news18-kannada Updated:April 27, 2020, 4:06 PM IST
ಕಾರ್ಮಿಕರು
ಕಾರವಾರ(ಏ.27): ಕಳೆದ ಒಂದು ತಿಂಗಳಿಂದ ಕೆಲಸ ಕಾರ್ಯವಿಲ್ಲದೆ, ಇದ್ದ ಜಾಗದಲ್ಲೇ ಆಶ್ರಯ ಪಡೆದು, ಒಂದು ಹೊತ್ತಿನ ಊಟಕ್ಕಾಗಿ ಚಡಪಡಿಸುತ್ತಿದ್ದ ಕಾರ್ಮಿಕರು ಈಗ ನಿಟ್ಟುಸಿರು ಬಿಟ್ಟಿದ್ದಾರೆ. ನೆನ್ನೆಯಿಂದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸೇರಿ ಜಿಲ್ಲೆಯಾದ್ಯಂತ ಕಾಮಗಾರಿಗಳು ಆರಂಭವಾಗಿದ್ದು, ಕೆಲಸ ಕಾರ್ಯದಲ್ಲಿ ಕಾರ್ಮಿಕರು ತೊಡಗಿಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ನಿಂದ ಇಷ್ಟು ದಿನ ಸ್ಥಗಿತವಾಗಿದ್ದ ಕಾಮಗಾರಿಗಳು ಮತ್ತು ರಸ್ತೆ ಕಾಮಗಾರಿಗಳು ಮತ್ತೆ ಆರಂಭಗೊಂಡಿವೆ. ಎರಡನೇ ಹಂತದ ಲಾಕ್ ಡೌನ್ನಲ್ಲಿ ಸಿವಿಲ್ ಕಾಮಗಾರಿಗಳಿಗೆ ವಿನಾಯಿತಿ ನೀಡಿದ ಹಿನ್ನೆಲೆಯಲ್ಲಿ ಕೆಲಸ ಕಾರ್ಯವಿಲ್ಲದೆ ಮನೆಯಲ್ಲೆ ಇದ್ದ ಕಾರ್ಮಿಕರು ಹೊಸ ಹುರುಪಿನಲ್ಲಿ ಮತ್ತೆ ಕಾಮಗಾರಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66 ರ ಪ್ಲೈ ಓವರ್ ಕಾಮಗಾರಿ ಆರಂಭಗೊಂಡಿದ್ದು ಸಮಸ್ಯೆಯಲ್ಲಿದ್ದ ವಲಸೆ ಕಾರ್ಮಿಕರು ಮತ್ತೆ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಇಷ್ಟು ದಿನ ಮನೆಯಲ್ಲೆ ಇದ್ದು ಭವಿಷ್ಯದ ಚಿಂತೆಯಲ್ಲಿದ್ದ ಕಾರ್ಮಿಕರಿಗೆ ಈಗ ಕಾಮಗಾರಿ ಆರಂಭವಾಗಿದ್ದು ಹೊಸ ಆಸೆ ಚಿಗುರಿದಂತಾಗಿದೆ.
ಇದನ್ನೂ ಓದಿ :
Coronavirus In Mysore: ಮೈಸೂರಿನಲ್ಲಿ ಕೊರೋನಾ ಸೋಂಕಿನಿಂದ ಐವರು ಗುಣಮುಖ; ಈವರೆಗೂ 43 ಮಂದಿ ಡಿಸ್ಚಾರ್ಜ್
ಇನ್ನು, ಜಿಲ್ಲೆಯಲ್ಲಿ ವಲಸೆ ಮತ್ತು ಸ್ಥಳೀಯ ಕಾರ್ಮಿಕರ ಸ್ಥಿತಿ ಶೋಚನೀಯವಾಗಿತ್ತು. ಜಿಲ್ಲೆಯ ಕಾರ್ಮಿಕರು ಕೆಲಸ ಕಾರ್ಯವಿಲ್ಲದೆ ಒಂದು ಹೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದರು. ಆದರೆ, ನಿನ್ನೆಯಿಂದ ಆರಂಭವಾದ ಕಾಮಗಾರಿಯಿಂದ ಕಾರ್ಮಿಕರ ಬದುಕಿನಲ್ಲಿ ಹೊಸ ಆಸೆ ಮೂಡಿಸಿದ್ದು, ಲಾಕ್ ಡೌನ್ನಲ್ಲಿ ಸಂಸಾರ ಸಾಗಿಸುವ ಆಸೆ ಚಿಗುರೊಡೆದಿದೆ. ಸಾಮಾಜಿಕ ಅಂತರ ಕಾಪಾಡಿ ಜಿಲ್ಲೆಯಲ್ಲಿ ಎಲ್ಲ ಕಾರ್ಮಿಕರು ಪಾಲ್ಗೊಂಡಿದ್ದು ಕೆಲಸ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಲಾಕ್ ಡೌನ್ನಿಂದ ಬೇಸತ್ತಿದ್ದ ಕಾರ್ಮಿಕ ವಲಯದಲ್ಲಿ ಈಗ ಕೊಂಚ ನಿರಾಳತೆ ಕಂಡು ಬಂದಿದೆ. ಮುಂದೆ ಮತ್ತೆ ಸಮಸ್ಯೆ ಆಗದೆ ದುಡಿಯುವ ಕೈಗೆ ತಕ್ಕ ಸಂಬಳ ಸಿಗಲಿ ಎನ್ನೋದೆ ನಮ್ಮ ಆಶಯ.
(ವರದಿ : ದರ್ಶನ್ ನಾಯ್ಕ)
First published:
April 27, 2020, 3:53 PM IST