ಭ್ರಷ್ಟಾಚಾರದ ದಾಖಲೆ ಕೇಳಿ ನಿಮ್ಮ ಅಣ್ತಮ್ಮಂದಿರುವ ಜೈಲು ಪಾಲಾದದ್ದು ನೆನಪಿಲ್ಲವೇ?: ಶ್ರೀರಾಮುಲುಗೆ ಸಿದ್ದರಾಮಯ್ಯ ಟಕ್ಕರ್‌

ಕೇಂದ್ರದಿಂದ ರಾಜ್ಯಕ್ಕೆ ಎಷ್ಟು ನೆರವು ನೀಡುತ್ತೀರಿ ಎಂದು ನರೇಂದ್ರ ಮೋದಿಯವರನ್ನು ಕೇಳಬೇಕಿತ್ತಲ್ಲವೇ? PMCares ನಿಧಿಯಿಂದ ರಾಜ್ಯಕ್ಕೆ ಎಷ್ಟು ದುಡ್ಡು ಕಳಿಸಿದ್ದೀರಿ? ಎಂದು ಪ್ರಧಾನಿಗಳನ್ನು ವಿಚಾರಿಸಬೇಕಿತ್ತಲ್ಲವೇ. ಸುಳ್ಳು ಆಶ್ವಾಸನೆ ನೀಡಿದ್ದರೂ ನೊಂದ ಜನರಿಗೆ ಸ್ವಲ್ಪ‌ ನೆಮ್ಮದಿ ಸಿಗುತ್ತಿತ್ತು ಎಂದು ಸಿಎಂ ಯಡಿಯೂರಪ್ಪ ಅವರನ್ನು ಸಿದ್ದರಾಮಯ್ಯ ಕಿಚಾಯಿಸಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ.

ವಿಪಕ್ಷ ನಾಯಕ ಸಿದ್ದರಾಮಯ್ಯ.

  • Share this:
ಬೆಂಗಳೂರು (ಜುಲೈ 05); ಲೂಟಿ ಹೊಡೆದಿದ್ದರೆ ದಾಖಲೆ ಬಿಡುಗಡೆ ಮಾಡಲಿ ಎಂದು ಸಚಿವ ಶ್ರೀರಾಮುಲು ಸವಾಲು ಹಾಕಿದ್ದಾರೆ. ರಾಮುಲು ಅವರೇ, ಬಳ್ಳಾರಿಯ ನಿಮ್ಮ ಅಣ್ತಮ್ಮಂದಿರು ಇದೇ ರೀತಿ ಸವಾಲು ಹಾಕಿ ಕೊನೆಗೆ ದಾಖಲೆ ಬಿಡುಗಡೆ ಮಾಡಿದಾಗ ಜೈಲು ಸೇರಿದ್ದರು. ಸವಾಲೆಸೆಯುವಾಗ ಇದು ನಿಮ್ಮ ಗಮನದಲ್ಲಿರಲಿ" ಎಂದು ಟ್ವೀಟ್‌ ಮಾಡುವ ಮೂಲಕ ಸಿದ್ದರಾಮಯ್ಯ ಶ್ರೀರಾಮುಲು ವಿರುದ್ಧ ಗುಡುಗಿದ್ದಾರೆ.

ಕೊರೋನಾ ಪರಿಕರಗಳ ಖರೀದಿಯಲ್ಲಿ ರಾಜ್ಯ ಸರ್ಕಾರ ಲೂಟಿ ಮಾಡಿದೆ ಎಂದು ಸಿದ್ದರಾಮಯ್ಯ ಹಲವಾರು ದಿನಗಳಿಂದ ಟೀಕಿಸುತ್ತಲೇ ಇದ್ದಾರೆ. ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಶ್ರೀರಾಮುಲು, "ರಾಜ್ಯ ಸರ್ಕಾರ ಲೂಟಿ ಹೊಡೆದಿದ್ದರೆ, ಪ್ರತಿಪಕ್ಷಗಳು ದಾಖಲೆ ಬಿಡುಗಡೆ ಮಾಡಲಿ" ಎಂದು ಕಿಡಿಕಾರಿದ್ದರು.ಶ್ರೀರಾಮುಲು ಅವರ ಮಾತಿಗೆ ಇತಿಹಾಸವನ್ನು ನೆನಪಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, "ಬಳ್ಳಾರಿಯ ನಿಮ್ಮ ಅಣ್ತಮ್ಮಂದಿರು ಇದೇ ರೀತಿ ಸವಾಲು ಹಾಕಿ ಕೊನೆಗೆ ದಾಖಲೆ ಬಿಡುಗಡೆ ಮಾಡಿದಾಗ ಜೈಲು ಸೇರಿದ್ದರು. ಸವಾಲೆಸೆಯುವಾಗ ಇದು ನಿಮ್ಮ ಗಮನದಲ್ಲಿರಲಿ" ಎಂದು ಹೇಳುವ ಮೂಲಕ ಶ್ರೀಘ್ರದಲ್ಲಿ ಕೊರೋನಾ ಅವ್ಯವಹಾರದ ಕುರಿತು ದಾಖಲೆ ಬಿಡುಗಡೆ ಮಾಡುವ ಸೂಚನೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಮಹಾಮಾರಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಸಿಎಂ ಯಡಿಯೂರಪ್ಪ ವೈಫಲ್ಯದ ವಿರುದ್ಧ ಸರಣಿ ಟ್ವೀಟ್ ಮಾಡುವ ಮೂಲಕ ಹರಿಹಾಯ್ದಿರುವ ಸಿದ್ದರಾಮಯ್ಯ, "ಕೊರೋನಾ ನಿಯಂತ್ರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಂದ ಶಹಭಾಸ್ ಗಿರಿ ಪಡೆದ ಯಡಿಯೂರಪ್ಪನವರಿಗೆ ಅಭಿನಂದನೆಗಳು.ಆದರೆ, ಪ್ರತಿದಿನ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಕೊರೋನಾ ನಿಯಂತ್ರಣದ ವೈಫಲ್ಯಗಳ ಸರಣಿ ವರದಿಗಳನ್ನೂ ಪ್ರಧಾನಿಗೆ ತೋರಿಸಿದ್ದರೆ, ಇನ್ನಷ್ಟು ಶಹಭಾಸ್ ಅನ್ನುತ್ತಿದ್ದರೋ ಏನೋ?" ಎಂದು ಸಿಎಂ ಯಡಿಯೂರಪ್ಪ ವಿರುದ್ಧ ವ್ಯಂಗ್ಯವಾಡಿದ್ದಾರೆ.ಅಲ್ಲದೆ, "ಕೇಂದ್ರದಿಂದ ರಾಜ್ಯಕ್ಕೆ ಎಷ್ಟು ನೆರವು ನೀಡುತ್ತೀರಿ ಎಂದು ನರೇಂದ್ರ ಮೋದಿಯವರನ್ನು ಕೇಳಬೇಕಿತ್ತಲ್ಲವೇ? PMCares ನಿಧಿಯಿಂದ ರಾಜ್ಯಕ್ಕೆ ಎಷ್ಟು ದುಡ್ಡು ಕಳಿಸಿದ್ದೀರಿ? ಎಂದು ಪ್ರಧಾನಿಗಳನ್ನು ವಿಚಾರಿಸಬೇಕಿತ್ತಲ್ಲವೇ. ಸುಳ್ಳು ಆಶ್ವಾಸನೆ ನೀಡಿದ್ದರೂ ನೊಂದ ಜನರಿಗೆ ಸ್ವಲ್ಪ‌ ನೆಮ್ಮದಿ ಸಿಗುತ್ತಿತ್ತು" ಎಂದು ಕಿಚಾಯಿಸಿದ್ದಾರೆ.ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಮೂರು ಜನ ಸಚಿವರನ್ನು ನೇಮಿಸಿರುವ ವಿಚಾರಕ್ಕೂ ಕಿಡಿಕಾರಿರುವ ಸಿದ್ದರಾಮಯ್ಯ, "ಬೆಂಗಳೂರಿನಲ್ಲಿ COVID-19 ನಿಯಂತ್ರಣಕ್ಕೆ ತ್ರಿಮೂರ್ತಿ ಸಚಿವರನ್ನು ನೇಮಿಸಿರುವುದು ಸೋಂಕಿತರಿಗೆ ನೆರವಾಗಲಿಕ್ಕಾ? ಇಲ್ಲವೇ, ಭಿನ್ನಾಭಿಪ್ರಾಯವನ್ನು ಶಮನ ಮಾಡಲಿಕ್ಕಾ? ಸೃಷ್ಟಿ, ಪಾಲನೆ, ಲಯ ಇವು ಆ ತ್ರಿಮೂರ್ತಿಗಳ ಕರ್ತವ್ಯವಂತೆ. ಈ ಮೂವರು ಇವುಗಳಲ್ಲಿ ಯಾವ ಕೆಲಸ ಮಾಡಲಿದ್ದಾರಂತೆ?" ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಕೊರೊನಾ ವಾರಿಯರ್ಸ್‌‌ಗೂ ಇಲ್ಲ ಉಚಿತ ಕೊವೀಡ್ ಟೆಸ್ಟ್; ಯಾರೇ ಆದರೂ 1500.ರೂ ಪಾವತಿಸಲೇಬೇಕಂತೆ

 

ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತಾವು ಬೆಂಗಳೂರು ಇನ್ಜಾರ್ಜ್‌ ಆಗಬೇಕು ಎಂದು ಸಚಿವ ಆರ್‌. ಅಶೋಕ್ ಹಲವಾರು ದಿನಗಳಿಂದ ಪಕ್ಷದ ಒಳಗೆ ಸಿಎಂ ಮೇಲೆ ಒತ್ತಡ ಹೇರುತ್ತಿದ್ದರು. ಮತ್ತೊಂದೆಡೆ ಅಶ್ವತ್ಥ್‌ ನಾರಾಯಣ್ ಸಹ ಈ ಸ್ಥಾನಕ್ಕಾಗಿ ಕಾದಾಡಿದ್ದರು. ಇನ್ನೂ ಈ ಹಿಂದೆಯೇ ಈ ಸ್ಥಾನದಲ್ಲಿ ಶ್ರೀರಾಮುಲು ಹಾಗೂ ಸಚಿವ ಸುಧಾಕರ್‌ ನಡುವೆ ಜಿದ್ದಾಜಿದ್ದಿ ನಡೆದದ್ದು ಕನ್ನಡಿಗರಿಗೆ ಗೊತ್ತೇ ಇದೆ. ಹೀಗಾಗಿ ಸಚಿವರ ನಡುವಿನ ವೈಮನಸ್ಯವನ್ನು ಹೋಗಲಾಡಿಸುವ ಸಲುವಾಗಿ ಈ ಮೂವರಿಗೆ ಬೆಂಗಳೂರಿನ ಜವಾಬ್ದಾರಿ ವಹಿಸಲಾಗಿದೆ ಎನ್ನಲಾಗುತ್ತಿದೆ.
Published by:MAshok Kumar
First published: