ಕೋವಿಡ್​​-19 ನಡುವೆಯೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಭಾರೀ ಸಿದ್ದತೆ

ಎರಡು ತಿಂಗಳ ಬಳಿಕ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಸಹ ಉತ್ಸುಕರಾಗಿದ್ದು, ಕೊರೋನಾ ಆತಂಕ ಇದ್ದರೂ ಸಹ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆಗಳನ್ನ ಎದುರಿಸಲು ಸಿದ್ಧ ಇರುವುದಾಗಿ ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಾರವಾರ(ಜೂ.08): ರಾಜ್ಯದಲ್ಲಿ ಕೊನೆಗೂ ಎಸ್ಎಸ್ಎಲ್‌ಸಿ ಪರೀಕ್ಷೆ ನಡೆಸಲು ದಿನಾಂಕ ನಿಗದಿಯಾಗಿದೆ. ಜೂನ್ 23 ರಿಂದ ರಾಜ್ಯಾದ್ಯಂತ ಪರೀಕ್ಷೆ ನಡೆಯಲಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ವಿದ್ಯಾರ್ಥಿಗಳನ್ನ ಪರೀಕ್ಷಾ ಕೇಂದ್ರಗಳಿಗೆ ಕರೆತರುವುದು ಶಿಕ್ಷಣ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದ ಜೊತೆಗೆ ಗುಡ್ಡಗಾಡು ಪ್ರದೇಶವೂ ಇರುವುದರಿಂದ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಸಕಲ ವ್ಯವಸ್ಥೆಗಳನ್ನ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಮುಂದಾಗಿದೆ.

ರಾಜ್ಯದಲ್ಲಿ ಈ ಬಾರಿ ಕೊರೋನಾ ವಕ್ಕರಿಸಿದ ಪರಿಣಾಮ ಜನಸಾಮಾನ್ಯರು ಮಾತ್ರವಲ್ಲದೇ ಶಾಲಾ ವಿದ್ಯಾರ್ಥಿಗಳು ಸಹ ಪರದಾಡುವಂತಾಗಿತ್ತು. ಎಸ್ಎಸ್ಎಲ್‌ಸಿ ಪರೀಕ್ಷೆಗಳನ್ನ ಸಹ ಮುಂದೂಡಿದ್ದು, ಎರಡು ತಿಂಗಳ ಬಳಿಕ ಇದೀಗ ಪರೀಕ್ಷೆ ನಡೆಸಲು ಸರ್ಕಾರ ಮುಂದಾಗಿದೆ. ಇನ್ನು, ಎರಡು ಶೈಕ್ಷಣಿಕ ಜಿಲ್ಲೆಗಳನ್ನ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಪರೀಕ್ಷೆ ಆಯೋಜಿಸುವುದರ ಜೊತೆಗೆ ವಿದ್ಯಾರ್ಥಿಗಳನ್ನ ಪರೀಕ್ಷಾ ಕೇಂದ್ರಗಳಿಗೆ ಕರೆತರುವುದು ಶಿಕ್ಷಣ ಇಲಾಖೆಗೆ ಸವಾಲಿನ ಕೆಲಸವಾಗಿದೆ.

ಉತ್ತರ ಕನ್ನಡ ಜಿಲ್ಲೆಯನ್ನ ಶೈಕ್ಷಣಿಕವಾಗಿ ಶಿರಸಿ ಹಾಗೂ ಕಾರವಾರ ಶೈಕ್ಷಣಿಕ ಜಿಲ್ಲೆಗಳನ್ನಾಗಿ ವಿಂಗಡಿಸಲಾಗಿದೆ. ಈ ಬಾರಿ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 9665 ಮಂದಿ ವಿದ್ಯಾರ್ಥಿಗಳು ಎಸ್ಎಸ್ಎಲ್‌ಸಿ ಪರೀಕ್ಷೆ ಎದುರಿಸಲಿದ್ದು, ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 10,100 ಮಂದಿ ವಿದ್ಯಾರ್ಥಿಗಳು ಪರೀಕ್ಷೆಯನ್ನ ಬರೆಯಲಿದ್ದಾರೆ. ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 38 ಪರೀಕ್ಷಾ ಕೇಂದ್ರಗಳಿದ್ದು, ಶಿರಸಿಯ 37 ಪರೀಕ್ಷಾ ಕೇಂದ್ರಗಳಲ್ಲಿ ಈ ಬಾರಿ ಪರೀಕ್ಷೆಗಳು ನಡೆಯಲಿವೆ.

ಮುಖ್ಯವಾಗಿ ಗ್ರಾಮೀಣ ಪ್ರದೇಶಗಳು ಹಾಗೂ ಗುಡ್ಡಗಾಡು ಪ್ರದೇಶಗಳೇ ಉತ್ತರಕನ್ನಡ ಜಿಲ್ಲೆಯಲ್ಲಿ ಹೆಚ್ಚಿದ್ದು, ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ ಕರೆತರಲು ಬಸ್‌ಗಳ ವ್ಯವಸ್ಥೆಯನ್ನ ಮಾಡಲಾಗಿದೆ. ಜೊತೆಗೆ ಬಸ್‌ಗಳು ತೆರಳಲಾಗದ ಪ್ರದೇಶಗಳಿಗೆ ಖಾಸಗಿ ವಾಹನಗಳನ್ನ ಸಹ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಪರೀಕ್ಷೆಗಳನ್ನ ಆಯೋಜಿಸಲು ಶಿಕ್ಷಣ ಇಲಾಖೆ ಸನ್ನದ್ಧವಾಗಿದೆ ಎಂದು ಡಿಡಿಪಿಐ ತಿಳಿಸಿದ್ದಾರೆ.

ಇದನ್ನೂ ಓದಿ: Chiranjeevi Sarja Death: ಅಮ್ಮನಾಗಲಿದ್ದ ಮೇಘನಾ​ಗೆ ಬಿಗ್ ಶಾಕ್; ಮಗುವಿನ ಮುಖ ನೋಡದೆ ಕಣ್ಮುಚ್ಚಿದ ಚಿರು ಸರ್ಜಾ!

ಇನ್ನು ಕಾರವಾರದ ಉಳಗಾ ಶಾಲೆಯಲ್ಲಿ ಗೋವಾ ರಾಜ್ಯದ 47 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಅವರಿಗೆ ಪರೀಕ್ಷೆ ಮುಗಿಯುವವರೆಗೆ ಅನುಕೂಲವಾಗುವಂತೆ ಉಳಿದುಕೊಳ್ಳಲು ಹಾಸ್ಟೆಲ್ ವ್ಯವಸ್ಥೆಯನ್ನ ಸಹ ಮಾಡಲಾಗುತ್ತಿದೆ. ಈ ಮೊದಲು ಪರೀಕ್ಷಾ ಕೇಂದ್ರವೊಂದರಲ್ಲಿ 24 ವಿದ್ಯಾರ್ಥಿಗಳನ್ನ ಕೂರಿಸಲಾಗುತ್ತಿತ್ತು. ಇದೀಗ ಕೊರೋನಾ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ 18 ರಿಂದ 20 ವಿದ್ಯಾರ್ಥಿಗಳನ್ನ ಮಾತ್ರ ಕೂರಿಸಲು ನಿರ್ಧರಿಸಲಾಗಿದೆ.

ಜತೆಗೆ ಸದ್ಯ ಮಳೆಗಾಲ ಎದುರಾಗುತ್ತಿದ್ದು, ಕರಾವಳಿಯಲ್ಲಿ ಅತೀ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಪರೀಕ್ಷಾ ಕೇಂದ್ರಗಳ ಸುರಕ್ಷತೆಯ ದೃಷ್ಟಿಯಿಂದಲೂ ಸಕಲ ಕ್ರಮಗಳನ್ನ ಕೈಗೊಳ್ಳಲು ಶಿಕ್ಷಣ ಇಲಾಖೆ ಮುಂದಾಗಿದೆ. ಇನ್ನು ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಸರ್, ಬಿಸಿ ನೀರಿನಂತಹ ಸೌಲಭ್ಯಗಳನ್ನ ಸಹ ಶಿಕ್ಷಣ ಇಲಾಖೆಯಿಂದಲೇ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ನಿರ್ಧರಿಸಲಾಗಿದೆ.

ಎರಡು ತಿಂಗಳ ಬಳಿಕ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಸಹ ಉತ್ಸುಕರಾಗಿದ್ದು, ಕೊರೋನಾ ಆತಂಕ ಇದ್ದರೂ ಸಹ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆಗಳನ್ನ ಎದುರಿಸಲು ಸಿದ್ಧ ಇರುವುದಾಗಿ ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಸ್​ಎಸ್​ಎಲ್​​ಸಿ ಪರೀಕ್ಷೆಗೆ ವಿವಿಧೆಡೆಯಿಂದ ವಿದ್ಯಾರ್ಥಿಗಳು ಆಗಮಿಸುವುದರಿಂದ ಪರೀಕ್ಷಾ ಕೇಂದ್ರಗಳಲ್ಲಿ 150 ವಿದ್ಯಾರ್ಥಿಗಳಿಗೆ ಒಂದು ಹೆಲ್ತ್ ಡೆಸ್ಕ್ ನಿರ್ಮಿಸಲಾಗುತ್ತಿದೆ. ಥರ್ಮಲ್ ಸ್ಕ್ಯಾನರ್ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯ ದೇಹದ ಉಷ್ಣಾಂಶ ತಪಾಸಣೆ ನಡೆಸುವ ಜೊತೆಗೆ ಜ್ವರದ ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ನಡೆಸಲು ಸಹ ವ್ಯವಸ್ಥೆಯನ್ನ ಮಾಡಿಕೊಳ್ಳಲಾಗಿದೆ ಎಂದು ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ಒಟ್ಟಾರೆ ಕರಾವಳಿ ಜಿಲ್ಲೆ ಉತ್ತರಕನ್ನಡದಲ್ಲಿ ಸಾಕಷ್ಟು ಸವಾಲುಗಳ ನಡುವೆ ಎಸ್ಎಸ್ಎಲ್‌ಸಿ ಪರೀಕ್ಷೆಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳ ಕೊರೋನಾ ಆತಂಕದ ನಡುವೆ ಪರೀಕ್ಷೆ ಎದುರಿಸಬೇಕಾಗಿದೆ.
First published: