ಹಾವೇರಿ(ಏ.14): ಕೊರೋನಾ ವೈರಸ್ ಎಂಬ ಸಾಂಕ್ರಾಮಿಕ ರೋಗ ಜಗತ್ತನ್ನೇ ಬೆಚ್ಚಿಬಿಳಿಸಿದೆ. ಇದರ ಭೀತಿ ಭಾರತದಲ್ಲೂ ಹರಡಿದ್ದು ಕೊರೋನಾ ಸೋಂಕಿನಿಂದ ಸಾವು ನೋವು ಹೆಚ್ಚಾಗುತ್ತಲೆ ಇವೆ. ಅದರಲ್ಲೂ ಈಗಾಗಲೇ ಕೋವಿಡ್-19 ಕ್ಕೆ ದೇವರನಾಡು ಕೇರಳವಂತೂ ತತ್ತರಿಸಿ ಹೋಗಿದೆ. ಅತಿಹೆಚ್ಚು ಸೋಂಕಿತರು ಮತ್ತು ಸಾವುಗಳು ಆಗಿದ್ದರೂ ಹಾವೇರಿ ಮೂಲದ ವೈದ್ಯರೊಬ್ಬರು ಕೇರಳದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ಧಾರೆ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿಆಲೂರಿನ ಯುವ ವೈದ್ಯ ಡಾ. ಶಿವರಾಜ್ ಉಪ್ಪಿನ ಇತ್ತೀಚೆಗಷ್ಟೇ ಎಂಬಿಬಿಎಸ್ ಮುಗಿಸಿ ವೈದ್ಯ ಸೇವೆ ಆರಂಭಿಸಿದ್ದರು. ಈಗ ಕೇರಳದ ಕಣ್ಣೂರಿನ ಹೆಸರಾಂತ ಅಸ್ಟರ್ ವಿಮ್ಸ್ ಎಂಬ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಕೇರಳದಲ್ಲಿ ಕೊರೋನಾ ರಣಕೇಕೆ ಹಾಕುತ್ತಿದ್ದರೂ ವೈದ್ಯೊ ನಾರಾಯಣ ಹರಿ ಎಂಬಂತೆ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಿ ಹಾವೇರಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಕಳೆದ ಒಂದು ತಿಂಗಳಿನಿಂದಲೂ ಎಡಬಿಡದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಡಾ.ಶಿವರಾಜ್ ಉಪ್ಪಿನ ಅವರ ಸೇವೆಗೆ ಕೇರಳ ಸರ್ಕಾರ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದೆ. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲೂ ಕೂಡಾ ಡಾ. ಶಿವರಾಜ್ ಕಾರ್ಯಕ್ಕೆ ಪ್ರಶಂಸೆಯ ಸುರಿಮಳೆಯಾಗುತ್ತಿದೆ.
ಇದನ್ನೂ ಓದಿ : ಕಾರ್ಮಿಕರ ಬೆಂಬಲಕ್ಕೆ ನಿಂತ ಕಾರ್ಮಿಕ ಇಲಾಖೆ; ಕೆಲಸದಿಂದ ವಜಾಗೊಳಿಸದಂತೆ ಆದೇಶ
ಹಗಲಿರುಳು ಎನ್ನದೆ ಮಾಹಾಮಾರಿ ಕೊರೋನಾ ವಿರುದ್ಧ ಸೆಣಸಾಡಲು ಸಜ್ಜಾಗಿರುವ ವೈದ್ಯರ ತಂಡದಲ್ಲಿರುವ ಶಿವರಾಜ್ ಉಪ್ಪಿನ ಹಲವು ರೋಗಿಗಳನ್ನು ಗುಣಮುಖ ಮಾಡಿದ್ದಾರೆ. ನಿಮಗೆ ಚಿಕಿತ್ಸೆ ನೀಡಲು ನಾವಿದ್ದೇವೆ, ನಮಗಾಗಿ ನೀವು ಮನೆಯಲ್ಲಿರಿ ಎಂದು ರೋಗಿಗಳಿಗೆ ಮತ್ತು ಜನರಿಗೆ ಮನೋಸ್ಥೈರ್ಯ ಹೇಳುವ ಕೆಲಸ ಮಾಡುವ ಮೂಲಕ ಮಾದರಿಯಾಗಿದ್ದಾರೆ.
(ವರದಿ : ಸಂಕನಗೌಡ ಎಂ. ದೇವಿಕೊಪ್ಪ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ