ನವದೆಹಲಿ: ದೇಶದಲ್ಲಿ ಕೊರೋನಾ 2ನೇ ಅಲೆಯಿಂದ ಪರಿಸ್ಥಿತಿ ಕೈ ಮೀರಿದೆ. ಸಾಂಕ್ರಾಮಿಕ ರೋಗ ಭಾರತೀಯರನ್ನು ಕಿತ್ತು ತಿನ್ನುತ್ತಿದ್ದು, ನಿತ್ಯ ಹೆಣಗಳ ರಾಶಿ ಕಣ್ಣಿಗೆ ರಾಚುತ್ತಿದೆ. ಆಕ್ಸಿಜನ್ ಸಿಗದೇ ಜನ ಉಸಿರು ಚೆಲ್ಲುತ್ತಿದ್ದಾರೆ. ಸರ್ಕಾರಗಳ ಸತತ ಪ್ರಯತ್ನಗಳಾಚೆಗೂ ಕೊರೋನಾ ಸಾವಿನ ಪ್ರಮಾಣ ತಗ್ಗುತ್ತಿಲ್ಲ. ಸೋಂಕಿನ ಮರಣಮೃದಂಗ ನಿಮಿಷ ನಿಮಿಷಕ್ಕೂ ಹೆಚ್ಚುತ್ತಲೇ ಇದೆ. ಸಾವಿಲ್ಲದ ಮನೆಯಲ್ಲಿ ಸಾಸಿವೆ ತಾ ಎಂಬಂತೆ ಕೊರೋನಾ ಸಾವಿಲ್ಲದ ಮನೆಯೇ ಇಲ್ಲವೇನೋ ಎಂಬಷ್ಟು ಕೆಲ ನಗರಗಳು ಸೂತಕಕ್ಕೀಡಾಗಿವೆ. ರಾಷ್ಟ್ರ ರಾಜಧಾನಿ ದೆಹಲಿ ಮೇಲೆ ಕೊರೋನಾ ಸಾವಿನ ಮೋಡ ಆವರಿಸಿದೆ. ಸೋಂಕು ಅಬ್ಬರಿಸುತ್ತಿದ್ದು, ನಿತ್ಯ ನೂರಾರು ಮಂದಿ ಪ್ರಾಣ ಬಿಡುತ್ತಿದ್ದಾರೆ. ಹೆಣಗಳನ್ನು ಹೂಳಲು ಜಾಗವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ದೆಹಲಿಯಲ್ಲಿ ಇಂದು ಒಂದೇ ದಿನ 350 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ನಿನ್ನೆ 357 ಮಂದಿ ಮೃತಪಟ್ಟಿದ್ದರು, ಮೊನ್ನೆ 348 ಮಂದಿ ಹೆಣವಾಗಿದ್ದಾರೆ. ಕಳೆದ ವಾರ ನಿತ್ಯ ಸರಾಸರಿ 302 ಮಂದಿಯ ಪ್ರಾಣ ಪಕ್ಷಿ ಹಾರಿ ಹೋಗಿದೆ. ಸೋಂಕಿನ ಸಾವಿನ ದಾಹ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಹೀಗಾಗಿ ದೆಹಲಿಯಲ್ಲಿ ಎತ್ತ ಕಣ್ಣಾಡಿಸಿದರು ಸ್ಮಶಾನದ ದೃಶ್ಯವೇ ಕಾಣಸಿಗಲಾರಂಭಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ