• Home
  • »
  • News
  • »
  • coronavirus-latest-news
  • »
  • Covid-19: ಭಾರತದಲ್ಲಿ ಮತ್ತೆ ಶುರುವಾಯ್ತಾ ಕೋವಿಡ್ ನಾಲ್ಕನೇ ಅಲೆ? ಈ 5 ರಾಜ್ಯಗಳಲ್ಲಿ ಮತ್ತೆ ಪ್ರಕರಣಗಳು ಹೆಚ್ಚಳ

Covid-19: ಭಾರತದಲ್ಲಿ ಮತ್ತೆ ಶುರುವಾಯ್ತಾ ಕೋವಿಡ್ ನಾಲ್ಕನೇ ಅಲೆ? ಈ 5 ರಾಜ್ಯಗಳಲ್ಲಿ ಮತ್ತೆ ಪ್ರಕರಣಗಳು ಹೆಚ್ಚಳ

ಕೋವಿಡ್-19 ವೈರಸ್

ಕೋವಿಡ್-19 ವೈರಸ್

ಕಳೆದ ವಾರದ ಪ್ರಕರಣಗಳ ಪಾಸಿಟಿವಿಟಿ ದರದಲ್ಲಿ ಕೋವಿಡ್ -19 ಪ್ರಕರಣಗಳ ಹೆಚ್ಚಳವನ್ನು ಗಮನಿಸಿರುವ ಕೇಂದ್ರ ಸರ್ಕಾರವು ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ನಿಗಾವಹಿಸುವಂತೆ ಮತ್ತು ಅಗತ್ಯವಿದ್ದರೆ ಪೂರ್ವ ನಿಯೋಜಿತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಶುಕ್ರವಾರದಂದು ಸುಮಾರು ಐದು ರಾಜ್ಯಗಳಿಗೆ ಸಲಹೆ ನೀಡಿದೆ.

ಮುಂದೆ ಓದಿ ...
  • Share this:

ಇನ್ನೇನು ಮುಗಿತಾ ಬಂತು ಈ ಕೋವಿಡ್-19 ವೈರಸ್ (Covide-19 virus) ಹಾವಳಿ ಎಂದರೆ ಮತ್ತೆ ಮತ್ತೆ ಹೊಸ ಹೊಸ ವೈರಸ್ ರೂಪಾಂತರಗಳಿಂದ ಮತ್ತೆ ಕೋವಿಡ್ ಪ್ರಕರಣಗಳ (Cases) ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದ್ದು ಮತ್ತೆ ಕೋವಿಡ್ ಅಲೆಯ ಅನುಮಾನ ಹುಟ್ಟಿಸುವಂತಿದೆ. ಕಳೆದ ವಾರದ ಪ್ರಕರಣಗಳ ಪಾಸಿಟಿವಿಟಿ ದರದಲ್ಲಿ (Positivity rate) ಕೋವಿಡ್ -19 ಪ್ರಕರಣಗಳ ಹೆಚ್ಚಳವನ್ನು ಗಮನಿಸಿರುವ ಕೇಂದ್ರ ಸರ್ಕಾರವು ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ನಿಗಾವಹಿಸುವಂತೆ ಮತ್ತು ಅಗತ್ಯವಿದ್ದರೆ ಪೂರ್ವ ನಿಯೋಜಿತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಶುಕ್ರವಾರದಂದು ಸುಮಾರು ಐದು ರಾಜ್ಯಗಳಿಗೆ ಸಲಹೆ ನೀಡಿದೆ.


ಶುಕ್ರವಾರದಂದು 84 ದಿನಗಳ ನಂತರ ಭಾರತದಲ್ಲಿ ಒಂದೇ ದಿನದಲ್ಲಿ 4,000 ಕ್ಕಿಂತ ಹೆಚ್ಚು ಕರೋನ ವೈರಸ್ ಸೋಂಕುಗಳ ಹೊಸ ಪ್ರಕರಣಗಳು ದಾಖಲಾಗಿವೆ. ಇದು ಓಮಿಕ್ರಾನ್ ರೂಪಾಂತರದ ಅಲೆಯು ಶುರುವಾದ ಮೇಲೆ ಫೆಬ್ರವರಿ 4 ರ ನಂತರ ಮುಂಬೈ ಕೋವಿಡ್ ಪ್ರಕರಣಗಳಲ್ಲಿ ಅತಿದೊಡ್ಡ ಏರಿಕೆಯನ್ನು ಕಂಡಿದೆ ಮತ್ತು ದೆಹಲಿಯ ಅಧಿಕಾರಿಗಳು ನಗರ ಮತ್ತು ವಿಮಾನ ನಿಲ್ದಾಣದಲ್ಲಿ ಕೋವಿಡ್ -19 ನಿಯಮಗಳಿಗೆ ಕಟ್ಟುನಿಟ್ಟಾದ ಅನುಸರಣೆಯನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಇದೆಲ್ಲವೂ ನಾವು ಕೋವಿಡ್ -19 ರ ನಾಲ್ಕನೇ ಅಲೆಯತ್ತ ಸಾಗುತ್ತಿದ್ದೇವೆಯೇ ಎಂಬುದರ ಬಗ್ಗೆ ಅನುಮಾನ ಹುಟ್ಟುಹಾಕುವಂತೆ ಮಾಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.


ಸಮುದಾಯದಲ್ಲಿ ಕೋವಿಡ್ ಹರಡುವಿಕೆಯ ಬಗ್ಗೆ ಎಚ್ಚರ ಮೂಡಿಸಿದ ಕೇಂದ್ರ
ತಮಿಳುನಾಡು, ಕೇರಳ, ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಈ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದೆ ಎಂದು ಹೇಳಿರುವುದನ್ನು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಇದು ಕೋವಿಡ್ ಸೋಂಕು ಸ್ಥಳೀಯವಾಗಿ ಹರಡುವ ಸಾಧ್ಯತೆಯನ್ನು ಸೂಚಿಸುತ್ತಿದೆ ಎಂದು ಒತ್ತಿ ಹೇಳಿದ್ದಾರೆ. "ಆದ್ದರಿಂದ, ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಇಲ್ಲಿಯವರೆಗೆ ಗಳಿಸಿದ ನಿಯಂತ್ರಣವನ್ನು ಕಳೆದು ಕೊಳ್ಳದೆ ಸಾರ್ವಜನಿಕರ ಆರೋಗ್ಯದ ಮೇಲೆ ಈ ಅಪಾಯ ಮತ್ತೆ ದಾಳಿ ಮಾಡದಂತೆ ಒಂದು ಮೌಲ್ಯಮಾಪನ ಆಧಾರಿತ ವಿಧಾನವನ್ನು ಅನುಸರಿಸುವ ಅಗತ್ಯವಿದೆ" ಎಂದು ಭೂಷಣ್ ಅವರು ಹೇಳಿದ್ದಾರೆ.


ಕಳೆದ ಮೂರು ತಿಂಗಳುಗಳಲ್ಲಿ ಭಾರತದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಮತ್ತು ಗಮನಾರ್ಹ ಕುಸಿತ ಕಂಡು ಬಂದಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆದಾಗ್ಯೂ, ಈಗ ಮತ್ತೆ ಪ್ರಕರಣಗಳಲ್ಲಿ ಸ್ವಲ್ಪ ಏರಿಕೆ ಕಂಡು ಬರುತ್ತಿದೆ. ಮೇ 27ಕ್ಕೆ ಕೊನೆಗೊಂಡ ವಾರದಲ್ಲಿ 15,708 ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು, ಇದು ಜೂನ್ 3ಕ್ಕೆ ಕೊನೆಗೊಂಡ ವಾರದಲ್ಲಿ 21,055 ಕ್ಕೆ ಏರಿದೆ ಎಂದು ಹೇಳಲಾಗುತ್ತಿದೆ.


ಅಲ್ಲದೆ, ಮೇ 27ಕ್ಕೆ ಕೊನೆಗೊಂಡ ವಾರದಲ್ಲಿ ಸಾಪ್ತಾಹಿಕ ಪಾಸಿಟಿವಿಟಿ ಶೇಕಡಾ 0.52 ರಿಂದ ಜೂನ್ 3ಕ್ಕೆ ಕೊನೆಗೊಂಡ ವಾರದಲ್ಲಿ ಶೇಕಡಾ 0.73ಕ್ಕೆ ಏರಿಕೆಯಾಗಿದೆ.


ಇದನ್ನೂ ಓದಿ: Dengue Fever: ಹೊಸ ಪ್ರಭೇದದ ಡೆಂಗ್ಯೂ ವೈರಸ್ ಪತ್ತೆ! ಇದನ್ನು ತಡೆಗಟ್ಟುವುದು ಹೇಗೆ?


ಈ ರಾಜ್ಯಗಳಲ್ಲಿ ಕೋವಿಡ್ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ನೋಡಿ?


1. ತಮಿಳುನಾಡು
ಕೇಂದ್ರದ ಪತ್ರದ ಪ್ರಕಾರ, ಮೇ 27 ರಂದು ಕೊನೆಗೊಂಡ ವಾರದಲ್ಲಿ 335 ಕೋವಿಡ್ ಪ್ರಕರಣಗಳು ವರದಿಯಾಗಿದ್ದವು. ಜೂನ್ 3ಕ್ಕೆ ಕೊನೆಗೊಂಡ ವಾರದಲ್ಲಿ ಈ ಸಂಖ್ಯೆ 659ಕ್ಕೆ ಏರಿಕೆಯಾಗಿದೆ ಎಂದು ತಮಿಳುನಾಡು ವರದಿ ಮಾಡಿದೆ. ಕಳೆದ ವಾರ ರಾಜ್ಯದಲ್ಲಿ ಪಾಸಿಟಿವಿಟಿ ಪ್ರಮಾಣ ಶೇಕಡಾ 0.4 ರಷ್ಟು ಇದ್ದದ್ದು, ಅದು ಈಗ 0.8ಕ್ಕೆ ಏರಿಕೆಯಾಗಿದೆ. ಜಿಲ್ಲಾ ವ್ಯಾಪಿ ಕೋವಿಡ್ -19 ಪರಿಸ್ಥಿತಿಗಳನ್ನು ವಿಶ್ಲೇಷಿಸುವಾಗ, ಚೆನ್ನೈ ಮತ್ತು ಚೆಂಗಲ್ಪಟ್ಟು ಎಂಬ ಎರಡು ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿ ದಾಖಲಾಗಿರುವುದು ಕಂಡು ಬಂದಿದೆ.


2. ತೆಲಂಗಾಣ
ತೆಲಂಗಾಣದಲ್ಲಿ ಮೇ 27 ರಂದು ಕೊನೆಗೊಂಡ ವಾರದಲ್ಲಿ 287 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದವು, ಅದೇ ಜೂನ್ 3ಕ್ಕೆ ಕೊನೆಗೊಂಡ ವಾರದಲ್ಲಿ 375 ಹೊಸ ಪ್ರಕರಣಗಳು ವರದಿ ಆಗಿದ್ದವು. ಇದು ಜೂನ್ 3ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ಹೊಸ ಪ್ರಕರಣಗಳಲ್ಲಿ ಶೇಕಡಾ 1.78 ರಷ್ಟಿದೆ. ಕಳೆದ ವಾರದ ಪಾಸಿಟಿವಿಟಿ ದರವು ಶೇಕಡಾ 0.4 ರಿಂದ ಶೇಕಡಾ 0.5ಕ್ಕೆ ಏರಿದೆ.


3. ಕೇರಳ
ಮೇ 27ರಂದು ಕೊನೆಗೊಂಡ ವಾರದಲ್ಲಿ ಕೇರಳ ರಾಜ್ಯದಲ್ಲಿ 4,139 ಹೊಸ ಪ್ರಕರಣಗಳು ಪತ್ತೆಯಾಗಿದ್ದವು, ಜೂನ್ 3ಕ್ಕೆ ಕೊನೆಗೊಂಡ ವಾರದಲ್ಲಿ ಆ ಸಂಖ್ಯೆ 6,556ಕ್ಕೆ ಏರಿದೆ. ಕಳೆದ ವಾರದಲ್ಲಿ ರಾಜ್ಯದಲ್ಲಿ ಪಾಸಿಟಿವಿಟಿ ದರವು ಶೇಕಡಾ 5.2 ರಿಂದ 7.8ಕ್ಕೆ ಏರಿಕೆಯಾಗಿದೆ ಎಂದು ಭೂಷಣ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.


4. ಕರ್ನಾಟಕ
ಕರ್ನಾಟಕದಲ್ಲಿ ಮೇ 27 ರಂದು ಕೊನೆಗೊಂಡ ವಾರದಲ್ಲಿ 1,003 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದವು. ಜೂನ್ 3ಕ್ಕೆ ಕೊನೆಗೊಂಡ ವಾರದಲ್ಲಿ 1,446 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಕಳೆದ ವಾರದಲ್ಲಿದ್ದ ಪಾಸಿಟಿವಿಟಿ ದರವು 0.8 ರಿಂದ ಶೇಕಡಾ 1.1ಕ್ಕೆ ಏರಿಕೆಯಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿವೆ.


5. ಮಹಾರಾಷ್ಟ್ರ
ಇನ್ನೂ ಮಹಾರಾಷ್ಟ್ರದ ವಿಷಯಕ್ಕೆ ಬಂದರೆ ಮೇ 27 ರಂದು ಕೊನೆಗೊಂಡ ವಾರದಲ್ಲಿ 2,471 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದವು. ಜೂನ್ 3ಕ್ಕೆ ಕೊನೆಗೊಂಡ ವಾರದಲ್ಲಿ 4,883 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದು ಜೂನ್ 3ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ಹೊಸ ಪ್ರಕರಣಗಳಲ್ಲಿ ಶೇಕಡಾ 23.19 ರಷ್ಟಿದೆ. ಕಳೆದ ವಾರದಲ್ಲಿದ್ದ ಪಾಸಿಟಿವಿಟಿ ದರವು ಶೇಕಡಾ 1.5 ರಿಂದ 3.1ಕ್ಕೆ ಏರಿಕೆಯಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ: Vulvar Cancer: ಹೆಣ್ಣುಮಕ್ಕಳನ್ನು ಕಾಡುವ ಈ ವಿಚಿತ್ರ ಕ್ಯಾನ್ಸರ್ ಬಗ್ಗೆ ಎಲ್ಲರೂ ತಿಳಿದಿರಲೇಬೇಕು


ಮುಂಬೈ ಉಪನಗರ, ಮುಂಬೈ, ಥಾಣೆ, ಪುಣೆ, ರಾಯಗಡ್ ಮತ್ತು ಪಾಲ್ಘರ್ ಈ ಆರು ಜಿಲ್ಲೆಗಳು ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳವನ್ನು ದಾಖಲಿಸಿವೆ.


ಜುಲೈನಲ್ಲಿ ನಾಲ್ಕನೇ ಅಲೆ ಶುರುವಾಗಬಹುದೆಂದು ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸಿದ ಬಿಎಂಸಿ
ಏತನ್ಮಧ್ಯೆ, ಕೋವಿಡ್ -19 ರ ಸಂಭಾವ್ಯ ನಾಲ್ಕನೇ ಅಲೆಯು ವೇಗ ಪಡೆದುಕೊಳ್ಳಬಹುದೆಂದು ಕೋವಿಡ್-19 ಪರೀಕ್ಷೆಯನ್ನು ಹೆಚ್ಚಿಸುವಂತೆ ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಶುಕ್ರವಾರ ನಗರದ ಆರೋಗ್ಯ ಇಲಾಖೆಗಳಿಗೆ ನಿರ್ದೇಶನ ನೀಡಿದೆ.


"ಮುಂಬೈನಲ್ಲಿ ಕಳೆದ ಕೆಲವು ದಿನಗಳಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ವೈದ್ಯಕೀಯ ತಜ್ಞರು ನೀಡಿದ ಸಂಭಾವ್ಯ ನಾಲ್ಕನೇ ಅಲೆಯ ಎಚ್ಚರಿಕೆ ಮತ್ತು ಮಳೆಗಾಲದಲ್ಲಿ ನೀರಿನಿಂದ ಹರಡುವ ರೋಗಗಳ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಮುನ್ಸಿಪಲ್ ಆಯುಕ್ತ ಡಾ.ಇಕ್ಬಾಲ್ ಸಿಂಗ್ ಚಾಹಲ್ ಸಂಬಂಧಪಟ್ಟ ಎಲ್ಲಾ ಇಲಾಖೆಗಳನ್ನು ಸಜ್ಜುಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ" ಎಂದು ನಾಗರಿಕ ಸಂಸ್ಥೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.


ಹೊಸ ಅಲೆಯನ್ನು ನಿರೀಕ್ಷಿಸಿ, ಬಿಎಂಸಿ ಅಧಿಕಾರಿಗಳು ಶುಕ್ರವಾರ ಎಲ್ಲ ಅಧಿಕಾರಿಗಳನ್ನು ಭೇಟಿ ಮಾಡಿ, ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಲು, ಅನೇಕ ಪಾಸಿಟಿವ್ ಪ್ರಕರಣಗಳು ವರದಿಯಾಗಿರುವ ಹೌಸಿಂಗ್ ಸೊಸೈಟಿಗಳಲ್ಲಿ ಪರೀಕ್ಷಾ ಶಿಬಿರಗಳನ್ನು ನಡೆಸಲು ಮತ್ತು ವಾರ್ಡ್ ವಾರ್ ರೂಮ್ ಗಳನ್ನು ಮರು ಸಜ್ಜುಗೊಳಿಸುವಂತೆ ಒತ್ತಾಯಿಸಿದರು ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.


ಐಐಟಿ ಕಾನ್ಪುರದ ತಜ್ಞರು ಜುಲೈನಲ್ಲಿ ನಾಲ್ಕನೇ ಅಲೆ ಭಾರತಕ್ಕೆ ಅಪ್ಪಳಿಸಲಿದೆ ಎಂದು ಭವಿಷ್ಯ ನುಡಿದಿರುವುದರಿಂದ, ನಗರವು ಅತ್ಯಂತ ಜಾಗರೂಕರಾಗಿರಬೇಕು ಎಂದು ಬಿಎಂಸಿ ಮುಖ್ಯಸ್ಥರು ಸಭೆಯಲ್ಲಿ ಹೇಳಿದರು. ಮುಂದಿನ ದಿನಗಳಲ್ಲಿ ದಿನಕ್ಕೆ 8,000 ಪರೀಕ್ಷೆಗಳ ಬದಲು 30,000 ರಿಂದ 40,000 ಪರೀಕ್ಷೆಗಳನ್ನು ಮಾಡಲು ನಿರ್ಧರಿಸಲಾಗಿದೆ. ಕೋವಿಡ್ -19 ಪರೀಕ್ಷೆಯನ್ನು ಹೆಚ್ಚಿಸುವಂತೆ ಮಹಾರಾಷ್ಟ್ರ ಆರೋಗ್ಯ ಇಲಾಖೆ ಶುಕ್ರವಾರ ಜಿಲ್ಲಾ ಮತ್ತು ನಾಗರಿಕ ಅಧಿಕಾರಿಗಳಿಗೆ ಸೂಚಿಸಿದೆ.


ಜಿಲ್ಲಾಧಿಕಾರಿಗಳು, ಮುನ್ಸಿಪಲ್ ಕಾರ್ಪೊರೇಷನ್ ಗಳು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರದೀಪ್ ವ್ಯಾಸ್, ಎಲ್ಲಾ ಜಿಲ್ಲೆಗಳು ಆರ್‌ಟಿಪಿಸಿಆರ್ ಪರೀಕ್ಷೆಗಳ ಪ್ರಮಾಣವು ಕನಿಷ್ಠ ಶೇಕಡಾ 60ರಷ್ಟಿದೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.


ಈ ಆತಂಕಕ್ಕೆ ಬಿಎ.4 ಮತ್ತು ಬಿ.ಎ.5 ಎಂಬ ಹೊಸ ರೂಪಾಂತರಗಳು ಕಾರಣವೇ?
ದೇಶವು ಒಮಿಕ್ರಾನ್ ಉಪ ರೂಪಾಂತರಗಳಾದ ಬಿಎ.4 ಮತ್ತು ಬಿಎ.5 ಅನ್ನು ವರದಿ ಮಾಡಲು ಪ್ರಾರಂಭಿಸಿದ ನಂತರ, ವಿಶ್ವದಾದ್ಯಂತ ಕೋವಿಡ್ -19 ಪ್ರಕರಣಗಳು ಈ ಉಪ ರೂಪಾಂತರಗಳಿಂದ ಹೆಚ್ಚಾಗಿವೆ ಎಂದು ಹೇಳಲಾಗುತ್ತಿತ್ತು. ಆದರೆ ವೈರಾಲಜಿಸ್ಟ್ ಗಳು ಮತ್ತು ತಜ್ಞರು ಸೋಂಕಿನ ಬಗ್ಗೆ ಅತಿಯಾದ ಕಾಳಜಿ ವಹಿಸುವುದರ ವಿರುದ್ಧ ಎಚ್ಚರಿಕೆ ನೀಡಿದರು. ಜಾಗರೂಕರಾಗಿರುವುದು ನಿರ್ಣಾಯಕವಾಗಿದೆ, ಆದರೆ ಹೆಚ್ಚಿನ ಜನಸಂಖ್ಯೆಯು ಲಸಿಕೆ ಹಾಕಿಸಿಕೊಂಡಿರುವುದರಿಂದ ಅಥವಾ ಸೋಂಕಿಗೆ ಒಳಗಾಗಿರುವುದರಿಂದ ಇನ್ನೂ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.


ಇದನ್ನೂ ಓದಿ: Heart Attack: ಹೃದಯಾಘಾತದಿಂದ ಹಠಾತ್ ಸಾವನ್ನಪ್ಪುವುದನ್ನು ತಡೆಯುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ


ಖ್ಯಾತ ವೈರಾಲಜಿಸ್ಟ್ ಡಾ.ಶಾಹಿದ್ ಜಮೀಲ್ ಅವರು ಸುದ್ದಿ ಮಾಧ್ಯಮದ ಜೊತೆಗೆ ಮಾತನಾಡಿ "ನಾವು ಖಂಡಿತವಾಗಿಯೂ ಜಾಗರೂಕರಾಗಿರಬೇಕು. ಒಬ್ಬ ವ್ಯಕ್ತಿಯು ವೈರಸ್ ಗೆ ಒಡ್ಡಿಕೊಂಡರೆ, ಅವರು ಕೋವಿಡ್ ಸೋಂಕಿಗೆ ಒಳಗಾಗಬಹುದು ಆದರೆ ಇದು ತೀವ್ರವಾಗುವುದಿಲ್ಲ. ಇದಕ್ಕೆ ಮುಖ್ಯ ಕಾರಣ ದೇಶದಲ್ಲಿ ಹೆಚ್ಚಿನ ಜನರು ವೈರಸ್ ಗೆ ಒಡ್ಡಿ ಕೊಂಡಿದ್ದಾರೆ ಅಥವಾ ಲಸಿಕೆ ಪಡೆದಿದ್ದಾರೆ" ಎಂದು ಅವರು ಹೇಳಿದರು.


ಹಾಗಾದರೆ ಮುಂದಿನ ಹಾದಿ ಯಾವುದು?
ಆರೋಗ್ಯ ಸಚಿವಾಲಯವು ಏಪ್ರಿಲ್ 8, 2022 ರ ಪತ್ರದಲ್ಲಿ ವಿವಿಧ ಚಟುವಟಿಕೆಗಳಲ್ಲಿ ಸಡಿಲಿಕೆ, ಪರೀಕ್ಷೆ ಮತ್ತು ಕಣ್ಗಾವಲು, ಕ್ಲಿನಿಕಲ್ ಮ್ಯಾನೇಜ್ಮೆಂಟ್, ಲಸಿಕೆ ನೀಡುವುದು ಮತ್ತು ಸಮುದಾಯ ತೊಡಗಿಸಿಕೊಳ್ಳುವಿಕೆಯಂತಹ ಹಸ್ತಕ್ಷೇಪದ ವ್ಯೂಹಾತ್ಮಕ ವಲಯಗಳಿಗಾಗಿ ಉಲ್ಲೇಖಿಸಿದ ನಿರ್ಬಂಧನೆಗಳನ್ನು ಅನುಸರಿಸಲು ರಾಜ್ಯಗಳಿಗೆ ಕೇಳಿದೆ.


ಕೋವಿಡ್ -19 ರ ತ್ವರಿತ ಮತ್ತು ಪರಿಣಾಮಕಾರಿ ನಿರ್ವಹಣೆಗಾಗಿ ಅಗತ್ಯ ಕ್ರಮಗಳ ಅನುಷ್ಠಾನ ಮತ್ತು ಮೇಲ್ವಿಚಾರಣೆಯನ್ನು ಮುಂದುವರಿಸಲು ಮತ್ತು ಸಚಿವಾಲಯ ಹೊರಡಿಸಿದ ವಿವಿಧ ಸಲಹೆಗಳೊಂದಿಗೆ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಅವರಿಗೆ ಸೂಚಿಸಲಾಗಿದೆ.


ಪರೀಕ್ಷೆ ಮಾಡುವುದು, ಸೋಂಕಿತರನ್ನು ಮತ್ತು ಅವರ ಸಂಪರ್ಕಿತರನ್ನು ಟ್ರ್ಯಾಕ್ ಮಾಡುವುದು ಮತ್ತು ಅವರಿಗೆ ಚಿಕಿತ್ಸೆ ನೀಡುವುದು ಮತ್ತು ಕೋವಿಡ್ ನ ಸೂಕ್ತ ನಡವಳಿಕೆಗೆ ಅನುಸರಣೆಯ ಐದು ಪಟ್ಟು ಕಾರ್ಯತಂತ್ರವನ್ನು ಅನುಸರಿಸಬೇಕು, ಜೊತೆಗೆ ಹೊಸ ಕೋವಿಡ್ -19 ಪ್ರಕರಣಗಳ ಕ್ಲಸ್ಟರ್ ಗಳನ್ನು ಮೇಲ್ವಿಚಾರಣೆ ಮತ್ತು ಮಾರ್ಗಸೂಚಿಗಳ ಪ್ರಕಾರ ಸಾಕಷ್ಟು ಪರೀಕ್ಷೆ ನಡೆಸಬೇಕು ಎಂದು ಭೂಷಣ್ ಪತ್ರದಲ್ಲಿ ತಿಳಿಸಿದ್ದಾರೆ.


ಸೋಂಕಿನ ಹರಡುವಿಕೆಯ ಆರಂಭಿಕ ಎಚ್ಚರಿಕೆ ಸಂಕೇತಗಳನ್ನು ಪತ್ತೆ ಹಚ್ಚಲು ಮತ್ತು ಅಂತರರಾಷ್ಟ್ರೀಯ ಪ್ರಯಾಣಿಕರ ನಿಗದಿತ ಮಾದರಿಗಳಿಗೆ ಜೀನೋಮಿಕ್ ಸೀಕ್ವೆನ್ಸಿಂಗ್, ಸೆಂಟಿನೆಲ್ ಸೈಟ್ ಗಳಿಂದ ಮಾದರಿಗಳನ್ನು ಸಂಗ್ರಹಿಸುವುದು ಮತ್ತು ಪ್ರಕರಣಗಳ ಸ್ಥಳೀಯ ಕ್ಲಸ್ಟರ್ ಗಳನ್ನು ಸಂಗ್ರಹಿಸಲು ನಿಯಮಿತವಾಗಿ ಎಲ್ಲಾ ಆರೋಗ್ಯ ಸೌಲಭ್ಯಗಳಲ್ಲಿ ಇನ್ಫ್ಲುಯೆಂಜಾ ತರಹದ ಕಾಯಿಲೆಗಳ ಪ್ರಕರಣಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುವತ್ತ ಗಮನ ಹರಿಸಬೇಕು ಎಂದು ತಿಳಿಸಲಾಗಿದೆ.


ಮಾಸ್ಕ್ ಹಾಕದೇ ಇರುವವರ ವಿರುದ್ಧ ಕಠಿಣ ಕ್ರಮ: ದೆಹಲಿ ಹೈಕೋರ್ಟ್
ದೆಹಲಿ ಹೈಕೋರ್ಟ್ ಶುಕ್ರವಾರ ವಿಮಾನ ನಿಲ್ದಾಣಗಳು ಮತ್ತು ವಿಮಾನಗಳಲ್ಲಿ ಮಾಸ್ಕ್ ಮತ್ತು ಕೈ ನೈರ್ಮಲ್ಯದ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದು ಕೊಳ್ಳಬೇಕೆಂದು ಹೇಳಿದೆ. ಕೋವಿಡ್ -19 ಸಾಂಕ್ರಾಮಿಕ ರೋಗವು ಇನ್ನೂ ಸಂಪೂರ್ಣವಾಗಿ ಕಡಿಮೆಯಾಗಿಲ್ಲ ಎಂದು ಅಭಿಪ್ರಾಯಪಟ್ಟಿದೆ.


ಇದನ್ನೂ ಓದಿ:  Explained: ಮಕ್ಕಳಲ್ಲಿ ಕಂಡು ಬರುವ ಕಣ್ಣಿನ ಕಾಯಿಲೆ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಷಯಗಳು ಇಲ್ಲಿವೆ


ಈ ನಿಯಮಗಳನ್ನು ಉಲ್ಲಂಘಿಸುವಂತಹ ಎಲ್ಲಾ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಮತ್ತು ದಂಡ ವಿಧಿಸಬೇಕು ಹಾಗೂ ಅವರನ್ನು ‘ನೋ-ಫ್ಲೈ’ ಪಟ್ಟಿಯಲ್ಲಿ ಇರಿಸಬೇಕು ಎಂದು ಹೇಳಿದ್ದಲ್ಲದೆ ನಿಯಮಗಳ ಅನುಸರಣೆಯನ್ನು ಜಾರಿಗೊಳಿಸಲು ಸಾಕಷ್ಟು ಪ್ರತಿರೋಧವನ್ನು ಪರಿಚಯಿಸುವುದು ಅತ್ಯಗತ್ಯ ಎಂದು ಹೈಕೋರ್ಟ್ ಹೇಳಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಸೇರಿದಂತೆ ಅಧಿಕಾರಿಗಳು ಸ್ಥಳದಲ್ಲಿ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬರುವಂತೆ ನೋಡಿಕೊಳ್ಳಬೇಕು ಎಂದು ಹೈಕೋರ್ಟ್ ಹೇಳಿದೆ.

Published by:Ashwini Prabhu
First published: