ಮಂಗಳೂರು (ಮೇ 15: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದಎ. ದುಬೈನಿಂದ ಬಂದ ಭಾರತೀಯರ ಮೂಲಕ ಕಡಲ ನಗರಿಗೆ ಕೊರೋನಾ ಮತ್ತೆ ದಾಳಿ ಮಾಡಿದೆ. ಇಂದು ಒಂದೇ ದಿನ 16 ಪ್ರಕರಣಗಳು ಕಾಣಿಸಿಕೊಳ್ಳುವ ಮೂಲಕ ಕರಾವಳಿಯ ಜನರನ್ನು ಕೊರೋನಾ ಕಂಗೆಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆ ಕೊರೋನಾ ಆರ್ಭಟಕ್ಕೆ ನಲುಗಿ ಹೋಗಿದೆ.
ಮಂಗಳೂರಿನಲ್ಲಿ ಒಂದೇ ದಿನ 16 ಪ್ರಕರಣಗಳು ಕಾಣಿಸಿಕೊಂಡಿದ್ದು, ದುಬೈನಿಂದ ವಿಮಾನದಲ್ಲಿ ಬಂದ ಪ್ರಯಾಣಿಕರಲ್ಲಿ ಕೊರೋನಾ ಕಂಡುಬಂದಿದೆ. 15 ದುಬೈ ಪ್ರಯಾಣಿಕರು ಮತ್ತು ಸುರತ್ಕಲ್ ಮೂಲದ ಓರ್ವ ಮಹಿಳೆಯಲ್ಲಿ ಕೊರೋನಾ ಕಾಣಿಸಿಕೊಂಡಿದೆ. ಮೇ 12 ರಂದು ವಂದೇ ಭಾರತ್ ಮಿಷನ್ನಡಿ ದುಬೈನಿಂದ ಮಂಗಳೂರಿಗೆ ವಿಶೇಷ ವಿಮಾನದಲ್ಲಿ ಬಂದ 179 ಪ್ರಯಾಣಿಕರ ಪೈಕಿ ಮಂಗಳೂರಿನ 15 ಮಂದಿಯಲ್ಲಿ ಕೊರೋನಾ ಕಾಣಿಸಿಕೊಂಡಿದೆ. ಮೇ 13 ರಂದು ಪ್ರಯಾಣಿಕರ ಸ್ವಾಬ್ ಟೆಸ್ಟ್ ಮಾಡಲಾಗಿದ್ದು, ಪರೀಕ್ಷೆಯ ವರದಿಯಲ್ಲಿ 15 ಮಂದಿಗೆ ಕೊರೋನಾ ಇರುವುದು ಖಚಿತವಾಗಿದೆ.
ಇದನ್ನೂ ಓದಿ: ವಿಶೇಷ ರೈಲಿನಲ್ಲಿ ಹೊರ ರಾಜ್ಯದಿಂದ ಕರ್ನಾಟಕಕ್ಕೆ ಬರುವವರಿಗೆ 14 ದಿನಗಳ ಕ್ವಾರಂಟೈನ್ ಕಡ್ಡಾಯ; ಪ್ರಕಟಣೆ ಹೊರಡಿಸಿದ ಸರ್ಕಾರ
ಒಂದೇ ಕುಟುಂಬದ ಮೂವರಲ್ಲಿ ಕೊರೋನಾ ಕಾಣಿಸಿಕೊಂಡಿದ್ದು, 45 ವರ್ಷದ ಗಂಡ, 33 ವರ್ಷದ ಹೆಂಡತಿ ಮತ್ತು 6 ವರ್ಷದ ಮಗುವಿಗೆ ಕೊರೋನಾ ಸೋಂಕು ತಗುಲಿದೆ. ಸೋಂಕು ಕಂಡು ಬಂದ 15 ಮಂದಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. 179 ಮಂದಿಯ ಪೈಕಿ ಮಂಗಳೂರಿನ 10 ಹೊಟೇಲ್ ಗಳಲ್ಲಿ 125 ಮಂದಿ ಕ್ವಾರೆಂಟೈನ್ನಲ್ಲಿದ್ದಾರೆ. ಅದರಲ್ಲಿ ಈಗ 15 ಮಂದಿಗೆ ಕೊರೋನಾ ಸೋಂಕು ಕಂಡುಬಂದಿರುವುದರಿಂದ ಸೋಂಕಿತರ ಪ್ರಥಮ ಸಂಪರ್ಕದವರನ್ನು ಜಿಲ್ಲಾಡಳಿತ ಪರಿಶೀಲನೆ ಮಾಡುತ್ತಿದೆ. ವಿಮಾನದಲ್ಲಿ ಸೋಂಕಿತರ ಪಕ್ಕದ ಸೀಟ್ ಗಳಲ್ಲಿ ಕುಳಿತವರ ಅಬ್ಸರ್ವೇಷನ್ ಮಾಡಲು ಆರೋಗ್ಯ ಇಲಾಖೆ ತಯಾರಿ ನಡೆಸಿದೆ.
ದುಬೈನಲ್ಲಿಲ್ಲದ ಕೊರೋನಾ ಈಗ ಪತ್ತೆಯಾಗಿದ್ದು ಹೇಗೆ?:
ದುಬೈನಲ್ಲಿ ವಿಮಾನ ಏರುವ ಪ್ರಯಣಿಕರನ್ನು ಕೇವಲ ಸ್ಕ್ರೀನಿಂಗ್ ಮಾತ್ರ ಮಾಡಲಾಗುತ್ತದೆ. ಥರ್ಮಲ್ ಸ್ಕ್ಯಾನಿಂಗ್ ಮತ್ತು ಸ್ಕ್ರೀನಿಂಗ್ ಮಾಡಿ ಪ್ರಯಾಣಿಕರನ್ನು ಕಳುಹಿಸಿಕೊಡಲಾಗುತ್ತದೆ. ಈವೇಳೆ ಕೊರೋನಾ ಲಕ್ಷಣಗಳು ಕಂಡುಬರದಿದ್ದರೆ ಅವರಿಗೆ ಪ್ರಯಾಣಿಸಲು ಅನುಮತಿ ನೀಡಲಾಗುತ್ತದೆ. ಆದರೆ, ಅಲ್ಲಿ ಪ್ರಯಾಣಿಕರ ಸ್ವಾಬ್ ಟೆಸ್ಟ್ (ಗಂಟಲು ದ್ರವ ಪರೀಕ್ಷೆ) ಮಾಡುವುದಿಲ್ಲ. ಆದ್ದರಿಂದ ಮಂಗಳೂರಿನಲ್ಲಿ ಸ್ವಾಬ್ ಟೆಸ್ಟ್ ವೇಳೆ ಕೊರೋನಾ ಪ್ರಕರಣಗಳು ಕಂಡುಬರುತ್ತಿದೆ. ಹಾಗಾಗಿ ಕೊರೊನಾ ನಿಯಂತ್ರಣ ಮಾಡುವುದೇ ಜಿಲ್ಲಾಡಳಿತಕ್ಕೆ ಹರಸಾಹಸವಾಗಿದೆ.
ಇದನ್ನೂ ಓದಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಮೂರು ದಿನ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರೀ ಮಳೆ ಸಾಧ್ಯತೆ
ಈ ನಡುವೆ ಮೇ 18 ರಂದು ಮತ್ತೊಂದು ವಿಮಾನ ದುಬೈನಿಂದ ಮಂಗಳೂರಿಗೆ ಬರಲಿದ್ದು, 171 ಮಂದಿ ಪ್ರಯಾಣಿಕರು ಈ ವಿಮಾನದಲ್ಲಿ ಆಗಮಿಸಲಿದ್ದಾರೆ. ಹಾಗಾಗಿ ದುಬೈನಿಂದ ಬರುವ ಭಾರತೀಯರನ್ನು ಅಲ್ಲೇ ಸಂಪೂರ್ಣವಾಗಿ ಆರೋಗ್ಯ ತಪಾಸಣೆ ಮಾಡಿ ಭಾರತಕ್ಕೆ ಬರಲು ಅವಕಾಶ ಮಾಡಿಕೊಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದ ಮೂಲಕ ಮನವಿ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಸಿಂಧು ರೂಪೇಶ್ ಹೇಳಿದ್ದಾರೆ.
![dakshina kannada dc sundhu roopesh]()
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ರೂಪೇಶ್
ಸೋಂಕಿತ ಮಹಿಳೆಯ ಟ್ರಾವೆಲ್ ಹಿಸ್ಟರಿ ಕೇಳಿದ್ರೆ ಶಾಕ್ ಆಗ್ತೀರ:
ಇಂದು ಪತ್ತೆಯಾದ ಮತ್ತೊಂದು ಕೊರೋನಾ ಪಾಸಿಟಿವ್ ರೋಗಿ ಸುರತ್ಕಲ್ ಮೂಲದ ಮಹಿಳೆಯ ಟ್ರಾವೆಲ್ ಹಿಸ್ಟರಿ ಜಿಲ್ಲಾಡಳಿತವನ್ನು ಬೆಚ್ಚಿಬೀಳುವಂತೆ ಮಾಡಿದೆ. ಉಸಿರಾಟದ ಸಮಸ್ಯೆಯಿದ್ದ ಮಹಿಳೆ ಸುರತ್ಕಲ್, ಮಂಗಳೂರು ಭಾಗದಲ್ಲಿ ಸುತ್ತಾಡಿ, ಮಂಗಳೂರಿನ ಕುಂಟಿಕಾನ ಬಳಿ ಇರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆ ಮಹಿಳೆಗೆ ಗಂಟಲುದ್ರವ ಪರೀಕ್ಷೆ ಮಾಡುವ ವೇಳೆ ಕೊರೋನಾ ಪಾಸಿಟಿವ್ ಇರೋದು ಪತ್ತೆಯಾಗಿದೆ. ಈಗಾಗಲೇ ಫಸ್ಟ್ ನ್ಯುರೋ ಆಸ್ಪತ್ರೆಯಿಂದ ಸುಮಾರು20 ಮಂದಿಗೆ ಕೊರೋನಾ ಸೋಂಕು ಹರಡಿದ್ದು, ಈಗ ಸುರತ್ಕಲ್ ಮೂಲಕದ ಸೋಂಕಿತ ಮಹಿಳೆ ಇನ್ನೊಂದು ಪ್ರಸಿದ್ಧ ಆಸ್ಪತ್ರೆಗೆ ಹೋಗಿರುವುದರಿಂದ ಮತ್ತೆ ಆಸ್ಪತ್ರೆ ಗಳಿಂದಲೇ ಕಂಟಕ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ, ಮಹಿಳೆ ಸುತ್ತಾಡಿದ ಪ್ರದೇಶ ಮತ್ತು ಸುರತ್ಕಲ್ ಭಾಗದ ಗುಡ್ಡೆಕೊಪ್ಪ ಪ್ರದೇಶದ ಮೇಲೆ ಜಿಲ್ಲಾಡಳಿತ ಕಣ್ಗಾವಲು ಇರಿಸಿದೆ.
ವರ್ಗಾವಣೆಯಾಗ್ತಾರಾ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ?:
ಇಂಥದ್ದೊಂದು ಮಾತು ಸದ್ಯ ಅಧಿಕಾರಿ ವರ್ಗದಲ್ಲಿ ಕೇಳಿಬರುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 34 ಕೇಸ್ ಗಳಿದ್ದು, ಇಂದಿನ 16 ಹೊಸ ಪ್ರಕರಣದ ಮೂಲಕ ಕೊರೋನಾ ಕೇಸ್ ಅರ್ಧ ಶತಕ ದಾಖಲಿಸಿದೆ. ಜಿಲ್ಲೆಯಲ್ಲಿ ಕೊರೋನಾ ಆರ್ಭಟ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದು, ಕೊರೋನಾ ನಿಯಂತ್ರಣ ಮಾಡಲು ಜಿಲ್ಲಾಡಳಿತಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಜಿಲ್ಲಾಧಿಕಾರಿ ಸಿಂಧು ರೂಪೇಶ್ ಅವರನ್ನು ವರ್ಗಾವಣೆ ಮಾಡುವ ಚಿಂತನೆಯನ್ನು ರಾಜ್ಯ ಸರ್ಕಾರ ಮಾಡುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ