ಬೆಂಗಳೂರು (ಮೇ 12); ಸಾಂಕ್ರಾಮಿಕ ಕೊರೋನಾ ಸೋಂಕನ್ನು ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ 14 ದಿನಗಳ ಲಾಕ್ಡೌನ್ ಅನ್ನು ಘೋಷಿಸಲಾಗಿದೆ. ಮೇ. 24ರ ವರೆಗೆ ರಾಜ್ಯದಲ್ಲಿ ಲಾಕ್ಡೌನ್ ಜಾರಿಯಲ್ಲಿ ಇರಲಿದೆ. ಆನಂತರ ಮತ್ತೆ ಲಾಕ್ಡೌನ್ ವಿಸ್ತರಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಆದರೆ, ಇದರಿಂದ ಬಡ ಮತ್ತು ದಿನಗೂಲಿ ಕಾರ್ಮಿಕರು, ಆಟೋ-ಕ್ಯಾಬ್ ಚಾಲಕರು, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಅನೇಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ಬಡವರಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ವಿರೋಧ ಪಕ್ಷದ ನಾಯಕರು ಸೇರಿದಂತೆ ಅನೇಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕೇರಳ, ತಮಿಳುನಾಡು ಹಾಗೂ ದೆಹಲಿ ಸರ್ಕಾರಗಳು ಈಗಾಗಲೇ ಜನರಿಗೆ ವಿಶೇಷ ಪ್ಯಾಕೇಜ್ ಘೋಷಿಸಿವೆ. ಆದರೆ, ಕರ್ನಾಟಕ ಸರ್ಕಾರ ಮಾತ್ರ ವಿಶೇಷ ಪ್ಯಾಕೇಜ್ ಘೋಷಣೆ ಮಾಡದೆ ಇರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಈ ಬಗ್ಗೆ ಇಂದು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸಚಿವ ಆರ್. ಅಶೋಕ್, "ಕರ್ನಾಟಕ ಸರ್ಕಾರದ ಆರ್ಥಿಕ ಸ್ಥಿತಿ ಸರಿಯಿಲ್ಲ. ಹೀಗಾಗಿ ಈವರೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿಲ್ಲ. ಆದರೆ, ಇಂದು ಸಂಜೆ ಸಿಎಂ ಯಡಿಯೂರಪ್ಪ ಅವರ ಮನೆಯಲ್ಲಿ ಪ್ಯಾಕೇಜ್ ಘೋಷಣೆ ಬಗ್ಗೆ ಚರ್ಚೆ ನಡೆಯಲಿದೆ. ಈ ಸಭೆಯಲ್ಲಿ ಆಗುವ ನಿರ್ಧಾರಗಳನ್ನು ಆಧರಿಸಿ ಪ್ಯಾಕೇಜ್ ಘೋಷಿಸುವ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ" ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಲಸಿಕೆ ಮತ್ತು ರೆಮ್ಡಿಸಿವಿರ್ ಲಭ್ಯತೆ ಬಗ್ಗೆಯೂ ಮಾಹಿತಿ ನೀಡಿರುವ ಅವರು, "ರೆಮಿಡಿಸ್ವೇರ್ , ವ್ಯಾಕ್ಸಿನ್ ಎಲ್ಲಾ ಕೇಂದ್ರದಿಂದ ಬರ್ತಿದೆ ಅದನ್ನು ಎಲ್ಲಾ ಕಡೆ ಡಿಸ್ಟ್ರಿಬ್ಯೂಟ್ ಮಾಡುತ್ತಿದ್ದೇವೆ. ಮಾಧ್ಯಮಗಳಲ್ಲಿ ಬರುತ್ತಿರುವ ಮಾಹಿತಿ ಗೊತ್ತಾಗುತ್ತಿದೆ ಅದಕ್ಕೆ ನಾವು ಸಂಜೆ ಸಿಎಂ ಮನೆಯಲ್ಲಿ ಸಭೆ ಸೇರುತ್ತಿದ್ದೇವೆ. ಎಲ್ಲಾ ಜಿಲ್ಲೆಗಳಲ್ಲಿ ಆಕ್ಸಿಜನ್ ಕಾನ್ಸಟ್ರೇಟ್ ತೆಗೆದುಕೊಳ್ಳಲು ಈಗಾಗಲೇ ಆದೇಶ ಮಾಡಿದ್ದೇವೆ.
ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದು, ಡಿಸಾಸ್ಟರ್ ಮ್ಯಾನೆಜ್‌ಮೆಂಟ್ ಅಡಿಯಲ್ಲಿ 30 ಕೋಟಿ ರೂ. ಹಣವನ್ನೂ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಜಿಲ್ಲೆಗಳಲ್ಲಿ ಆರೋಗ್ಯ ಕೇಂದ್ರಗಳು ಎಲ್ಲಾ ಒಟ್ಟು ಶೇ.25 ರಿಂದ ಶೇ.30 ರಷ್ಟು ಹಣವನ್ನು ಬಳಸಿಕೊಳ್ಳಬಹುದು" ಎಂದು ತಿಳಿಸಿದ್ದಾರೆ.
ಇದಲ್ಲದೆ, "ಕಳೆದ ಒಂದು ವಾರಗಳಿಂದ ಬೆಡ್ ಗಳ ಸುಧಾರಣೆ ಆಗಿದೆ. ಖಾಸಗೀ ಆಸ್ಪತ್ರೆಗಳಲ್ಲಿ ಶೇ. 50 ಬೆಡ್ ಪಡೆಯಲು ರಿಯಾಲಿಟಿ ಚೆಕ್ ನಡೆಸಲು ಅಧಿಕಾರಿಗಳನ್ನ ನೇಮಿಸಲಾಗಿದೆ. PPE ಕಿಟ್ ಹಾಕಿಕೊಂಡು ಅಧಿಕಾರಿಗಳು ವೈದ್ಯರ ಜೊತೆ ಬೆಡ್ ಗಳ ಪರಿಶೀಲನೆಗೆ ತೆರಳಬೇಕು. ನಗರದಲ್ಲಿ 1800 ಬೆಡ್ ಖಾಲಿ ಇದೆ. ಹೀಗಾಗಿ ಸೋಂಕು ಪೀಡಿತರು ಕೋವಿಡ್ ಕೇರ್ ಸೆಂಟರ್ಗೆ ಬಂದು ದಾಖಲಾಗಿ ಆಕ್ಸಿಜನ್ ಕಾನ್ಸಟ್ ರೇಟರ್ ಅನ್ನು ಕೊವಿಡ್ ಕೇರ್ ಸೆಂಟರ್ ನಲ್ಲಿ ಅಳವಡಿಸಲಾಗಿದೆ. ಇನ್ನೂ 1500 ಅಕ್ಸಿಜನ್ ಕಾನ್ಸಟ್ ರೇಟರ್ ಬರಲಿದೆ. ಪ್ರತಿ ತಾಲೂಕಿಗೂ ಆಕ್ಸಿಜನ್ ಸಾಂದ್ರಕ ನೀಡಲಾಗುವುದು. ಕೇಂದ್ರದಿಂದ ಬಂದಿರುವ ರೆಮಿಡಿಸಿವರ್ , ಲಸಿಕೆ ಅನ್ನು ಹಂಚಿಕೆ ಮಾಡಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Karnataka Covid Death: ರಾಜ್ಯದಲ್ಲಿ ಇಂದು 39,510 ಕೊರೋನಾ ಕೇಸ್ ಪತ್ತೆ, 480 ಜನ ಸಾವು!
ಈ ನಡುವೆ, ಎರಡನೇ ಅಲೆ ಕೊರೋನಾ ಸೋಂಕು ರಾಜ್ಯದಲ್ಲಿ ನಿಯಂತ್ರಣ ಮೀರಿದೆ. ಲಾಕ್ಡೌನ್ ನಡುವೆಯೋ ಸೋಂಕು ನಿಯಂತ್ರಣ ವಾಗುತ್ತಿಲ್ಲ. ಕಳೆದ ಒಂದು ವಾರದಿಂದ ದಿನವೊಂದಕ್ಕೆ ಸರಿ ಸುಮಾರು 50 ಸಾವಿರ ಪ್ರಕರಣಗಳು ದಾಖಲಾಗುತ್ತಿದೆ. ಈ ನಡುವೆ ಮಂಗಳವಾರ ಒಂದೇ ದಿನದಲ್ಲಿ ರಾಜ್ಯದಲ್ಲಿ 480 ಜನ ಕೊರೋನಾದಿಂದಾಗಿ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸೋಂಕು ನಿಯಂತ್ರಣ ಮೀರಿರುವುದು ಸ್ಪಷ್ಟವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ