ಕರೋನ ವೈರಸ್‌ನ ಡೆಲ್ಟಾ ರೂಪಾಂತರವು ಶೀಘ್ರದಲ್ಲೇ ವಿಶ್ವದ ಅತ್ಯಂತ ಪ್ರಬಲವಾದ ಕೋವಿಡ್ -19 ತಳಿಯಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾದ ಪ್ರಾದೇಶಿಕ ನಿರ್ದೇಶಕ ಡಾ. ಪೂನಮ್ ಖೇತ್ರಪಾಲ್ ಸಿಂಗ್ ಸೋಮವಾರ ಎಚ್ಚರಿಕೆ ನೀಡಿದ್ದಾರೆ.
"ಕರೋನ ವೈರಸನ್ ಡೆಲ್ಟಾ ರೂಪಾಂತರವು ಈಗ ನೂರಕ್ಕೂ ಹೆಚ್ಚು ದೇಶಗಳಿಗೆ ಹರಡಿದೆ. ಅದು ಹರಡುತ್ತಿರುವ ರೀತಿ ನೋಡಿದರೆ, ಇದು ಶೀಘ್ರದಲ್ಲೇ ಜಾಗತಿಕವಾಗಿ ಅತ್ಯಂತ ಪ್ರಬಲವಾದ ವೈರಸ್ ಆಗಲಿದೆ" ಎಂದು ಅವರು ತಿಳಿಸಿದ್ದಾರೆ. ಡೆಲ್ಟಾ ರೂಪಾಂತರವು ಯುಕೆ, ಯುಎಸ್, ಸಿಂಗಾಪುರ್ ಮತ್ತು ಇತರ ಹಲವು ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದೆ ಈಗಾಗಲೇ ಇಲ್ಲಿನ ಸರ್ಕಾರವು ಎಚ್ಚರಿಕೆಯ ಕ್ರಮವನ್ನು ಕೈಕೊಂಡಿದೆ ಎಂದು ವರದಿ ಮೂಲಕ ತಿಳಿದುಬಂದಿದೆ. ರಾಯಿಟರ್ಸ್ ವರದಿಯ ಪ್ರಕಾರ, ಯುಎಸ್ ಸಾಂಕ್ರಾಮಿಕ ರೋಗ ತಜ್ಞ ಆಂಥೋನಿ ಫೌಸಿ ಈ ವಾರದ ಆರಂಭದಲ್ಲಿ ಡೆಲ್ಟಾ ರೂಪಾಂತರವು ಕೋವಿಡ್-19 ಗೆ ಹೋಲಿಸಿದರೆ "ವಿಶ್ವದಾದ್ಯಂತ ಪ್ರಬಲ ರೂಪಾಂತರವಾಗಿದೆ" ಎಂದು ಹೇಳಿದ್ದಾರೆ.
ಡೆಲ್ಟಾ ಶೀಘ್ರವಾಗಿ ಹರಡುತ್ತಿದೆ
ಡೆಲ್ಟಾ ರೂಪಾಂತರವು ಬೇರೆ ಎಲ್ಲಾ ರೂಪಾಂತರಗಳಿಗೆ ಹೋಲಿಸಿದರೆ ವೇಗವಾಗಿ ಹರಡುತ್ತಿದೆ ಇದು ಜನರಲ್ಲಿ ಇನ್ನಷ್ಟು ಕಳವಳ ಮೂಡಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಡಾ. ಪೂನಂ ಖೇತ್ರಪಾಲ್ ಸಿಂಗ್ ಹೇಳಿದ್ದಾರೆ. ಡೆಲ್ಟಾ ರೂಪಾಂತರವು ಅದರ ಹಿಂದಿನ ಆಲ್ಫಾ ರೂಪಾಂತರಕ್ಕಿಂತ 40-60 ಶೇಕಡಾ ಹೆಚ್ಚು ಹರಡಬಲ್ಲದು ಎಂದು ಡಾ. ಎನ್.ಕೆ. ಅರೋರಾ ಸೋಮವಾರ ಎಚ್ಚರಿಕೆ ನೀಡಿದ್ದಾರೆ. ಡಾ. ಎನ್.ಕೆ. ಅರೋರಾ ಅವರು ಭಾರತೀಯ ಎಸ್ಎಆರ್‌ಎಸ್-ಕೋವಿ -2 ಜೀನೋಮಿಕ್ಸ್ ಕನ್ಸೋರ್ಟಿಯಂ (ಐಎನ್‌ಎಸ್‌ಎಸಿಒಜಿ) ನ ಸಹ-ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
"ಡೆಲ್ಟಾ ರೂಪಾಂತರದ ತಳಿಯು ಪ್ರೋಟೀನ್ ರೂಪಾಂತರವನ್ನು ಹೊಂದಿದೆ, ಇದು ಜೀವಕೋಶದ ಮೇಲ್ಮೈಯಲ್ಲಿರುವ ಎಸಿಇ 2 ಗ್ರಾಹಕಕ್ಕೆ ಹೆಚ್ಚು ದೃಢವಾಗಿ ಬಂಧಿಸಲು ಸಹಾಯ ಮಾಡುತ್ತದೆ ಮತ್ತು ಇದು ಹೆಚ್ಚು ಹರಡುವಂತೆ ಮಾಡುತ್ತದೆ. ಮತ್ತು ದೇಹದ ಪ್ರತಿರಕ್ಷೆಯಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯ ಇದಕ್ಕೆ ಇದೆ." ಎಂದು ಡೆಲ್ಟಾ ರೂಪಾಂತರದ ಹೆಚ್ಚಿನ ಪ್ರಸರಣ ದರದ ಹಿಂದಿನ ಕಾರಣವನ್ನು ಡಾ. ಅರೋರಾ ಈ ರೀತಿ ವಿವರಿಸಿದ್ದಾರೆ.
ಡೆಲ್ಟಾ ರೂಪಾಂತರವನ್ನು ಭಾರತದಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ಕಂಡುಹಿಡಿಯಲಾಯಿತು. ಇದು ನಮ್ಮ ದೇಶದಲ್ಲೇ ರೂಪಾಂತರಗೊಂಡಿದ್ದು ಎಂದು ಹೇಳಿದರು ತಪ್ಪಾಗುವುದಿಲ್ಲ. ಕೋವಿಡ್ -19 ಪ್ರಕರಣಗಳಲ್ಲಿ ಶೇ .80 ಕ್ಕಿಂತಲೂ ಹೆಚ್ಚಿನ ಡೆಲ್ಟಾ ಪ್ರಕರಣಗಳು ದೇಶದ ಎರಡನೇ ಆಲೆಗೆ ಕಾರಣವೆಂದು ಬಲವಾಗಿ ನಂಬಲಾಗಿದೆ. ಇದು ಮೊದಲ ಬಾರಿಗೆ ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡಿತು ಮತ್ತು ಮಧ್ಯ ಮತ್ತು ಪೂರ್ವ ರಾಜ್ಯಗಳನ್ನು ಪ್ರವೇಶಿಸುವ ಮೊದಲು ಡೆಲ್ಟಾ ರೂಪಾಂತರವು ದೇಶದ ಪಶ್ಚಿಮ ರಾಜ್ಯಗಳ ಉದ್ದಕ್ಕೂ ಹಾಗೂ ಉತ್ತರದ ಕಡೆಗೆ ಬಾರಿ ಪ್ರಮಾಣದಲ್ಲಿ ಹರಡಿತು.
ನಮ್ಮನ್ನು ಮತ್ತು ನಮ್ಮ ಕುಟುಂಬವನ್ನು ನೋಡಿಕೊಳ್ಳಲು ನಾವು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಸರಿಯಾಗಿ ಲಸಿಕೆ ಪಡೆಯಬೇಕು. ಕೋವಿಡ್ 19 ಗಿಂತ ಡೆಲ್ಟಾ ರೂಪಾಂತರಿ ಹೆಚ್ಚು ಅಪಾಯಕಾರಿ ಎಂದು ಸರಕಾರ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ