ಪ್ರತಿದಿನ ರಸಂ ಕುಡಿದರೆ ಕೊರೋನಾ ಸಾಯುತ್ತೆ!; ತಮಿಳುನಾಡು ಸಚಿವರ ವಿಡಿಯೋ ವೈರಲ್
Tamil Nadu Minister Rajendra Balaji: ದಿನಕ್ಕೆ ಅರ್ಧ ಅಥವಾ ಒಂದು ಲೋಟ ರಸಂ ಕುಡಿದರೆ ನಿಮ್ಮಲ್ಲಿ ಕೊರೋನಾ ಸೋಂಕು ಇದ್ದರೂ ಅದು ಓಡಿಹೋಗುತ್ತದೆ ಅಥವಾ ಸತ್ತು ಹೋಗುತ್ತದೆ ಎಂದು ತಮಿಳುನಾಡು ಸಚಿವ ರಾಜೇಂದ್ರ ಬಾಲಾಜಿ ಹೇಳಿರುವ ವಿಡಿಯೋ ವೈರಲ್ ಆಗಿದೆ.
ಚೆನ್ನೈ (ಜ. 12): ಇಡೀ ವಿಶ್ವವನ್ನೇ ಆವರಿಸಿಕೊಂಡಿರುವ ಕೊರೋನಾ ವೈರಸ್ಗೆ ಔಷಧಿ ಕಂಡುಹಿಡಿಯಲು ಇನ್ನೂ ಪ್ರಯತ್ನಗಳು ನಡೆಯುತ್ತಲೇ ಇವೆ. ಕೊರೋನಾದಿಂದ ಬಚಾವಾಗಲು ಕಷಾಯ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಪದಾರ್ಥಗಳನ್ನು ಸೇವಿಸುವ ಬಗ್ಗೆ ಹಲವು ಜನರು ಸಲಹೆ ಕೊಡುವುದನ್ನು ಕೇಳಿದ್ದೇವೆ. ಆದರೆ, ತಮಿಳುನಾಡಿನ ಸಚಿವ ರಾಜೇಂದ್ರ ಬಾಲಾಜಿ ಪ್ರತಿದಿನವೂ ರಸಂ ಕುಡಿದರೆ ಕೊರೋನಾ ಹತ್ತಿರವೂ ಸುಳಿಯುವುದಿಲ್ಲ ಎನ್ನುವ ಮೂಲಕ ನಗೆಪಾಟಲಿಗೀಡಾಗಿದ್ದಾರೆ.
ನಾನು ಪ್ರತಿದಿನ ಹೊರಗೆ ಹೋಗುವಾಗ ಒಂದು ಲೋಟ ರಸಂ ಕುಡಿದುಕೊಂಡು ಹೋಗುತ್ತೇನೆ. ನೀವು ರಸಂ ಮತ್ತು ಸಾಂಬಾರನ್ನು ಪ್ರತಿದಿನ ಸೇವನೆ ಮಾಡಿದರೆ ಕೊರೋನಾ ಸೋಂಕು ಹತ್ತಿರ ಸುಳಿಯುವುದಿಲ್ಲ. ದಿನಕ್ಕೆ ಅರ್ಧ ಅಥವಾ ಒಂದು ಲೋಟ ರಸಂ ಕುಡಿದರೆ ನಿಮ್ಮಲ್ಲಿ ಕೊರೋನಾ ಸೋಂಕು ಇದ್ದರೂ ಅದು ಓಡಿಹೋಗುತ್ತದೆ ಅಥವಾ ಸತ್ತು ಹೋಗುತ್ತದೆ. ನಾನು ಕೂಡ ಪ್ರತಿದಿನ ರಸಂ ಕುಡಿಯುತ್ತೇನೆ ಎಂದು ತಮಿಳುನಾಡು ಸಚಿವ ರಾಜೇಂದ್ರ ಬಾಲಾಜಿ ಹೇಳಿರುವ ವಿಡಿಯೋ ವೈರಲ್ ಆಗಿದೆ.
ಕೊರೋನಾವನ್ನು ನಿಯಂತ್ರಿಸಲು ತಮಿಳುನಾಡು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾತನಾಡುವ ವೇಳೆ ರಸಂ ಪರಿಣಾಮದ ಬಗ್ಗೆಯೂ ಹೇಳಿರುವ ಸಚಿವ ರಾಜೇಂದ್ರ ಬಾಲಾಜಿ, ತಮಿಳುನಾಡಿನ ಜನರ ಆಹಾರ ಪದ್ಧತಿಯಲ್ಲೇ ಎಲ್ಲದಕ್ಕೂ ಪರಿಹಾರವಿದೆ. ನಾವು ಪ್ರತಿದಿನ ಉಪಯೋಗಿಸುವ ರಸಂ ಮತ್ತು ಸಾಂಬಾರ್ ಕೊರೋನಾ ರೋಗಕ್ಕೆ ರಾಮಬಾಣ ಎಂದಿದ್ದಾರೆ.
"Drink half/full glass rasam. Corona will run away or die," says AIADMK minister KT Rajendra Balaji 🤦🏼♀️🤯 pic.twitter.com/3hezMgcNnc
ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ನೇತೃತ್ವದ ಸರ್ಕಾರ ಸೂಕ್ತ ಮುನ್ನೆಚ್ಚಿಕಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ತಮಿಳುನಾಡಿನಿಂದ ಕೊರೋನಾವನ್ನು ಹೊಡೆದೋಡಿಸಿದೆ. ಕೆಲವೇ ಕೆಲವು ಮಂದಿ ಕೊರೋನಾದಿಂದ ಜೀವ ಕಳೆದುಕೊಂಡಿದ್ದಾರೆ. ನಮ್ಮ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿರುವುದಕ್ಕೆ ನಮ್ಮ ಆರೋಗ್ಯಕರವಾದ ಆಹಾರ ಪದ್ಧತಿಯೂ ಕಾರಣ. ನಾವು ಅರಿಶಿಣ ಹಾಕಿದ ನೀರಿನಿಂದ ಸ್ನಾನ ಮಾಡುವುದರಿಂದ, ನಮ್ಮ ಆಹಾರದಲ್ಲಿ ಶುಂಠಿ, ಕಾಳುಮೆಣಸು, ಮಸಾಲೆ ಪದಾರ್ಥಗಳನ್ನು ಬಳಸುವುದರಿಂದ ಕೊರೋನಾ ಎಂಬ ವೈರಸ್ ಬಂದರೂ ಸಾವನ್ನಪ್ಪುತ್ತದೆ ಎಂದು ಸಚಿವ ರಾಜೇಂದ್ರ ಬಾಲಾಜಿ ಹೇಳಿದ್ದಾರೆ.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ