ಮೈಸೂರು ಮೃಗಾಲಯಕ್ಕೆ ಮತ್ತೆ ಹರಿದುಬಂದ ದೇಣಿಗೆ: ಪ್ರಾಣಿ-ಪಕ್ಷಿಗಳಿಗೆ ಸಹಾಯ ಮಾಡಿ ಎಂದು ಇನ್ಫೋಸಿಸ್‌ಗೆ ಪತ್ರ

ಉಸ್ತುವಾರಿ ಸಚಿವರ ಮನವಿಗೆ ಸ್ಪಂದಿಸಿದ ಅಮೆರಿಕಾದ ಫಿನಿಕ್ಸ್‌ನಗರದಲ್ಲಿರುವ ಭಾರತೀಯರೊಬ್ಬರು ಮೈಸೂರು ಮೃಗಾಲಯಕ್ಕೆ ದೇಣಿಗೆ ನೀಡಿದ್ದಾರೆ. ಸಚಿವರ ವಾಟ್ಸಪ್ ಸಂದೇಶದ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿದ ಅವರು, ಪ್ರಾಣಿ-ಪಕ್ಷಿಗಳ ನಿರ್ವಹಣೆಗೋಸ್ಕರ ತಮ್ಮದೂ ಒಂದು ಕೊಡುಗೆ ಇರಬೇಕು ಎಂದು ಚಿಂತಿಸಿ ತಕ್ಷಣ ತಮ್ಮ ಪುತ್ರಿ ಪ್ರಿಶಾ ಹೆಸರಿನಲ್ಲಿ 25,000 ರೂಪಾಯಿ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. 

ಮೈಸೂರು ಮೃಗಾಲಯ

ಮೈಸೂರು ಮೃಗಾಲಯ

  • Share this:
ಮೈಸೂರು: ಲಾಕ್​ಡೌನ್​ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಮೈಸೂರು ಮೃಗಾಲಯಕ್ಕೆ ಸಹಕಾರ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಎಸ್.ಟಿ.ಸೋಮಶೇಖರ್‌ ಅವರು ಇಂದು ತಮ್ಮ ಕ್ಷೇತ್ರದಲ್ಲಿ 45ಲಕ್ಷ ರೂ. ದೇಣಿಗೆ ಸಂಗ್ರಹಿಸಿ ಹಸ್ತಾಂತರ ಮಾಡಿದರು. ಜೊತೆಗೆ ಆಹಾರ ಇಲಾಖೆ ಸಚಿವ ಗೋಪಾಲಯ್ಯ ಅವರು ಸಹ ಮೃಗಾಲಯಕ್ಕೆ 8 ಲಕ್ಷ ದೇಣಿಗೆ ನೀಡಿ ಕಷ್ಟ ಕಾಲದಲ್ಲಿ ಮೃಗಾಲಯದ ಬೆನ್ನಿಗೆ ನಿಂತಿದ್ದಾರೆ.

ಇಬ್ಬರು ಸಚಿವರು ಸಂಗ್ರಹಿಸಿದ 53ಲಕ್ಷ ರೂ. ದೇಣಿಗೆ ಹಣದ ಚೆಕ್​ಗಳನ್ನು ಮೈಸೂರು ಮೃಗಾಲಯದ ನಿರ್ದೇಶಕರಿಗೆ  ಹಸ್ತಾಂತರಿಸಿದರು. ಇದೇ ವೇಳೆ ಆಹಾರ ಇಲಾಖೆ ವತಿಯಿಂದ ಮೃಗಾಲಯದ ಪ್ರತಿಯೊಬ್ಬ ಸಿಬ್ಬಂದಿಗೂ 25 ಕೆ.ಜಿ. ಅಕ್ಕಿ ವಿತರಣೆಗೆ ನಿರ್ಧಾರ ಮಾಡಿದ್ದು, ಇಂದು ಸಾಂಕೇತಿಕವಾಗಿ ಸಿಬ್ಬಂದಿಗೆ ಅಕ್ಕಿ ವಿತರಣೆ ಮಾಡಿದರು.

ಇದರ ಜತೆಗೆ ಮೈಸೂರು ಮೃಗಾಲಯ ಆರ್ಥಿಕ ಸಂಕಷ್ಟ ವಿಚಾರವಾಗಿ ಸಹಾಯ ಕೋರಿ ಇನ್ಫೋಸಿಸ್ ಸಂಸ್ಥೆಯ ಮುಖ್ಯಸ್ಥರಾದ ಸುಧಾಮೂರ್ತಿಗೆ ಪತ್ರ ಬರೆದಿರುವ ಮೈಸೂರು  ಜಿಲ್ಲಾ  ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮೃಗಾಲಯದ ಪ್ರಾಣಿ-ಪಕ್ಷಿಗಳಿಗೆ ಸಹಾಯ ಮಾಡಿ ಅಂತ ಕೋರಿಕೊಂಡಿದ್ದಾರೆ.

ಸಹಕಾರ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿರುವ ನಾನು ಇತ್ತೀಚೆಗೆ ಸುಮಾರು 125 ವರ್ಷಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಶ್ರೀ ಜಯಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿದ್ದೆ. ಮೃಗಾಲಯವು ಸ್ವಾಯತ್ತ ಸಂಸ್ಥೆಯಾಗಿದ್ದು, 2002ರಿಂದ ಸರ್ಕಾರದಿಂದ ಯಾವುದೇ ಆರ್ಥಿಕ ಸಹಾಯ ಪಡೆಯದೆ ವೀಕ್ಷಕರು ನೀಡುವ ಹಣದಿಂದಲೇ  ಪ್ರಾಣಿಗಳ ಮತ್ತು ಪಕ್ಷಿಗಳ ಆಹಾರ, ಸಿಬ್ಬಂದಿ ವೇತನ ಹಾಗೂ ಮೃಗಾಲಯದ ನಿರ್ವಹಣೆಯನ್ನು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಮಾಡಲಾಗುತ್ತಿದೆ. ನನ್ನ ಮತಕ್ಷೇತ್ರವಾದ ಯಶವಂತಪುರದ ದಾನಿಗಳಿಂದ ಸುಮಾರು 73.16 ಲಕ್ಷಗಳ ಮೊತ್ತವನ್ನು ಸಂಗ್ರಹಿಸಿ ನೀಡಲಾಗಿದೆ. ಇಂದು ಮತ್ತೆ  45.30 ಲಕ್ಷಗಳ ಚೆಕ್ಕುಗಳನ್ನು ಮೃಗಾಲಯದ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದೇನೆ. ದಯಮಾಡಿ, ತಾವು ಕೂಡ ತಮ್ಮ ಇನ್ಫೋಸಿಸ್ ಫೌಂಡೇಷನ್ ವತಿಯಿಂದ ಮೃಗಾಲಯದ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಆಹಾರ ಮತ್ತು ಇನ್ನಿತರೆ ಸೌಲಭ್ಯಗಳಿಗೆ ಆರ್ಥಿಕ ಸಹಾಯ ಮಾಡಬೇಕೆಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿ ತಮ್ಮಲಿ ಮನವಿ ಮಾಡುತ್ತೇನೆ ಎಂದು ಎಸ್​.ಟಿ.ಸೋಮಶೇಖರ್ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಇದನ್ನು ಓದಿ: ಕರ್ನಾಟಕ ಲಾಕ್​​ಡೌನ್​​ಗೆ ಹಲವು ವಿನಾಯ್ತಿ​​​: ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

ಇನ್ನು ಉಸ್ತುವಾರಿ ಸಚಿವರ ಮನವಿಗೆ ಸ್ಪಂದಿಸಿದ ಅಮೆರಿಕಾದ ಫಿನಿಕ್ಸ್‌ನಗರದಲ್ಲಿರುವ ಭಾರತೀಯರೊಬ್ಬರು ಮೈಸೂರು ಮೃಗಾಲಯಕ್ಕೆ ದೇಣಿಗೆ ನೀಡಿದ್ದಾರೆ. ಸಚಿವರ ವಾಟ್ಸಪ್ ಸಂದೇಶದ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿದ ಅವರು, ಪ್ರಾಣಿ-ಪಕ್ಷಿಗಳ ನಿರ್ವಹಣೆಗೋಸ್ಕರ ತಮ್ಮದೂ ಒಂದು ಕೊಡುಗೆ ಇರಬೇಕು ಎಂದು ಚಿಂತಿಸಿ ತಕ್ಷಣ ತಮ್ಮ ಪುತ್ರಿ ಪ್ರಿಶಾ ಹೆಸರಿನಲ್ಲಿ 25,000 ರೂಪಾಯಿ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
First published: