ಅಚಲತೆ - 21 ದಿನಗಳ ದಿಗ್ಬಂಧನದಲ್ಲಿ ಕಲಿಯಬಹುದಾದ 21 ಸಂಗತಿ: ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ ಕಿವಿಮಾತು

ಕೊರೋನಾ ವೈರಸ್ ಸೋಂಕು ಹರಡದಂತೆ ತಡೆಯಲು ಕೇಂದ್ರ ಸರ್ಕಾರ 21 ದಿನಗಳ ಕಾಲ ಲಾಕ್ ಡೌನ್ ಮಾಡಿದೆ. 21 ದಿನ ದಿಗ್ಬಂಧನ ಎಂದರೆ ಅದೆಷ್ಟೋ ಜನರಿಗೆ ಆರ್ಥಿಕ ದುಸ್ಥಿತಿ; ಅದೆಷ್ಟೋ ಮಂದಿಗೆ ದುಗುಡ, ತಳವಳ. ಆದರೆ ಈ 21 ದಿನಗಳ ಅವಧಿಯನ್ನು ನಾವು ಹೇಗೆ ಉತ್ತಮವಾಗಿ ಬಳಸಿಕೊಳ್ಳಬಹುದು ಎಂದು ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ತಿಳಿಸಿಕೊಟ್ಟಿದ್ದಾರೆ. ಅವರು ಹೇಳಿರುವ 21 ಸಂಗತಿಗಳಲ್ಲಿ ಅಚಲತೆಯೂ ಒಂದು. ಈ ಅಚಲತೆಯ ಶಕ್ತಿಯನ್ನು ಮೊದಲ ಪಾಠವಾಗಿ ಅವರು ಹೇಳಿದ್ದಾರೆ.

news18-kannada
Updated:March 26, 2020, 3:02 PM IST
ಅಚಲತೆ - 21 ದಿನಗಳ ದಿಗ್ಬಂಧನದಲ್ಲಿ ಕಲಿಯಬಹುದಾದ 21 ಸಂಗತಿ: ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ ಕಿವಿಮಾತು
ಕೈಲಾಶ ಪರ್ವತಾರೋಹಣದ ಒಂದು ಚಿತ್ರ (ಕೃಪೆ: ಹಿಡನ್ ರೋಡ್ಸ್)
  • Share this:
ಪ್ರಿಯ ಸ್ನೇಹಿತರೇ, ಮುಂದಿನ 21 ದಿನಗಳ ಕಾಲ ನಿಮಗೆ ಕುತೂಹಲ ಮೂಡಿಸುವ ಸಂಗತಿಗಳ ಬಗ್ಗೆ ಬರೆಯಲು ಒಂದು ಪುಟ್ಟ ಪ್ರಯತ್ನ ಮಾಡುತ್ತಿದ್ದೇನೆ. ಯಾವುದಾದರೂ ದೌರ್ಬಲ್ಯತೆಯೆಡೆಗೆ ನಮ್ಮ ಮನಸ್ಸು ಹೋಗುವ ಬದಲು ಜೀವನವನ್ನು ವಿಭಿನ್ನ ದೃಷ್ಟಿಯಲ್ಲಿ ನೋಡಲು ಮನಸ್ಸನ್ನು ಅಣಿಗೊಳಿಸಿ ಹೊಸ ಸಾಧ್ಯತೆ ಕಾಣಬಹುದು. ಇದು ನನ್ನ ಆಶಯ ಮತ್ತು ಪ್ರಾರ್ಥನೆ. ನೀವು ಇದನ್ನು ಇಷ್ಟಪಡುತ್ತೀರಿ ಎಂದು ಭಾವಿಸಿದ್ದೇನೆ.

ಕಲಿಕೆ 1:

ಅಚಲತೆಯ ಶಕ್ತಿ (Power of Stillness):

ಕೊರೋನಾ ವೈರಸ್ ಅಥವಾ ಕೋವಿಡ್-19 ಎಂಬುದು ಶತಮಾನದ ಮಹಾಮಾರಿ. ನಸೀಮ್ ನಿಕೋಲಾಸ್ ತಾಲೆಬ್ ಹೇಳುವಂತೆ ಇದು ಬ್ಲ್ಯಾಕ್ ಸ್ವಾನ್ ಘಟನೆ. (ಒಂದು ಘಟನೆಯು ಅನಿಶ್ಚಿತತೆಯಿಂದ, ಅನಿರೀಕ್ಷಿತತೆಯಿಂದ ಕೂಡಿದ್ದು, ಅದಕ್ಕೆ ನಿರ್ದಿಷ್ಟ ಪ್ರತಿಕ್ರಿಯೆ ಕೊಡಲು ಸಾಧ್ಯವಾಗದೇ ಇದ್ದಲ್ಲಿ ಅದನ್ನು ಬ್ಲ್ಯಾಕ್ ಸ್ವಾನ್ ಎಂದು ಇಂಗ್ಲೀಷ್​ನಲ್ಲಿ ಪದಪ್ರಯೋಗ ಮಾಡುತ್ತಾರೆ). ನಮ್ಮೆಲ್ಲರ ಸಹಜ ಜೀವನಕ್ಕೆ ಧಕ್ಕೆಯಾಗಿದೆ. ಬಹಳಷ್ಟು ಜನರಿಗೆ ಅಸಹಾಯಕ ಭಾವನೆ ಮೂಡಿದೆ. ಈ ಲಾಕ್ ಡೌನ್​ ಮುಗಿದ ಬಳಿಕ ಜಗತ್ತು ಬದಲಾಗಿರುತ್ತದೆ. ನಾವು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುತ್ತೇವೆ. ನಮ್ಮ ಕೆಲ ಪ್ರೀತಿ ಪಾತ್ರರನ್ನು ಕಳೆದುಕೊಳ್ಳಬಹುದು. ಇನ್ನೂ ಮುಖ್ಯವಾಗಿ ನಾವು ಜನರನ್ನು ಅನುಮಾನದಿಂದ ನೋಡಲು ಪ್ರಾರಂಭಿಸಬಹುದು. ಕೆಲವರು ಈಗಾಗಲೇ ಈ ಕೆಲಸ ಮಾಡತೊಡಗಿದ್ದಾರೆ.

ನಾವು ಜೀವನವನ್ನು ಮಾಮೂಲಿಯಾಗಿ ನೋಡುವ ಬದಲು ವಿಭಿನ್ನವಾಗಿ ನೋಡುವ ಧೈರ್ಯ ತಂದುಕೊಳ್ಳಲು ಸಾಧ್ಯವೇ?

1) ಒಂದು ವಿಸ್ತೃತ ಅವಧಿಯವರೆಗೆ ನಮ್ಮ ಪ್ರೀತಿ ಪಾತ್ರರ ಜೊತೆ ಇರಲೇಬೇಕಾಗಿ (ಅನಿವಾರ್ಯವಾಗಿ) ಬಂದ ಘಟನೆಗಳಿರುತ್ತವೆ. ಅಂಥದ್ದು ಕೊನೆಯ ಬಾರಿ ಎದುರಾಗಿದ್ದು ಯಾವಾಗ?

2) ಸಮಯ ಎನ್ನುವುದು ನಮ್ಮ ಜೀವನದಲ್ಲಿ ಮಹತ್ವ ಕಳೆದುಕೊಂಡ ಕೊನೆಯ ಘಟನೆ ಯಾವುದು?3) ನಮ್ಮ ವೃತ್ತಿ, ನಮ್ಮ ಜೀವನ, ನಮ್ಮ ಸಂಬಳ, ಉನ್ನತಾಧಿಕಾರಿಗಳ ಮೆಚ್ಚುಗೆ ಹೀಗೆ ನಮ್ಮ ಜೀವನವಿಡೀ ನಾವೇ ಆವರಿಸಿಕೊಂಡಿರುತ್ತೇವೆ. ಈ ಹಿನ್ನೆಲೆಯಲ್ಲಿ ‘ನಾನು’ ಎಂಬುದನ್ನು ಮರೆಯತೊಡಗಿದ ಸಂದರ್ಭ ನಿಮಗೆ ಕೊನೆಯ ಬಾರಿ ಎದುರಾಗಿದ್ದು ಯಾವಾಗ?

4) ಮಾನವರಾಗಿ ನಾವು ನಮ್ಮ ಜೀವನದ ಮೂಗುದಾರ ನಾವೇ ಆಗಲು ಸಹಜವಾಗಿಯೇ ಬಯಸುತ್ತೇವೆ. ಆದರೆ, ನಮ್ಮ ಸ್ವಂತ ಜೀವನದ ನಿಯಂತ್ರಣವನ್ನು ನಾವು ಕಳೆದುಕೊಂಡ ಸಂದರ್ಭ ಕೊನೆಯ ಬಾರಿ ಬಂದಿದ್ದು ಯಾವಾಗ?

ನಮ್ಮ ಯೋಚನೆಯಲ್ಲಿ ನಮ್ಮ ಹಿಂದಿನ ಕ್ರಿಯೆಗಳ ಪ್ರಭಾವಳಿ ಇರುತ್ತದೆ. ಈ ಯೋಚನೆಯನ್ನು ಛಿದ್ರ ಮಾಡಲು ಮತ್ತು ನಮ್ಮ ಧೋರಣೆಯನ್ನು ಸರಳಗೊಳಿಸಲು ಹಾಗೂ ಹೊಸ ಭವಿಷ್ಯಕ್ಕೆ ಹೊಸ ಭಾಷ್ಯ ಬರೆಯಲು ‘ಈಗ’ ಸಮಯ ಬಂದಿದೆ ಎಂಬುದು ನನ್ನ ಅನಿಸಿಕೆ. ನಾವು ಇಚ್ಛಿಸಿದರೆ ಇದನ್ನು ಕಾರ್ಯಗತಗೊಳಿಸಬಹುದು.

ನನಗೆ ಇದು ಆಗಿದ್ದು 2018ರಲ್ಲಿ. ಕೈಲಾಸ ಮಾನಸರೋವರ ಯಾತ್ರೆಯಲ್ಲಿ ನಿಯೋಜನೆಗೊಂಡಿದ್ದ ಸಂಪರ್ಕಾಧಿಕಾರಿಗಳಲ್ಲಿ (Liaison Officers) ನಾನು ಒಬ್ಬನಾಗಿದ್ದೆ. ಕೇಂದ್ರ ವಿದೇಶಾಂಗ ಸಚಿವಾಲಯದ ಪ್ರತಿನಿಧಿಯಾಗಿ ಈ ಸಂಪರ್ಕಾಧಿಕಾರಿಯ ಮುಖ್ಯ ಕೆಲಸವು ಒಂದು ಬ್ಯಾಚ್​ನ ಯಾತ್ರಿಕರ ಯಾತ್ರೆ ಪೂರ್ಣವಾಗುವವರೆಗೂ ಅವರ ಯೋಗಕ್ಷೇಮ ನೋಡಿಕೊಳ್ಳುವುದು. ಅಂದರೆ ದೆಹಲಿಯಿಂದ ಹೊರಟು ಮಾನಸರೋವರ ತಲುಪಿ ನಂತರ ವಾಪಸ್ ದೆಹಲಿಗೆ ಬರುವವರೆಗೂ ಯಾತ್ರಿಕರ ಸುರಕ್ಷತೆ, ಬೇಕು ಬೇಡ ಇತ್ಯಾದಿಗಳ ವ್ಯವಸ್ಥೆ ನೋಡಿಕೊಳ್ಳುವುದು ಈ ಎಲ್​ಒ ಅಧಿಕಾರಿಗಳ ಮುಖ್ಯ ಕೆಲಸವಾಗಿರುತ್ತದೆ. ಅಂದು 2018, ಜುಲೈ 20. ದೆಹಲಿಯಿಂದ ಸರಿಯಾದ ಸಮಯಕ್ಕೆ ಯಾತ್ರಿಕರ ಒಂದು ಬ್ಯಾಚ್ ಹೊರಟಿತು. ಉತ್ತರಾಖಂಡ್, ಟಿಬೆಟ್​ನತ್ತ ಸಾಗಿತು. ಬಹಳ ಯೋಜಿತವಾಗಿ ವ್ಯವಸ್ಥೆ ಆಗುವ ಈ 23 ದಿನಗಳ ಯಾತ್ರೆಯ ಹಾದಿ ಕಠಿಣವಾಗಿರುತ್ತದೆ. ಜುಲೈ 20ಕ್ಕೆ ಹೊರಟು ಆಗಸ್ಟ್ 11ಕ್ಕೆ ನಾವು ದೆಹಲಿಗೆ ಬರಬೇಕು. ಬೆಂಗಳೂರಿಗೆ ನನ್ನ ರಿಟರ್ನ್ ಫ್ಲೈಟ್ ಟಿಕೆಟ್ ಬುಕ್ ಮಾಡಿದ್ದೂ ಸೇರಿ ನಾನು ಎಲ್ಲವನ್ನೂ ಬಹಳ ಸೂಕ್ಷ್ಮವಾಗಿ, ನಿಖರವಾಗಿ ಯೋಜಿಸಿದ್ದೆ. ಆದರೆ, ಯಾತ್ರೆಯ ಮೂರನೇ ದಿನದಿಂದ ಆದ ಘಟನೆ ನಿಜಕ್ಕೂ ಅವಿಸ್ಮರಣೀಯವಾದುದು.

ಉತ್ತರಾಖಂಡ್​ನಲ್ಲಿರುವ ಪಿತ್ತೋರಗಡ್​ನಿಂದ ಗುಂಜಿಯವರೆಗೆ ಯಾತ್ರಿಕರನ್ನು ಸಾಗಿಸುವ ಎಂಐ-7 ಹೆಲಿಕಾಪ್ಟರ್ ದಟ್ಟ ಮೋಡ ಕವಿದ ವಾತಾವರಣದಿಂದಾಗಿ ಹಾರಾಟ ನಡೆಸಿರಲಿಲ್ಲ. ಇದರಿಂದಾಗಿ ನಮ್ಮ ಹಿಂದಿನ ಯಾತ್ರಿಕರ ಬ್ಯಾಚ್​ಗಳ ಪ್ರಯಾಣ ವಿಳಂಬವಾಗಿತ್ತು. ಆಗ ಕೇರಳದಲ್ಲಿ ಭಾರೀ ಪ್ರವಾಹ ಬಂದಿದ್ದರಿಂದ ಇಲ್ಲಿನ ಕೆಲ ಹೆಲಿಕಾಪ್ಟರ್​ಗಳನ್ನ ಕೇರಳಕ್ಕೆ ಕಳುಹಿಸಲಾಯಿತು. ಇಂಥ ಸಂದರ್ಭದಲ್ಲಿ ನಾವು ಗುಂಜಿ ತಲುಪುವಷ್ಟರಲ್ಲಿ ನಿಗದಿಗಿಂತ 7 ದಿನ ಹೆಚ್ಚುವರಿ ಸಮಯ ಹಿಡಿಯಿತು. ಆಗಲೇ ನಮ್ಮ ವೇಳಾಪಟ್ಟಿ ತಲೆಕೆಳಗು ಆಗಿಹೋಗಿತ್ತು. ಗುಂಜಿ ಎಂಬುದು ಟಿಬೆಟ್ ಗಡಿ ಮುಟ್ಟುವ ಮುನ್ನ ಸಿಗುವ ಕೊನೆಯ ಭಾರತೀಯ ಹಳ್ಳಿಯಾಗಿದೆ. ಇಲ್ಲಿಂದ ನಾವು ಲಿಪುಲೇಖ್ ಮಾರ್ಗದ ಮೂಲಕ ಟಿಬೆಟ್ ಪ್ರವೇಶಿಸುತ್ತೇವೆ. ಆದರೆ, ನಾವು ಗುಂಜಿ ಗ್ರಾಮ ತಲುಪುವಷ್ಟರಲ್ಲಿ ನಮ್ಮ ಚೀನೀ ವೀಸಾದ ಅವಧಿ ಮುಗಿದುಹೋಗಿತ್ತು. ಆಗ, ನಮ್ಮ ಬ್ಯಾಚ್​ನ ಯಾತ್ರಿಕರನ್ನು ಗುಂಜಿಯಲ್ಲೇ ಉಳಿಸಿಕೊಂಡು ನಾನು ಅವರ ಯೋಗಕ್ಷೇಮ ನೋಡಿಕೊಳ್ಳಬೇಕೆಂಬ ನಿರ್ಧಾರವಾಯಿತು. ನನ್ನ ಜೊತೆ ಇದ್ದ ಮತ್ತೊಬ್ಬ ಸಂಪರ್ಕಾಧಿಕಾರಿ (ಎಲ್ ಓ) ಯಾತ್ರಿಕರ ವೀಸಾ ಪರಿಷ್ಕರಣೆಗಾಗಿ ಎರಡು ಹೆಲಿಕಾಪ್ಟರ್​ಗಳ ಮೂಲಕ ದೆಹಲಿಗೆ ವಾಪಸ್ ಹೋಗುತ್ತಾರೆ.

IPS Officer Annamalai Submits Resignation
ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈ (ಸಂಗ್ರಹ ಚಿತ್ರ)


ನಮ್ಮ ಯಾತ್ರಿಕರ ಗುಂಪಿನಲ್ಲಿ ವಿಭಿನ್ನ ಹಿನ್ನೆಲೆಯ, ವಿಭಿನ್ನ ಸ್ತರದ ವ್ಯಕ್ತಿಗಳಿದ್ದರು. ಗುಜರಾತ್​ನ ದೊಡ್ಡ ವಜ್ರೋದ್ಯಮಿ, ಸಾಲ ಮಾಡಿಕೊಂಡ ಯಾತ್ರೆಗೆ ಬಂದಿದ್ದ ವ್ಯಕ್ತಿ, ವರ್ಷಗಟ್ಟಲೆ ತನ್ನ ಸ್ವಂತ ಗ್ರಾಮದಿಂದ ಹೊರಗೇ ಹೋಗದಿದ್ದ ಮಹಿಳೆ, ಹರಿಯಾಣದ ಅತ್ಯಂತ ಕಡುವ ಬಡವನಾಗಿದ್ದ ಮೆಕ್ಯಾನಿಕ್ ಮೊದಲಾದವರು ಈ ಬ್ಯಾಚ್​ನಲ್ಲಿದ್ದ ಯಾತ್ರಿಕರು. ಇವರೆಲ್ಲರೂ ಒಂದು ರೀತಿಯಲ್ಲಿ ವಿಚಲಿತಗೊಂಡಿದ್ದರು. ಕೆಲವರಿಗೆ ಇದು ಆರ್ಥಿಕ ಲಾಭ ಕೈತಪ್ಪಿದ ಲೆಕ್ಕಾಚಾರವಾಗಿದ್ದರೆ, ಕೆಲವರಿಗೆ ತಮ್ಮ ಮನೆಯಲ್ಲಿ ಮಕ್ಕಳನ್ನು ಸುಖಾಸುಮ್ಮನೆ ಕಾಯಿಸಬೇಕಾಯಿತಲ್ಲ ಎಂಬ ಸಂಕಟ (ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನ ಬಿಟ್ಟು ಬಂದಿರುವ ನಾಲ್ಕು ಮಹಿಳೆಯರು ಈ ಯಾತ್ರಿಕರ ಗುಂಪಿನಲ್ಲಿದ್ದರು). ನನಗೆ ನನ್ನ 3 ವರ್ಷದ ಮಗನಿಂದ ದೂರವಾಗಿದ್ದು ಮತ್ತು ನನ್ನ ವೃತ್ತಿಸಂಬಂಧಿತ ಬದ್ಧತೆಗಳಿಂದ ದೂರ ಉಳಿದಿದ್ದು ಚಿಂತೆ ತಂದಿತ್ತು. ನಾವೆಲ್ಲರೂ ನಮ್ಮ ಸ್ವಂತ ಜೀವನಕ್ಕೇ ಇನ್ನೂ ಜೋತು ಬಿದ್ದಿದ್ದೆವು. ಏನು ತಪ್ಪು ಏನು ಸರಿ ಎಂಬುದರ ನಮ್ಮ ಹಿಂದಿನ ಅನುಭವದ ಮೇಲೆ ಜೀವನ ನಡೆಸುತ್ತಿದ್ದೆವು. ಇದು ನಾವೆಲ್ಲರೂ ಮಾಡುತ್ತಿದ್ದ ತಪ್ಪುಗಳಾಗಿದ್ದವು.

ನಮ್ಮ ತಂಡದವರ ವೀಸಾ ಬರುವಷ್ಟರಲ್ಲಿ ಗುಂಜಿ ಗ್ರಾಮದಲ್ಲಿ ಮೂರು ಬ್ಯಾಚ್​ಗಳು ಬಂದಿದ್ದವು (ನಮಗಿಂತ ತಡವಾಗಿ ಹೊರಟಿದ್ದ ಎರಡು ತಂಡಗಳು ಈಗ ನಮ್ಮ ಸ್ಥಳಕ್ಕೆ ಬಂದಿದ್ದವು). ಗುಂಜಿ ಪ್ರದೇಶವು ಸಮುದ್ರಮಟ್ಟದಿಂದ ಬರೋಬ್ಬರಿ 16,000 ಅಡಿಗಿಂತ ಹೆಚ್ಚು ಎತ್ತರದಲ್ಲಿದೆ. ಇಲ್ಲಿ ಇಷ್ಟು ದಿನ ಕಾಲ ಉಳಿಯುವುದು ಬಹಳ ಕಷ್ಟ. ಇಲ್ಲಿ ದಿನಕ್ಕೆ ಎರಡು ಗಂಟೆ ಮಾತ್ರ ವಿದ್ಯುತ್ ಪೂರೈಕೆ ಇರುತ್ತದೆ. ಅಪರೂಪಕ್ಕೆ ಸೆಟಿಲೈಟ್ ಫೋನ್ ಬಿಟ್ಟರೆ ಮೊಬೈಲ್ ಫೋನ್ ಬಳಕೆಯೇ ಇಲ್ಲ. ಸುಮ್ಮನೆ ಕುಳಿತುಕೊಂಡು ಆಗಸ ನೋಡುತ್ತಾ ಹೆಲಿಕಾಪ್ಟರ್​ಗಳು ಲ್ಯಾಂಡ್ ಆಗುವ ವಾತಾವರಣ ಇದೆಯಾ ಎಂದು ಮಂಡಿಗೆ ಹಾಕುವುದು ಬಿಟ್ಟರೆ ಬೇರೇನೂ ಮಾಡಲು ಆಗುತ್ತಿರಲಿಲ್ಲ. ಈ ಸಂದರ್ಭದಲ್ಲಿ ಯಾತ್ರಿಕರ ಹತಾಶೆಗಳೆಲ್ಲವೂ ಸಂಪರ್ಪಾಧಿಕಾರಿಯ ಮೇಲೆಯೇ ವ್ಯಕ್ತವಾಗುತ್ತಿದ್ದವು. ದೇವರೇ ಶಾಪ ಕೊಟ್ಟು ಕಳುಹಿಸಿದ್ದಾನೆಂದು ಭಾಸವಾಗುವ ಮಟ್ಟಕ್ಕೆ ನಿಂದನೆಗಳು ಬರುತ್ತಿದ್ದವು. ಈ ರೀತಿ 17 ದಿನ ಇರುವುದೆಂದರೆ ಹೇಗಿದ್ದೀತು ಯೋಚಿಸಿ. ಅಂತೂ ಕೊನೆಗೆ ಈ ಬ್ಯಾಚನ್ನು ಅಲ್ಲಿಂದ ಹೊರಡಿಸಿಕೊಂಡು ಹೋದೆವು. ಬಹಳ ದುರ್ಗಮವಾದ ಲಿಪುಲೇಖ್ ಮಾರ್ಗದ ಮೂಲಕ ಟಿಬೆಟ್​ಗೆ ಯಾತ್ರಿಕರನ್ನು ಕರೆದೊಯ್ದೆವು. ಅಲ್ಲಿ ಪರಿಕ್ರಮ ಸೇರಿ ಕೈಲಾಸ ಪರ್ವತದ ಬಳಿ ನಾವು ಕಳೆದ 5 ಅದ್ಭುತ ದಿನಗಳು ನಮ್ಮಿಡೀ ಜೀವನನ್ನು ಹಸಿರಾಗಿಸುವಂತಿದ್ದವು. ಕೆಲ ಪ್ರಶ್ನೆಗಳು ನನ್ನನ್ನು ಆಗಾಗ ಕೆಣಕುತ್ತಲೇ ಇದ್ದವು. ಕೈಲಾಸ ದರ್ಶನಕ್ಕೆ ಇಷ್ಟು ದೀರ್ಘ ಕಾಲ ನಾವು ಯಾಕೆ ಕಾಯಬೇಕಾಗಿ ಬಂತು? ಯಾಕೆ ಇಷ್ಟು ಕಷ್ಟಪಡಬೇಕಾಯಿತು? ಇದಕ್ಕೆ ಅಷ್ಟು ಮೌಲ್ಯ ಇದೆಯಾ? ನನಗೆ ನಾನೇ ಹಾಕಿಕೊಳ್ಳುತ್ತಿದ್ದ ಈ ಪ್ರಶ್ನೆಗಳಿಗೆ ಕೈಲಾಸ ಪರಿಕ್ರಮದ 3ನೇ ದಿನ ನನಗೆ ಉತ್ತರ ಸಿಕ್ಕಿತು. ಅದೊಂದು ರೀತಿಯ ವಿಶೇಷ ಅನುಭೂತಿಯಂತಿತ್ತು. ಕೈಲಾಸ ಎಂಬುದು ದೇವರಲ್ಲ. ಅಲ್ಲಿ ಶಿವನ ರೂಪ ನಾವು ಅಂದುಕೊಂಡಂತಿರಲಿಲ್ಲ. ಕೈಲಾಸ ಎಂಬುದು ಒಂದು ಅಚಲತೆಯಂತಿತ್ತು. ಯಾವುದೇ ನಿರೀಕ್ಷೆಗಳಿಗೂ ನಿಲುಕದಂಥ ಸ್ಥಳವಾಗಿತ್ತು. ಸದ್ಬುರು ಜಗ್ಗಿ ವಾಸುದೇವ್ ಮಾತಿನಲ್ಲಿ ಹೇಳುವುದಾದರೆ ಅಲ್ಲಿ ಶೂನ್ಯವೂ ಇತ್ತು, ಸರ್ವತ್ವವೂ(Everythingness) ಇತ್ತು. ನಮ್ಮ ಮನಸ್ಸು ಎಲ್ಲಾ ಭೂತ, ವರ್ತಮಾನ ಮತ್ತು ಭವಿಷ್ಯತ್ ಕಾಲದಿಂದ ಹೊರತಾಗಿದ್ದಾಗ ಈ ಶೂನ್ಯತ್ವ ಮತ್ತು ಸರ್ವತ್ವವನ್ನು ನಾವು ಅನುಭವಿಸಬಹುದು.

ಯೋಗ ಸೂತ್ರ ಕೃತಿಯಲ್ಲಿ ಪತಂಜಲಿ ಅವರು ಯೋಗವನ್ನು ಅಚಲತೆ ಎಂದು ವ್ಯಾಖ್ಯಾನಿಸಿದ್ದಾರೆ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಇವು ಅಷ್ಟಾಂಗ ಯೋಗಗಳಾಗಿವೆ. ಇವೆಲ್ಲವೂ ಆರೋಹಣ ಹಂತಗಳಾಗಿದ್ದು ಒಂದಕ್ಕೆ ಒಂದು ಪೂರಕವಾಗಿರುತ್ತದೆ. ನೀವು ಪ್ರತ್ಯಾಹಾರ ಹಂತಕ್ಕಿಂತ ಮೇಲೇರಬೇಕಾದರೆ ಸಂಪೂರ್ಣ ಅಚಲತೆ ಅಗತ್ಯ ಇರುತ್ತದೆ.

ಏನಿದು ಅಚಲತೆ (Stillness)?

ಅಚಲತೆ ಎಂಬುದು ಯಾವುದೇ ನಿರೀಕ್ಷೆಯಿಂದ ಹೊರತಾಗಿರುವ ಹಾಗೂ ನಮ್ಮೆದುರಿನ ಕ್ಷಣದಲ್ಲಿ ಜೀವಿಸುವ ಮನಸ್ಥಿತಿಯಾಗಿದ್ದಿರಬಹುದು. ಭೂತ, ವರ್ತಮಾನ ಮತ್ತು ಭವಿಷ್ಯತ್​ಕಾಲದ ಚಿಂತೆಗಳು ಮಾಯವಾಗುವುದು; ಹಾಗೂ ನಮ್ಮತನ ಕಂಡುಕೊಂಡು ಪರಿಪೂರ್ಣತೆ ಸಾಧಿಸುವಂತಹ ಸ್ಥಿತಿ ಈ ಅಚಲತೆಯಾಗಿದೆ.

ನಿರೀಕ್ಷೆಗಳು ಮತ್ತು ಇನ್ನಷ್ಟು ಯೋಜನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ನಾವೆಲ್ಲರೂ ಯಾತ್ರೆಗೆ ಬಂದಿದ್ದೇವೆ ಎಂಬ ವಾಸ್ತವ ನನ್ನ ಅರಿವಿಗೆ ಬಂದಿತು. ಅಚಲತೆಯ ಸ್ಥಿತಿ ಇಲ್ಲದಿದ್ದರೆ ನಮ್ಮೊಳಗಿನ ನಮ್ಮತನದ ಅರಿವು ನಮಗಾಗುವುದಿಲ್ಲ. ಯಾವಾಗಾದರೂ ಒಮ್ಮೆ ನಮ್ಮ ಜೀವನ ಈ ರೀತಿ ಹಗುರವಾಗಿಸಬೇಕು. ನಮ್ಮ ವೇಳಾಪಟ್ಟಿಯಂತೆ ಅದನ್ನು ನಿಯಂತ್ರಿಸಬಾರದು. ನಮ್ಮ ನಕಲಿ ಅಹಮಿಕೆ (false ego), ಪ್ರತಿಷ್ಠೆ ಮತ್ತು ಆತ್ಮರತಿ ಇತ್ಯಾದಿಗಳಿಂದ ನಾವು ಹೊರಬೇಕು. ನಾವು ಅಚಲತೆಯ ಸ್ಥಿತಿ ತಲುಪಿದಂದಿನಿಂದ ನಮ್ಮ ಜೀವನ ಪ್ರಾರಂಭವಾಗುತ್ತದೆ ಎಂಬುದು ಗೊತ್ತಿರಲಿ.

ಕೊನೆಯ ಮಾತು:

ಅಂತಿಮವಾಗಿ ನಾವು ಸೆಪ್ಟೆಂಬರ್ 5ರಂದು ದೆಹಲಿಗೆ ವಾಪಸ್ ಬಂದೆವು. ಮೂಲ ವೇಳಾಪಟ್ಟಿಗಿಂತ 26 ದಿನ ವಿಳಂಬವಾಗಿತ್ತು. ನಮ್ಮ ಜೀವಮಾನದಲ್ಲಿ ಮರೆಯಲು ಸಾಧ್ಯವಿಲ್ಲದಷ್ಟು ಅನೇಕ ಪಾಠಗಳನ್ನು ಕಲಿತೆವು. ನಮ್ಮ ತಂಡದಲ್ಲಿದ್ದ ಪ್ರತಿಯೊಬ್ಬರೂ ಕೂಡ ಗಾಢ ಅನುಭವವನ್ನು ಪಡೆದುಕೊಂಡಿದ್ದರು. ನಾವು ಅಂದುಕೊಂಡಷ್ಟು ಮುಖ್ಯರಲ್ಲ ಎಂಬ ಸತ್ಯ ಕೆಲವರ ಅರಿವಿಗೆ ಬಂದಿತು. ಕೆಲವರಿಗೆ ತಮ್ಮ ಹಿಂದಿನ ಕಹಿಯನ್ನು ಮರೆತು ಹೊಸ ಜೀವನ ಸಾಧ್ಯತೆ ಬಗ್ಗೆ ಗ್ರಹಿಸುವ ಶಕ್ತಿ ಕಂಡುಕೊಂಡಿದ್ದರು. ಈಗಿರುವ ಕ್ಷಣವನ್ನು ಈಗಲೇ ಅನುಭವಿಸಬೇಕೆನ್ನುವ ಅಮೂಲ್ಯ ಭಾವನೆಗಳು ಅನೇಕರಲ್ಲಿ ಸಿದ್ಧಿಸಿದ್ದವು.

ಸ್ನೇಹಿತರೇ, ಈ 21 ದಿನಗಳನ್ನ ನಾವು ವರವೆಂದೇ ಭಾವಿಸೋಣ. ಅಚಲತೆಯ ಶಕ್ತಿ ಕಂಡುಕೊಳ್ಳುವ ಸಮಯ ಎಂದೇ ಅಂದುಕೊಳ್ಳೋನ. ಕೊರೋನಾ ಸಂದರ್ಭದಲ್ಲಿ ಹಾಗೂ ನಂತರದ ಅವಧಿಯಲ್ಲಿ ಜಗತ್ತಿನಲ್ಲಿ ಏನೇ ಆದರೂ ಅದು ನಮ್ಮ ನಿಯಂತ್ರಣದಲ್ಲಿರುವುದಿಲ್ಲ. ನಾವು ಈ ಅವಧಿಯನ್ನು ಮತ್ತು ಕ್ಷಣಗಳನ್ನ ಹೇಗೆ ಉಪಯೋಗಿಸಿಕೊಂಡು ನಮ್ಮ ಅಚಲತೆಯ ಸ್ಥಿತಿಯಿಂದ ಭವಿಷ್ಯವನ್ನು ರೂಪಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಯಾವುದೇ ಅಪೇಕ್ಷೆ, ನಿರೀಕ್ಷೆಗಳಿಲ್ಲದೇ, ಅನಗತ್ಯ ಚಿಂತೆಗಳಿಲ್ಲದೇ ಈ ಕ್ಷಣವನ್ನ ಅನುಭವಿಸುವುದನ್ನು ಪ್ರಾರಂಭಿಸೋಣ. ಈ ಕ್ಷಣಕ್ಕೆ ಇದು ಅದ್ಭುತ ಸ್ಥಳ. ಇಂಥದ್ದೊಂದು ಮನಸ್ಥಿತಿಯನ್ನು ಬೆಳೆಸಿಕೊಳ್ಳಲು ಪ್ರಯತ್ನಿಸೋಣ.

(ಲೇಖಕರು: ಕೆ. ಅಣ್ಣಾಮಲೈ, ಮಾಜಿ ಐಪಿಎಸ್ ಅಧಿಕಾರಿ, ಕರ್ನಾಟಕ)

First published:March 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading