಾವು ಮುಂಬೈನಲ್ಲಿ ಎದುರುಸುತ್ತಿರುವ ಕೊರೊನಾ ಸಂಕಷ್ಟವನ್ನು ನೀವು ಅಮೇರಿಕಾದಲ್ಲಿ ವಿಶೇಷವಾಗಿ ನ್ಯೂಯಾರ್ಕ್​ನಲ್ಲಿ ಎದುರಿಸುತ್ತಿದ್ದೀರಿ. ಸಾಧ್ಯವಾದಷ್ಟು ಅಲ್ಲಿನ ಕನ್ನಡಿಗರಿಗೆ ನೆರವಾಗಿ. ಅಲ್ಲದೆ ಬಸವಣ್ಣನವರು ನಮ್ಮ ಅಸ್ಮಿತೆಯಾಗಿದ್ದಾರೆ. ಅಣ್ಣ ಬಸವಣ್ಣನವರು ನಮ್ಮ ಹೃದಯಕ್ಕೆ ಹತ್ತಿರವಾದವರು. ಬಸವಣ್ಣನವರ ಕಾಯಕ ಧರ್ಮವನ್ನು ನಾವೆಲ್ಲರೂ ಪಾಲಿಸೋಣ ಎಂದು ತಿಳಿಸಿದರು.

ಐರ್ಲೆಂಡನಲ್ಲಿ ಶುಶ್ರೂಷಕರಾಗಿರುವ ವಿಜಯಪುರ ನಗರದ ಜೈಜಗದೀಶ ಹಿರೇಮಠ, ಈ ಕರೋನಾ ವೇಳೆಯಲ್ಲಿ ಐದು ಮಿಲಿಯನ್ ಜನಸಂಖ್ಯೆಯಲ್ಲಿ, 26,000 ಜನ ಸೊಂಕಿತರಾಗಿದ್ದಾರೆ. ಇಲ್ಲಿ ನಾವಾಗಿಯೇ ಸೆಲ್ಪ್, ಕ್ವಾರಂಟೈನ್ ಆಗಬೇಕಿದೆ. ಇಲ್ಲಿ ಮನೆ ಮನೆಗೆ ಹೋಗಿ ಚೆಕ್ ಮಾಡಿ ಕರೋನಾ ಪಾಸಿಟಿವ್ ಇದ್ದವರನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದೇವೆ. ನಾನು ಫ್ರಂಟ್​ಲೈನ್ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿರುವುದಾಗಿ ತಿಳಿಸಿದರು. ಇದಕ್ಕೆ ಎಂ.ಬಿ.ಪಾಟೀಲ್ ಅವರು ಪ್ರತಿಕ್ರಿಯಿಸಿ, ನಾವು ಪಡೆದಿರುವ ಶಿಕ್ಷಣವನ್ನು ಉಪಯೋಗಿಸಿ, ಕೊರೊನಾ ವಿರುದ್ದ ನಾವು ಹೋರಾಡಬೇಕಿದೆ. ಮೊದಲ ಕರೋನಾ ಪ್ರಕರಣ ದಾಖಲಾದಾಗ ವಿದೇಶದಿಂದ ಬರುವವರನ್ನು ತಡೆಯಬೇಕಿತ್ತು. ನಮ್ಮ ತಪ್ಪು ಹೆಜ್ಜೆಗಳಿಂದ ಈಗ ಬಡವರು, ಕೂಲಿ ಕಾರ್ಮಿಕರೂ ಸಂಕ್ಕಷ್ಟಕ್ಕೆ ಈಡಾಗಿದ್ದಾರೆ ಎಂದರು.ಇಟಲಿಯ ಟೋರಿನೊದಲ್ಲಿರುವ ಮಧು ಹೇಮೆಗೌಡ, ಮಾತನಾಡಿ, ನಾನು ಸೋನಿಯಾ ಗಾಂಧಿಯವರ ಹುಟ್ಟೂರಿನಲ್ಲಿ ಕಳೆದ 12 ವರ್ಷಗಳಿಂದ ಸೇವೆಯಲ್ಲಿದ್ದೇನೆ. ಇಲ್ಲಿ ಪರಿಸ್ಥಿತಿ ಗಂಭೀರವಾಗಿದ್ದರೂ, ಇಲ್ಲಿನ ಅನ್ನ ತಿಂದಿರುವ ಕಾರಣ ಕಷ್ಟದ ಸ್ಥಿತಿಯಲ್ಲಿಯೂ ಕೋವಿಡ್ ಡಿಪಾರ್ಟ್ಮೆಂಟ್​ನಲ್ಲಿ ಸತತವಾಗಿ 72 ದಿನದಿಂದ ಕಾರ್ಯ ನಿರ್ವಹಿಸುತ್ತಿದ್ದೆನೆ. ಇದಕ್ಕೆ ಅಣ್ಣ ಬಸವಣ್ಣನವರು ಪ್ರೇರಣೆಯಾಗಿದ್ದಾರೆ. ಸಾಲ ಮಾಡಿ ಇಲ್ಲಿ ಉನ್ನತ ಶಿಕ್ಷಣಕ್ಕಾಗಿ ಬಹಳಷ್ಟು ವಿದ್ಯಾರ್ಥಿಗಳು ಬಂದಿದ್ದಾರೆ. ಅವರಿಗೆ ಸರಕಾರದಿಂದ ಸಹಾಯ ಮಾಡಿ ಎಂದು ಮನವಿ ಮಾಡಿದರು.

ಇದನ್ನೂ ಓದಿ: ನಮ್ಮ ಜಾತಿಯವ್ರ ಹೆಸರು ಯಾಕಿಲ್ಲ? - ಕೆಪಿಸಿಸಿ ಕಾರ್ಯಾಧ್ಯಕ್ಷರ ಮುಂದೆಯೇ ಕಿತ್ತಾಡಿದ ಕಾಂಗ್ರೆಸ್​ ಕಾರ್ಯಕರ್ತರು

ದುಬೈದಿಂದ ಹಿದಾಯತ್ ಆಡೂರ, ದುಬೈ ಕನ್ನಡಿಗರ ಸಂಘದ ಚಂದ್ರಶೇಖರ ಲಿಂಗದಳ್ಳಿ. ಇಂಗ್ಲೆಂಡ್​ನಲ್ಲಿರುವ ಬಾಗಲಕೋಟ ಮೂಲದ ವೀರೇಂದ್ರ ಕೋಲಾರ, ಸ್ವೀಡನ್​ನ ಗೊಥೆನ್​ಬರ್ಗ್ ನಗರದಿಂದ ವೇದಾಂತ ಲಿಂಬಯ್ಯ ಸ್ವಾಮಿಮಠ, ಜರ್ಮನಿಯಿಂದ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹಂಚಲಿ ನಿವಾಸಿ ಶಂಕರಲಿಂಗ ಸೊನ್ನದ, ದುಬೈನ ನವೀದ ಮಾಗುಂಡಿ, ಬೆಲ್ಜಿಯಂನಲ್ಲಿ ನೆಲೆಸಿರುವ ಮಂಜುನಾಥ ವಡಗೇರಿ, ಮಸ್ಕತ್​ನ ಪ್ರಕಾಶ ಉಳ್ಳಾಗಡ್ಡಿ, ತೊರವಿಯ ಸುರೇಖಾ ಕುಲಕರ್ಣಿ ಸೇರಿದಂತೆ ಜೂಮ್ ಸಂವಾದ ಆಯೋಜಕರಾದ ಇಂಗ್ಲೆಂಡ್​ನಲ್ಲಿ ನೆಲೆಸಿರುವ ಕನಮಡಿಯ ಗೋಪಾಲ ಕುಲಕರ್ಣಿ, ಕೊಂಡಗುಳಿಯ ಬಸವ ಪಾಟೀಲ ಮೊದಲಾದವರೆಲ್ಲರೂ ಕೊರೊನಾ ಸಂಕಷ್ಟದಲ್ಲಿ ತಮ್ಮ ವಿಚಾರಗಳನ್ನು ಹಂಚಿಕೊಂಡರು.

ವಿಜಯಪುರದ ಡಾ. ಮಹಾಂತೇಶ ಬಿರಾದಾರ ಅವರು ಸಂವಾದದಲ್ಲಿ ಭಾಗವಹಿಸಿ, ವಿಜಯಪುರ ಜಿಲ್ಲೆಯ ಕೋವಿಡ್ ಸಂಕಷ್ಟದ ಸ್ಥಿತಿಯನ್ನು ಸಾಗರೋತ್ತರ ಕನ್ನಡಿಗರಿಗೆ ವಿವರಿಸಿ, ಜಿಲ್ಲಾಡಳಿತ ಮಾಡಿರುವ ಕ್ರಮಗಳನ್ನು ಗಮನಕ್ಕೆ ತಂದು, ಬಿ.ಎಲ್.ಡಿ.ಇ ಸಂಸ್ಥೆ, ಎಂ.ಬಿ.ಪಾಟೀಲ್ ಫೌಂಡೇಶನ್ ಮಾಡಿರುವ ಎಲ್ಲ ಚಟುವಟಿಕೆಗಳನ್ನು ವಿವರಿಸಿದರು. ಒಂದೂವರೆ ಗಂಟೆ ನಡೆದ ಸಂವಾದದ ಕೊನೆಯಲ್ಲಿ ಮಾತನಾಡಿದ ಎಂ. ಬಿ. ಪಾಟೀಲ, ನಾವೆಲ್ಲ ಭರವಸೆಯಿಂದ ಬದುಕೋಣ. ವಿದೇಶಗಳಲ್ಲಿ ನಿಮಗೆ ಏನಾದರೂ ನೌಕರಿ ಕಳೆದುಕೊಳ್ಳುವ ಭೀತಿ ಇದ್ದರೆ ನಮ್ಮ ತಾಯ್ನಾಡಿಗೆ ಬನ್ನಿ. ಇಲ್ಲಿ ಯಾವಾಗಲೂ ನಿಮಗೆ ಸ್ವಾಗತ.  ಇಲ್ಲಿಯೇ ಎಲ್ಲರೂ ಬದುಕಿ ಸುಂದರ ಸಮಾಜ ನಿರ್ಮಿಸೋಣ ಎಂದು ಕರೆ ನೀಡಿದರು.

ವರದಿ: ಮಹೇಶ ವಿ. ಶಟಗಾರ

Youtube Video
First published: June 1, 2020, 8:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories