ದಿಲ್ಲಿ ಪೋಸ್ಟ್ | ಕೊರೋನಾದಿಂದ ಬಿಎಸ್​ವೈ ಪಾರು; ಕಟೀಲ್ ನಗೆಪಾಟಲು; 20 ಲಕ್ಷ ಕೋಟಿ ಬಗ್ಗೆ ಕೇಂದ್ರ ಸಚಿವರಿಗೇ ಇಲ್ಲ ಕ್ಲಾರಿಟಿ

ಕೊರೋನಾ ಮತ್ತು ಲಾಕ್‌ಡೌನ್ ಸಂಕಷ್ಟದ ಹಿನ್ನೆಲೆಯಲ್ಲಿ ಘೋಷಿಸಲಾಗಿರುವ 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ 'ಸುಳ್ಳಿನ ಕಂತೆ' ಎಂಬ ಟೀಕೆ ವ್ಯಕ್ತವಾಗುತ್ತಿದೆ. ಹಣ ನೀಡದೆ ಸಾಲ ನೀಡಲು ಮುಂದಾಗಿರುವ ಕ್ರಮದ ಬಗ್ಗೆ ಅಸಮಾಧಾನಗಳು ವ್ಯಕ್ತವಾಗಿವೆ. ಪ್ಯಾಕೇಜ್ ಗೊಂದಲದ ಗೂಡಾಗಿದೆ ಎಂಬ ದೂರು ಕೇಳಿ ಬರುತ್ತಿವೆ.

ದಿಲ್ಲಿ ಪೋಸ್ಟ್

ದಿಲ್ಲಿ ಪೋಸ್ಟ್

  • Share this:
ಬಿಜೆಪಿ ಹೈಕಮಾಂಡ್ ಎದುರು ಈಗ ಯಡಿಯೂರಪ್ಪ ಬಗ್ಗೆ ಯಾವ ಅಭಿಪ್ರಾಯ ಇದೆ? ಸಾವರ್ಕರ್ ವಿಷಯದಲ್ಲಿ ಏನಾಯ್ತು? ನಳೀನ್ ಕುಮಾರ್ ಕಟೀಲ್ ಬಗ್ಗೆ ದೆಹಲಿಯಲ್ಲಿ ಎಂಥಾ ಇಮೇಜ್ ಇದೆ? 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಬಗ್ಗೆ ಕೇಂದ್ರ ಮಂತ್ರಿಗಳು ಏನು ಹೇಳ್ತಾರೆ ಎಂಬಿತ್ಯಾದಿ ವಿಷಯಗಳ ಬಗ್ಗೆ ನ್ಯೂಸ್ 18 ಕನ್ನಡದ ದೆಹಲಿ ಪ್ರತಿನಿಧಿ ಧರಣೀಶ್ ಬೂಕನಕೆರೆ ಈ ವಾರದ 'ದಿಲ್ಲಿ ಪೋಸ್ಟ್' ಕಾಲಂನಲ್ಲಿ ಬರೆದಿದ್ದಾರೆ.

ಕೊರೋನಾದಿಂದ ಯಡಿಯೂರಪ್ಪ ಪಾರಾಗಿದ್ದಾರೆ. ಅಂದರೆ ಯಡಿಯೂರಪ್ಪ ಅವರಿಗೆ ಕೊರೋನಾ ಸೋಂಕು ತಗಲುವ ಸಂಭವ ಇತ್ತು, ಅಥವಾ ಸೋಂಕು ತಗುಲಿತ್ತು, ಅದರಿಂದ ಹುಷಾರಾಗಿದ್ದಾರೆ ಎಂಬ ಅರ್ಥ ಅಲ್ಲ. ರಾಜಕೀಯ ಅಸ್ತಿತ್ಥರತೆ ಎದುರಿಸುತ್ತಿದ್ದ ಅವರೀಗ ಕೊರೋನಾ ಬಿಕ್ಕಟ್ಟಿನಿಂದಾಗಿ ನಿಟ್ಟುಸಿರು ಬಿಡುವಂತಾಗಿದೆ ಎಂದಷ್ಟೇ ಅರ್ಥ. ಆ ಕಾರಣಕ್ಕೆ ಅವರಿಗೆ ಕೊರೋನಾ blessing in disguise ಎಂಬಂತಾಗಿದೆ.

ಪಕ್ಷದೊಳಗೆ ತಮ್ಮ ವಿರುದ್ಧ ಕತ್ತಿ ಮಸೆಯುತ್ತಿದ್ದವರೆಲ್ಲರನ್ನೂ ಯಡಿಯೂರಪ್ಪ ಈ ಸಂದರ್ಭ ಬಳಸಿಕೊಂಡು ನಿವಾಳಿಸಿ ಬಿಸಾಡಿದ್ದಾರೆ. ಮಾರಣಾಂತಿಕ ಕೊರೋನಾ ವೈರಸ್‌ ಅನ್ನು ನಿಭಾಯಿಸಿರುವ ರೀತಿಗೆ ಹೈಕಮಾಂಡ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ.

ಯಡಿಯೂರಪ್ಪ ಮಾತ್ರವಲ್ಲ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್, ಹಿಮಾಚಲ ಪ್ರದೇಶದ ಸಿಎಂ ಜೈರಾಮ್ ಠಾಕೂರ್, ತ್ರಿಪುರ ಸಿಎಂ ಬಿಪ್ಲಬ್ ಕುಮಾರ್ ದೇಬ್ ಕಾರ್ಯವೈಖರಿ ಬಗ್ಗೆ ಕೂಡ ಬಿಜೆಪಿ ಹೈಕಮಾಂಡ್ ಖುಷಿಯಾಗಿದೆಯಂತೆ.

ನಾಲ್ಕನೇ ಬಾರಿಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಆಗಿರುವ ಶಿವರಾಜ್ ಸಿಂಗ್ ಚೌಹಾಣ್ ಪರಿಸ್ಥಿತಿ ನಿಭಾಯಿಸಲಾರದೆ ತಡಬಡಾಯಿಸಿಹೋಗಿದ್ದಾರೆ. ಆದರೆ, ಹಲವು ಸಂಕಷ್ಟ, ಹಲವರ ಅಸಹಕಾರದ ನಡುವೆಯೂ ಯಡಿಯೂರಪ್ಪ, ಅನುಭವ ಇಲ್ಲದ ಯೋಗಿ, ಜೈರಾಮ್ ಠಾಕೂರ್ ಮತ್ತು ಬಿಪ್ಲಬ್ ಕುಮಾರ್ ದೇಬ್ ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆ ಎನ್ನುವುದು ಹೈಕಮಾಂಡ್ ಅಭಿಮತ.

ಈಗ ಮೆಚ್ಚುಗೆಗೆ ಪಾತ್ರವಾಗಿರುವ ನಾಲ್ವರು ಮುಖ್ಯಮಂತ್ರಿಗಳ ಬಗ್ಗೆಯೂ ಮೊದಲು ಹೈಕಮಾಂಡ್‌ಗೆ ದೂರುಗಳು ಬರುತ್ತಿದ್ದವು. ಯಡಿಯೂರಪ್ಪ ಅವರಿಗೆ ವಯಸ್ಸಾಯಿತು, ಅವರ ಪುತ್ರ ವಿಜಯೇಂದ್ರ ಹಸ್ತಕ್ಷೇಪ‌ ಅತಿಯಾಯಿತು, ಯೋಗಿ ತಮ್ಮ ಸಮುದಾಯವರಿಗೆ ಮಾತ್ರ ಮಣೆ ಹಾಕುತ್ತಾರೆ, ಜೈರಾಮ್ ಠಾಕೂರ್ ನಿರೀಕ್ಷೆಯಂತೆ ಕೆಲಸ ಮಾಡುತ್ತಿಲ್ಲ, ಬಿಪ್ಲಬ್ ಕುಮಾರ್ ಸದಾ ವಿವಾದ ಸೃಷ್ಟಿಸುತ್ತಾರೆ..  ಹೀಗೆ ನಾನಾ ದೂರುಗಳು ಈ ನಾಯಕರ ಮೇಲಿತ್ತು. ಆದರೀಗ 'ದೂರ್ವಾಸ' ಮುನಿಗಳಾದ ಅಮಿತ್‌ ಶಾ ಮೌನಿಯಾಗಿದ್ದಾರೆ. ಹಾಗಾಗಿ ಈ ನಾಲ್ವರ ಮೇಲಿದ್ದ ತೂಗುಕತ್ತಿಯನ್ನು ಹೈಕಮಾಂಡ್ ಬದಿಗೆ ಸರಿಸಿದೆಯಂತೆ.

ಸಾವರ್ಕರ್ ವಿಷಯದಲ್ಲಿ ಯಡವಟ್ಟು:

ಈ ಬಾರಿ‌ ಅಧಿಕಾರಕ್ಕೆ ಬಂದಮೇಲೆ ಹೈಕಮಾಂಡ್ ಯಡಿಯೂರಪ್ಪ ಬೆನ್ನುತಟ್ಟಿದ್ದು ಇದು ಎರಡನೇ ಸಲ. ಇದಕ್ಕೂ ಮೊದಲು ಉಪ ಚುನಾವಣೆ ಗೆದ್ದಾಗ 'ಭಲೇ ಯಡಿಯೂರಪ್ಪ' ಎಂದಿತ್ತು. ಇದರಿಂದ ಹಿರಿಹಿರಿ‌ ಹಿಗ್ಗಿಹೋದ ಯಡಿಯೂರಪ್ಪ ಅತಿ ಉತ್ಸಾಹದಲ್ಲಿ ಯಡವಟ್ಟು ಮಾಡಿಕೊಂಡಿದ್ದಾರೆ. ಅದು ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವ ವಿಚಾರದಲ್ಲಿ.

ಇದು ಗೊತ್ತಾಗುತ್ತಿದ್ದಂತೆ 'ಕೊರೋನಾ ಕಷ್ಟಕಾಲದಲ್ಲಿ ಇದೆಲ್ಲಾ ಬೇಕಿತ್ತಾ ಯಡಿಯೂರಪ್ಪ ಅವರೇ...' ಎಂದಿದೆಯಂತೆ ಹೈಕಮಾಂಡ್.

ನಗೆಪಾಟಿಲಿಗೀಡಾದ ನಳಿನ್ ಕುಮಾರ್ ಕಟೀಲ್:

ರಾಜ್ಯ ಬಿಜೆಪಿ ಅಧ್ಯಕ್ಷ, ಸಂಸದ ನಳೀನ್ ಕುಮಾರ್ ಕಟೀಲ್ ಕರ್ನಾಟಕದಲ್ಲಿ ಮಾತ್ರವಲ್ಲ ದೆಹಲಿಯಲ್ಲೂ ಫೇಮಸ್. ಅದು ಯಾವ ಕಾರಣಕ್ಕೆ ಗೊತ್ತಾ? ವಿವಾದಗಳನ್ನು ಸೃಷ್ಟಿಸುವ ಕಾರಣಕ್ಕಲ್ಲ, ಹಾಸ್ಯಾಸ್ಪದವಾಗಿ ಮಾತನಾಡುವುದಕ್ಕಾಗಿ.

ದೇಶದಲ್ಲಿ ಪ್ರತಿದಿನ 6 ಸಾವಿರಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ವರದಿ ಆಗುತ್ತಿರುವ ಹೊತ್ತಿನಲ್ಲಿ ನಳಿನ್ ಕುಮಾರ್ ಕಟೀಲ್,  'ಕೊರೊನಾ ವಿರುದ್ಧ ಹೋರಾಡಿ ಗೆದ್ದಿರುವ ಏಕೈಕ ದೇಶ ಭಾರತ' ಎಂದು ಹೇಳಿರುವ ವಿಡಿಯೋ ದೆಹಲಿ ಪತ್ರಕರ್ತರ ವಾಟ್ಸ್ ಅಪ್ ಗ್ರೂಪುಗಳಲ್ಲೂ ಹರಿದಾಡಿದೆ.

ಈ ಮೂಲಕ ಮತ್ತೊಮ್ಮೆ ನಳಿನ್ ಕುಮಾರ್ ಕಟೀಲ್ ದೆಹಲಿ ಪತ್ರಕರ್ತರ ವಲಯದಲ್ಲಿ ನಗೆಪಾಟಲಿಗೀಡಾಗಿದ್ದಾರೆ.‌ ಹಿಂದೆ ಅವರು ರೂಪಾಯಿ ಮತ್ತು ಡಾಲರ್ ನಡುವಿನ ವ್ಯತ್ಯಾಸದ ಬಗ್ಗೆ ಆಡಿದ್ದ ಮಾತುಗಳು ದೆಹಲಿಯಲ್ಲಿ ವ್ಯಾಪಕವಾಗಿ ಚರ್ಚೆಯಾಗಿದ್ದವು.

ಪ್ಯಾಕೇಜ್ ಬಗ್ಗೆ ಕೇಂದ್ರ ಸಚಿವರಿಗೇ ಇಲ್ಲ ಕ್ಲಾರಿಟಿ

ಕೊರೋನಾ ಮತ್ತು ಲಾಕ್‌ಡೌನ್ ಸಂಕಷ್ಟದ ಹಿನ್ನೆಲೆಯಲ್ಲಿ ಘೋಷಿಸಲಾಗಿರುವ 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ 'ಸುಳ್ಳಿನ ಕಂತೆ' ಎಂಬ ಟೀಕೆ ವ್ಯಕ್ತವಾಗುತ್ತಿದೆ. ಹಣ ನೀಡದೆ ಸಾಲ ನೀಡಲು ಮುಂದಾಗಿರುವ ಕ್ರಮದ ಬಗ್ಗೆ ಅಸಮಾಧಾನಗಳು ವ್ಯಕ್ತವಾಗಿವೆ. ಪ್ಯಾಕೇಜ್ ಗೊಂದಲದ ಗೂಡಾಗಿದೆ ಎಂಬ ದೂರು ಕೇಳಿ ಬರುತ್ತಿವೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಗ್ರೂಪ್ ಆಫ್ ಮಿನಿಸ್ಟರ್ಸ್ ಎರಡೆರಡು ಬಾರಿ ಚರ್ಚೆ ಮಾಡಿದೆ. ಆದರೆ ಕೇಂದ್ರ ಸಚಿವರಿಗೇ ಪ್ಯಾಕೇಜ್ ಬಗ್ಗೆ ಕ್ಲಾರಿಟಿ ಇಲ್ಲವಂತೆ. ಪ್ಯಾಕೇಜ್ ಬಗ್ಗೆ ಅಭಿಪ್ರಾಯ ತಿಳಿಸಿ ಎಂದರೆ ಸಭೆಯಲ್ಲಿದ್ದ ಬಹುತೇಕ ಮಂತ್ರಿಗಳು ಮೌನಕ್ಕೆ ಶರಣಾಗಿದ್ದರಂತೆ.

ವಲಸೆ ಕಾರ್ಮಿಕರ ವಿಷಯವೇ ಚುನಾವಣಾ ಅಸ್ತ್ರ:

ವಲಸೆ ಕಾರ್ಮಿಕರ ವಿಷಯ ಕೇಂದ್ರ ಸರ್ಕಾರಕ್ಕೆ ದಿನದಿಂದ ದಿನಕ್ಕೆ ಗಂಭೀರ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಕೊರೋನಾ ಸೋಂಕು ಇಷ್ಟೊಂದು ತೀವ್ರವಾಗಿ ಹರಡಲು ಕೇಂದ್ರ ಸರ್ಕಾರ ಸೂಕ್ತ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಬಗ್ಗೆ ಕ್ರಮ ಕೈಗೊಳ್ಳದೇ ಇರುವುದೇ ಮುಖ್ಯ ಕಾರಣ ಎಂಬ ಅಭಿಪ್ರಾಯ ರೂಪುಗೊಳ್ಳುತ್ತಿದೆ.

ಇದಕ್ಕೆ ಪೂರಕವಾಗಿ ರಾಷ್ಟ್ರೀಯ ಲೋಕ ಸಮತಾ ಪಾರ್ಟಿ ಅಧ್ಯಕ್ಷ ಉಪೇಂದ್ರ ಕುಶ್ವಾ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ವಲಸೆ ಕಾರ್ಮಿಕರ ವಿಷಯವೇ ಅಸ್ತ್ರ ಎಂದು‌ ಹೇಳಿದ್ದಾರೆ. ವಲಸೆ ಕಾರ್ಮಿಕರ ವಿಷಯವನ್ನು ಸರಿಯಾಗಿ ನಿಭಾಯಿಸಿಲ್ಲದ ಬಿಹಾರ ಸರ್ಕಾರಕ್ಕೀಗ ಬಿಸಿ ತಟ್ಟಿದಂತಾಗಿದೆ.

ಇದನ್ನೂ ಓದಿ : ಮಹಾರಾಷ್ಟ್ರಕ್ಕೆ ಹೊರಟಿದ್ದ ವಲಸಿಗರಿಗೆ ಊಟೋಪಚಾರ-ಬಸ್ ವ್ಯವಸ್ಥೆ ಕಲ್ಪಿಸಿದ ಹುಬ್ಬಳ್ಳಿ ಅಧಿಕಾರಿಗಳು
First published: