• ಹೋಂ
  • »
  • ನ್ಯೂಸ್
  • »
  • Corona
  • »
  • ಪರೀಕ್ಷೆ ತಡವಾದರೂ ಆನ್‌ಲೈನ್‌ ಬೋಧನೆ ಮುಂದುವರಿಕೆ: ಸಚಿವ ಸಿ.ಎನ್‌. ಅಶ್ವತ್ಥನಾರಾಯಣ

ಪರೀಕ್ಷೆ ತಡವಾದರೂ ಆನ್‌ಲೈನ್‌ ಬೋಧನೆ ಮುಂದುವರಿಕೆ: ಸಚಿವ ಸಿ.ಎನ್‌. ಅಶ್ವತ್ಥನಾರಾಯಣ

ಅಶ್ವತ್ಥನಾರಾಯಣ

ಅಶ್ವತ್ಥನಾರಾಯಣ

ಕೆಲವು ಎಂಜಿನಿಯರಿಂಗ್‌ ಮತ್ತು ವೃತ್ತಿಪರ ಕೋರ್ಸ್‌ಗಳಲ್ಲಿ ಮಾತ್ರ ಮುಂದಿನ ಸೆಮಿಸ್ಟರ್‌ಗಳಿಗೆ ಹೋಗಲು ಕ್ಯಾರಿ ಓವರ್‌ ಪದ್ಧತಿ ಅನ್ವಯವಾಗುವುದಿಲ್ಲ.

  • Share this:

ಬೆಂಗಳೂರು (ಮೇ . 21): ಕೊರೋನಾ ಸೋಂಕು ಉಲ್ಬಣ ಗೊಳ್ಳುತ್ತಿರುವ ಹಿನ್ನಲೆ ಸದ್ಯ ಪರೀಕ್ಷೆಯನ್ನು ನಡೆಸಲು ಆಗುವುದಿಲ್ಲ. ಆದರೆ, ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಕಾಲೇಜುಗಳು ಪದವಿ ಕೋರ್ಸ್‌ಗಳ ಸಮ ಸ್ಥಾನಿಕ ಸೆಮಿಸ್ಟರ್‌ ಕೋರ್ಸ್‌ಗಳಿಗೆ ಆನ್‌ಲೈನ್‌ ತರಗತಿಗಳನ್ನು ಮುಂದುವರಿಸಬೇಕು. ಈ ಕೋರ್ಸ್‌ಗಳ ಭೌತಿಕ ತರಗತಿಗಳನ್ನು ಆರಂಭಿಸುವ ಕುರಿತು ಕೋವಿಡ್‌ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ. ಎನ್‌. ಅಶ್ವತ್ಥ ನಾರಾಯಣ  ತಿಳಿಸಿದ್ದಾರೆ.  ಬೆಸ ಸ್ಥಾನಿಕ ಸೆಮಿಸ್ಟರ್‌ಗಳಿಗೆ ಪರೀಕ್ಷೆಗಳನ್ನು ಇನ್ನೂ ಪೂರೈಸದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಕೂಡ ಸಮ ಸ್ಥಾನಿಕ ಸೆಮಿಸ್ಟರ್‌ಗಳಿಗೆ (2ನೇ, 4ನೇ, 6ನೇ ಮತ್ತು 8ನೇ ಸೆಮಿಸ್ಟರ್‌ಗಳು) ಆನ್‌ಲೈನ್‌ ತರಗತಿಗಳನ್ನು ಶುರು ಮಾಡಬೇಕು. ಬಹುತೇಕ ಕೋರ್ಸ್‌ಗಳಿಗೆ ಕ್ಯಾರಿ ಓವರ್‌ ಪದ್ಧತಿ ಅನ್ವಯವಾಗುವುದರಿಂದ ಪದವಿ ಕೋರ್ಸ್‌ಗಳ ಬೆಸ ಸ್ಥಾನಿಕ ಸೆಮಿಸ್ಟರ್‌ಗಳಿಗೆ ಕೋವಿಡ್‌ ಪರಿಸ್ಥಿತಿ ತಹಬಂದಿಗೆ ಬಂದಮೇಲೆ ನಡೆಸಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.


ಕೆಲವು ಎಂಜಿನಿಯರಿಂಗ್‌ ಮತ್ತು ವೃತ್ತಿಪರ ಕೋರ್ಸ್‌ಗಳಲ್ಲಿ ಮಾತ್ರ ಮುಂದಿನ ಸೆಮಿಸ್ಟರ್‌ಗಳಿಗೆ ಹೋಗಲು ಕ್ಯಾರಿ ಓವರ್‌ ಪದ್ಧತಿ ಅನ್ವಯವಾಗುವುದಿಲ್ಲ. ಅವುಗಳ ಬಗ್ಗೆ ಕುಲಪತಿಗಳು ಹಾಗೂ ಪ್ರಾಂಶುಪಾಲರುಗಳು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಜೊತೆ ಸಮಾಲೋಚನೆ ನಡೆಸಿ ನಿರ್ಧಾರಕ್ಕೆ ಬರಬೇಕು ಎಂದು ವಿವರಿಸಿದ್ದಾರೆ.


ಇದನ್ನು ಓದಿ: ಎಂಥಾ ಕಾಲ ಬಂತು: ಮೃತ ಸೋಂಕಿತರ ಅಂತ್ಯಕ್ರಿಯೆ ನೆರವೇರಿಸಲು ಟೆಂಡರ್ ಆಹ್ವಾನ!


ಸ್ನಾತಕೋತ್ತರ ಕೋರ್ಸ್‌ಗಳ ಬಗ್ಗೆ ಪ್ರಸ್ತಾಪಿಸಿರುವ ಅವರು, "ಕೋವಿಡ್‌ ಕಾರಣದಿಂದಾಗಿ ಕೆಲವು ವಿಶ್ವವಿದ್ಯಾಲಯಗಳಲ್ಲಿ ಮೊದಲ ಸೆಮಿಸ್ಟರ್‌ಗೆ ಪ್ರವೇಶಾತಿ ಪ್ರಕ್ರಿಯೆ ವಿಳಂಬವಾಗಿದೆ. ಆದರೆ ಹೆಚ್ಚಿನ ವಿಶ್ವವಿದ್ಯಾಲಯಗಳಲ್ಲಿ ಈಗಾಗಲೇ ಮೂರನೇ ಸೆಮಿಸ್ಟರ್‌ನ ತರಗತಿಗಳು ಮುಗಿದಿದ್ದು, ಕೆಲವೆಡೆ ಪರೀಕ್ಷೆಗಳು ಕೂಡ ಆರಂಭವಾಗಿದ್ದವು. ಹೀಗಾಗಿ, ಸ್ನಾತಕೋತ್ತರ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ, ಮೂರನೇ ಸೆಮಿಸ್ಟರ್‌ನ ತರಗತಿಗಳು ಈಗಾಗಲೇ ಮುಗಿದಿದ್ದು, ಪರೀಕ್ಷೆಗಳನ್ನು ನಡೆಸುವುದು ಮಾತ್ರ ಬಾಕಿ ಉಳಿದಿದ್ದರೆ, ಅಲ್ಲಿ ಕೂಡ ಸಮ ಸ್ಥಾನಿಕ ಸೆಮಿಸ್ಟರ್‌ಗಳಿಗೆ ಆನ್‌ಲೈನ್‌ ತರಗತಿಗಳನ್ನು ಆರಂಭಿಸಬೇಕು. ಬೆಸ ಸ್ಥಾನಿಕ ಸೆಮಿಸ್ಟರ್‌ಗಳಿಗೆ ಬಾಕಿ ಉಳಿಯುವ ಪರೀಕ್ಷೆಗಳನ್ನು ಕೋವಿಡ್‌ ನಿಯಂತ್ರಣಕ್ಕೆ ಬಂದಮೇಲೆ ನಡೆಸಲಾಗುವುದು" ಎಂದಿದ್ದಾರೆ.


ಇದನ್ನು ಓದಿ: ಭವಿಷ್ಯದಲ್ಲಿ ಕೆಮ್ಮು, ನೆಗಡಿಯಂತೆ ಜನಸಾಮಾನ್ಯ ಸೋಂಕಾಗಲಿದೆ ಕೋವಿಡ್​ 19


ಬೆಸ ಸ್ಥಾನಿಕ ಸೆಮಿಸ್ಟರ್‌ಗಳಿಗೆ (1ನೇ, 3ನೇ, 5ನೇ, 7ನೇ ಸೆಮಿಸ್ಟರ್ ಗಳು) ಇನ್ನೂ ತರಗತಿಗಳನ್ನು ಮುಗಿಸದ ವಿಶ್ವವಿದ್ಯಾಲಯಗಳು ಆನ್‌ಲೈನ್‌ ತರಗತಿಗಳನ್ನು ಮುಂದುವರಿಸಬೇಕು. ಒಂದೊಮ್ಮೆ ಈ ತರಗತಿಗಳು ಮುಗಿದ ಮೇಲೂ ಕೋವಿಡ್‌ನಿಂದಾಗಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗದಿದ್ದರೆ, ತಕ್ಷಣವೇ ಮುಂದಿನ ಸಮ ಸ್ಥಾನಿಕ ಸೆಮಿಸ್ಟರ್‌ಗಳಿಗೆ ಆನ್‌ಲೈನ್‌ ತರಗತಿಗಳನ್ನು ಶುರುಮಾಡಬೇಕು. ಇದರಿಂದಾಗಿ ಬಾಕಿ ಉಳಿಯುವ ಬೆಸ ಸ್ಥಾನಿಕ ಸೆಮಿಸ್ಟರ್‌ಗಳ ಪರೀಕ್ಷೆಗಳನ್ನು ಕೋವಿಡ್‌ ನಿಯಂತ್ರಣಕ್ಕೆ ಬಂದಮೇಲೆ ನಡೆಸಲಾಗುತ್ತದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.


ಪರಿಸ್ಥಿತಿಯ ಬೆಳವಣಿಗೆಗಳಿಗೆ ಅನುಗುಣವಾಗಿ ಕುಲಪತಿಗಳು ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನೊಂದಿಗೆ ಸಮಾಲೋಚನೆ ನಡೆಸಲಾಗುವುದು. ಅಲ್ಲಿ ಹೊರಹೊಮ್ಮುವ ನಿರ್ಧಾರಗಳನ್ನು ಆಧರಿಸಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪಾಲಿಸಬೇಕಾದ ಮಾರ್ಗದರ್ಶಿ ಸೂತ್ರಗಳನ್ನು ಹಾಗೂ ವೇಳಾಪಟ್ಟಿಗಳನ್ನು ರೂಪಿಸಲಾಗುವುದು ಎಂದು ಅವರು ಹೇಳಿದ್ದಾರೆ.

Published by:Seema R
First published: