ದಿಲ್ಲಿ ಪೋಸ್ಟ್​ | ರಾಮಾಯಣ, ಮಹಾಭಾರತದ ಪಾತ್ರಧಾರಿಗಳೆಲ್ಲಾ ಬಿಜೆಪಿಯಲ್ಲೇ ಇದ್ದಾರೆ; ಇವರ ಸಮಸ್ಯೆ ಇವರಿಗೆ!

ನವದೆಹಲಿ ಕೇವಲ ರಾಷ್ಟ್ರ ನಾಯಕರ ಕೇಂದ್ರ ಸ್ಥಾನವಷ್ಟೇ ಅಲ್ಲ. ರಾಜ್ಯ ನಾಯಕರ ಚಲನವಲನಗಳು ಕೂಡ ಆರಂಭಗೊಳ್ಳುವುದು ಇದೇ ದೆಹಲಿಯಿಂದ. ಸರ್ಕಾರ ಮಟ್ಟದ ಕೆಲಸಗಳಿಂದ ಹಿಡಿದು ಹೈಕಮಾಂಡ್ ಕೃಪೆಗಾಗಿ ಎಲ್ಲ ನಾಯಕರು ದೆಹಲಿಗೆ ಬರುತ್ತಾರೆ. ಹೀಗೆ ಬಂದ ನಾಯಕರ ಮಾತುಕತೆ, ಸನ್ನಿವೇಶ ಎಲ್ಲವೂ ಸುದ್ದಿಯಾಗುವುದಿಲ್ಲ. ಸುದ್ದಿಯಾಗದ ಕುತೂಹಲಕಾರಿ, ಅಚ್ಚರಿಯ ಕೆಲವು ಸಂಗತಿಗಳು ದಿಲ್ಲಿ ಪೋಸ್ಟ್​ನಲ್ಲಿ ಪ್ರಕಟವಾಗಲಿದೆ.

ದಿಲ್ಲಿ ಪೋಸ್ಟ್.

ದಿಲ್ಲಿ ಪೋಸ್ಟ್.

  • Share this:
ಬಿಜೆಪಿಗೆ ಅಂದಿಗೂ ಇಂದಿಗೂ ರಾಮಮಂತ್ರವೇ ಜೀವಾಳ. ಜತೆಗೆ ಧರ್ಮ. 1987ರಲ್ಲಿ‌ ರಾಮಾಯಣ ಧಾರವಾಹಿ ಬಂದಾಗ ಮನೆಮನೆ ಮಾತಾಗಿತ್ತು.‌ ಅದಕ್ಕೆ ಆಗ ಮನೋರಂಜನೆಗೆ ಹೆಚ್ಚಿನ ಆಯ್ಕೆಗಳು ಇರಲಿಲ್ಲ ಎನ್ನುವುದೂ ಕಾರಣವಾಗಿತ್ತು. ಈಗ ಬೇರೆ ಪರಿಸ್ಥಿತಿಯಲ್ಲಿ ರಾಮಾಯಣದ ರೀ ಟೆಲಿಕಾಸ್ಟ್ ಮಾಡಿದ್ದರೆ ಅದು‌ ಅಷ್ಟೇನೂ‌ ಸುದ್ದಿನೂ ಆಗುತ್ತಿರಲಿಲ್ಲ. ಜನರೂ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದ್ದರಿಂದ ಕೊರೋನಾ ಟೈಂ ನೋಡಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಮಾಯಣವನ್ನು ರೀ ಟೆಲಿಕಾಸ್ಟ್ ಮಾಡಿಸಿದೆ. ಇನ್ನಷ್ಟು ಪ್ರಮೋಟ್ ಮಾಡಬೇಕೆಂಬ ಉದ್ದೇಶದಲ್ಲಿ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್, ತಾವು ಟಿವಿಯಲ್ಲಿ ರಾಮಾಯಣ ನೋಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣಕ್ಕೆ ತಂದು ವಿವಾದ ಸೃಷ್ಟಿಸಿಕೊಂಡರು.

ವಿಶೇಷ ಎಂದರೆ ಅಂದು ರಾಮಾಯಣ ಮತ್ತು ಮಹಾಭಾರತದ ಪ್ರಮುಖ ಪಾತ್ರಧಾರಿಗಳೆಲ್ಲಾ ಮಾತೆತ್ತಿದರೆ ರಾಮ, ಕೃಷ್ಣ, ಧರ್ಮ ಎಂದು ಹೇಳುವ ಬಿಜೆಪಿಯಲ್ಲೇ ಇದ್ದಾರೆ. ಆ ಪೈಕಿ ದ್ರೌಪದಿ ಪಾತ್ರ ಮಾಡಿದ್ದ ರೂಪ ಗಂಗೂಲಿ ಮಾತ್ರ ಹಾಲಿ ರಾಜ್ಯಸಭಾ ಸದಸ್ಯೆ. ಉಳಿದವರೆಲ್ಲಾ ಮಾಜಿಗಳು. ರಾವಣನ ಪಾತ್ರ ಮಾಡಿದ್ದ ಅರವಿಂದ ತಿವಾರಿ ಗುಜರಾತಿನ ಸಬರಕಾಂತ ಕ್ಷೇತ್ರದ ಮಾಜಿ ಎಂಪಿ. ಸೀತಾ ಪಾತ್ರದ ದೀಪಿಕಾ ಚಿಕ್ಲಾ ತೋಪಿವಾಲಾ ಗುಜರಾತಿನ ಬರೋಡಾ ಕ್ಷೇತ್ರದ ಮಾಜಿ ಎಂಪಿ. ಹನುಮಾನ್ ಪಾತ್ರದ ದಾರಾ ಸಿಂಗ್ ರಾಜ್ಯಸಭೆಯ ಮಾಜಿ ಸದಸ್ಯ. ಕೃಷ್ಣ ಪಾತ್ರಧಾರಿ ನಿತೀಶ್ ಭಾರದ್ವಾಜ್ ಜಮ್ ಷಡ್ಪುರ ಕ್ಷೇತ್ರದ ಮಾಜಿ ಎಂಪಿ. ರಾಮಾಯಣ, ಮಹಾಭಾರತ ಮಾತ್ರವಲ್ಲ ಚಲನಚಿತ್ರ ನಟನಟಿಯರಿಗೆ ಹೆಚ್ಚಿನ ಮನ್ನಣೆ ಹಾಕಿದ್ದು ಕೂಡ ಬಿಜೆಪಿಯೇ ಎನ್ನಿ...

ವಿರಮಿಸುತ್ತಿರುವ ಮಹಾರಾಜ

ಕೊರೋನಾ ಬಂದು ರಾಜಕಾರಣಿಗಳ ಪೈಕಿ ಭಾರಿ ನಿರಾಸೆ ಮೂಡಿಸಿರುವುದು ಇವರಿಬ್ಬರಿಗೆ ಇರಬೇಕು. ಒಬ್ಬರು ಹಾಲಿ, ಇನ್ನೊಬ್ಬರು ಮಾಜಿ ಕಾಂಗ್ರೆಸಿಗರು‌. ಡಿ.ಕೆ‌. ಶಿವಕುಮಾರ್ ಭಾರೀ ಕಸರತ್ತು ಮಾಡಿ ಕೆಪಿಸಿಸಿ ಪಟ್ಟ ಪಡೆದಿದ್ದರು. ಭಾರಿ ಜನರನ್ನು ಸೇರಿಸಿ ಧಾಂ ಧೂಂ ಅಂತಾ ಅಧಿಕಾರ ಸ್ವೀಕರಿಸಬೇಕು ಅಂದುಕೊಂಡಿದ್ದರು. ಅದು ಆಗಲಿಲ್ಲ.

ಅದೇ ರೀತಿ ಭಾರೀ ಹೈಪ್ ಸೃಷ್ಟಿಸಿ ಬಿಜೆಪಿ ಸೇರಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಇಷ್ಟೊತ್ತಿಗೆ ತಾನು ಕೇಂದ್ರ ಸಚಿವ ಆಗಿಬಿಡುತ್ತೇನೆ, ತನ್ನ ಶಿಷ್ಯರು ಮಧ್ಯಪ್ರದೇಶದಲ್ಲಿ ಮಂತ್ರಿಗಳಾಗಿರುತ್ತಾರೆ ಎಂದುಕೊಂಡಿದ್ದರು. ಅದೂ ಆಗಿಲ್ಲ. ಸದಾ ಕ್ಲೀನ್ ಶೇವ್ ಮಾಡಿಕೊಂಡು, ಫಾರಿನ್ ಪರ್ಫ್ಯೂಂ ಸಿಂಪಡಿಸಿಕೊಂಡು ಹೀರೋ ಥರ ಇದ್ದ ಜ್ಯೋತಿರಾದಿತ್ಯ ಸಿಂಧಿಯಾ ಈಗ ಗಡ್ಡ ಬಿಟ್ಟಿದ್ದಾರಂತೆ. ಮುಂದೇನು ಅಂತಾ ತಿಳಿಯಲು ದೆಹಲಿಗೆ ಬರಬೇಕು. ದೆಹಲಿಗೆ ಬರಲು ಲಾಕ್​ಡೌನ್ ಅಡ್ಡಿ. ಪಾಪ, ಜ್ಯೋತಿರಾದಿತ್ಯ ಸಿಂಧಿಯಾ ಸದ್ಯ ಗ್ವಾಲಿಯರ್ ನ 19ನೇ ಶತಮಾನದ ತಮ್ಮ ಜೈ ವಿಲಾಸ್ ಮಹಲ್ ಅರಮನೆಯಲ್ಲಿ ವಿರಮಿಸುತ್ತಿದ್ದಾರಂತೆ.

ಹೀರೋ ಪಿಣರಾಯಿ

ಎಡಪಕ್ಷದವರೆಂದರೆ ಪತ್ರಕರ್ತರಿಗೆ ಮೊದಲಿಂದಲೂ ಅಷ್ಟಕ್ಕಷ್ಟೇ. ಎಡಪಕ್ಷಗಳ ನಾಯಕರು ಸ್ವಚ್ಛ, ಸರಳ ಮತ್ತು ಶಿಸ್ತಿನ ಜೀವನಕ್ಕೆ ಹೆಸರುವಾಸಿ. ಆದರೂ ಅರ್ಹತೆಗನುಗುಣವಾಗಿಯೂ ಅವರ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುವುದಿಲ್ಲ. ಆದರೆ ಕೊರೋನಾ ಕಷ್ಟದ ಸಂದರ್ಭದಲ್ಲಿ ಕೇರಳದ ಕಾಮ್ರೇಡ್ ಪಿಣರಾಯಿ ವಿಜಯನ್ ಬಗ್ಗೆ ಮಾತ್ರ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಪತ್ರಕರ್ತರು ಮಾತ್ರವಲ್ಲ, ಕೇಂದ್ರ ಸರ್ಕಾರದ ಗ್ರೂಪ್ ಆಫ್ ಮಿನಿಸ್ಟರ್ಸ್ ಮೀಟಿಂಗ್ ನಲ್ಲೂ ಪಿಣರಾಯಿ ವಿಜಯನ್ ಅವರಿಗೆ ಶಹಬಾಸ್ ಗಿರಿ ಸಿಕ್ಕಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಿವಾಸದಲ್ಲಿ ನಡೆಯುವ ಗ್ರೂಪ್ ಆಫ್ ಮಿನಿಸ್ಟರ್ಸ್ ಸಭೆಗೆ ಒಂದೆರಡು ಸಲ ಗೃಹ ಸಚಿವ ಅಮಿತ್ ಶಾ ಕೂಡ ಭಾಗವಹಿಸಿದ್ದರು. ವಿಶೇಷ ಎಂದರೆ ಅಮಿತ್ ಶಾ ಭಾಗವಹಿಸಿದ್ದ ಸಭೆಯಲ್ಲೇ ಪಿಣರಾಯಿ ವಿಜಯನ್ ಬಗ್ಗೆ ಮೆಚ್ಚುಗೆಯ ಮಹಾಪೂರ ಹರಿದುಬಂದಿದೆ. ಮೋದಿ ಮತ್ತು ಅಮಿತ್ ಶಾ ಬೇರೆ ನಾಯಕರನ್ನು ಅಗತ್ಯ ಇದ್ದರಷ್ಟೇ ಮಾತನ್ನಾಡಿಸುತ್ತಾರೆ. ಬೇರೆ ಪಕ್ಷದ ನಾಯಕರ ಬಗ್ಗೆಯಂತೂ ಬಿಲ್ ಕುಲ್ ಮಾತನಾಡೊಲ್ಲ. ಇದು ಗೊತ್ತಿರುವುದರಿಂದ ಯಾರೂ ಕೂಡ ಅವರೆದುರು ಬೇರೆ ಪಕ್ಷಗಳ ನಾಯಕರ ಬಗ್ಗೆ, ಅದರಲ್ಲೂ ಹೊಗಳುವ ಪ್ರಯತ್ನ ಮಾಡೊಲ್ಲ. ಆದರೆ ಪಿಣರಾಯಿ ವಿಜಯನ್ ವಿಷಯದಲ್ಲಿ ಹೊಗಳದೆ ಬೇರೆ ದಾರಿ ಇಲ್ಲದಂತಾಗಿದೆ. ರಾಜ್ಯವಾರು ಚರ್ಚೆ ಮಾಡುತ್ತಿದ್ದಾಗ ಪಿಣರಾಯಿ ವಿಜಯನ್ ವಿಷಯ ಬಂದಿದೆ. ಪ್ರಶಂಸೆಯೂ ಬಂದಿವೆ.

ಇದನ್ನು ಓದಿ: ದಿಲ್ಲಿ ಪೋಸ್ಟ್​ | ವೇಯ್ಟ್ ಆ್ಯಂಡ್ ವಾಚ್ ಮೂಡಿನಲ್ಲಿ ರಾಜಕಾರಣಿಗಳು, ಸಜ್ಜನ ದುರ್ಜನ ಆದ, ಬೆಂಕಿಯುಂಡೆ ಥಂಡಾ ಆದ ಕತೆ!

ಅನ್ನುವಂಗಿಲ್ಲ, ಅನುಭವಿಸುವಂತಿಲ್ಲ

ಕೊರೋನಾ ಕಷ್ಟ ನಿಭಾಯಿಸಲೆಂದು ಸಂಸದರ ಎರಡು ವರ್ಷದ ಪ್ರದೇಶಾಭಿವೃದ್ಧಿ ನಿಧಿಯನ್ನು ಕಟ್ ಮಾಡಲಾಗಿದೆ‌. ಮೊದಲೇ ಈ ಸರ್ಕಾರದಲ್ಲಿ ನಮ್ಮ ಯಾವ ಕೆಲಸವೂ ಆಗುತ್ತಿಲ್ಲ. ಯಾವುದೇ ಯೋಜನೆಗಳನ್ನು ತಮ್ಮ ಕ್ಷೇತ್ರಗಳಿಗೆ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಇದರ ಬಗ್ಗೆ ದೂರುವಂತೆಯೂ ಇಲ್ಲ ಎಂದು ಹಳಹಳಿಸುತ್ತಿದ್ದ ಸಂಸದರಿಗೆ ಕಡೆಗೆ ಉಳಿಯುತ್ತಿದ್ದುದು ಅವರ ಪ್ರದೇಶಾಭಿವೃದ್ಧಿ ನಿಧಿ. ಈಗ ಅದೂ ಖೋತಾ ಆಗಿದೆ. 'ಯಾರಿಗೇಳೋಣ ನಮ್ಮ ಪ್ರಬ್ಲಮ್ಮು?' ಅಂತಾ ಕಂಗಾಲಾಗಿದ್ದಾರೆ. ಖಾಲಿ ಕೈಯಲ್ಲಿ ಕ್ಷೇತ್ರಕ್ಕೋಗಿ ಮಾಡುವುದುದಾರೂ ಏನನ್ನು? ಎಂದು ಚಿಂತಾಕ್ರಾಂತರಾಗಿದ್ದಾರೆ. ಅವರ ಪರಿಸ್ಥಿತಿ ಅನ್ನುವಂಗಿಲ್ಲ, ಅನುಭವಿಸುವಂತಿಲ್ಲ ಎಂಬಂತಾಗಿದೆ
Published by:HR Ramesh
First published: