• Home
 • »
 • News
 • »
 • coronavirus-latest-news
 • »
 • ರೈತರ ಹೊಲದಲ್ಲಿ ಬಿತ್ತನೆ ಕಾರ್ಯ ಮಾಡಿದ ಚಾಮರಾಜನಗರ ಜಿಲ್ಲಾಧಿಕಾರಿ

ರೈತರ ಹೊಲದಲ್ಲಿ ಬಿತ್ತನೆ ಕಾರ್ಯ ಮಾಡಿದ ಚಾಮರಾಜನಗರ ಜಿಲ್ಲಾಧಿಕಾರಿ

ಜಿಲ್ಲಾಧಿಕಾರಿ ಡಾ. ಎಂ ಆರ್​ ರವಿ

ಜಿಲ್ಲಾಧಿಕಾರಿ ಡಾ. ಎಂ ಆರ್​ ರವಿ

ಗುಂಡ್ಲುಪೇಟೆ ತಾಲೂಕಿನ ವಿವಿದೆಡೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ರೈತರ ಹೊಲಗಳಿಗೆ ತೆರಳಿ ಬಿತ್ತನೆ ಕಾರ್ಯ ಮಾಡುವ ಮೂಲಕ ರೈತರನ್ನು ಹುರಿದುಂಬಿಸಿದರು.

 • Share this:

  ಚಾಮರಾಜನಗರ(ಏ.27): ಹಸಿರು ವಲಯದಲ್ಲಿ ಲಾಕ್ ಡೌನ್ ಸಡಿಲಿಕೆ ಆಗಿರುವುದರಿಂದ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಸ್ವತ: ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಇಂದು ರೈತರ ಜಮೀನಿಗಿಳಿದು ಬಿತ್ತನೆ ಕಾರ್ಯ ಮಾಡುವ ಮೂಲಕ ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ

  ಸರ್ಕಾರ ಕೃಷಿ ಚಟುವಟಿಕೆಗಳಿಗೆ ಲಾಕ್ ಡೌನ್ ನಿಂದ ವಿನಾಯಿತಿ ನೀಡಿರುವುದರ ಜೊತೆಗೆ ಮಳೆರಾಯನೂ ಕೃಪೆ ತೋರಿದ್ದು, ರೈತರು ಉಳುಮೆಗೆ ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ಗುಂಡ್ಲುಪೇಟೆ ತಾಲೂಕಿನ ವಿವಿದೆಡೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ರೈತರ ಹೊಲಗಳಿಗೆ ತೆರಳಿ ಬಿತ್ತನೆ ಕಾರ್ಯ ಮಾಡುವ ಮೂಲಕ ರೈತರನ್ನು ಹುರಿದುಂಬಿಸಿದರು.

  ಇದೇ ವೇಳೆ ರೈತರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ತೊಂದರೆಯಾಗದಂತೆ ಕ್ರಮವಹಿಸಲಾಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಪ್ರಮಾಣದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡಿ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.

  ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ಯಾರು ಅಡ್ಡಿಪಡಿಸದಂತೆ ಸೂಚಿಸಲಾಗಿದೆ. ರೈತರು ಜಿಲ್ಲೆ ಹಾಗೂ ಹೊರ ರಾಜ್ಯಗಳ ಮಾರುಕಟ್ಟೆಗೆ ಕೃಷಿ ಉತ್ಪನ್ನ ಕೊಂಡೊಯ್ಯಲು ಯಾವುದೇ ತೊಂದರೆಯಾಗದಂತೆ ನಿಗಾವಹಿಸಲಾಗಿದೆ. ರೈತರು ಯಾವುದೇ ಸಂದರ್ಭದಲ್ಲೂ ದೃತಿಗಡಬಾರದು. ರೈತರೊಡನೆ ಸರ್ಕಾರವಿದೆ ಎಂದು ಜಿಲ್ಲಾಧಿಕಾರಿಗಳು ರೈತರಲ್ಲಿ ನೈತಿಕ ಸ್ಥೈರ್ಯ ತುಂಬುವ ಕಾರ್ಯ ಮಾಡಿದರು.

  ಗಡಿನಾಡು ಚಾಮರಾಜನಗರ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಆರಂಭವಾಗಿದೆ. ಜನವರಿಯಿಂದ ಇವತ್ತಿನವರೆಗೆ ವಾಡಿಕೆ ಮಳೆ 68.2 ಮಿಲಿ ಮೀಟರ್ ಇದ್ದು, ಈಗ 68.9 ಮಿಲಿ ಮೀಟರ್ ನಷ್ಟು ಮಳೆಯಾಗಿದೆ . ಪೂರ್ವ ಮುಂಗಾರಿನಲ್ಲಿ 55 ಸಾವಿರ ಹೆಕ್ಟೇರ್ ಪ್ರದೇಶ ಸೇರಿದಂತೆ ಒಟ್ಟು 1.20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು ಇದಕ್ಕೆ ಬೇಕಾಗುವ ಜೋಳ, ಹೆಸರು, ಉದ್ದು, ಅಲಸಂದೆ, ತೊಗರಿ, ನೆಲಗಡಲೆ, ಸೂರ್ಯಕಾಂತಿ ಸೇರಿದಂತೆ 3448 ಕ್ವಿಂಂಟಾಲ್ ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದ್ದು, ಈಗಾಗಲೇ 2483 ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆಯಾಗಿದೆ. ಯೂರಿಯಾ, ಡಿಎಪಿ, ಎಂಒಪಿ ಸೇರಿದಂತೆ 6794 ಮೆಟ್ರಿಕ್ ಟನ್ ರಸಗೊಬ್ಬರವನ್ನು ಸಹ ದಾಸ್ತಾನು ಮಾಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ಚಂದ್ರಕಲಾ ಹೇಳುತ್ತಾರೆ.

  ಇದನ್ನೂ ಓದಿ : Coronavirus In Mysore: ಮೈಸೂರಿನಲ್ಲಿ ಕೊರೋನಾ ಸೋಂಕಿನಿಂದ ಐವರು ಗುಣಮುಖ; ಈವರೆಗೂ 43 ಮಂದಿ ಡಿಸ್ಚಾರ್ಜ್

  ಒಟ್ಟಾರೆ ಲಾಕ್ ಡೌನ್ ಇದ್ದರೂ ಬಿತ್ತನೆ ಬೀಜ, ರಸಗೊಬ್ಬರಕ್ಕೆ ಯಾವ ಕೊರೆತೆಯೂ ಆಗದಂತೆ ಜಿಲ್ಲಾಡಳಿತ ನಿಗಾವಹಿಸಿದೆ. ಇದೇ ವೇಳೆ ವರುಣನು ಕೃಪೆ ತೋರಿರುವುದರಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಚಾಲನೆ ದೊರತಿದೆ.

  (ವರದಿ : ಎಸ್.ಎಂ.ನಂದೀಶ್ )

  First published: