ಅಮೆರಿಕಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ಮಾಡದಿದ್ದರೆ ಭಾರತದೊಂದಿಗಿನ ಸಂಬಂಧದ ಮೇಲೆ ಪರಿಣಾಮ; ಟ್ರಂಪ್ ಎಚ್ಚರಿಕೆ

ಭಾರತದಲ್ಲಿ ಹೆಚ್ಚಾಗಿ ಉತ್ಪಾದನೆಯಾಗುತ್ತಿರುವ ಹೈಡ್ರೋಕ್ಸಿಕ್ಲೋರೋಕ್ವಿನ್ ಕೊರೋನಾಗೆ ರಾಮಬಾಣವಾಗಬಲ್ಲದು ಎಂದು ತಿಳಿದಿದ್ದೇ ತಡ ಈ ಔಷಧಿಯನ್ನು ರಫ್ತು ಮಾಡದಂತೆ ಕೇಂದ್ರ ಸರ್ಕಾರ ಮಾ. 25ರಂದು ನಿಷೇಧ ಹೇರಿತ್ತು.

ಡೊನಾಲ್ಡ್​ ಟ್ರಂಪ್​-ಮೋದಿ

ಡೊನಾಲ್ಡ್​ ಟ್ರಂಪ್​-ಮೋದಿ

 • Share this:
  ನವದೆಹಲಿ (ಏ. 7): ಭಾರತದಲ್ಲಿ ಮಲೇರಿಯಾ ರೋಗಿಗಳಿಗೆ ನೀಡಲಾಗುವ ಹೈಡ್ರಾಕ್ಸಿಕ್ಲೋರೋಕ್ವಿನ್ ಎಂಬ ಮಾತ್ರೆಗಳನ್ನು ಹೆಚ್ಚಾಗಿ ಉತ್ಪಾದಿಸಲಾಗುತ್ತದೆ. ಈ ಮಾತ್ರೆಗಳು ಕೊರೋನಾ ವೈರಸ್​ ತಡೆಗಟ್ಟಲು ಕೂಡ ಸಹಾಯಕವಾಗಿದೆ ಎನ್ನಲಾಗಿದೆ. ಹೀಗಾಗಿ, ವಿಜ್ಞಾನಿಗಳು ಶಿಫಾರಸು ಮಾಡಿರುವ ಈ ಔಷಧಿಗೆ ಬೇರೆ ದೇಶಗಳಿಂದಲೂ ಬೇಡಿಕೆ ಹೆಚ್ಚಾಗಿದೆ. ಸ್ವತಃ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರೇ ತಮ್ಮ ದೇಶಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವನ್ನು ರಫ್ತು ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಬಳಿ ಮನವಿ ಮಾಡಿದ್ದಾರೆ. ಒಂದುವೇಳೆ ಈ ಔಷಧಿಯ ರಫ್ತಿನ ಮೇಲಿನ ನಿರ್ಬಂಧವನ್ನು ಸಡಿಲಗೊಳಿಸದಿದ್ದರೆ ಅದು ಭಾರತ ಮತ್ತು ಅಮೆರಿಕ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರಲಿದೆ ಎಂಬ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.

  ಇಡೀ ವಿಶ್ವವನ್ನೇ ಕಂಗಾಲಾಗಿಸಿರುವ ಕೊರೋನಾಗೆ ಇನ್ನೂ ಯಾವುದೇ ಔಷಧ ಪತ್ತೆಯಾಗಿಲ್ಲ. ವಿಶ್ವಾದ್ಯಂತ 74 ಸಾವಿರ ಜನರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಭಾರತದಲ್ಲೂ ಕೊರೋನಾ ಸಾವಿನ ಸಂಖ್ಯೆ ಹೆಚ್ಚಾಗಿರುವುದರಿಂದ ಮಲೇರಿಯಾಗೆ ಬಳಸಲಾಗುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವನ್ನೇ ಕೊರೋನಾ ವೈರಸ್​ ತಡೆಗಟ್ಟಲು ಬಳಸಬಹುದು ಎಂದು ಕೇಂದ್ರ ಸರ್ಕಾರ ಹೇಳಿತ್ತು. ಈ ಹಿನ್ನೆಲೆಯಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಗೆ 30 ದೇಶಗಳು ದುಂಬಾಲು ಬಿದ್ದಿವೆ. ಅದರಲ್ಲಿ ಅಮೆರಿಕ ಕೂಡ ಒಂದು.

  ಇದನ್ನೂ ಓದಿ: ಕೊರೋನಾ ಸೋಂಕಿತ ಬ್ರಿಟನ್​​ ಪ್ರಧಾನಿ ಬೋರಿಸ್​ ಆರೋಗ್ಯ ಸ್ಥಿತಿ ಗಂಭೀರ; ಐಸಿಯುಗೆ ಶಿಫ್ಟ್​

  ಈ ಬಗ್ಗೆ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್, ನಾನು ಈ ಬಗ್ಗೆ ಭಾನುವಾರ ಬೆಳಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಭಾರತವೇನಾದರೂ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯ ರಫ್ತಿನ ಮೇಲಿನ ನಿಯಂತ್ರಣ ತೆರವುಗೊಳಿಸದಿದ್ದರೆ ನಮ್ಮೆರಡು ದೇಶಗಳ ನಡುವಿನ ಸಂಬಂಧ ಮೊದಲಿನ ಹಾಗೆ ಇರುವುದಿಲ್ಲ. ಆಗ ಈ ಸಂಬಂಧವನ್ನು ಮುಂದುವರೆಸಬೇಕಾದ ಅಗತ್ಯವೂ ನಮಗೆ ಇರುವುದಿಲ್ಲ ಎಂದು ವೈಟ್​ಹೌಸ್​ನಲ್ಲಿ ಸೋಮವಾರ ಹೇಳಿದ್ದಾರೆ.



  ಇದನ್ನೂ ಓದಿ: ಕೋವಿಡ್​​-19 ವಿರುದ್ಧ ಸಮರ: ಭಾರತಕ್ಕೆ 20 ಕೋಟಿ ಕೊಟ್ಟ ಅಮೆರಿಕಾ

  ಅಮೆರಿಕದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಅದಕ್ಕೆ ಔಷಧ ಅಭಿವೃದ್ಧಿ ಪಡಿಸುವ ಪ್ರಯತ್ನವೂ ನಡೆಯುತ್ತಿದೆ. ಮಲೇರಿಯಾ ತಡೆಗೆ ಬಳಸುವ ಹೈಡ್ರೋಕ್ಸಿಕ್ಲೋರೋಕ್ವಿನ್ ಔಷಧವನ್ನೇ ಕೊರೋನಾ ಸೋಂಕಿಗೆ ಔಷಧವಾಗಿಯೂ ಬಳಸಬಹುದು ಎಂದು ಇತ್ತೀಚಿಗೆ ನಡೆದ ಸಂಶೋಧನೆಯನ್ನು ಉಲ್ಲೇಖಿಸಿ ಡೊನಾಲ್ಡ್​ ಟ್ರಂಪ್ ಹೇಳಿದ್ದರು. ಅಲ್ಲದೆ, ಭಾರತದಲ್ಲಿ ಹೈಡ್ರೋಕ್ಸಿಕ್ಲೋರೋಕ್ವಿನ್ ಔಷಧವನ್ನು ಹೆಚ್ಚಾಗಿ ಉತ್ಪಾದನೆ ಮಾಡಲಾಗುತ್ತಿದೆ ಎಂದು ಕೂಡ ಹೇಳಿದ್ದರು.

  ಭಾರತದಲ್ಲಿ ಹೆಚ್ಚಾಗಿ ಉತ್ಪಾದನೆಯಾಗುತ್ತಿರುವ ಹೈಡ್ರೋಕ್ಸಿಕ್ಲೋರೋಕ್ವಿನ್ ಕೊರೋನಾಗೆ ರಾಮಬಾಣವಾಗಬಲ್ಲದು ಎಂದು ತಿಳಿದಿದ್ದೇ ತಡ ಈ ಔಷಧಿಯನ್ನು ರಫ್ತು ಮಾಡದಂತೆ ಕೇಂದ್ರ ಸರ್ಕಾರ ಮಾ. 25ರಂದು ನಿಷೇಧ ಹೇರಿತ್ತು. ಆ ನಿಷೇಧವನ್ನು ಸಡಿಲಗೊಳಿಸುವಂತೆ ಅಮೆರಿಕ ಈಗ ಒತ್ತಡ ಹೇರುತ್ತಿದೆ.
  First published: