ಏ. 22ರಂದು ಮೇಣದ ಬತ್ತಿ ಹೊತ್ತಿಸಿ ಪ್ರತಿಭಟಿಸಲಿರುವ ವೈದ್ಯರು; ಏ. 23ರಂದು ಕರಾಳ ದಿನ

ಜಾಗತಿಕ ಪಿಡುಗಾಗಿರುವ ಕೊರೋನಾವನ್ನು ನಿಯಂತ್ರಿಸಲು ಲಾಕ್​ಡೌನ್ ಜಾರಿಗೊಳಿಸಲಾಗಿದೆ. ಆದರೂ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಾರದೆ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ‌. ದೊಡ್ಡ ದೊಡ್ಡ ದೇಶಗಳೇ ಕಂಗಾಲಾಗಿ‌ ಹೋಗಿವೆ. ಇನ್ನೂ ಮದ್ದು ಸಿಗದೆ ಜಗತ್ತೇ ಸ್ಥಬ್ದವಾಗಿದೆ. ಪರೀಕ್ಷಾ ಕಿಟ್ ಗಳು ಸಿಗದೆ ಪರದಾಡುವಂತಾಗಿದೆ‌. ಇಷ್ಟೆಲ್ಲದರ ನಡುವೆ ವೈದ್ಯರ ಸಂಯಮವನ್ನು ಕದಡಿ ಇನ್ನಷ್ಟು ಸಮಸ್ಯೆ ಸೃಷ್ಟಿಸಿಕೊಳ್ಳುವುದು ನಾಗರಿಕರ ಸಮಾಜಕ್ಕೆ ಶೋಭೆ ತರುವಂಥದ್ದಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ: ಕೊರೋನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಹುಟ್ಟಿಕೊಳ್ಳುತ್ತಿರುವ ಸಮಸ್ಯೆಗಳು ಒಂದಲ್ಲ, ಎರಡಲ್ಲ. ಈ ನಡುವೆ 'ದೇವರಿಗೆ ಸಮ' ಎಂದು ಹೇಳಲಾಗುವ ವೈದ್ಯರಿಂದ ಹಿಡಿದುಕೊಂಡು ಆರೋಗ್ಯ ಸೇವಾ ಸಿಬ್ಬಂದಿ ಮತ್ತು ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುದು, ಅವ್ಯಾಚ್ಯ ಶಬ್ದಗಳನ್ನು ಪ್ರಯೋಗಿಸುವುದು, ಅವರ ಮನೆ-ರೂಮುಗಳನ್ನು ಖಾಲಿ ಮಾಡಿ ಎಂದು ಮಾನಸಿಕ ಹಿಂಸೆ ನೀಡುವುದೆಲ್ಲವೂ ನಡೆಯುತ್ತಿದ್ದು‌. ವೈದ್ಯ ಸಮುದಾಯ ಬೇಸತ್ತಿರುವ ಸ್ಪಷ್ಟ ಲಕ್ಷಣಗಳು ಕಾಣುತ್ತಿವೆ. ಹೀಗಾಗಿ ವೈದ್ಯರು ಕರಾಳ ದಿನ ಆಚರಿಸಲು‌ ಮುಂದಾಗಿದ್ದಾರೆ.

ದೇಶಾದ್ಯಂತ ವೈದ್ಯರು ಮತ್ತು ಆರೋಗ್ಯ ಸೇವಾ ಸಿಬ್ಬಂದಿ ಮೇಲೆ ನಡೆಯುತ್ತಿರುವ ಹಲ್ಲೆ, ಅವಹೇಳನ ಖಂಡಿಸಿ ಏಪ್ರಿಲ್ 22ನೇ ತಾರೀಖು ರಾತ್ರಿ 9 ಗಂಟೆಗೆ ಮೇಣದ ಬತ್ತಿ ಹೊತ್ತಿಸಿ ಪ್ರತಿಭಟನೆ ನಡೆಸಲಿರುವ ವೈದ್ಯರು, ಏಪ್ರಿಲ್ 23ನೇ ತಾರೀಖು ಕರಾಳ ದಿನಾಚರಣೆ ಮಾಡಲಿದ್ದಾರೆ. ಅಂದು ಎಲ್ಲಾ ವೈದ್ಯರು ಕಪ್ಪು ಪಟ್ಟಿ ಕಟ್ಟಿಕೊಂಡು ಕೆಲಸ ಮಾಡಲು ನಿರ್ಧರಿಸಿದ್ದಾರೆ.

ದೇಶದಲ್ಲಿ ಕೊರೋನಾ ಸಂಕಷ್ಟವನ್ನು ಸಮರ್ಥವಾಗಿ ಎದುರಿಸುವ ವೈದ್ಯರಿಗೆ ಗೌರವ ಸಲ್ಲಿಸಲೆಂದೇ 'ಚಪ್ಪಾಳೆ' ತಟ್ಟಲಾಗಿತ್ತು. ಆದರೀಗ ಅದೇ ವೈದ್ಯರು ಮೌನ ಪ್ರತಿಭಟನೆ, ಕರಾಳೆ ದಿನಾಚರಣೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. 22ನೇ ತಾರೀಖು ದೇಶದ ಎಲ್ಲಾ ವೈದ್ಯರು ಮೇಣದ ಬತ್ತಿ ಹೊತ್ತಿಸಿ ಪ್ರತಿಭಟನೆ ನಡೆಸುವಂತೆ ಮತ್ತು ಏಪ್ರಿಲ್ 23ನೇ ತಾರೀಖು ಕರಾಳ ದಿನಾಚರಣೆ ಪ್ರಯುಕ್ತ ಕಪ್ಪು ಪಟ್ಟಿ ಕಟ್ಟಿಕೊಂಡು ಕೆಲಸ ಮಾಡುವಂತೆ ಭಾರತೀಯ ವೈದ್ಯಕೀಯ ಸಂಘ ವೈದ್ಯರಿಗೆ ಪತ್ರ ಬರೆದು ಸೂಚಿಸಿದೆ.

ಇದಕ್ಕೂ ಮೊದಲು ವೈದ್ಯರು ಮತ್ತು ಆರೋಗ್ಯ ಸೇವಾ ಸಿಬ್ಬಂದಿ ಮೇಲೆ ನಡೆಯುತ್ತಿರುವ ಹಲ್ಲೆ ಮತ್ತು ಅವಹೇಳನ ಖಂಡಿಸಿ ಹಾಗೂ ಮನೆ ಖಾಲಿ ಮಾಡುವಂತೆ ಮಾಲೀಕರು ಮಾನಸಿಕ ಹಿಂಸೆ ನೀಡುತ್ತಿದ್ದ ಬಗ್ಗೆ ವೈದ್ಯಕೀಯ ಸಂಘ ಈಗಾಗಲೇ ಸರ್ಕಾರಗಳ ಗಮನ ಸೆಳೆದಿತ್ತು‌. ಸರ್ಕಾರಗಳು ವೈದ್ಯರು, ಆರೋಗ್ಯ ಸೇವೆಯಲ್ಲಿ ಕೆಲಸ ಮಾಡುವ ಇತರರು ಮತ್ತು ಪೊಲೀಸರ ಕೆಲಸಕ್ಕೆ ಅಡ್ಡಿ ಪಡಿಸಬಾರದು, ಅವರಿಗೆ ತೊಂದರೆ ನೀಡಬಾರದು, ಹಲ್ಲೆ ಮಾಡಬಾರದು, ಮನೆ ಖಾಲಿ ಮಾಡುವಂತೆ ಒತ್ತಾಯಿಸಬಾರದು ಎಂದು ಮನವಿ ಮಾಡಿದ್ದವು. ಜೊತೆಗೆ ಇಂಥ ಪ್ರಕರಣಗಳು ಕಂಡುಬಂದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದವು. ಆದರೆ ಈ ಮನವಿ ಮತ್ತು ಎಚ್ಚರಿಕೆಗಳ ನಡುವೆಯೂ ಆರೋಗ್ಯ ಸೇವಾ ಸಿಬ್ಬಂದಿ ಮೇಲೆ ಉಪಟಳ ಹೆಚ್ಚಾದ ಹಿನ್ನೆಲೆಯಲ್ಲಿ ಈಗ ಅವರು ಪ್ರತಿಭಟನೆಗೆ ಇಳಿದಿದ್ದಾರೆ.

ಇದನ್ನು ಓದಿ: ಕೊರೋನಾ ವೈರಸ್​: ಮುಂಬೈವೊಂದರಲ್ಲೇ 53 ಪತ್ರಕರ್ತರಿಗೆ ಸೋಂಕು

ಜಾಗತಿಕ ಪಿಡುಗಾಗಿರುವ ಕೊರೋನಾವನ್ನು ನಿಯಂತ್ರಿಸಲು ದೇಶದ ಅರ್ಥ ವ್ಯವಸ್ಥೆಗೆ ಮರ್ಮಾಘಾತ ನೀಡುವಂತಹ ಲಾಕ್​ಡೌನ್ ಜಾರಿಗೊಳಿಸಲಾಗಿದೆ. ಆದರೂ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಾರದೆ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ‌. ದೊಡ್ಡ ದೊಡ್ಡ ದೇಶಗಳೇ ಕಂಗಾಲಾಗಿ‌ ಹೋಗಿವೆ. ಇನ್ನೂ ಮದ್ದು ಸಿಗದೆ ಜಗತ್ತೇ ಸ್ಥಬ್ದವಾಗಿದೆ. ಪರೀಕ್ಷಾ ಕಿಟ್ ಗಳು ಸಿಗದೆ ಪರದಾಡುವಂತಾಗಿದೆ‌. ಇಷ್ಟೆಲ್ಲದರ ನಡುವೆ ವೈದ್ಯರ ಸಂಯಮವನ್ನು ಕದಡಿ ಇನ್ನಷ್ಟು ಸಮಸ್ಯೆ ಸೃಷ್ಟಿಸಿಕೊಳ್ಳುವುದು ನಾಗರಿಕರ ಸಮಾಜಕ್ಕೆ ಶೋಭೆ ತರುವಂಥದ್ದಲ್ಲ.
First published: