ಬೆಂಗಳೂರು (ಮಾರ್ಚ್ 24); ಮಾರಣಾಂತಿಕ ಕೊರೋನಾ ವೈರಸ್ ಸಾಕಷ್ಟು ವೇಗವಾಗಿ ಹಬ್ಬುತ್ತಿದೆ. ಈ ವೈರಸ್ ಹಬ್ಬದಂತೆ ತಡೆಯುವ ಸಲುವಾಗಿ ಎಲ್ಲಾ ಜಿಲ್ಲೆಗಳಲ್ಲೂ ಲಾಕ್ಡೌನ್ ಘೋಷಿಸಲಾಗಿದೆ. ಸೆಕ್ಷನ್ 144 ಅನ್ನು ಜಾರಿ ಮಾಡಲಾಗಿದೆ. ಸರ್ಕಾರದ ಈ ನಡೆಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ಹಾಗೆಂದ ಪೊಲೀಸರು ಬೀದಿಗೆ ಇಳಿಯುವವರ ಮೇಲೆಲ್ಲಾ ವಿನಾಃ ಕಾರಣ ಲಾಠಿ ಬೀಸುವುದು ಸರಿಯಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಅವರು, “ಕೊರೋನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತೆಗೆದುಕೊಳ್ಳುತ್ತಿರುವ ಎಲ್ಲಾ ಕ್ರಮಗಳಿಗೆ ನಮ್ಮ ಬೆಂಬಲ ಇದೆ. ಆದರೆ, ಇದು ಯುಗಾದಿ ಸಮಯ ಹೀಗಾಗಿ ಜನ ಅಗತ್ಯ ವಸ್ತುಗಳ ಮಾರಾಟ ಮತ್ತು ಖರೀದಿಗಾಗಿ ಬೀದಿಗೆ ಇಳಿಯುವುದು ಅನಿವಾರ್ಯ. ಇದಕ್ಕೆ ಅವಕಾಶ ಮಾಡಿಕೊಡದಿದ್ದರೆ ಹೇಗೆ? ಸರ್ಕಾರ ಈ ಕುರಿತು ಅಗತ್ಯ ಕ್ರಮ ಜರುಗಿಸಬೇಕು. ಅಲ್ಲದೆ, ಪೊಲೀಸರು ಸೆಕ್ಷನ್ 144 ಜಾರಿ ಮಾಡಿದ ಮಾತ್ರಕ್ಕೆ ರಸ್ತೆಗೆ ಇಳಿದ ಎಲ್ಲರ ಮೇಲೆ ಲಾಠಿ ಬೀಸಿ ದರ್ಪ ಮೆರೆಯುವುದು ಅಕ್ಷಮ್ಯ” ಎಂದು ಕಿಡಿಕಾರಿದ್ದಾರೆ.
ಇದೊಂದು ಮಾನಗೆಟ್ಟ ಸರ್ಕಾರ:
ಇದೇ ಸಂದರ್ಭದಲ್ಲಿ ಬಿಎಸ್ವೈ ಸರ್ಕಾರದ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ, “ಕೊರೋನಾ ಭೀತಿ ಹಿನ್ನೆಲೆಯಲ್ಲಿ ಸಂಸತ್ ಅನ್ನು ಮುಂದೂಡಲಾಗಿದೆ. ಇದೇ ರೀತಿ ರಾಜ್ಯ ವಿಧಾನಮಂಡಲ ಅಧಿವೇಶನವನ್ನೂ ಮುಂದೂಡಬೇಕು ಎಂಬುದು ನಮ್ಮ ಮನವಿಯಾಗಿತ್ತು. ಬಜೆಟ್ ಮೇಲೆ ಚರ್ಚೆ ಆಗದಿದ್ದರೂ ಪರವಾಗಿಲ್ಲ ನಾವು ಒಪ್ಪಿಗೆ ನೀಡುತ್ತೇವೆ, ಎಲ್ಲದಕ್ಕೂ ಸಹಕಾರ ಕೊಡುತ್ತೇವೆ ಎಂದು ಹೇಳಿದಾಗ್ಯೂ ರಾಜ್ಯ ಸರ್ಕಾರ ಇದೇ ತಿಂಗಳ 28ರ ವರೆಗೆ ಸದನವನ್ನು ನಡೆಸಲು ವಾದಿಸಿದೆ.
ಇನ್ನೂ ಇಂತಹ ಸಂದರ್ಭದಲ್ಲಿ ಹಣಕಾಸು ಬಿಲ್ ಹೊರತುಪಡಿಸಿ ಬೇರಾವ ಬಿಲ್ಗಳನ್ನೂ ತರೋದು ಬೇಡ ಎಂದು ನಾವು ಹೇಳಿದ್ದೇವೆ, ಹಣಕಾಸು ಬಿಲ್ಗೆ ನಾವು ಒಪ್ಪಿಗೆ ನೀಡ್ತೇವೆ ಎಂದೂ ಹೇಳಿದ್ದೇವೆ. ಆದರೂ ಕಲಾಪ ಆರಂಭವಾಗುತ್ತಿದ್ದಂತೆ ಕಾನೂನು ಸಂಸದೀಯ ಸಚಿವ ವಿ. ಮಾಧುಸ್ವಾಮಿ ಪಂಚಾಯತ್ ರಾಜ್ ಅನ್ನು ದುರ್ಬಲಗೊಳಿಸುವ ವಿಧೇಯಕವನ್ನು ಸದನದ ಎದುರು ಮಂಡಿಸಿದ್ದಾರೆ. ಅಂತಹ ಬಿಲ್ಗಳ ಚರ್ಚೆ ಆಗಲಿ ಹಾಗಾಗಿ ಇಷ್ಟು ಬೇಗ ಅದನ್ನು ಮಂಡಿಸುವುದು ಬೇಡ ಎಂಬುದು ನಮ್ಮ ವಾದ.
ಇದೇ ಕಾರಣಕ್ಕೆ ನಾವು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದೆವು, ಸ್ಪೀಕರ್ ಕೂಡ ಮದ್ಯಪ್ರವೇಶ ಮಾಡಿ ಇದಕ್ಕೆ ಬ್ರೇಕ್ ಹಾಕಿ ಹಣಕಾಸು ಬಿಲ್ ತರಬೇಕಿತ್ತು. ಆದರೆ, ಅದಾವೂದು ಆಗಲೇ ಇಲ್ಲ. ಸ್ಪೀಕರ್ ಪಕ್ಷಪಾತಿಯಾಗಿ ಕೆಲಸ ಮಾಡ್ತಿದ್ದಾರೆ ಅನ್ನೋ ಅನುಮಾನ ನಮಗೆ ಮೂಡಿದೆ. ಇನ್ನೂ ಇದೊಂದು ಮಾನಗೇಡಿ ಸರ್ಕಾರ” ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ವಿಧಾನಸಭೆ ಉಪಾಧ್ಯಕ್ಷರಾಗಿ ಆನಂದ ಮಾಮನಿ ಅವಿರೋಧ ಆಯ್ಕೆ; ಸ್ಪೀಕರ್ ಕಾಗೇರಿ ಘೋಷಣೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ