• Home
  • »
  • News
  • »
  • coronavirus-latest-news
  • »
  • ಸೀಲ್​ಡೌನ್​​ ನಿಯಮ ಉಲ್ಲಂಘಿಸುವವರನ್ನು ಪತ್ತೆ ಹಚ್ಚಲು ಬಂತು ಡ್ರೋನ್​; ದಾವಣಗೆರೆ ಜಿಲ್ಲಾಡಳಿತದಿಂದ ಹೊಸ ಕ್ರಮ

ಸೀಲ್​ಡೌನ್​​ ನಿಯಮ ಉಲ್ಲಂಘಿಸುವವರನ್ನು ಪತ್ತೆ ಹಚ್ಚಲು ಬಂತು ಡ್ರೋನ್​; ದಾವಣಗೆರೆ ಜಿಲ್ಲಾಡಳಿತದಿಂದ ಹೊಸ ಕ್ರಮ

ದಾವಣೆಗೆರೆಯಲ್ಲಿ ಬಳಕೆ ಮಾಡಲಾ ಡ್ರೋನ್​

ದಾವಣೆಗೆರೆಯಲ್ಲಿ ಬಳಕೆ ಮಾಡಲಾ ಡ್ರೋನ್​

ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ತಂಡದೊಂದಿಗೆ ಸೀಲ್‍ಡೌನ್ ಪ್ರದೇಶವಾದ ಜಾಲಿನಗರದಲ್ಲಿ ಡ್ರೋನ್ ಪರಿವೀಕ್ಷಣೆ ಮತ್ತು ಸರ್ವೇಕ್ಷಣೆ ಕಾರ್ಯ ನಡೆಯಿತು. ಈ ಮೂಲಕ ನಿಯಮ ಉಲ್ಲಂಘನೆ ತಡೆಗೆ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

  • Share this:

ದಾವಣಗೆರೆ: ಕೊರೊನಾ ವೈರಸ್ ಸೋಂಕು ನಿಯಂತ್ರಣ ಮಾಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ 5 ಕಂಟೈನ್‍ಮೆಂಟ್ ಝೋನ್‍ಗಳನ್ನು ಈಗಾಗಲೇ ಸೀಲ್‍ಡೌನ್ ಮಾಡಲಾಗಿದೆ. ಅಲ್ಲಿನ ಜನರ ಸ್ಥಿತಿಗತಿ ಪರಿಶೀಲಿಸಲು ಜಿಲ್ಲಾಡಳಿತದಿಂದ ಡ್ರೋನ್‍ಗಳ ಬಳಕೆ ಮಾಡುತ್ತಿರುವುದು ವಿಶೇಷ.


ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ತಂಡದೊಂದಿಗೆ ಸೀಲ್‍ಡೌನ್ ಪ್ರದೇಶವಾದ ಜಾಲಿನಗರದಲ್ಲಿ ಡ್ರೋನ್ ಪರಿವೀಕ್ಷಣೆ ಮತ್ತು ಸರ್ವೇಕ್ಷಣೆ ಕಾರ್ಯ ನಡೆಯಿತು. ಭೇಟಿ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿ, “ಜನರು ಗುಂಪು ಸೇರುವುದನ್ನು ನಿಯಂತ್ರಿಸಲು ಹಾಗೂ ಅವರಿಗೆ ಎಚ್ಚರಿಸಲು ಡ್ರೋನ್ ಬಳಕೆ ಮಾಡಲಾಗಿದೆ. ಜನರು ತಮ್ಮ ಮನೆಗಳಲ್ಲಿ ಇದ್ದಾರಾ ಅಥವಾ ರಸ್ತೆಯಲ್ಲಿ ಅನಾವಶ್ಯಕವಾಗಿ ಸಂಚರಿಸುತ್ತಿದ್ದಾರ, ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡಿರುವುದರ ಬಗ್ಗೆ ಪರಿಶೀಲಿಸಲು ಡ್ರೋನ್ ಕ್ಯಾಮೆರಾದ ಸಹಾಯ ತೆಗೆದುಕೊಂಡಿದ್ದೇವೆ,” ಎಂದರು.


“ಅತ್ಯಂತ ಹೆಚ್ಚಿನ ರೆಸಲ್ಯೂಷನ್ ಇರುವಂತಹ ಈ ಡ್ರೋನ್ ಕ್ಯಾಮೆರಾದ ಸಹಾಯದಿಂದ ಇಲ್ಲಿಯೇ ನಿಂತು ಎಲ್ಲೆಡೆ ಏನೇನು ನಡೆಯುತ್ತಿದೆ ಎಂದು ತಿಳಿಯಬಹುದಾಗಿದೆ. ಎಲ್ಲ ರೀತಿಯ ಉನ್ನತ ಮಟ್ಟದ ತಂತ್ರಜ್ಞಾನ ಹಾಗೂ ಮಾನವ ಸಂಪನ್ಮೂಲ ಬಳಸಿಕೊಳ್ಳುವ ಮೂಲಕ ಹಾಗೂ ಜಿಲ್ಲೆಯಲ್ಲಿ ಇರುವಂತಹ ವೈದ್ಯಕೀಯ ಸೌಲಭ್ಯದೊಂದಿಗೆ ನಾವು ವ್ಯವಸ್ಥಿತವಾಗಿ ಕೊರೊನಾ ನಿಯಂತ್ರಣ ಮಾಡುತ್ತೇವೆ ಎನ್ನುವ ವಿಶ್ವಾಸ ನಮ್ಮಲಿದೆ. ಮುಂಬರುವ ದಿನಗಳಲ್ಲಿ ಈ ಕುರಿತು ಏನು ಫಲಿಂತಾಂಶ ಬರುತ್ತದೆ ಎನ್ನುವುದನ್ನು ಹಂಚಿಕೊಳ್ಳುತ್ತೇನೆ,” ಎಂದರು ಮಹಾಂತೇಶ.


ಇದನ್ನೂ ಓದಿ: ವಿಶಾಖಪಟ್ಟಣಂ ರಾಸಾಯನಿಕ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ; 10 ಸಾವು, 5,000ಕ್ಕೂ ಹೆಚ್ಚು ಜನ ಅಸ್ವಸ್ಥ


“ನಿನ್ನೆ 12 ಪಾಸಿಟಿವ್ ಕೇಸ್ ಬಂದಿದೆ. ಹೀಗಾಗಿ ಕಂಟೈನ್‍ಮೆಂಟ್ ಝೋನ್‍ನಲ್ಲಿ ಎಲ್ಲರನ್ನೂ ತಪಾಸಣೆಗೆ ಒಳಪಡಿಸುತ್ತಿದ್ದೇವೆ. ಅದರಲ್ಲಿ ಹೆಚ್ಚಿನವು ಜಾಲಿನಗರಕ್ಕೆ ಸಂಬಂಧಪಟ್ಟಿವೆ. ಇನ್ನೊಂದು ಪ್ರಕರಣ ಕೆಟಿಜೆ ನಗರಕ್ಕೆ ಸಂಬಂಧಿಸಿದ್ದಾಗಿದ್ದು ಅಲ್ಲಿ ಹೊಸ ಕಂಟೈನ್‍ಮೆಂಟ್ ಜೋನ್ ಮಾಡಲಾಗಿದೆ. ಈ ಜಾಲಿನಗರದ ಎಲ್ಲಾ ಪ್ರಕರಣಗಳು ಪಿ-556 ಅವರಿಗೆ ಸಂಬಂಧಿಸಿದೆ. ಈ ಹಿನ್ನೆಲೆಯಲ್ಲಿ ತಪಾಸಣೆಯಲ್ಲಿ ಆಶಾ ಕಾರ್ಯಕರ್ತೆಯರ ಜೊತೆ ಆರೋಗ್ಯಾಧಿಕಾರಿಗಳನ್ನು ನೇಮಿಸಲಾಗಿದ್ದು, ಇವರು ಪಿಪಿಇ ಕಿಟ್ ಧರಿಸಿ ಎಲ್ಲ ಮನೆಗಳ ಪ್ರತಿ ಸದಸ್ಯರ ಆರೋಗ್ಯ ತಪಾಸಣೆ ಮಾಡುತ್ತಾರೆ,” ಎಂದು ಮಾಹಿತಿ ನೀಡಿದರು ಮಹಾಂತೇಶ.


“ಆರೋಗ್ಯ ತಪಾಸಣೆಗಾಗಿ ಇಷ್ಟು ದಿನ ನಾವು ಮನೆ ಮನೆಗೆ ಸರ್ವೇಕ್ಷಣಾ ತಂಡ ಕಳುಹಿಸಿದಾಗ ಅವರು ಮನೆಯ ಎದುರಿಗೆ ಹೋಗಿ ಕೇಳಿಕೊಂಡು ಬರುತ್ತಿದ್ದರು. ಈ ಸಂದರ್ಭದಲ್ಲಿ ಬಹಳಷ್ಟು ಜನರು ತಮಗೆ ಇದ್ದಂತಹ ಜ್ವರ, ಕೆಮ್ಮು, ನೆಗಡಿ ವಿಷಯ ಹೇಳದೆ ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದರು. ಅಕಸ್ಮಾತಾಗಿ ಹೇಳಿದಲ್ಲಿ ನಮ್ಮನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ ಜೊತೆಗೆ ಕ್ವಾರಂಟೈನ್‍ಲ್ಲಿ ಇಡುತ್ತಾರೆ ಎನ್ನುವ ದೃಷ್ಟಿಯಿಂದ ಮರೆ ಮಾಚುತ್ತಿದ್ದರು. ಆದರೆ ಈಗ ವೈದ್ಯರೇ ತೆರಳುತ್ತಿರುವುದರಿಂದ ರೋಗ ಮುಚ್ಚಿಡಲು ಸಾಧ್ಯವಿಲ್ಲ ಎಂಬುದು ಮಹಾಂತೇಶ ಅಭಿಪ್ರಾಯ.


ಇದನ್ನೂ ಓದಿ: ದಾವಣಗೆರೆಯಲ್ಲಿ ಕೊರೋನಾಗೆ ಮತ್ತೊಂದು ಬಲಿ; ಕರ್ನಾಟಕದಲ್ಲಿ 700 ದಾಟಿದ ಸೋಂಕಿತರ ಸಂಖ್ಯೆ


ಜಾಲಿನಗರ ಸಂಪೂರ್ಣ ಸ್ವಚ್ಛ ಕಾರ್ಯ:


“ಅತಿ ಹೆಚ್ಚು ಪ್ರಕರಣಗಳಿರುವ ಜಾಲಿನಗರವನ್ನು ಸಂಪೂರ್ಣ ಸ್ವಚ್ಛ ಮಾಡಬೇಕಾಗಿದೆ. ಇಲ್ಲಿ ಇರುವಂತಹ ಎಲ್ಲರ ಆರೋಗ್ಯ ತಪಾಸಣೆ ಮಾಡಬೇಕೆಂಬ ಉದ್ದೇಶದಿಂದ ಎಸ್‍ಪಿ, ಜಿಲ್ಲಾ ಶಸ್ತ್ರ ಚಿಕಿತ್ಸಕರು,  ಜಿಲ್ಲಾ ಸರ್ವೇಕ್ಷಣಾಧಿಕಾರಿ, ಡಿಎಚ್‍ಒ, ಎಡಿಸಿ ಎಲ್ಲರೂ ಸೇರಿ ಒಂದು ಯೋಜನೆ ತಯಾರಿಸಿದ್ದು, ಅದರಂತೆ ಇಂದು ಕಾರ್ಯಗತಗೊಳಿಸಲಾಗಿದೆ. ಆರೋಗ್ಯ ತಪಾಸಣೆಗಾಗಿ 20 ತಂಡ ಮಾಡಲಾಗಿದೆ. ಆ ಪ್ರತಿ ತಂಡಕ್ಕೆ ವಿಶೇಷ ಆರೋಗ್ಯಾಧಿಕಾರಿಯನ್ನು ನೇಮಿಸಲಾಗಿದೆ. ಇವರು ಪ್ರತಿ ಮನೆಗೆ ಹೋಗುತ್ತಾರೆ. ಎಲ್ಲ ರಸ್ತೆಯ ಪ್ರತಿ ಮನೆ ಒಳಗೊಂಡು, ಈ ಏರಿಯಾದೊಳಗೆ ಇರುವಂತಹ ಸುಮಾರು 2000 ಮನೆಗಳ ಸದಸ್ಯರನ್ನು ತಪಾಸಣೆ ನಡೆಸುತ್ತಾರೆ. ಇವತ್ತು ಎಷ್ಟು ಸಾಧ್ಯವೋ ಅಷ್ಟು ಮಾಡಿ ಉಳಿದಿದ್ದು ನಾಳೆಗೆ ಮುಗಿಸುವ ಯೋಜನೆ ಇದೆ,” ಮಹಾಂತೇಶ ಮಾಹಿತಿ ನೀಡಿದರು.


“ಎಸ್.ಎಂ.ಕೃಷ್ಣ ನಗರದ ಅರ್ಬನ್ ಹೆಲ್ತ್ ಸೆಂಟರ್‍ನಲ್ಲಿ ಗಂಟಲು ದ್ರವ ಮಾದರಿ ಸಂಗ್ರಹಕ್ಕೆ ವ್ಯವಸ್ಥೆ ಮಾಡಲಾಗಿದೆ. ಗಂಟಲು ದ್ರವ ಮಾದರಿ ಸಂಗ್ರಹಕ್ಕೆ ಬಹಳಷ್ಟು ದೂರ ಹೋಗುವ ಅವಶ್ಯಕತೆ ಇಲ್ಲ. ಈ ಹಿನ್ನೆಲೆಯಲ್ಲಿ ಗರಿಷ್ಟ ಮಟ್ಟದಲ್ಲಿ ಸ್ಯಾಂಪಲ್ ಸಂಗ್ರಹಿಸಿ ನಾವು ಪರೀಕ್ಷೆಗೆ ಕಳುಹಿಸುವ ಮೂಲಕ ಹೆಚ್ಚಿನ ರೀತಿಯಲ್ಲಿ ಸೋಂಕು ಹರಡದಂತೆ ತಡೆಗಟ್ಟುವ ದೃಷ್ಟಿಯಿಂದ ಕ್ರಮ ಕೈಗೊಳ್ಳಲಾಗಿದೆ,” ಎಂದರು.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, “ಈಗಾಗಲೇ 5 ಕಂಟೈನ್‍ಮೆಂಟ್ ಜೋನ್‍ಗಳನ್ನು ಸೀಲ್‍ಡೌನ್ ಮಾಡಲಾಗಿದೆ. ಎಲ್ಲ ಕಡೆಯಲ್ಲಿಯೂ ಸ್ಟೀಲ್ ಬ್ಯಾರಿಕೇಡ್ ಬಳಸಿ ನಿಯಂತ್ರಣ ಮಾಡಲಾಗಿದೆ. ಈ ಕಂಟೈನ್‍ಮೆಂಟ್ ಜೋನ್‍ಗೆ ಸಂಬಂಧಿಸಿದಂತೆ ತಲಾ ಐವರು ಕಮಾಂಡರ್ ಮತ್ತು ಇನ್‍ಸ್ಪೆಕ್ಟರ್ ನೇಮಕ ಮಾಡಲಾಗಿದೆ. ಈ ಐವರು ಇನ್‍ಸ್ಪೆಕ್ಟರ್‍ಗಳು ಆ ಏರಿಯಾದಲ್ಲಿ ಬಿಗಿ ಬಂದೊಬಸ್ತ್ ಮಾಡಿಕೊಳ್ಳುತ್ತಾರೆ. ಆ ಏರಿಯಾಕ್ಕೆ ಹೋಗಲು ಮತ್ತು ಬರಲು ಒಂದೇ ಗೇಟ್ ತೆರೆಯಲಾಗಿದ್ದು, ಅಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಜೊತೆಗೆ ಜನರಿಗೆ ಬೇಕಾದಂತಹ ಎಲ್ಲಾ ಅಗತ್ಯ ವಸ್ತು ಹಾಗೂ ಔಷಧಗಳನ್ನು ಅಲ್ಲಿಯೇ ಸರಬರಾಜು ಮಾಡುವಂತೆ ನೋಡಿಕೊಳ್ಳಲಾಗಿದೆ,” ಎಂದರು


ಈ 5 ಕಂಟೈನ್‍ಮೆಂಟ್ ಜೋನ್‍ಗಳಲ್ಲಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ಸರ್ವೇಕ್ಷಣಾಧಿಕಾರಿಗಳು ಮನೆ ಮನೆಗೆ ಹೋಗಿ ಸಾರಿ (SARI) ಹಾಗೂ ಐಎಲ್‍ಐ ಲಕ್ಷಣ ಇರುವವರನ್ನು ಪತ್ತೆ ಮಾಡಿ ಅವರ ಗಂಟಲು ದ್ರವ ಸಂಗ್ರಹಿಸಿ ಚಿಕಿತ್ಸೆ ಹಾಗೂ ಐಸೋಲೇಟ್ ಮಾಡುವುದು ಬಹಳ ಮುಖ್ಯವಾದ ಕೆಲಸವಾಗಿದೆ. ಜೊತೆಗೆ ಕೆಲವರು ಜ್ವರ ಇದ್ದವರು ಮಾತ್ರೆ ತೆಗೆದುಕೊಂಡು ಮನೆಯಲ್ಲಿಯೇ ಇರುವ ಬಗ್ಗೆ ಮಾಹಿತಿ ಬಂದಿದೆ. ಅದರ ಆಧಾರದ ಮೇಲೆ ಈ ಕಾರ್ಯಚರಣೆ ಮಾಡಲಾಗಿದ್ದು, ಆ ಮೂಲಕ ಲಕ್ಷಣ ಇರುವವರನ್ನು ನಾವು ಚಿಕಿತ್ಸೆಗೆ ಒಳಪಡಿಸಲು ಪ್ರಯತ್ನ ಮಾಡುತ್ತಿದ್ದೇವೆ ಎಂದರು.


ನಾಗರಿಕರ ಸಲಹೆ ಮೇರೆಗೆ ಸಮಯ ಜಾರಿ:


ಅನಾವಶ್ಯಕ ಸಂಚರಿಸದೆ ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆವರೆಗಿನ ಅವಧಿಯಲ್ಲಿ ತಮಗೆ ಏನು ಬೇಕು ಅದನ್ನು ತೆಗೆದುಕೊಂಡು ಮನೆಯಲ್ಲಿಯೇ ಇರಬೇಕು. ಇಡೀ ದಿನ ಸಮ್ಮನೆ ಸುತ್ತಾಡುವುದನ್ನು ನಿಯಂತ್ರಿಸಲು ಬಹಳ ಅಚ್ಚುಕಟ್ಟಾಗಿ ಜಿಲ್ಲೆಯ ನಾಗರಿಕರ ಸಲಹೆ ಮೇರೆಗೆ ಈ ಸಮಯ ಜಾರಿ ಮಾಡಲಾಗಿದೆ. ಸೋಂಕು ಹರಡವುದನ್ನು ನಿಯಂತ್ರಿಸುವ ವಿಶ್ವಾಸವಿದೆ. ಈ ಹಿನ್ನೆಲೆಯಲ್ಲಿ ಗಂಭೀರ ಪರಿಸ್ಥಿತಿ ಆಗಿರುವುದರಿಂದ ಇನ್ನೂ 20 ದಿನ ನಾಗರಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.   ಸೊಂಕಿನ ಮೂಲದ ಕುರಿತು ಮುಖ್ಯವಾಗಿ ಹಾಸನ, ಚಿತ್ರದುರ್ಗ, ಬಳ್ಳಾರಿ ಹಾಗೂ ಬಾಗಲಕೋಟೆಗೆ ಗೂಡ್ಸ್ ವಾಹನದಲ್ಲಿ ಹೋಗಿ ಬಂದಂತಹವರ ಮಾಹಿತಿ ಸಿಕ್ಕಿದೆ. ಈರುಳ್ಳಿ ತುಂಬಿದ ಲಾರಿಗಳಲ್ಲಿ ಹೋಗಿ ಬಂದವರಿಗೆ ಲಕ್ಷಣ ಕಂಡುಬಂದಿದೆ. ಅದನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಇನ್ನೂ ಸ್ಪಲ್ಪ ಸಮಯ ಬೇಕಾಗಿದೆ. ವೈದ್ಯಾಧಿಕಾರಿಗಳ ಸಹಾಯದಿಂದ ವಿಚಾರಣೆ ಮಾಡಿ ಕೂಡಲೇ ಪತ್ತೆ ಹಚ್ಚಲಾಗುವುದು ಎಂದು ಹನುಮಂತರಾಯ ಮಾಹಿತಿ ಒದಗಿಸಿದರು.

Published by:Rajesh Duggumane
First published: