ದೆಹಲಿ ಪೊಲೀಸರಿಂದ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ವಿಚಾರಣೆ; ಅಕ್ರಮ ಆರೋಪ

ಶ್ರೀನಿವಾಸ್​ರನ್ನು ವಿಚಾರಣೆ ಒಳಪಡಿಸಿದ ಬೆನ್ನಲ್ಲೇ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಬೆಂಬಲ ವ್ಯಕ್ತಪಡಿಸಿ ಟ್ವೀಟ್​ ಮಾಡಿದ್ದಾರೆ. ನಾನು ನಿಮ್ಮೊಂದಿಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಬಿ.ವಿ.ಶ್ರೀನಿವಾಸ್

ಬಿ.ವಿ.ಶ್ರೀನಿವಾಸ್

  • Share this:
ನವದೆಹಲಿ: ಕೋವಿಡ್​​ ಸಮಯದಲ್ಲಿ ಪರಿಹಾರ ಕಾರ್ಯಗಳಿಂದ ಗಮನ ಸೆಳೆದಿದ್ದ ಭಾರತೀಯ ಯುವ ಕಾಂಗ್ರೆಸ್​ ಅಧ್ಯಕ್ಷ ಬಿ.ವಿ.ಶ್ರೀನಿವಾಸ್​ರನ್ನು ಇಂದು ದೆಹಲಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ದೆಹಲಿಯ ಯುವ ಕಾಂಗ್ರೆಸ್​ ಕಚೇರಿಗೆ ಭೇಟಿ ನೀಡಿದ ಪೊಲೀಸರು ಪರಿಹಾರ ಸಾಮಗ್ರಿಗಳ ವಿತರಣೆ ಬಗ್ಗೆ 20 ನಿಮಿಷಗಳ ಕಾಲ ಶ್ರೀನಿವಾಸ್​ರನ್ನು ಪ್ರಶ್ನಿಸಿದ್ದಾರೆ. ಆಕ್ಸಿಜನ್​​ , ಔಷಧಿಗಳು ನಿಮಗೆ ಹೇಗೆ ಸಿಗುತ್ತಿದೆ ಎಂದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಶ್ರೀನಿವಾಸ್​ ವಿರುದ್ಧ ಕೋರ್ಟ್​ಗೆ ಪಿಐಎಲ್​ ಅರ್ಜಿಗಳು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಪೊಲೀಸರು  ವಿಚಾರಣೆಗೆ ನಡೆದಿದ್ದಾರೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿ ಮೂಲದ ಶ್ರೀನಿವಾಸ್​ ದೆಹಲಿಯಲ್ಲಿ ಸೋಂಕಿತರಿಗೆ ಅಗತ್ಯವಿರುವ ಆಕ್ಸಿಜನ್​, ಔಷಧಗಳನ್ನು ಪೂರೈಸುತ್ತಿದ್ದರು. ಪೊಲೀಸರ ವಿಚಾರಣೆ ಬಳಿಕ ಪ್ರತಿಕ್ರಿಯಿಸಿದ ಶ್ರೀನಿವಾಸ್​ ನಾನು ಏನನ್ನು ಮುಚ್ಚಿಡುತ್ತಿಲ್ಲ. ಏನನ್ನು ಮುಚ್ಚಿಡುವ ಅಗತ್ಯ ನನಗಿಲ್ಲ. ನಾವು ನಮ್ಮ ಕೆಲಸಗಳನ್ನು ನಿಲ್ಲಿಸುವುದೂ ಇಲ್ಲ, ಹೆದರುವುದು ಇಲ್ಲ. ನಾವು ಯಾವುದೇ ತಪ್ಪು ಮಾಡಿಲ್ಲ. ಯುವ ಕಾಂಗ್ರೆಸ್​ ಕಮಿಟಿ ಕಚೇರಿಯಲ್ಲಿ ಕೊರೋನಾ ವಾರ್​ ರೂಂ ತೆರೆದು ಜನರಿಗೆ ನೆರವಾಗುತ್ತಿದ್ದೇವೆ. ಜೀವ ಉಳಿಸುವ ನಮ್ಮ ಪ್ರಯತ್ನವನ್ನು ಪಿಐಎಲ್​ಗಳಿಗೆ ಹೆದರಿ ನಿಲ್ಲಿಸುವುದಿಲ್ಲ ಎಂದಿದ್ದಾರೆ.

ಶ್ರೀನಿವಾಸ್​ ಹಾಗೂ ಅವರ ತಂಡದ ವಿರುದ್ಧ ಸಲ್ಲಿಕೆ ಆಗಿರುವ ಪಿಐಎಲ್​ನಲ್ಲಿ ಕೋವಿಡ್​ ಸಂಬಂಧಿತ ವಸ್ತುಗಳ ಅಕ್ರಮ ದಾಸ್ತಾನು ಹಾಗೂ ವಿತರಣೆ ಬಗ್ಗೆ ದೂರಲಾಗಿದೆ. ಔಷಧಿಗಳ ಅಕ್ರಮ ವಿತರಣೆಯಲ್ಲಿ ರಾಜಕಾರಣಿಗಳು ಭಾಗಿಯಾಗಿದ್ದಾರೆ ಎಂದು ದೂರಲಾಗಿದೆ. ದೇಶಾದ್ಯಂರ ಕೋವಿಡ್​ ಸೋಂಕಿತರಿಗೆ ಅಗತ್ಯವಿರುವ ಆಕ್ಸಿಜನ್​, ರಕ್ತ, ಪ್ಲಾಸ್ಮಾ, ವೆಂಟಿಲೇಟರ್​, ಔಷಧಗಳ ಪೂರೈಕೆ ಮೂಲಕ ಶ್ರೀನಿವಾಸ್​​ ಪ್ರಸಿದ್ಧಿಗಳಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಅವರ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.

ಶ್ರೀನಿವಾಸ್​ರನ್ನು ವಿಚಾರಣೆ ಒಳಪಡಿಸಿದ ಬೆನ್ನಲ್ಲೇ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಬೆಂಬಲ ವ್ಯಕ್ತಪಡಿಸಿ ಟ್ವೀಟ್​ ಮಾಡಿದ್ದಾರೆ. ನಾನು ನಿಮ್ಮೊಂದಿಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಯುವ ಕಾಂಗ್ರೆಸ್​ ಘಟಕದ ಕಚೇರಿ ಮೇಲಿನ ದಾಳಿ ರಾಜಕೀಯ ಪ್ರೇರಿತ ಎಂದು ಕಾಂಗ್ರೆಸ್​ ಮುಖಂಡರು ಆರೋಪಿಸಿದ್ದಾರೆ.
Published by:Kavya V
First published: