news18-kannada Updated:May 23, 2020, 1:14 PM IST
ಡಿ.ಕೆ ಶಿವಕುಮಾರ್
ಬೆಂಗಳೂರು(ಮೇ.23): ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ ಶಿವಕುಮಾರ್ ಮುಂದಿನ ಜೂನ್ 7ನೇ ತಾರೀಕಿನಂದು ಅಧಿಕೃತವಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಇಷ್ಟು ದಿನಗಳ ಬಳಿಕ ಅಧಿಕಾರಿವಹಿಸಿಕೊಳ್ಳಲು ಕಾಲ ಕೂಡಿ ಬಂದ ಕಾರಣ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಡಿಕೆಶಿ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಈ ಪದಗ್ರಹಣ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಹಿರಿಯ ನಾಯಕರು ಸಾಕ್ಷಿಯಾಗಲಿದ್ದಾರೆ.
ಇನ್ನು, ಪದಗ್ರಹಣ ಕಾರ್ಯಕ್ರಮದಲ್ಲಿ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಡಿ.ಕೆ ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ. ಈ ವೇಳೆ ಕಾಂಗ್ರೆಸ್ನ ಹಿರಿಯ ನಾಯಕರು, ಶಾಸಕರು, ಮಾಜಿ ಸಚಿವರು, ಸಂಸದರು, ಕೆಪಿಸಿಸಿ ಪದಾಧಿಕಾರಿಗಳು, ಮಹಿಳಾ ಕಾಂಗ್ರೆಸ್, ಎನ್ಎಸ್ಯುಐ, ಯೂತ್ ಕಾಂಗ್ರೆಸ್, ಕಾಂಗ್ರೆಸ್ ಪಕ್ಷದ ವಕ್ತಾರರು ಮತ್ತು ರಾಷ್ಟ್ರೀಯ ನಾಯಕರು ಭಾಗಿಯಾಗಲಿದ್ದಾರೆ.
ಈ ಹಿಂದೆಯೇ ಮಾರ್ಚ್ 11ನೇ ತಾರೀಕು ಡಿ.ಕೆ ಶಿವಕುಮಾರ್ರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಎಐಸಿಸಿ ನೇಮಿಸಿತ್ತು. ಡಿಕೆಶಿಗೆ ಕಾಂಗ್ರೆಸ್ ಪಕ್ಷದ ಸಾರಥ್ಯವನ್ನು ನೀಡಲು ವಿರೋಧ ವ್ಯಕ್ತವಾಗಿತ್ತು. ಸಿದ್ದರಾಮಯ್ಯ ಬಣದ ವಿರೋಧದ ಕಾರಣದಿಂದಾಗಿ ಅಧ್ಯಕ್ಷರ ಆಯ್ಕೆಯನ್ನು ಹೈಕಮಾಂಡ್ ಮುಂದೂಡಿತ್ತು. ಆದರೆ, ಕೊನೆಗೂ ತೀವ್ರ ವಿರೋಧದ ನಡುವೆಯೂ ಡಿಕೆಶಿಗೆ ಕಾಂಗ್ರೆಸ್ ಸಾರಥ್ಯವನ್ನು ನೀಡಲಾಯ್ತು.
ಇದನ್ನೂ ಓದಿ: ಸಿಗರೇಟ್ ಲಂಚ ಪ್ರಕರಣ: ಮಧ್ಯವರ್ತಿಗಳ ಮಾತು ಕೇಳಿ ಕೆಟ್ಟ ಪೊಲೀಸ್ ಅಧಿಕಾರಿಗಳು; ವಾಟ್ಸಪ್ ಕಾಲ್ ಮೂಲಕವೇ ನಡೆದಿತ್ತು ಕೋಟಿ ಕೋಟಿ ಡೀಲ್
ಡಿ.ಕೆ ಶಿವಕುಮಾರ್ ತಮ್ಮ ವಿಭಿನ್ನ ರಾಜಕೀಯ ಶೈಲಿಯಿಂದ ಗುರುತಿಸಿಕೊಂಡವರು. ಆರಂಭದಿಂದಲೇ ಆಕ್ರಮಣಕಾರಿ ರಾಜಕೀಯ ನಿಲುವುಗಳಿಂದ ಪರಿಚಿತರು. ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರ ವಿರುದ್ಧ ಸ್ಪರ್ಧಿಸುವ ಮೂಲಕ ಚುನಾವಣಾ ಅಖಾಡಕ್ಕೆ ಇಳಿದವರು. ಈ ಕಾರಣಕ್ಕಾಗಿ ಡಿಕೆಶಿಗೆ ಪಕ್ಷದಲ್ಲಿ ಮಹತ್ವದ ಜಾವಾಬ್ದಾರಿಯನ್ನು ನೀಡಬೇಕು ಎಂಬ ಒತ್ತಾಯಗಳು ಕೇಳಿಬಂದಿದ್ದವು. ಅಲ್ಲದೇ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವ ಸಮರ್ಥ ನಾಯಕತ್ವದ ಅಗತ್ಯವಿತ್ತು. ಈ ಕಾರಣದಿಂದಲೇ ಹೈಕಮಾಂಡ್ ಆಯ್ಕೆ ಡಿಕೆಶಿಯಾಗಿತ್ತು.
First published:
May 23, 2020, 1:04 PM IST