21 ದಿನದಲ್ಲಿ 21 ಸಂಗತಿ: ಮಕ್ಕಳ ಪಾಲನೆ ಮತ್ತು ಪೋಷಕರ ಜವಾಬ್ದಾರಿ - ಅಣ್ಣಾಮಲೈ ಲೇಖನಮಾಲೆ

ಕೋವಿಡ್-19 ಹಿನ್ನೆಲೆಯಲ್ಲಿ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ 21 ದಿನಗಳಲ್ಲಿ ಲೇಖಕರು 21 ಜೀವನ ಪಾಠಗಳನ್ನು ನ್ಯೂಸ್18 ಓದುಗರಿಗೆ ನೀಡುತ್ತಿದ್ಧಾರೆ. ಈ ಲೇಖನಮಾಲೆಯ ನಾಲ್ಕನೇ ಲೇಖನ ಇದಾಗಿದೆ.

news18
Updated:March 29, 2020, 7:15 PM IST
21 ದಿನದಲ್ಲಿ 21 ಸಂಗತಿ: ಮಕ್ಕಳ ಪಾಲನೆ ಮತ್ತು ಪೋಷಕರ ಜವಾಬ್ದಾರಿ - ಅಣ್ಣಾಮಲೈ ಲೇಖನಮಾಲೆ
ಕುಟುಂಬ
  • News18
  • Last Updated: March 29, 2020, 7:15 PM IST
  • Share this:
ಒಂದು ಹೊಸ ಕುಡಿಯ ಜವಾಬ್ದಾರಿ ಹೊರುವುದೆಂದರೆ ಅದು ಎರಡು ಯುವ ಮನಸ್ಸುಗಳಿಗೆ ದಕ್ಕುವ ಭಾಗ್ಯ ಎಂಬುದರಲ್ಲಿ ಅನುಮಾನವಿಲ್ಲ. ಒಂದು ಮಗುವಿನ ಆಗಮನದಿಂದ ನಮ್ಮ ಜೀವನದಲ್ಲಾಗುವ ಬದಲಾವಣೆಗಳು ನಿಜಕ್ಕೂ ಅದಮ್ಯ ಅನುಭವ ನೀಡುತ್ತವೆ. ಅದರ ಜೊತೆಗೆ, ಆ ಮಗುವನ್ನ ಬೆಳೆಸುವುದು ಒಂದು ಕಡೆಯಾದರೆ, ಅದಕ್ಕೆ ನಾವು ನಮ್ಮ ಅದೆಷ್ಟೋ ಸಮಯವನ್ನು ತ್ಯಾಗ ಮಾಡಬೇಕಾಗುತ್ತದೆ. ಅದು ಅತ್ತಾಗ, ನೋವು ಪಟ್ಟಾಗ ಸಂತೈಸಬೇಕಾಗುತ್ತದೆ; ಆ ಮಗುವಿನ ಜೀವನದ ಮುಖ್ಯ ಘಳಿಗೆಗಳಲ್ಲಿ ನಾವು ಭಾಗಿಯಾಗಬೇಕಾಗುತ್ತದೆ.

ಇವತ್ತಿನ ಮಕ್ಕಳೇ ನಾಳೆಯ ಪೋಷಕರು. ಈ ಮಕ್ಕಳೇ ಮುಂದಿನ ದಿನಗಳಲ್ಲಿ ನಮ್ಮ ದೇಶವನ್ನು ಮುನ್ನಡೆಸುವ ನಾಗರಿಕರಾಗುತ್ತಾರೆ. ಆದರೆ, ಮಕ್ಕಳಿಗೆ ಹೆಚ್ಚು ಸಮಯ ಕೊಡಲಾಗುತ್ತಿಲ್ಲ ಎಂದು ತಂದೆ-ತಾಯಿ ಹೇಳುವುದನ್ನ ಕಂಡಾಗ, ಅಥವಾ ಪೋಷಕರ ಮುತುವರ್ಜಿ ಇಲ್ಲದೇ ಎಲ್ಲಿಯೂ ದೂರದ ಸ್ಥಳದಲ್ಲಿ ಮಕ್ಕಳು ತಮ್ಮದೇ ಪ್ರಪಂಚದಲ್ಲಿ ಬೆಳೆಯುವುದನ್ನು ಕಂಡಾಗ ತುಂಬಾ ವ್ಯಥೆ ಎನಿಸುತ್ತದೆ. ನಮ್ಮ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯಲ್ಲಾದ ಬದಲಾವಣೆ ಇದಕ್ಕೆ ಕಾರಣವಿದ್ದಿರಬಹುದು. ಗ್ರಾಮೀಣ ಭಾಗದಲ್ಲಿ ನಾವು ದೊಡ್ಡ ಮನೆಗಳಲ್ಲಿದ್ದು ಮಕ್ಕಳು ನಲಿದಾಡುವುದನ್ನು ಕಾಣುತ್ತೇವೆ. ಆದರೆ, ನಗರಗಳಲ್ಲಿ ಅದರದ್ದೇ ಕಾರಣಕ್ಕೆ ಮನೆ, ಮನಸುಗಳು ಕಿರಿದಾಗುತ್ತಲೇ ಇವೆ. ಕೂಡು ಕುಟುಂಬದ ಬದಲು ಈಗ ಪುಟ್ಟ ಕುಟುಂಬವೇ ಹೆಚ್ಚಾಗಿದೆ. ವಿಶ್ವ ಸಂಸ್ಥೆ ನೀಡಿರುವ ವರದಿಯೊಂದರ ಪ್ರಕಾರ, ಭಾರತದಲ್ಲಿರುವ ಕುಟುಂಬಗಳಲ್ಲಿ ಗಂಡ ಮತ್ತು ಹೆಂಡತಿ ಇರುವ ಕುಟುಂಬ ಹಾಗೂ ಗಂಡ-ಹೆಂಡತಿ, ಮಕ್ಕಳು ಇರುವ ಕುಟುಂಬಗಳ ಪ್ರಮಾಣವೇ ಶೇ. 50ರಷ್ಟಿದೆಯಂತೆ. ಅಜ್ಜ-ಅಜ್ಜಿ ಅಥವಾ ಬೇರೆ ಸಂಬಂಧಿಕರು ಇರುವ ಕುಟುಂಬ ಕೇವಲ 37 ಪ್ರತಿಶತ ಎನ್ನುತ್ತದೆ ಈ ವರದಿ. ಅಜ್ಜ-ಅಜ್ಜಿಯ ಪ್ರೀತಿ ಇಲ್ಲದೇ ಇವತ್ತಿನ ಅನೇಕ ಮಕ್ಕಳು ಬೆಳೆಯುತ್ತಿರುವುದು ನಿಜಕ್ಕೂ ಬಹಳ ಬೇಸರದ ವಿಚಾರ. ಈಗಂತೂ ಒಂದು ಕುಟುಂಬದಲ್ಲಿ ಗಂಡ ಮತ್ತು ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುತ್ತಾರೆ. ಅವರು ಮಕ್ಕಳಿಗೆ ಕೊಡುವ ಸಮಯ ಸಹಜವಾಗಿಯೇ ಕಡಿಮೆಯಾಗುತ್ತದೆ. ವೃತ್ತಿ ಅನಿವಾರ್ಯತೆಯಿಂದಾಗಿ ವರ್ಷಗಳು ಕಳೆದಂತೆ ಮಕ್ಕಳಿಗೆ ಕೊಡುವ ಸಮಯವೂ ಕಡಿಮೆಯಾಗುತ್ತಾ ಹೋಗುತ್ತದೆ.

ಇದನ್ನೂ ಓದಿ: ಅಚಲತೆ - 21 ದಿನಗಳ ದಿಗ್ಬಂಧನದಲ್ಲಿ ಕಲಿಯಬಹುದಾದ 21 ಸಂಗತಿ: ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ ಕಿವಿಮಾತು

ವಿವಿ ವಿದ್ಯಾರ್ಥಿಗಳಿದ್ದ ಪ್ರದೇಶವೊಂದರಲ್ಲಿ ನಡೆದ ಘಟನೆಯನ್ನ ಇಲ್ಲಿ ಉಲ್ಲೇಖಿಸುತ್ತಿದ್ದೇನೆ. ವಿದ್ಯಾರ್ಥಿಗಳನ್ನ ಹೊಕ್ಕಿದ್ದ ಡ್ರಗ್ ಜಾಲವನ್ನು ಮುರಿಯಲು ನಾವು ಹಲವು ಕ್ರಮಗಳನ್ನು ಕೈಗೊಂಡಿದ್ದೆವು. ಆದರೆ, ಮಾದಕ ವ್ಯಸನ ಹತ್ತಿಕ್ಕಲು ನಾವು ಮಾಡುತ್ತಿದ್ದ ಪ್ರಯತ್ನಗಳಿಗೆ ಅಡ್ಡಿಯಾಗಿದ್ದು ವಿದ್ಯಾರ್ಥಿಗಳ ಪೋಷಕರೇ ಆಗಿದ್ದರು ಎಂಬುದು ನಮಗೆ ಅಚ್ಚರಿ ತಂದಿತ್ತು.

“ಅದರಲ್ಲೇನಿದೆ ಬಿಡಿ. ಸ್ವಲ್ಪ ಆನಂದಕ್ಕಾಗಿ ಈ ರೀತಿ ಮಾಡಿರಬಹುದು. ಏನು ತಪ್ಪು?”
“ಒಮ್ಮೆ ಕ್ಷಮಿಸಬಹುದು. ನಿಮಗೆ ಬೇಕೆಂದರೆ ಯಾರಿಂದಲಾದರೂ ಹೇಳಿಸಲಾ?”
“ಮಾಧ್ಯಮಗಳಲ್ಲಿ ತಿಳಿಸುವಷ್ಟು ಅದು ಅಪಾಯವಾ?”ಹೆಚ್ಚಾಗುತ್ತಲೇ ಇರುವ ಬಾಲಾಪರಾಧಗಳ ಬಗ್ಗೆ ಇಲ್ಲಿ ತಿಳಿಸಬೇಕು. ಕೌಟುಂಬಿಕ ಸಮಸ್ಯೆಗಳಿಗೂ ಬಾಲಾಪರಾಧಿಗಳಿಗೂ ನೇರ ಸಂಬಂಧ ಇದೆ. ಸಮಸ್ಯೆಗಳಿಂದ ಕೂಡಿದ ಕುಟುಂಬಗಳಲ್ಲಿ ಮಕ್ಕಳ ಪಾಲನೆ ಸರಿಯಾಗಿ ಆಗುವುದಿಲ್ಲ. ಮಕ್ಕಳು ತಮ್ಮದೇ ಧೋರಣೆ, ನಂಬಿಕೆಗಳನ್ನಿಟ್ಟುಕೊಂಡು ಬೆಳೆಯುತ್ತಾ ಹೋಗುತ್ತಾರೆ. ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಯೂನಿಸೆಫ್ ಸಂಸ್ಥೆ 2013ರಲ್ಲಿ ಬಿಡುಗಡೆ ಮಾಡಿದ ಅಧ್ಯಯನದ ವರದಿಯಲ್ಲಿ, ಶೇ. 94ರಷ್ಟು ಹುಡುಗರು ತಮ್ಮ ಪೋಷಕರ ನಿಗಾ ಇಲ್ಲದೇ ಬೆಳೆಯುತ್ತಿದ್ದಾರೆಂದು ಹೇಳಿದೆ. ಇದನ್ನು ನಾವು ಏನೆಂದು ಅರ್ಥ ಮಾಡಿಕೊಳ್ಳುವುದು?

ಹಾಗೆಯೇ, ಇವತ್ತು ಸರಿಯಾಗಿ ಸಂಬಂಧವನ್ನು ರೂಪಿಸಲು ಸಾಧ್ಯವಿಲ್ಲದೇ ವಿಫಲವಾಗುತ್ತಿರುವ ಯುವಜನರು ಕೌಟುಂಬಿಕ ಸಮಸ್ಯೆಗಳನ್ನ ಕಂಡೇ ಬೆಳೆದವರಾಗಿರುತ್ತಾರೆ. ಒಬ್ಬನೇ ಬೆಳೆಯುವುದಕ್ಕೂ ಪ್ರೀತಿಪಾತ್ರರ ತೆಕ್ಕೆಯಲ್ಲಿ ಬೆಳೆಯುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಇಂಥ ಯುವ ಜೋಡಿಗಳು ಮುಂದೆ ತಮ್ಮದೇ ಸಂತಾನ ಹೊಂದಿ ಮಕ್ಕಳನ್ನು ಹೇಗೆ ಬೆಳೆಸುತ್ತಾರೆ ಎಂಬುದೇ ಕಳವಳಕಾರಿ ಪ್ರಶ್ನೆ.

ಇದನ್ನೂ ಓದಿ: 21 ದಿನಗಳಲ್ಲಿ 21 ಸಂಗತಿ: ಪ್ರತಿಕೂಲ ಪರಿಸ್ಥಿತಿಯ ಶಕ್ತಿ ಹಾಗೂ ವ್ಯಕ್ತಿತ್ವ ಮರುನಿರ್ಮಾಣ

ಏನು ಮಾಡಬಹುದು?

ಪಾಲನೆ ಎನ್ನುವುದು ಒಂದು ಕಲೆ. ಮಗುವಿಗೆ ಏನು ಸರಿ ಎಂಬುದು ಪೋಷಕರಿಗಷ್ಟೇ ಗೊತ್ತಿರುತ್ತದೆ. ನಾವು ಪ್ರಜ್ಞಾಪೂರ್ವಕವಾಗಿ ಪಾಲನೆಯ ಮಹತ್ವ ಅರಿತು ಹೆಚ್ಚೆಚ್ಚು ತೊಡಗಿಸಿಕೊಳ್ಳಬಹುದು. ಮೊದಲಿಗೆ ನಾವು ಮೂರು E ಬಗ್ಗೆ ತಿಳಿದುಕೊಳ್ಳಬೇಕು (Exposure, Educate, Empower – ಅಂದರೆ ಅನಾವರಣ, ಶಿಕ್ಷಣ ಮತ್ತು ಸಬಲೀಕರಣ).

Exposure (ಅನಾವರಣ):

ಯಾವುದೇ ಮಕ್ಕಳಿಗಾದರೂ ಬೆಳೆಯುವ ಅವಕಾಶ ಅಗತ್ಯವಿರುತ್ತದೆ. ಕೇವಲ ನೀವು ಪಠ್ಯಕ್ರಮಕ್ಕೆ ತೆರೆದಿಡುವುದಲ್ಲ. ಗ್ರಾಮೀಣ ಭಾಗವನ್ನು ತೋರಿಸಬೇಕು. ಹಸಿದವರು, ರಸ್ತೆ ಬದಿಯಲ್ಲಿ ಕಾಣುವ ನಿರ್ಗತಿಕರು, ರಸ್ತೆ ಬದಿ ಅಂಗಡಿಗಳು, ಮಾರುಕಟ್ಟೆಗಳು, ಮಾಲ್​ಗಳು ಹೀಗೆ ಸಮಾಜದ ವಿವಿಧ ಸ್ತರಗಳ ದರ್ಶನ ಮಾಡಿಸಬೇಕು. ನೀವು ಈ ರೀತಿ ಸಕಲವನ್ನೂ ತೋರಿಸಿದಾಗ ಅದು ಮುಂದೆ ಕುತೂಹಲ ಕೆರಳಲು ಸಾಧ್ಯವಾಗಬಹುದು. ಸಮಾಜದ ಇತರ ಸ್ತರದ ವ್ಯಕ್ತಿಗಳ ಮೇಲೆ ಒಂದು ರೀತಿಯಲ್ಲಿ ಆದರದ ಭಾವನೆ ರೂಪುಗೊಳ್ಳಲು ಕಾರಣವಾಗಬಹುದು. ಶಾಲೆಯ ಜೊತೆಗೆ ಸ್ಮಿಮಿಂಗ್ ಕ್ಲಾಸ್, ಸಂಗೀತ ಕ್ಲಾಸ್, ಟ್ಯೂಷನ್ ಹೀಗೆ ಮಗುವಿನ ಸಮಯವನ್ನ ಕಿತ್ತುಕೊಳ್ಳುತ್ತಾ ಹೋದರೆ ಅವರ ಸರ್ವಾಂಗೀಣ ಬೆಳವಣಿಗೆ ಕಷ್ಟಸಾಧ್ಯವಾಗುತ್ತದೆ. ಮಕ್ಕಳು ಕಷ್ಟ ಕಾಣದಂತೆ ಬೆಳೆಯಬೇಕು ಎಂಬ ಭಾವನೆ ಹೆಚ್ಚಾಗುತ್ತಿದೆ. ಆದರೆ, ಈ ಕಷ್ಟಗಳಿಗೆ ಮಕ್ಕಳು ತೆರೆದುಕೊಳ್ಳದಿದ್ದರೆ ಅಥವಾ ಈ ಕಷ್ಟ ಏನೆಂಬುದು ಮಕ್ಕಳಿಗೆ ಗೊತ್ತಿರದಿದ್ದರೆ ಭವಿಷ್ಯದಲ್ಲಿ ಅವರು ಪ್ರಜೆಗಳಾಗಿ ಸಾಮಾಜಿಕ ಸಮಸ್ಯೆಗಳನ್ನ ಹೇಗೆ ಬಗೆಹರಿಸಬಲ್ಲರು? ಅಥವಾ ಈ ಸಮಸ್ಯೆಗಳಿಗೆ ಉತ್ತರ ಹುಡುಕುವ ಪ್ರೇರಣೆ ಎಲ್ಲಿಂದ ಬರಬೇಕು?

Education (ಶಿಕ್ಷಣ):

ನನ್ನ ಪ್ರಕಾರ ಶಿಕ್ಷಣಕ್ಕೆ ಹಲವು ಆಯಾಮಗಳಿವೆ. ಸ್ಮರಣೆಯಿಂದ ಕಲಿಯುವುದು ಒಂದೆಡೆಯಾದರೆ, ವಿಜ್ಞಾನ, ಇತಿಹಾಸ ಇತ್ಯಾದಿಗಳಿಂದ ಕಲಿಯುವುದು ಇನ್ನೊಂದು ಮುಖ್ಯ ವಿಚಾರ. ಇವತ್ತಿನ ಕಾಲಮಾನದಲ್ಲಿ ಎನ್​ಇಇಟಿ ಪರೀಕ್ಷೆಗಳು ಮತ್ತು ವಿವಿಧ ಬಗೆಯ ಕಠಿಣ ಕೋಚಿಂಗ್ ಕ್ಲಾಸ್​ಗಳು ಇವುಗಳೇ ಮಕ್ಕಳ ಜೀವನವನ್ನು ಆವರಿಸಿಕೊಂಡುಬಿಟ್ಟಿವೆ. ಪ್ರಾಮಾಣಿಕತೆ, ಧೈರ್ಯ, ಕರುಣೆ, ಬದ್ಧತೆ, ಹೊಣೆಗಾರಿಕೆ ಬಗ್ಗೆ ಕಲಿಯಲು ಎಲ್ಲಿದೆ ಸಮಯ? ನಮ್ಮ ಸಮಾಜದಲ್ಲಿ ಎಂಜಿನಿಯರ್, ವೈದ್ಯರ ಕೊರತೆ ಇಲ್ಲ. ಅವರು ಸಾಕಷ್ಟು ಮಂದಿ ನಮ್ಮಲ್ಲಿದ್ದರೂ ಯಾವುದೇ ಪರಿಣಾಮ ಕಾಣುತ್ತಿಲ್ಲ. ಯಾಕೆ ಗೊತ್ತಾ? ಮೇಲೆ ಹೇಳಿದ ಮೌಲ್ಯಗಳು ಅವರ ಮನಸ್ಸಲ್ಲಿ ಉಳಿದಿಲ್ಲ. ಮಕ್ಕಳಲ್ಲಿ ಈ ಮೌಲ್ಯವನ್ನು ಯಾರು ತುಂಬಬೇಕು? ಖಂಡಿತವಾಗಿ ತಂದೆ-ತಾಯಿಯೇ ಈ ಕೆಲಸ ಆಡಬೇಕು.  ಮಕ್ಕಳು ಚಿಕ್ಕ ವಯಸ್ಸಿನಿಂದಲೇ ತಮ್ಮ ತಂದೆ-ತಾಯಿ ಅಥವಾ ಪೋಷಕರನ್ನು ನೋಡಿಕೊಂಡೇ ಬೆಳೆಯುತ್ತದೆ. ಅವರ ವರ್ತನೆಯೇ ಅದಕ್ಕೆ ಮಾದರಿಯಾಗಿರುತ್ತದೆ. ತನ್ನ ಕಣ್ಮುಂದೆಯೇ ಅಮ್ಮನಿಗೆ ಅಪ್ಪ ನಿಂದಿಸಿದಾಗ ಮಗು ಆತ್ಮಗೌರವವೆಂಬ ಮೌಲ್ಯವನ್ನು ಹೇಗೆ ಕಲಿಯುತ್ತದೆ? ಟ್ರಾಫಿಕ್ ಸಿಗ್ನಲ್ ಸಿಕ್ಕಾಗ ರೆಡ್ ಲೈಟ್ ಇದ್ದರೂ ಪೊಲೀಸರು ಇಲ್ಲವೆಂದು ನಾವು ನಿಯಮ ಮೀರಿ ಸಿಗ್ನಲ್ ಜಂಪ್ ಮಾಡುತ್ತೇವೆ. ಇದನ್ನು ನೋಡುವ ಮಗುವಿನ ಮನಸ್ಸಿಗೆ ಜವಾಬ್ದಾರಿ ಎಂಬ ಮೌಲ್ಯ ಬಿತ್ತಲು ಆಗುತ್ತಾ? ನಮಗೆ ಅನ್ಯಾಯವಾದಾಗ ಪ್ರತಿಭಟಿಸದೇ ಸುಮ್ಮನಿದ್ದು ಬಿಡುತ್ತೇವೆ. ಇದರಿಂದ ಮಗು ಅನ್ಯಾಯದ ವಿರುದ್ಧ ಹೋರಾಡುವುದನ್ನು ಹೇಗೆ ಕಲಿಯುತ್ತದೆ? ಇಲ್ಲಿ ಶಿಕ್ಷಣ ಎಂದರೆ ಪಾಠ ಮಾಡುವುದಲ್ಲ. ನಮ್ಮ ನಿತ್ಯ ಜೀವನದಲ್ಲಿ ಈ ಮೌಲ್ಯಗಳನ್ನ ಚಾಲನೆಯಲ್ಲಿಟ್ಟಿರಬೇಕು. ಇದರಿಂದ ನಮ್ಮನ್ನು ನೋಡಿ ಮಕ್ಕಳು ಈ ಮೌಲ್ಯಗಳನ್ನು ಅರಿತುಕೊಳ್ಳುತ್ತವೆ.

ಇದನ್ನೂ ಓದಿ: 21 ದಿನದಲ್ಲಿ 21 ಸಂಗತಿ: ಸಂಬಂಧಗಳ ಮಹತ್ವ ಬಗ್ಗೆ ಅಣ್ಣಾಮಲೈ ಮಾತು

Empower (ಸಬಲೀಕರಣ):

ಒಂದು ಪಕ್ಷ ಜನಿಸಿ ಅದು ದೊಡ್ಡದಾದಾಗ ಮೇಲೆ ಹಾರಲೇ ಬೇಕು. ಅದು ಜೀವ ಜಗತ್ತಿನ ನಿಯಮ. ಪಕ್ಷಿ ಹಾರಲು ಹೆದರಿದರೆ ಅದರ ತಾಯಿಯೇ ಮರಿಯನ್ನು ಹೊರಗೆ ನೂಕುತ್ತದೆ. ತಾಯಿ ಹಕ್ಕಿ ಮತ್ತು ಮರಿ ಹಕ್ಕಿ ಎರಡಕ್ಕೂ ಬದುಕುವುದೇ ಮುಖ್ಯ. ಸಬಲೀಕರಣ ಎಂದರೆ ಪಾಲಿಸುವುದು, ಮಾರ್ಗದರ್ಶಿಸುವುದು ಮತ್ತು ವಿಶ್ವಾಸ ಇಡುವುದು. ಸಮಯ ಬಂದಾಗ ನಿಮ್ಮ ಮಕ್ಕಳನ್ನು ಅವರಂತೆಯೇ ಜೀವಿಸಲು ಬಿಡಿ. ಅವರ ವೃತ್ತಿ ಆಯ್ಕೆಗಳಲ್ಲಿ ನೀವು ಮೂಗು ತೂರಿಸಬೇಡಿ. ಈಗ ಜಗತ್ತು ಸಾಕಷ್ಟು ವೇಗದಲ್ಲಿ ಬದಲಾಗುತ್ತಿದೆ. ನಿಮಗೆ ಎಲ್ಲಾ ಗೊತ್ತು ಎಂದಂದುಕೊಂಡರೂ ನಿಮ್ಮ ಮಕ್ಕಳಿಗೆ ವೃತ್ತಿಯ ಸಲಹೆ ನೀಡಲು ನಿಮಗೆ ಸಾಧ್ಯವಿಲ್ಲ ಎಂಬುದನ್ನು ತಿಳಿದುಕೊಳ್ಳಿ. ನೀವು ಮಾಡಬೇಕಾದುದಿಷ್ಟೇ. ಅವರೊಂದಿಗೆ ಆಪ್ತತೆ ಹೊಂದಿರಿ. ಅವರನ್ನು ಅವರಂತೆಯೇ ಇರಲು ಅವಕಾಶ ಕೊಡಿ. ಅವರ ಅನೇಕ ಆಯ್ಕೆಗಳಲ್ಲಿ ಅವರ ಪಾತ್ರವೇ ಇರಲಿ.

ನೀವು ಬಲ ತುಂಬಿದ್ದೀರೆಂಬುದು ಮಕ್ಕಳ ಅರಿವಿಗೆ ಬಂದರೆ ಅವರು ಹೆಚ್ಚು ಎತ್ತರಕ್ಕೆ ಏರುವಷ್ಟು ದೈರ್ಯ ಹೊಂದುತ್ತಾರೆ. ತಾವು ವಿಫಲರಾದರೂ ಸಂತೈಸಲು ನೀವಿದ್ದೀರಿ ಎಂಬುದು ಮಕ್ಕಳಲ್ಲಿ ಉತ್ತೇಜನ ನೀಡಬಲ್ಲುದು. ಮಕ್ಕಳಿಗೆ ಇದಕ್ಕಿಂತ ಬೇರೆ ಅಗತ್ಯ ಇಲ್ಲ ಎನಿಸುತ್ತದೆ.

ಲೇಖಕರು: ಕೆ. ಅಣ್ಣಾಮಲೈ, ಮಾಜಿ ಐಪಿಎಸ್ ಅಧಿಕಾರಿ

(ಕೋವಿಡ್-19 ಹಿನ್ನೆಲೆಯಲ್ಲಿ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ 21 ದಿನಗಳಲ್ಲಿ ಲೇಖಕರು 21 ಜೀವನ ಪಾಠಗಳನ್ನು ನ್ಯೂಸ್18 ಓದುಗರಿಗೆ ನೀಡುತ್ತಿದ್ಧಾರೆ. ಈ ಲೇಖನಮಾಲೆಯ ನಾಲ್ಕನೇ ಲೇಖನ ಇದಾಗಿದೆ.)
First published:March 29, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading