ಇಂದು ಮಹತ್ವದ ಕೇಂದ್ರ ಸಚಿವ ಸಂಪುಟ ಸಭೆ; ಕೊರೋನಾ, ಅಂಫಾನ್ ಬಗ್ಗೆ ಚರ್ಚೆ

Union Cabinet Meeting: ಸಭೆಯಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ 20 ಲಕ್ಷ ಕೋಟಿ ರೂಪಾಯಿ ಮೌಲ್ಯದ ವಿಶೇಷ ಪ್ಯಾಕೇಜಿಗೆ ಹಣ ಬಿಡುಗಡೆ ಮಾಡುವ ಬಗ್ಗೆ ಚರ್ಚೆಯಾಗಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ(ಮೇ.20): ಕೊರೋನಾ ಕಷ್ಟ, ವಲಸೆ ಕಾರ್ಮಿಕರ ಸಮಸ್ಯೆ, ಲಾಕ್​ಡೌನ್​ ಜಾರಿ, 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಗೆ ಹಣ ಬಿಡುಗಡೆ ಹಾಗೂ ಅಂಫಾನ್ ಚಂಡಮಾರುತ ಅಪ್ಪಳಿಸುವ ಬಗ್ಗೆ ಚರ್ಚಿಸಲು ಇಂದು ಮಹತ್ವದ ಕೇಂದ್ರ ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದೆ. ಇಂದು ಬೆಳಿಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅವರ ಗೃಹ ಕಚೇರಿ ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿ ಮಹತ್ವದ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದೆ.

ಸಭೆಯಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ 20 ಲಕ್ಷ ಕೋಟಿ ರೂಪಾಯಿ ಮೌಲ್ಯದ ವಿಶೇಷ ಪ್ಯಾಕೇಜಿಗೆ ಹಣ ಬಿಡುಗಡೆ ಮಾಡುವ ಬಗ್ಗೆ ಚರ್ಚೆಯಾಗಲಿದೆ. ಪ್ಯಾಕೇಜಿನ ಮಾಹಿತಿ ಪ್ರಕಾರ ಕೆಲವು ಕ್ಷೇತ್ರಗಳಿಗೆ ಶೀಘ್ರವೇ ಹಣ ಒದಗಿಸಬೇಕಿರುವುದರಿಂದ ಈ ಬಗ್ಗೆ ಚರ್ಚೆ ಮಾಡಿ ನಿರ್ಧರಿಸಲಾಗುತ್ತದೆ. 20 ಲಕ್ಷ ಕೋಟಿ ರೂಪಾಯಿಗಳನ್ನು ಹೊಂದಿಸಿಕೊಳ್ಳುವುದು ಕೇಂದ್ರ ಸರ್ಕಾರಕ್ಕೆ ಸವಾಲಿನ ಕೆಲಸ ಆಗಿರುವುದರಿಂದ ಆದ್ಯತೆ ಮೇರೆಗೆ ಮೊದಲು ಯಾವುದಕ್ಕೆ ಹಣ ನೀಡಬೇಕೆಂದು ನಿರ್ಧರಿಸಲಾಗುತ್ತದೆ.

ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಸಾಗಿಸಲು ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ. ಶ್ರಮಿಕ್ ರೈಲುಗಳನ್ನು ಬಿಡುಗಡೆ ಮಾಡಲಾಗಿದೆ. ಆದರೂ,‌ ವಲಸೆ ಕಾರ್ಮಿಕರ ಸಮಸ್ಯೆ ಬಗೆಹರಿದಿಲ್ಲ. ಈ‌ ಬಗ್ಗೆಯೂ ಚರ್ಚೆ ಆಗಲಿದೆ. ಅವರನ್ನು ಸುಗಮವಾಗಿ ಅವರವರ ರಾಜ್ಯಗಳು ಮತ್ತು ಊರುಗಳಿಗೆ ಕಳುಹಿಸಿಕೊಡಲು ಹೊಸ ಮಾರ್ಗೋಪಾಯ ಹುಡುಕುವ ನಿಟ್ಟಿನಲ್ಲಿ ‌ಚರ್ಚೆಯಾಗಲಿದೆ.

ದೇಶದಲ್ಲಿ ನಾಲ್ಕನೇ ಹಂತದ ಲಾಕ್ ಡೌನ್ ಜಾರಿಗೊಳಿಸಲಾಗಿದೆ‌. ಹೆಚ್ಚಿನ ಪ್ರಮಾಣದ ವಿನಾಯಿತಿಗಳನ್ನೂ ನೀಡಲಾಗಿದೆ. ಇದು ಎಷ್ಟರ ಮಟ್ಟಿಗೆ ಸೂಕ್ತವಾಗಿದೆ? ಪರಿಸ್ಥಿತಿ ಹೇಗಿದೆ ಎಂದು‌ ಇಂದಿನ‌ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಅಗತ್ಯ ಬಿದ್ದರೆ ಕೇಂದ್ರ ಗೃಹ ಇಲಾಖೆಗೆ ಮಾರ್ಗಸೂಚಿ ಬದಲಿಸಿ ಆದೇಶ ಹೊರಡಿಸಲು ನಿರ್ದೇಶಿಸಲಾಗುತ್ತದೆ.

ದೇಶದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ.‌‌ ಈಗಾಗಲೇ  ವೈರಾಣು ಪೀಡಿತರ ಸಂಖ್ಯೆ 1 ಲಕ್ಷ ಗಡಿ ದಾಟಿದೆ. ಮೃತರ ಪ್ರಮಾಣ ಕೂಡ 3 ಸಾವಿರದ ಗಡಿ ದಾಟಿದೆ. ಸೊಂಕಿತರ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ಕೇಂದ್ರದ ಸರಕಾರದ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಚರ್ಚೆಯಾಗಿ ಮುಂದೆ ಏನು ಮಾಡಬೇಕು ಎಂಬ ಬಗ್ಗೆ ನಿರ್ಧರಿಸಲಾಗುತ್ತದೆ.

ಇದನ್ನೂ ಓದಿ : ಜೂನ್‌ 1 ರಿಂದ ಪ್ರತಿದಿನ 200 ರೈಲುಗಳು ದೇಶದಾದ್ಯಂತ ಸಂಚರಿಸಲಿವೆ; ಪಿಯೂಶ್‌ ಗೋಯಲ್

ಕೊರೋನಾ ಮತ್ತು ಲಾಕ್​ಡೌನ್​​ ಕಷ್ಟದ ನಡುವೆ ಅಂಫಾನ್ ಚಂಡಮಾರುತ ಅಪ್ಪಳಿಸುತ್ತಿದೆ. ಈ ಚಂಡಮಾರುತ ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಕಂಟಕವಾಗಿದ್ದು ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವ ಬಗ್ಗೆ  ಇಂದಿನ ಸಂಪುಟ ಸಭೆಯಲ್ಲಿ ಸಮಾಲೋಚನೆ ನಡೆಸಿ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ‌.
First published: