K Annamalai – ದಿನ 18: ಕ್ಷಮೆ ಎಂಬ ಬಿಡುಗಡೆ ಅಸ್ತ್ರ; ನೀವೇ ಕಟ್ಟಿಕೊಂಡ ಮಾನಸಿಕ ಬಂಧ ಕಳಚಿಕೊಳ್ಳಿ

ದ್ವೇಷ, ಕೋಪತಾಪಗಳ ಸಿಕ್ಕುಗಳಿಂದ ಹೊರಬರಲು ಕ್ಷಮಾಗುಣ ಬಹಳ ಮುಖ್ಯ ಎಂದು ಈ ಲೇಖನದಲ್ಲಿ ಮನೋಜ್ಞವಾಗಿ ತಿಳಿಸಿಕೊಟ್ಟಿದ್ದಾರೆ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇವತ್ತು ನಾನು ಬಹಳ ವಿರಳವಾದ ವಿಚಾರವೊಂದನ್ನು ತಿಳಿಸಬಯಸುತ್ತೇನೆ. ಇದು ಕೇವಲ ಮಹಾತ್ಮರು, ಋಷಿಮುನಿಗಳು, ಚರ್ಚ್ ಫಾದರ್​ಗಳಂತಹವರಿಗೆ ಮಾತ್ರ ಸೇರಿದ್ದು, ನಮ್ಮಂಥವರಿಗಲ್ಲ ಎಂದು ನಾವು ಭಾವಿಸಿಬಿಡುವಂಥ ವಿಚಾರ. ಅದುವೇ ಕ್ಷಮೆ. ನಾವೆಲ್ಲರೂ ಕ್ಷಮಾದಾನದ ಮೂಲಕ ಅಸಾಧಾರಣ ವ್ಯಕ್ತಿಗಳಾಗಿ ಬೆಳೆಯಲು ಸಾಧ್ಯ. ಮಗು ಹುಟ್ಟಿದಾಗ ಪರಿಶುದ್ಧ ಆತ್ಮ. ಅದಕ್ಕೆ ವೈರಿಗಳೆಂಬುದೇ ಇರುವುದಿಲ್ಲ. ಅದಕ್ಕೇ ಮಗುವನ್ನು ದೇವರೆನ್ನುತ್ತಾರೆ. ಮಗು ಮುಗ್ಧತೆಯ ಪ್ರತಿಮೂರ್ತಿ. ಇವತ್ತು ಇನ್ನೊಂದು ಮಗು ಜೊತೆ ಆಡಿ ನಲಿದಾಡಿ ಕಿತ್ತಾಡುತ್ತದೆ. ಮತ್ತೆ ಮಾರನೆಯ ದಿನ ಜಗಳ ಮರೆತು ಕುಣಿದು ಕುಪ್ಪಳಿಸುತ್ತಲೇ ಜಗಳವನ್ನೂ ಆಡುತ್ತದೆ. ಆದರೆ, ಮಕ್ಕಳು ಬೆಳೆಯುತ್ತಾ ಬೆಳೆಯುತ್ತಾ ತಮ್ಮ ತಂದೆ ತಾಯಿಯಿಂದ ಬೇರೆ ಬೇರೆ ಪಾಠಗಳನ್ನೂ ಕಲಿಯುತ್ತಾ ಹೋಗುತ್ತಾರೆ. ಅಪ್ಪ ಅಮ್ಮ ಬೇರೆಯವರ ಜೊತೆ ಹೇಗೆಲ್ಲಾ ನಡೆದುಕೊಳ್ಳುತ್ತಾರೆ, ಹೇಗೆ ನೋಯಿಸುತ್ತಾರೆ ಎಂಬುದನ್ನು ನೋಡಿ ಕಲಿಯುತ್ತದೆ. ಅದನ್ನೇ ತಾನೂ ಅನುಸರಿಸಲು ಪ್ರಯತ್ನಿಸುತ್ತದೆ. ಆರೇಳು ವರ್ಷ ವಯಸ್ಸಿಗೆ ಬರುವಷ್ಟರಲ್ಲಿ ಮಗುವಿಗೆ ಶತ್ರುತ್ವ ಶುರುವಾಗಿರುತ್ತದೆ. ಚಾಕೊಲೇಟ್ ಕೊಡದೇ ತಿಂದ ಎಂದು ಒಬ್ಬನ ಮೇಲೆ; ಸುಮ್ಮನೆ ತನ್ನನ್ನು ನೂಕಿದ ಎಂದು ಇನ್ನೊಬ್ಬನ ಮೇಲೆ ಹೀಗೆ ಮಗು ಮನಸೊಳಗೆ ಹಗೆತನ ಬೆಳೆಸಿಕೊಳ್ಳತೊಡಗುತ್ತದೆ. ಮಗು ಹಾಗೇ ಬೆಳೆಯುತ್ತಾ ಹದಿವಯಸ್ಸು, ಯೌವ್ವನ ಹಂತ ದಾಟಿ ಬರುವಷ್ಟರಲ್ಲೇ ಶತ್ರುಗಳ ಸಂಖ್ಯೆ ಮತ್ತು ಶ್ರೇಣಿ ಎಲ್ಲವೂ ಹಿರಿದಾಗಿರುತ್ತದೆ. ಕೆಲವರೊಂದಿಗೆ ಮಾತೇ ಇರುದಿಲ್ಲ; ಇನ್ನೂ ಕೆಲವರೊಂದಿಗೆ ನಾಮಕಾವಸ್ತೆಗಷ್ಟೇ ಮಾತು; ಕೆಲವರಿಗೆ ಮುಗುಳ್ನಗೆ ಮಾತ್ರ ಉತ್ತರ; ಮತ್ತಿನ್ನೂ ಕೆಲವರ ಜೊತೆ ಬೆರೆತರೂ ಒಳಗೊಳಗೆ ಅಸಹನೆಯ ಭಾವನೆ. ಹೀಗೆ ನಮ್ಮ ಸಾಮಾಜಿಕ ಸಂಬಂಧಗಳಿಗೆ ವಿವಿಧ ಆಯಾಮ ಮತ್ತು ಬಣ್ಣಗಳು ಮೆತ್ತಿಕೊಳ್ಳುತ್ತವೆ. ನಮ್ಮ ಹಿಂದಿನ ವರ್ತನೆಗಳು ಮತ್ತು ಅನುಭವಗಳು ಮುಂದಿನ ಸಂಬಂಧಗಳ ಮೇಲೆ ಪ್ರಭಾವ ಬೀರುತ್ತವೆ. ಒಂದೇ ಸಂದರ್ಭವನ್ನು ಇಬ್ಬರು ವ್ಯಕ್ತಿಗಳು ಬೇರೆ ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು ಎಂಬುದನ್ನು ಅರಿಯಲು ನಾವು ವಿಫಲವಾಗುತ್ತೇವೆ. ನಮ್ಮ ದೃಷ್ಟಿಕೋನದಲ್ಲೇ ಎಲ್ಲವನ್ನೂ ನೋಡುತ್ತಾ, ಗ್ರಹಿಸುತ್ತಾ ನಿರ್ಧಾರ ತೆಗೆದುಕೊಳ್ಳುತ್ತೇವೆ.

  ಈಗ ಕ್ಷಮೆಯ ವಿಚಾರಕ್ಕೆ ವಾಪಸ್ ಬರುತ್ತೇನೆ. ಕ್ಷಮಿಸುವ ಸ್ವಭಾವ ದುರ್ಬಲರದ್ದೇ ಹೊರತು ನನ್ನದಲ್ಲ ಎಂದು ಮಾತ್ರ ಹೇಳದಿರಿ. ಇದಕ್ಕೆ ನಾನು ಒಬ್ಬ ಶ್ರೇಷ್ಠ ವ್ಯಕ್ತಿಯೊಬ್ಬರ ಉದಾಹರಣೆ ನೀಡಬಲ್ಲೆ. ನೆಲ್ಸನ್ ಮಂಡೇಲಾ ಹೆಸರು ನಿಮಗೆಲ್ಲಾ ಗೊತ್ತಿದೆ. ದಕ್ಷಿಣ ಆಫ್ರಿಕಾದ ಕೇಪ್ ಎಂಬ ಪ್ರಾಂತ್ಯದಲ್ಲಿ ಪ್ರಬಲ ಬುಡಕಟ್ಟು ಸಮುದಾಯದ ಕುಟುಂಬದಲ್ಲಿ 1918ರಲ್ಲಿ ಜನಸಿದವರು ನೆಲ್ಸನ್ ಮಂಡೇಲಾ. ಬೆಳೆಯುತ್ತಾ ಅವರಿಗೆ ಅಸಮಾನತೆಯ ಕಹಿ ಅನುಭವ ತಾಕಲಾರಂಭಿಸಿತು. ಅವರ ಬುಡಕಟ್ಟು ಪ್ರಪಂಚದ ಹೊರಗೆ ಇಣುಕಿದರೆ ತಾರತಮ್ಯತೆ, ವರ್ಣಭೇದ, ಜನಾಂಗೀಯ ಶೋಷಣೆ ಇತ್ಯಾದಿಗಳ ರಕ್ಕಸ ನರ್ತನ ಕಾಣುತ್ತಿತ್ತು. ನೆಲ್ಸನ್ ಮಂಡೇಲಾ ನಿಧಾನವಾಗಿ ಮಾರ್ಕ್ಸ್​ವಾದ ಅಪ್ಪತೊಡಗಿದರು. ಬಳಿಕ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ವಿಚಾರಧಾರೆ ಅವರನ್ನ ಸೆಳೆಯಿತು. ಪ್ರಜಾತಾಂತ್ರಿಕ ರೀತಿಯ ಪ್ರತಿಭಟನೆ ಪ್ರಯೋಜನಕ್ಕೆ ಬರದೇ ಹೋದಾಗ ಹಿಂಸಾಚಾರದ ಹಾದಿ ಹಿಡಿದರು. ಆಡಳಿತ ಸರ್ಕಾರವನ್ನು ಉರುಳಿಸಲು ಅವರು ಸಾರ್ವಜನಿಕ ಆಸ್ತಿಪಾಸ್ತಿ ನಾಶದಂಥ ಕೃತ್ಯಗಳಿಗೆ ಜೋತುಬಿದ್ದರು. ಅವರನ್ನು ಹಿಡಿಯಲು ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿರುವಂತೆಯೇ ಭೂಗತವಾಗಿಯೇ ಬಹುಕಾಲ ಉಳಿದರು. 1963ರಲ್ಲಿ ಸರ್ಕಾರ ಅವರನ್ನ ಬಂಧಿಸಿತು. 27 ವರ್ಷಗಳ ಸೆರೆಮನೆವಾಸದ ಶಿಕ್ಷೆ ವಿಧಿಸಲಾಯಿತು. ಅಲ್ಲಿಯವರೆಗೆ ನೆಲ್ಸನ್ ಮಂಡೇಲಾ ಅವರದ್ದು ನಮ್ಮಂಥವರದ್ದೇ ಸ್ವಭಾವ. ಅದೇ ಸಿಟ್ಟು, ಹಗೆತನ ಎಲ್ಲವೂ ಕೂಡಿದವರಾಗಿದ್ದರು. ಈಗೇನಾಯಿತು ಅವರಿಗೆ? 27 ವರ್ಷ ಕಾರಾಗೃಹದಲ್ಲಿ ಬಂಧಿಯಾಗಿ ಉಳಿಯಬೇಕಾಯಿತು. ಅದರಲ್ಲೂ ರಾಬೆಲ್ ಜೈಲಿನಲ್ಲಿ 18 ವರ್ಷ ನರಕಯಾತನೆ ಅನುಭವಿಸಿದರು. ಅಲ್ಲಿ ಅವರ ಜೈಲುಕೋಣೆ ಅಳತೆ 2.4 X 2.1 ಮೀಟರ್. ನೀವೇ ಬೇಕಾದರೆ ಅಷ್ಟು ಅಳೆದು ನೋಡಿ. ಕಾಲು ಚಾಚಿ ಮಲಗಲೂ ಸಾಧ್ಯವಿಲ್ಲದಷ್ಟು ಪುಟ್ಟ ಕೋಣೆ. ತೀರಾ ನಿಕೃಷ್ಟವಾದ ಡಿ ಗ್ರೇಡ್​ನ ಕೈದಿಯಾಗಿ ಅವರನ್ನು ವಿಂಗಡಿಸಲಾಗಿತ್ತು. ಪ್ರತೀ ಆರು ತಿಂಗಳಲ್ಲಿ ಒಬ್ಬರೇ ವ್ಯಕ್ತಿಯನ್ನು ಸಂಧಿಸಲು ಅನುಮತಿ ನೀಡಲಾಗುತ್ತಿತ್ತು. ಗಣಿ ಪ್ರದೇಶದಲ್ಲಿ ಕೆಲಸ ಹಚ್ಚಲಾಗಿತ್ತು. ಆ ರಣ ಬಿಸಿಲಿನಲ್ಲಿ ಕಣ್ಣಿಗೆ ಕನ್ನಡಕ ಇಲ್ಲದೆಯೇ ಕೆಲಸ ಮಾಡಬೇಕಾಗಿತ್ತು. ಸೂರ್ಯನ ಪ್ರಖರ ಕಿರಣಗಳು ನೇರವಾಗಿ ಕಣ್ಣಿಗೆ ಬಿದ್ದು ಅವರ ದೃಷ್ಟಿ ಮಂದವಾಗಿ ಹೋಗಿತ್ತು. ಜೈಲಿನಲ್ಲಿ ಅವರ ಮೇಲೆ ಆದ ಮಾನಸಿಕ ಮತ್ತು ದೈಹಿಕ ದೌರ್ಜನ್ಯ ಅಷ್ಟಿಷ್ಟಲ್ಲ.

  ಅಣ್ಣಾಮಲೈ ಅವರ ಈ ಲೇಖನಮಾಲೆಯ ಎಲ್ಲಾ ಲೇಖನಗಳಿಗೆ ಇಲ್ಲಿ ಕ್ಲಿಕ್ ಮಾಡಿ

  ಜೈಲಿನಲ್ಲಿ 27 ವರ್ಷ ಯಮಯಾತನೆ ಅನುಭವಿಸಿದ ಬಳಿಕ 1990ರಲ್ಲಿ ಬಂಧಮುಕ್ತರಾದರು. ದಕ್ಷಿಣ ಆಫ್ರಿಕಾದ ಬಿಳಿಯರ ಸರ್ಕಾರದ ಮೇಲೆ ಅಂತಾರಾಷ್ಟ್ರೀಯ ಸಮುದಾಯದಿಂದ ಪ್ರಬಲ ಒತ್ತಡ ಬಿದ್ದಿದ್ದರಿಂದ ಅವರಿಗೆ ಬಿಡುಗಡೆ ಸಿಕ್ಕಿತು.  45ನೇ ವಯಸ್ಸಿನಲ್ಲಿ ಜೈಲಿಗೆ ಹೋದ ಅವರು ಹೊರಬಂದಾಗ ವಯಸ್ಸು 72 ವರ್ಷ. ಅವರ ಮನಸು ಹೇಗಾಗಿರಬೇಡ? ತನಗಾದ ಕಟು ಅನ್ಯಾಯಗಳು ಅವರಿಗೆ ಎಷ್ಟು ಘಾಸಿ ತಂದಿರಬೇಡ? ಇಡೀ ವ್ಯವಸ್ಥೆ ವಿರುದ್ಧ ಎಷ್ಟು ಆಕ್ರೋಶ ಮಡುಗಟ್ಟಿದ್ದಿರಬೇಡ? ಆದರೆ ಅಚ್ಚರಿ ಎಂದರೆ, ಇವೆಲ್ಲವನ್ನೂ ಮೀರಿ ಅವರು ಪರಿವರ್ತಿತ ಮನುಷ್ಯನಾಗಿ ಹೊರಬಂದಿದ್ದರು. ಹಾಗಂತ ಸಿದ್ಧಾಂತದಿಂದ ದೂರ ಉಳಿದಿರಲಿಲ್ಲ. ಅವರ ಸೈದ್ಧಾಂತಿಕ ಬದ್ಧತೆ ಹಿಂದೆಂದಿಗಿಂತಲೂ ಗಟ್ಟಿಯಾಗಿ ಹೋಗಿತ್ತು. ಆದರೆ, ತನಗೆ ಹಾನಿ ತಂದ ಪ್ರತಿಯೊಬ್ಬ ವ್ಯಕ್ತಿಯನ್ನೂ ಕ್ಷಮಿಸುವಂಥ ದೊಡ್ಡ ಗುಣ ಬೆಳೆಸಿಕೊಂಡಿದ್ದರು. 1994ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮಂಡೇಲಾ ನೇತೃತ್ವದಲ್ಲಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ಪಡೆಯಿತು. ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಹಲವು ವರ್ಷಗಳಿಂದ ಜರ್ಝರಿತಗೊಂಡಿದ್ದ ದೇಶಕ್ಕೆ ಚಿಕಿತ್ಸಕರಾಗಿ ಕೆಲಸ ಮಾಡಿದರು.

  ನೆಲ್ಸನ್ ಮಂಡೇಲಾ ಆಗಲಿ, ಮದರ್ ತೆರೇಸಾ ಆಗಲೀ ಅಥವಾ ಬೇರೆ ಮಹಾನ್ ವ್ಯಕ್ತಿಗಳೇ ಆಗಲೀ ನೀವು ಅವರಲ್ಲಿ ಈ ಕ್ಷಮೆಯ ಗುಣವನ್ನು ಕಾಣಬಹುದು. ದ್ವೇಷ, ಹತಾಶೆಯ ಬದಲು ಕ್ಷಮೆ ಮತ್ತು ಕರ್ತವ್ಯಕ್ಕೆ ಪ್ರಾಮುಖ್ಯತೆ ಕೊಡುತ್ತಾರೆ. ಏನೇ ತಪ್ಪೆಸಗಿದ್ದರೂ ವ್ಯಕ್ತಿಗಳನ್ನ ಕ್ಷಮಿಸಿದಾಗ ಸಮಾಜದಲ್ಲಿನ ಕಹಿ ಕಡಿಮೆಯಾಗುತ್ತದೆ. ಅವರ ಮೇಲಿನ ಗೌರವ ಹೊಸ ಔನ್ನತ್ಯ ತಲುಪುತ್ತದೆ. ನಮ್ಮ ಊಹೆಗೂ ನಿಲುಕದ ರೀತಿಯಲ್ಲಿ ಅವರಿಂದ ಮಾನವ ಕುಲಕ್ಕೆ ಲಾಭವಾಗುತ್ತದೆ. ಬೇರೆಯವರನ್ನು ಕ್ಷಮಿಸಿ ಕಹಿಭಾವವನ್ನು ಶಮನ ಮಾಡಬೇಕೆಂದು ಈಗ ನಿಮಗೂ ಅನಿಸುತ್ತಿದೆಯೇ? ಇವತ್ತೇ ಆ ಒಳ್ಳೆಯ ಸಮಯ ಎಂದು ಭಾವಿಸಿ. ನಾನ್ಯಾವತ್ತೂ ತಪ್ಪು ಮಾಡಿಲ್ಲ. ಬೇರೆಯವರಿಂದಲೇ ನನಗೆ ಅನ್ಯಾಯ ಆಗಿದ್ದು ಎಂದು ನೀವು ಅಂದುಕೊಂಡಿದ್ದರೆ ಅದು ನೀವು ಕಹಿಯೊಂದಿಗೆ ಬದುಕುತ್ತಿದ್ದೀರಿ ಎಂದರ್ಥ. ಕ್ಷಮಾದಾನದ ಚಮತ್ಕಾರ ಇಲ್ಲದೇ ಜೀವನವನ್ನು ಪರಿಪೂರ್ಣವಾಗಿ ನಾವು ಅನುಭವಿಸುವುದಿಲ್ಲ. ನೆಲ್ಸನ್ ಮಂಡೇಲಾ ತಮ್ಮ ‘ಲಾಂಗ್ ವಾಕ್ ಟು ಫ್ರೀಡಮ್’ ಪುಸ್ತಕದಲ್ಲಿ ಹೀಗೆ ಬರೆಯುತ್ತಾರೆ: “ಬಿಡುಗಡೆಗೊಂಡು ಕಾರಾಗೃಹದಿಂದ ಹೊರಗಿನ ಗೇಟ್​ಗೆ ಹೋಗುವಾಗ ನನಗೆ ಅನಿಸಿತು: ನನ್ನ ಕಹಿ ಮತ್ತು ದ್ವೇಷವನ್ನ ಇಲ್ಲೇ ಬಿಟ್ಟುಹೋಗದಿದ್ದರೆ ಕಾರಾಗೃಹದಲ್ಲೇ ಇನ್ನೂ ಕೈದಿಯಾಗಿಯೇ ಉಳಿದಂತಾಗುತ್ತದೆ”. ಎಂಥ ಶಕ್ತಿ ಇದೆ ಈ ಪದಗಳಲ್ಲಿ…! 27 ವರ್ಷಗಳ ನಂತರ ಮಂಡೇಲಾ ಬಹಳ ಎತ್ತರಕ್ಕೆ ಬೆಳೆದುಬಿಟ್ಟಿದ್ದರು.

  ಈಗ ನಾವು ಯಾತಕ್ಕೆ ಕಾಯುತ್ತಿದ್ದೇವೆ..! ನಿಮ್ಮನ್ನು ನೋಯಿಸಿದ್ದಾರೆಂದು ನೀವು ಭಾವಿಸುವ ವ್ಯಕ್ತಿಗೆ ಈಗಲೇ ಫೋನ್ ಮಾಡಿ ಮಾತನಾಡಿ. ನೀವೇ ಕಟ್ಟಿಕೊಂಡ ಮಾನಸಿಕ ಕಾರಾಗೃಹದಲ್ಲಿ ಸಿಕ್ಕಿಕೊಂಡಿದ್ದೀರಿ. ಆ ಮೂಲಕ ಆ ಇನ್ನೊಬ್ಬ ವ್ಯಕ್ತಿಗೂ ಸಂಕಟ ತಂದಿದ್ದೀರಿ. ಈಗ ನೀವು ಕ್ಷಮೆದಾನದ ಮನಸು ಮಾಡಿ ಆ ವ್ಯಕ್ತಿಯ ಜೊತೆ ಮಾತನಾಡಿದರೆ ಇಬ್ಬರಿಗೂ ಸಂಕಟಮೋಚನವಾಗುತ್ತದೆ. ಇರೋ ಮೂರು ದಿನದ ಜೀವನದಲ್ಲಿ ದ್ವೇಷ, ತಾಪಗಳ ಬದುಕು ನಮಗೆ ಬೇಕಾ? ಸಂತೋಷ, ಮುಕ್ತತೆಯಿಂದ ಜೀವನ ನಡೆಸೋಣ.

  ಲೇಖಕರು: ಕೆ. ಅಣ್ಣಾಮಲೈ, ಮಾಜಿ ಐಪಿಎಸ್ ಅಧಿಕಾರಿ

  (ಕೋವಿಡ್-19 ಸೋಂಕು ವ್ಯಾಪಿಸದಂತೆ ದೇಶಾದ್ಯಂತ 21 ದಿನ ಕಾಲ ದಿಗ್ಬಂಧನ ವಿಧಿಸಲಾಗಿದೆ. ಜನರೆಲ್ಲರೂ ಅನವಶ್ಯಕವಾಗಿ ರಸ್ತೆಗೆ ಬರುವಂತಿಲ್ಲ. ಮನೆಯಲ್ಲೇ ಇರಬೇಕೆಂದು ಸರ್ಕಾರ ಕಟ್ಟಪ್ಪಣೆ ಮಾಡಿದೆ. ಈ ಸಂದರ್ಭದಲ್ಲಿ 21 ದಿನಗಳನ್ನ ಹೇಗೆ ಸದುಪಯೋಗಪಡಿಸಿಕೊಳ್ಳಬೇಕೆಂದು ಲೇಖಕರು ತಿಳಿಹೇಳಿದ್ದಾರೆ. ಅವರ ಲೇಖನಮಾಲೆಯ 18ನೇ ಲೇಖನ ಇದು.)
  First published: