ಕೊರೋನಾ ಸೋಂಕು ಹರಡುವಿಕೆ ತಡೆಗೆ ಲಾಕ್ಡೌನ್ ಅಲ್ಲದೆ ಅನ್ಯ ಮಾರ್ಗವೇ ಇಲ್ಲ ಎಂಬ ತೀರ್ಮಾನಕ್ಕೆ ಬರಲು ಸಾಕಷ್ಟು ಅಳೆದು ತೂಗಲಾಗಿತ್ತು. ದೇಶಕ್ಕೆ ದೇಶವನ್ನೇ ದಿಗ್ಬಂಧನಗೊಳಿಸುವುದು ಸುಲಭದ ಸಂಗತಿ ಆಗಿರಲಿಲ್ಲ. ಆದರೀಗ ಲಾಕ್ಡೌನ್ ಲಿಫ್ಟ್ ಮಾಡುವ ವಿಚಾರ ಇನ್ನೂ ದುಸ್ತರವಾಗಿದೆ. ಜಾರಿಗೊಳಿಸಿದ್ದಕ್ಕಿಂತ ನೂರು ಪಟ್ಟು ಜಾಸ್ತಿ ಜಿಜ್ಞಾಸೆಯಿಂದ ಕೂಡಿದೆ.
ಮೇ 3ರ ಬಳಿಕವೂ ಲಾಕ್ಡೌನ್ ವಿಸ್ತರಿಸಲು ಬಹಳ ತಿಣುಕಾಡಲಾಗಿದೆ. ಚಪ್ಪಾಳೆ ತಟ್ಟಿ, ಕ್ಯಾಂಡಲ್ ಹಚ್ಚಿ ಎಂದು ಹೇಳಿದಂತೆ 'ಲಾಕ್ಡೌನ್ ವಿಸ್ತರಣೆ' ಅಂತಾ ಅಥವಾ 'ಲಾಕ್ಡೌನ್ ಖತಂ' ಅಂತಾ ಹೇಳಲು ಸಾಧ್ಯವಿಲ್ಲ ಎಂಬುದು ಮೋದಿಗೆ ಚೆನ್ನಾಗಿ ಗೊತ್ತಿತ್ತು. ಲಾಕ್ಡೌನ್ ಗೆ ಇತಿಶ್ರೀ ಹಾಡಬೇಕಿದ್ದರೆ ಸಕಾರಣ ಕೊಡಬೇಕೆಂಬುದು ಗೊತ್ತಿತ್ತು. ಜನವರಿ 30ರಂದು ಕಾಣಿಸಿಕೊಂಡ ಕೊರೋನಾ ಏಪ್ರಿಲ್ 30ರವರೆಗೆ 35 ಸಾವಿರಕ್ಕಿಂತಲೂ ಹೆಚ್ಚು ಜನರಿಗೆ ಹರಡಿದೆ. ಅಂಕಿ ಅಂಶಗಳು ಹೀಗಿರುವಾಗ ನಿಯಂತ್ರಣ ಆಗಿದೆ ಅಂತಾ ಹೇಳಲು ಹೇಗೆ ಸಾಧ್ಯ? ಆದುದರಿಂದಲೇ ಗೃಹ ಇಲಾಖೆ ಆದೇಶದ ಮೂಲಕ ವಿಸ್ತರಣೆಯನ್ನು ಘೋಷಿಸುವ ಶಾಸ್ತ್ರ ಮುಗಿಸಿದ್ದಾರೆ.
ಒಂದೊಮ್ಮೆ ಕೊರೋನಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಂದಿದ್ದರೆ ಮೋದಿಯೇ ಮುಂದೆ ಬಂದು, ದೇಶವಾಸಿಗಳಿಗೆ ಧನ್ಯವಾದ ಅರ್ಪಿಸಿ 'ಲಾಕ್ಡೌನ್ ಲಿಫ್ಟ್' ಎಂದು ಹೇಳಿ ಕ್ರೆಡಿಟ್ ತೆಗೆದುಕೊಂಡಿರುತ್ತಿದ್ದರು. ಆದರೆ ಪರಿಸ್ಥಿತಿ ಹಾಗಿಲ್ಲ. ಅಷ್ಟೇ ಅಲ್ಲ, ಲಾಕ್ಡೌನ್ ಮುಂದುವರೆಸಿದ ಮೇಲೂ ನಿಯಂತ್ರಣಕ್ಕೆ ಬರುತ್ತದೆ ಎಂಬ ವಿಶ್ವಾಸವೂ ಇಲ್ಲ. ಅಂಥ ವಿಶ್ವಾಸವಿದ್ದಿದ್ದರೂ ಅವರೇ ನೇರವಾಗಿ ಬಂದು ಲಿಫ್ಟ್ ವಿಸ್ತರಣೆಯನ್ನು ಘೋಷಿಸುವ ಧೈರ್ಯ ತೋರುತ್ತಿದ್ದರು. ಏಕೆಂದರೆ ಲಾಕ್ಡೌನ್ ವೇಳೆಯೇ ಆಗದ ನಿಯಂತ್ರಣ, ಫ್ರೀ ಬಿಟ್ಟಾಗ ಆಗುತ್ತೆ ಎಂಬುದಕ್ಕೆ ಏನು ಗ್ಯಾರಂಟಿ? ಈ ಜಿಜ್ಞಾಸೆ ಇಷ್ಟಕ್ಕೆ ಮುಗಿದಿಲ್ಲ, ಲಾಕ್ಡೌನ್ ಮುಂದುವರೆಸಿದ ಬಳಿಕವೂ ಸೋಂಕು ಹರಡುವಿಕೆ ಹೆಚ್ಚಾದರೆ ಸರ್ಕಾರದ ಹೆಸರು ನಿಚ್ಛಳವಾಗಿ ಕೆಡುತ್ತದೆ. ಅದಕ್ಕೇನು ಮಾಡಬೇಕೆಂಬ ಚಿಂತೆ ಶುರುವಾಗಿದೆಯಂತೆ.
ಸಭೆ ಮೇಲೆ ಸಭೆ
ಲಾಕ್ಡೌನ್ ವಿಷಯ ಕೇಂದ್ರ ಸರ್ಕಾರವನ್ನು ಯಾವ ರೀತಿ ಕಾಡುತ್ತಿದೆ ಎಂಬುದಕ್ಕೆ ಸದ್ಯ ನಡೆಯುತ್ತಿರುವ ಸಭೆಗಳೇ ಸಾಕ್ಷಿ. ಆರೋಗ್ಯ, ಹಣಕಾಸು, ಗೃಹ, ರೈಲ್ವೆ, ಎಂಎಸ್ ಎಂಇ, ಕೃಷಿ, ಆಹಾರ ಇಲಾಖೆಗಳು ಮತ್ತು ಆರ್ ಬಿಐ ಹಾಗೂ ನೀತಿ ಆಯೋಗಗಳು ಪ್ರತಿದಿನವೂ ಸಭೆ ನಡೆಸಿ ಇಂಚಿಂಚೂ ಮಾಹಿತಿ ಸಂಗ್ರಹಿಸುತ್ತಿವೆ. ಆ ಮಾಹಿತಿಗಳು ಪಿಎಂಓಗೆ ರವಾನೆಯಾಗುತ್ತಿವೆ. ಇಲಾಖೆಗಳ ಮಟ್ಟದಲ್ಲಿ ಕಾರ್ಯಪಡೆಗಳು ಕೂಡ ಸಲಹೆ ನೀಡುತ್ತಿವೆ. ಸಚಿವರು ಜಿಲ್ಲೆಗಳಿಂದ ಮಾಹಿತಿ ತರಿಸಿಕೊಡುತ್ತಿದ್ದಾರೆ. ಈ ಎಲ್ಲಾ ಸಲಹೆ-ಶಿಫಾರಸುಗಳನ್ನು ಇಟ್ಟುಕೊಂಡು ಪಿಎಂಓ ಚರ್ಚೆ ನಡೆಸಿದೆ. ಖುದ್ದು ಪ್ರಧಾನಿ ಮೋದಿ ಮೊನ್ನೆ ದಿನವಿಡೀ ಸಭೆ ನಡೆಸಿದ್ದಾರೆ. ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ. ತನ್ನ ನೆಚ್ಚಿನ ಅಧಿಕಾರಿಗಳಾದ ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಮತ್ತು ಪ್ರಧಾನಿ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ ಅವರೊಂದಿಗೆ ಗಂಟೆಗಟ್ಟಲೆ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ನಿನ್ನೆ ಮತ್ತದೇ ಸರ್ಕಸ್ ಮಾಡಿದ್ದಾರೆ. ಇದೆಲ್ಲದರ ಪರಿಣಾಮ ಲಾಕ್ಡೌನ್ ವಿಸ್ತರಣೆ.
ಬ್ರೇಕ್ ಕೆ ಬಾದ್...
ಕೇಂದ್ರ ಸರ್ಕಾರದ ಕೆಲ ಅಧಿಕಾರಿಗಳ ಪ್ರಕಾರ ಲಾಕ್ಡೌನ್ ಬ್ರೇಕ್ ಕೆ ಬಾದ್ ಕೂಡ ಇರಲಿದೆಯಂತೆ. ಸದ್ಯ ವಲಸೆ ಕಾರ್ಮಿಕರ ಸಮಸ್ಯೆ ದೊಡ್ಡ ಮಟ್ಟದಲ್ಲಿದೆ. ವಲಸೆ ಕಾರ್ಮಿಕರ ನೆರವಿಗೆ ಧಾವಿಸುವಂತೆ ರಾಜ್ಯ ಸರ್ಕಾರಗಳು ಒತ್ತಾಯಿಸಿವೆ. ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರಗಳ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಹಾಗಾಗಿ ಈಗ ವಲಸೆ ಕಾರ್ಮಿಕರು ಅವರವರ ಊರು ಸೇರಿಕೊಳ್ಳಲು ಅನುವಾಗುವಂತೆ ವಿನಾಯಿತಿ ನೀಡಲಾಗಿದೆ. ಬೇರೆ ಬೇರೆ ರಾಜ್ಯಗಳಲ್ಲಿರುವ ಅವರೆಲ್ಲಾ ಊರು ತಲುಪಿಕೊಳ್ಳಲು ಒಂದು ವಾರ ಬೇಕಾಗಬಹುದು. ಇದಲ್ಲದೆ ಕಚ್ಛಾ ಪದಾರ್ಥಗಳಿಲ್ಲದೆ ಉತ್ಪಾದಕರು ಕಂಗೆಟ್ಟಿದ್ದಾರೆ. ಆದ್ದರಿಂದಲೇ ಹಸಿರು ವಲಯದಲ್ಲಿ ಕೈಗಾರಿಕಾ ಚಟುವಟಿಕೆಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರೂ ಉತ್ಪಾದನೆ ಮಾತ್ರ ರೆಡ್ ಮೋಡಿನಲ್ಲೇ ಇದೆ. ಈಗ ಮೂರನೇ ಹಂತದಲ್ಲಿ ವಲಸೆ ಕಾರ್ಮಿಕರ ನೆಪದಲ್ಲಿ ಸಂಚಾರ ವ್ಯವಸ್ಥೆ ಸಡಿಲಿಸಿ ಕಚ್ಛಾ ಪದಾರ್ಥಗಳು ಉತ್ಪಾದಕರಿಗೆ ತಲುಪುವಂತೆ ನೋಡಿಕೊಳ್ಳುವ ತಂತ್ರಗಾರಿಕೆ ಮಾಡಲಾಗಿದೆ. ಈ ಎರಡೂ ಕೆಲಸಗಳು ಆದಮೇಲೆ ಲಾಕ್ಡೌನ್ ನಿಯಮಗಳನ್ನು ಇನ್ನಷ್ಟು ಟೈಟ್ ಮಾಡಬಹುದು ಎಂಬ ಸುದ್ದಿ ಕೂಡ ಇದೆ.
ಇದನ್ನು ಓದಿ: ದಿಲ್ಲಿ ಪೋಸ್ಟ್ | ವೇಯ್ಟ್ ಆ್ಯಂಡ್ ವಾಚ್ ಮೂಡಿನಲ್ಲಿ ರಾಜಕಾರಣಿಗಳು, ಸಜ್ಜನ ದುರ್ಜನ ಆದ, ಬೆಂಕಿಯುಂಡೆ ಥಂಡಾ ಆದ ಕತೆ!
ಪ್ಯಾಕೇಜ್ ಘೋಷಣೆಯಾದರೆ ಲಾಕ್ಡೌನ್ ಲಿಫ್ಟ್ ಅಂತಾ!
ಲಾಕ್ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವವರಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂಬ ಒತ್ತಡ ಭಾರೀ ಜೋರಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮೋದಿ ಮತ್ತು ನಿರ್ಮಲಾ ಸೀತಾರಾಮನ್ ಮೂರ್ನಾಲ್ಕು ಸಲ ಚರ್ಚೆ ಮಾಡಿದ್ದಾರೆ. ಪ್ಯಾಕೇಜ್ ಘೋಷಣೆ ತಡವಾದಷ್ಟು ಸರ್ಕಾರದ ವರ್ಚಸ್ಸಿಗೆ ಧಕ್ಕೆ ಆಗಲಿದೆ ಎಂಬ ಆಯಾಮವೂ ಚರ್ಚೆಯಾಗಿದೆ. ಆದರೆ ಪ್ಯಾಕೇಜ್ ಘೋಷಿಸಲು ಮೋದಿ ಹಸಿರು ನಿಶಾನೆ ತೋರಿಲ್ಲ. ಈಗಲೇ ಪ್ಯಾಕೇಜ್ ಘೋಷಿಸಿದರೆ ಹಣ ಸಂತ್ರಸ್ತರ ಖಾತೆಗಳಿಗೆ ಹೋಗುತ್ತದೆ. ಖಾತೆಗಳಲ್ಲೇ ಉಳಿಯುವ ಸಂಭವವೇ ಹೆಚ್ಚಿರುತ್ತದೆ. ಆ ಹಣ ಮತ್ತೆ ಮಾರುಕಟ್ಟೆಗೆ ಬರುವುದಿಲ್ಲ. 'ಲಿಕ್ವಿಡ್' ಆಗಿ ಪರಿವರ್ತಿತಗೊಳ್ಳದಿದ್ದರೆ ಸಮಸ್ಯೆ ಪೂರ್ಣ ಬಗೆಹರಿಯುವುದಿಲ್ಲ ಎಂಬುದು ಅವರ ಲೆಕ್ಕಾಚಾರವಂತೆ.
ಆದ್ದರಿಂದ ಲಾಕ್ಡೌನ್ ತೆರವುಗೊಳಿಸಿದ ಮೇಲೆ ಬಡವರ ಖಾತೆಗೆ ಹಣ ಹಾಕುವ ಕಾರ್ಯಕ್ರಮ ಇದೆ ಎನ್ನಲಾಗುತ್ತಿದೆ. ಸದ್ಯ ಕೆಂಪು ವಲಯದಲ್ಲಿ ಇಂತಿಷ್ಟು, ಹಳದಿ ವಲಯದಲ್ಲಿ ಇನ್ನೊಂದಿಷ್ಟು, ಹಸಿರು ವಲಯದಲ್ಲಿ ಮತ್ತೊಂದಿಷ್ಟು ವಿನಾಯಿತಿಗಳಿವೆ. ಸಂಚಾರ, ವ್ಯಾಪಾರದಿಂದ ಹಿಡಿದು ಎಲ್ಲಾ ವಿಷಯದಲ್ಲೂ ಗೊಂದಲವಿದೆ. ಮೇ 14 ಆದಮೇಲೂ ಏಕಾಏಕಿ ದೇಶಾದ್ಯಂತ ಮುಕ್ತ ಮುಕ್ತ ಅಂತೇನೂ ಆಗುವುದೂ ಇಲ್ಲ. ಪ್ಯಾಕೇಜ್ ಘೋಷಣೆ ಮಾಡಿದಾಗ ಲಾಕ್ಡೌನ್ ಮುಗಿತು ಎಂದುಕೊಳ್ಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ