HOME » NEWS » Coronavirus-latest-news » EX CM SIDDARAMAIAH TWITTER WAR AGAINST NARENDRA MODI MAK

Siddaramaiah: ವೀರಾವೇಶದಿಂದ ಮೇ.1 ರಿಂದ ಲಸಿಕೆ ಘೋಷಿಸಿದ ಮಾತಿನ ಶೂರ ಮೋದಿ ಈಗ ಎಲ್ಲಿದ್ದಾರೆ?; ಸಿದ್ದರಾಮಯ್ಯ ವ್ಯಂಗ್ಯ

ನಿತ್ಯ ಕೊರೋನಾ ಸೋಂಕು ಮಿತಿಮೀರಿ ಏರಿಕೆಯಾಗುತ್ತಿದ್ದು, ಇದನ್ನು ತಡೆಗಟ್ಟುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕರ್ನಾಟಕದ ಬಿಜೆಪಿ ನಾಯಕರು ಕೊರೋನಾ ಸೋಂಕು ತಡೆಗಟ್ಟುವ ಪ್ರಾಮಾಣಿಕ ಪ್ರಯತ್ನ ಮಾಡಲಿ ಎಂದು ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ.

news18-kannada
Updated:May 1, 2021, 7:00 PM IST
Siddaramaiah: ವೀರಾವೇಶದಿಂದ ಮೇ.1 ರಿಂದ ಲಸಿಕೆ ಘೋಷಿಸಿದ ಮಾತಿನ ಶೂರ ಮೋದಿ ಈಗ ಎಲ್ಲಿದ್ದಾರೆ?; ಸಿದ್ದರಾಮಯ್ಯ ವ್ಯಂಗ್ಯ
ಸಿದ್ದರಾಮಯ್ಯ.
  • Share this:
ಬೆಂಗಳೂರು (ಮೇ 01); ಭಾರತದಲ್ಲಿ ಕೊರೋನಾ ಕೇಕೆ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ದಿನವೊಂದಕ್ಕೆ 4 ಲಕ್ಷ ಜನ ಸೋಂಕಿಗೆ ಒಳಗಾದರೆ, ಸಾವಿರಾರು ಜನ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಕೊರೋನಾವನ್ನು ನಿಯಂತ್ರಿಸುವ ಸಲುವಾಗಿ ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಮೇ.01 ರಿಂದ 18 ವರ್ಷದಿಂದ 45 ವರ್ಷದವರಿಗೆ ಕೊರೋನಾ ಲಸಿಕೆ ಕಡ್ಡಾಯ ಎಂದು ಘೋಷಿಸಿದ್ದರು. ಈ ಪ್ರಕಾರ ಇಂದಿನಿಂದ ದೇಶದೆಲ್ಲೆಡೆ ಕೊರೋನಾ ಲಸಿಕೆ ಕಾರ್ಯಕ್ರಮ ಆರಂಭವಾಗಬೇಕಿತ್ತು. ಆದರೆ, ಕೇಂದ್ರ ಸರ್ಕಾರ ಈವರೆಗೆ ರಾಜ್ಯಗಳಿಗೆ ಅಗತ್ಯವಾದ ಲಸಿಕೆ ಪೂರೈಕೆ ಮಾಡದ ಕಾರಣ ಲಸಿಕೆ ಕಾರ್ಯಕ್ರಮ ಯಶಸ್ವಿಯಾಗಿಲ್ಲ. ಹಲವೆಡೆ ಆರಂಭವೇ ಆಗಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಮತ್ತು ನರೇಂದ್ರ ಮೋದಿ ವಿರುದ್ಧ ಕಿಡಿಕಾರಿರುವ ಮಾಜಿ ಸಿಎಂ ಸಿದ್ದರಾಮಯ್ಯ, "ಟಿವಿಯಲ್ಲಿ ಕಾಣಿಸಿಕೊಂಡು ವೀರಾವೇಶದಿಂದ 18ರಿಂದ 45 ವಯಸ್ಸಿನವರಿಗೆ ಮೇ ಒಂದರಿಂದ ಲಸಿಕೆಯ ಘೋಷಣೆ ‌ಮಾಡಿದವರು‌ ಪ್ರಧಾನಿ ಮೋದಿ ಎಲ್ಲಿ?" ಎಂದು ಕಿಡಿಕಾರಿದ್ದಾರೆ.



ಪ್ರಧಾನಿ ಮೋದಿ ಹಾಗೂ ರಾಜ್ಯ-ಕೇಂದ್ರ ಸರ್ಕಾರಗಳ ಕಾರ್ಯವೈಖರಿಯನ್ನು ಸರಣಿ ಟ್ವೀಟ್ ಮೂಲಕ ಪ್ರಶ್ನೆ ಮಾಡಿರುವ ಸಿದ್ದರಾಮಯ್ಯ, "ಟಿವಿಯಲ್ಲಿ ಕಾಣಿಸಿಕೊಂಡು ವೀರಾವೇಶದಿಂದ 18ರಿಂದ 45 ವಯಸ್ಸಿನವರಿಗೆ ಮೇ ಒಂದರಿಂದ ಲಸಿಕೆಯ ಘೋಷಣೆ ‌ಮಾಡಿದ್ದರು ಪ್ರಧಾನಿ ನರೇಂದ್ರ ಮೋದಿ. ಆದರೆ, ಈಗ ರಾಜ್ಯದ ಬಿಜೆಪಿ ಸರ್ಕಾರ ಲಸಿಕೆಯನ್ನು ಮುಂದೂಡಿದೆ. ಮಾತಿನ ಶೂರ ಮೋದಿಯವರು ಎಲ್ಲಿದ್ದಾರೆ ಈಗ?" ಎಂದು ಕಿಡಿಕಾರಿದ್ದಾರೆ.



ಸರಣಿ ಟ್ವೀಟ್​ಗಳ ಮೂಲಕ ಪ್ರಧಾನಿ ಮೋದಿಯ ಹಾಗೂ ಬಿಜೆಪಿ ಸರ್ಕಾರದ ಎದುರು ಪ್ರಶ್ನೆಗಳನ್ನು ಇಟ್ಟು ಕ್ಷಮೆಗೆ ಆಗ್ರಹಿಸಿರುವ ಸಿದ್ದರಾಮಯ್ಯ, "18 ರಿಂದ 25 ವರ್ಷ ವಯಸ್ಸಿನವರಿಗೆ ಲಸಿಕೆ ನೀಡಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿಲ್ಲ ಎಂದು ಪ್ರಧಾನಿಯವರಿಗೆ ಗೊತ್ತಿರಲಿಲ್ಲವೇ? ಮುಖ್ಯಮಂತ್ರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿಲ್ಲವೇ? ಮಾತು ತಪ್ಪಿದ ಪ್ರಧಾನಿ ನರೇಂದ್ರ ಮೋದಿ ಟಿವಿಯಲ್ಲಿ‌ ಕಾಣಿಸಿಕೊಂಡು ನಿಜ‌ ಸಂಗತಿ ತಿಳಿಸಿ ದೇಶದ ಜನತೆಯಲ್ಲಿ ಕ್ಷಮೆ ಕೇಳಬೇಕು" ಎಂದು ಒತ್ತಾಯಿಸಿದ್ದಾರೆ.



ಮತ್ತೊಂದು ಟ್ವೀಟ್​ನಲ್ಲಿ ಸರ್ಕಾರಕ್ಕೆ ಕಿವಿಮಾತು ಹೇಳಿರುವ ಅವರು, "ಲಸಿಕೆ ಪಡೆದುಕೊಳ್ಳಲು ಆನ್‌ಲೈನ್ ಮೂಲಕ ಜನರು ಹೆಸರನ್ನು ನೋಂದಣಿ ಮಾಡಬೇಕು. ಗ್ರಾಮೀಣ ಭಾಗದ ಜನರಿಗೆ ಈ ಆನ್‌ಲೈನ್ ನೋಂದಣಿ ಕಷ್ಟದ ಕೆಲಸ, ಹೀಗಾಗಿ ಕೊರೊನಾ ಲಸಿಕೆ ನೀಡುವುದನ್ನು ಪೋಲಿಯೋ ಲಸಿಕೆ ಮಾದರಿಯಲ್ಲೆ ಒಂದು ಅಭಿಯಾನವಾಗಿ ರೂಪಿಸಿ, ಜನರ ಬಳಿಗೆ ಹೋಗಿ ಲಸಿಕೆ ನೀಡಬೇಕು.



ಲಸಿಕೆ ಪಡೆದವರಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ತುಂಬಾ ಕಡಿಮೆ ಇದೆ. ಹೀಗಾಗಿ ರಾಜ್ಯದಲ್ಲಿರುವ 18 ವರ್ಷ ಮೇಲ್ಪಟ್ಟ ಹಾಗೂ 18 ವರ್ಷದೊಳಗಿನ ಎಲ್ಲರಿಗೂ ಶೀಘ್ರವಾಗಿ ಲಸಿಕೆ ಸಿಗುವಂತೆ ಮಾಡಲು ಕರ್ನಾಟಕದ ಬಿಜೆಪಿ ಸರ್ಕಾರ ಗಂಭೀರ ಪ್ರಯತ್ನ ಮಾಡಬೇಕು.



45 ವರ್ಷ ಮೇಲ್ಪಟ್ಟವರಿಗೆ ನೀಡುವ ಲಸಿಕೆಗಷ್ಟೇ ಕೇಂದ್ರ ಸರ್ಕಾರ ಹಣ ಕೊಡುವುದು, ಅದಕ್ಕಿಂತ ಕೆಳಗಿನ ವಯೋಮಾನದ ಜನರಿಗೆ ನೀಡುವ ಲಸಿಕೆಗೆ ರಾಜ್ಯಗಳೇ ಹಣ ಹಾಕಬೇಕು. ಸದ್ಯದ ಪರಿಸ್ಥಿತಿಯಲ್ಲಿ ಲಸಿಕೆ ಪಡೆಯುವುದೊಂದೆ ಸೋಂಕು ತಡೆಗಟ್ಟಲು ಇರುವ ದಾರಿ, ಹೀಗಾಗಿ ರಾಜ್ಯ ಸರ್ಕಾರ ವಿಳಂಬ ಮಾಡದೆ ಎಲ್ಲರಿಗೂ ಲಸಿಕೆ ನೀಡಬೇಕು" ಎಂದು ಸೂಚಿಸಿದ್ದಾರೆ.



"ಸರ್ಕಾರದ ಮುಖ್ಯಕಾರ್ಯದರ್ಶಿಯವರ ಜೊತೆ ಲಸಿಕೆ ವಿಚಾರವಾಗಿ ಚರ್ಚಿಸಿದ್ದೇನೆ. ಆರುವರೆ ಕೋಟಿ ಲಸಿಕೆಯ ಅಗತ್ಯವಿದೆ ಎಂದಿದ್ದಾರೆ.
ನನ್ನ ಪ್ರಕಾರ ಈ ತಿಂಗಳ ಅಂತ್ಯದ ಒಳಗೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವುದನ್ನು ಪ್ರಾರಂಭಿಸಲು ಸಾಧ್ಯವಾಗದು. ಬೇಗ ಸಿಕ್ಕಿದ್ದರೆ ಸೋಂಕು ಇನ್ನಷ್ಟು ಕಡಿಮೆಯಾಗುತ್ತಿತ್ತು.



ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಲಸಿಕೆ ತಯಾರಿಕೆ ಸಂಬಂಧ 162 ಯುನಿಟ್ ಗಳಿಗೆ ಕೇಂದ್ರ ಸರ್ಕಾರ ಟೆಂಡರ್ ಕರೆದಿತ್ತು, ಈ ಪೈಕಿ 30 ಯುನಿಟ್ ಗಳಷ್ಟೇ ಕಾರ್ಯಾರಂಭ ಮಾಡಿವೆ. ದೇಶದಲ್ಲಿ ಲಸಿಕೆಯ ಅಭಾವ ಉಂಟಾಗಲು ಇದೇ ಮುಖ್ಯ ಕಾರಣ.
ಒಟ್ಟಿನಲ್ಲಿ ಕೇಂದ್ರದ ಬಿಜೆಪಿ  ನಾಯಕರ ತಾತ್ಸಾರ ಧೋರಣೆಗೆ ಜನ ಜೀವ ತೆರುವಂತಾಗಿದೆ.



ಈ ವರೆಗೆ 45 ವರ್ಷ ಮೇಲ್ಪಟ್ಟ ಶೇ.25 ಜನರಿಗಷ್ಟೇ ಕೊರೊನಾ ಲಸಿಕೆ ನೀಡಲಾಗಿದೆ. ನಮ್ಮಲ್ಲೇ ಲಸಿಕೆಯ ಅಗತ್ಯತೆ ಹೆಚ್ಚಿರುವಾಗ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಗಳಿಗೆ 6 ಕೋಟಿ ಲಸಿಕೆ ನೀಡಿ ಭಾರತೀಯರು ಲಸಿಕೆಗಾಗಿ ಪರದಾಡುವಂತೆ ಮಾಡಿದ್ದಾರೆ. ಸೋಂಕು ಹರಡಲು ಇದೂ ಒಂದು ಕಾರಣ.



ನಿತ್ಯ ಕೊರೋನಾ ಸೋಂಕು ಮಿತಿಮೀರಿ ಏರಿಕೆಯಾಗುತ್ತಿದ್ದು, ಇದನ್ನು ತಡೆಗಟ್ಟುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕರ್ನಾಟಕದ ಬಿಜೆಪಿ ನಾಯಕರು ಕೊರೋನಾ ಸೋಂಕು ತಡೆಗಟ್ಟುವ ಪ್ರಾಮಾಣಿಕ ಪ್ರಯತ್ನ ಮಾಡಲಿ, ಇಲ್ಲವೇ ಅಧಿಕಾರ ಬಿಟ್ಟು ತೊಲಗಲಿ. ಸರ್ಕಾರದ ಅದಕ್ಷತೆ ಹಾಗೂ ದುರಾಡಳಿತಕ್ಕೆ ಅಮಾಯಕ ಜನರು ಬಲಿಯಾಗುವುದು ಬೇಡ" ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.
Published by: MAshok Kumar
First published: May 1, 2021, 7:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories