ಬೆಂಗಳೂರು (ಮೇ 05); ರಾಜ್ಯದಲ್ಲಿ ಇನ್ನು ಮುಂದೆ ಎಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಬೆಡ್ ಎಷ್ಟು ಖಾಲಿ ಇದೆ? ಹಾಗೂ ಆಕ್ಸಿಜನ್ ಸೌಲಭ್ಯಗಳ ಕುರಿತು ಮಾಧ್ಯಮಗಳ ಮೂಲಕ ಜನರಿಗೆ ಮಾಹಿತಿ ನೀಡುವ ಕೆಲಸವಾಗುತ್ತದೆ ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ರಾಜ್ಯದಲ್ಲಿ ಆಕ್ಸಿಜನ್ ಮತ್ತು ಕೊರೋನಾ ರೋಗಿಗಳಿಗೆ ಬೆಡ್ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೆಡೆ ಕೊರೋನಾ ರೋಗಿಗಳ ಸಂಖ್ಯೆ ಏರುತ್ತಲೇ ಇದೆ. ಮತ್ತೊಂದೆಡೆ ಹಾಸಿಗೆ-ಆಕ್ಸಿಜನ್ ಇಲ್ಲದೆ ಸಾಯುವವರ ಸಂಖ್ಯೆ ಅಧಿಕವಾಗುತ್ತಲೇ ಇದೆ. ಈ ನಡುವೆ ಬೆಡ್ ಬ್ಲಾಕಿಂಗ್ ಕುರಿತು ಸಂಸದ ತೇಜಸ್ವಿ ಸೂರ್ಯ ನಿನ್ನೆ ಮಾಡಿದ್ದ ಸುದ್ದಿಗೋಷ್ಠಿ ರಾಜ್ಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿ ಮಾಡಿದೆ.
ಹೀಗಾಗಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಸಿಎಂ ಯಡಿಯೂರಪ್ಪ ಸಚಿವ ಸುಧಾಕರ್ ಬದಲಿಗೆ ಈ ಬಗ್ಗೆ ಪರಿಶೀಲನೆ ನಡೆಸಲು ಸಚಿವರಾದ ಆರ್. ಅಶೋಕ್, ಅರವಿಂದ ಲಿಂಬಾವಳಿ ಒಳಗೊಂಡ ತಂಡ ರಚನೆ ಮಾಡಿದ್ದಾರೆ. ಇಂದು ರಾಜ್ಯದ ಎಲ್ಲಾ ಕೋವಿಡ್ ವಾರ್ ರೂಂಗಳನ್ನೂ ಪರಿಶೀಲನೆ ಮಾಡಿ ಪ್ರತಿಕ್ರಿಯೆ ನೀಡಿರುವ ಆರ್. ಅಶೋಕ್, "ರಾಜ್ಯದ ವಾರ್ ರೂಂ ಪರಿಶೀಲನೆ ಮಾಡಿದ್ದೇವೆ. ಬೆಡ್ ಗಳ ವ್ಯವಸ್ಥೆ ಬಗ್ಗೆಯೂ ನಾವು ಚರ್ಚೆ ಮಾಡಿದ್ದೇವೆ. ಬೆಡ್ ಮಾಹಿತಿ ಪಡೆದಿದ್ದೇವೆ. ಇನ್ನು ಮುಂದೆ ಆಕ್ಸಿಜನ್ ಬೆಡ್ ಬೇಕು ಅಂತ ರೋಗಿ ತೀರ್ಮಾನ ಮಾಡೋದಲ್ಲ.
ಮೊದಲು ಅವರು ಕೇರ್ ಸೆಂಟರ್ಗೆ ಬರಬೇಕು. ಅಮೇಲೆ ಅಲ್ಲಿನ ವೈದ್ಯರು ನಿರ್ಧಾರ ಮಾಡ್ತಾರೆ. ಆಯುಷ್ ವೈದ್ಯರನ್ನ ಕೇರ್ ಸೆಂಟರ್ ನಲ್ಲಿ ಬಳಸಿಕೊಳ್ಳಲು ನಿರ್ಧಾರ ಮಾಡಲಾಗಿದೆ. ಬೆಡ್ ಸಮಸ್ಯೆ ಆದಷ್ಟು ಬೇಗ ಸರಿ ಮಾಡ್ತೀವಿ. ಬೇರೆ ಬೇರೆ ದೇಶದಿಂದ ಆಕ್ಸಿಜನ್ ಬರ್ತಿದೆ. ಸಂಘ ಸಂಸ್ಥೆಗಳಿಂದ ಆಕ್ಸಿಜನ್ ಬರ್ತಿದೆ. ಇದನ್ನ ಸ್ವೀಕಾರ ಮಾಡಲು ಇಬ್ಬರು ನೋಡಲ್ ಅಧಿಕಾರಿಗಳನ್ನ ನೇಮಕ ಮಾಡುತ್ತಿದ್ದೇವೆ.
ನಾಳೆ ಖಾಸಗಿ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಸಭೆ ಮಾಡ್ತೀವಿ. ಬೆಡ್ ಬಗ್ಗೆ ಮಾಹಿತಿ ಸಂಗ್ರಹ ಮಾಡ್ತೀವಿ. ಬೆಡ್ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಕೆಲಸ ನಾವು ಮಾಡ್ತೀವಿ. ನಾಳೆಯಿಂದಲೇ ಕೆಲಸ ಪ್ರಾರಂಭ ಮಾಡ್ತೀವಿ. ಬೆಡ್ ಮಾಹಿತಿ ಮಾಧ್ಯಮಗಳ ಮೂಲಕ ನೀಡುವ ಕ್ರಮ ತೆಗೆದುಕೊಳ್ಳುತ್ತೇವೆ. ಖಾಸಗಿ ಆಸ್ಪತ್ರೆಗಳಲ್ಲಿ ಸರಿಯಾಗಿ ಊಟ ಕೊಡುತ್ತೊಲ್ಲ ಎಂದು ದೂರು ಬರುತ್ತದೆ ಅದನ್ನ ಚೆಕ್ ಮಾಡಿ ಸರಿ ಮಾಡಲಾಗುತ್ತದೆ" ಎಂದು ಮಾಹಿತಿ ನೀಡಿದ್ದಾರೆ.
ಭಾರತದಲ್ಲಿ ಕೊರೋನಾ ಕೇಕೆ:
ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಕೊರೋನಾ ಸೋಂಕು ಹರಡುವಿಕೆ ಶರವೇಗವನ್ನು ಪಡೆದುಕೊಂಡಿದೆ. ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ.
ಏಪ್ರಿಲ್ 4ರಿಂದ ದಿನ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು, ಏಪ್ರಿಲ್ 14ರಿಂದ ದಿನ ಒಂದರಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನರು ಹಾಗೂ ಏಪ್ರಿಲ್ 17ರಿಂದ ದಿನ ಒಂದರಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದರು. ಈಗ ದೇಶದ ಕೊರೊನಾ ಪೀಡಿತರ ಸಂಖ್ಯೆ ಎರಡು ಕೋಟಿಯನ್ನೂ ದಾಟಿದೆ. ಅಲ್ಲದೆ ಸುಮಾರು ನಾಲ್ಕು ಲಕ್ಷದಷ್ಡು ಕೊರೊನಾ ಪ್ರಕರಣಗಳು ಗೋಚರಿಸಲು ಆರಂಭಿಸಿವೆ.
ಮಂಗಳವಾರ 3,82,315 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಗುಣ ಆಗಿರುವವರು 3,38,439 ಜನ ಮಾತ್ರ. ಇದರಿಂದ ದೇಶದಲ್ಲಿ ಈವರೆಗೆ ಕೊರೋನಾ ಸೋಂಕು ಪೀಡಿತರಾದವರ ಸಂಖ್ಯೆ ಎರಡು ಕೋಟಿ ದಾಟಿದ್ದು 2,06,65,148ಕ್ಕೆ ಏರಿಕೆ ಆಗಿದೆ. ಇದಲ್ಲದೆ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗಿದ್ದು ದೇಶದಲ್ಲಿ ಇದೀಗ ದಿನ ಒಂದರಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪುತ್ತಿದ್ದಾರೆ. ಮಂಗಳವಾರ 3,780 ಜನರು ಬಲಿ ಆಗಿದ್ದು ಈವರೆಗೆ ಮಹಾಮಾರಿ ಕೊರೋನಾಗೆ ಬಲಿ ಆದವರ ಸಂಖ್ಯೆ 2,26,188ಕ್ಕೆ ಏರಿಕೆ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ