Covid Vaccine - ಕೋವಿಡ್ ಲಸಿಕೆ ತಯಾರಿಕೆಗೆ ಆತುರ ಇಲ್ಲ; ಸುರಕ್ಷತೆ, ಗುಣಮಟ್ಟ ಮುಖ್ಯ: ಭಾರತ್ ಬಯೋಟೆಕ್

ಆತುರ ಮಾಡಿ ತಪ್ಪು ಲಸಿಕೆ ತಯಾರಿಸಿ ದೇಶಕ್ಕೆ ಕೆಟ್ಟ ಹೆಸರು ತರುವುದಿಲ್ಲ. ಅತ್ಯುತ್ತಮ ಮಾನದಂಡಗಳನ್ನ ಅನುಸರಿಸಿ ಬಹಳ ಸುರಕ್ಷಿತವಾದ ಮತ್ತು ಉತ್ತಮ ಗುಣಮಟ್ಟದ ಲಸಿಕೆಯನ್ನ ತಯಾರಿಸುವುದು ನಮ್ಮ ಉದ್ದೇಶ ಎಂದಿದ್ದಾರೆ ಭಾರತ್ ಬಯೋಟೆಕ್ ಸಂಸ್ಥೆ ಮುಖ್ಯಸ್ಥರು.

news18
Updated:August 10, 2020, 5:49 PM IST
Covid Vaccine - ಕೋವಿಡ್ ಲಸಿಕೆ ತಯಾರಿಕೆಗೆ ಆತುರ ಇಲ್ಲ; ಸುರಕ್ಷತೆ, ಗುಣಮಟ್ಟ ಮುಖ್ಯ: ಭಾರತ್ ಬಯೋಟೆಕ್
ಕೋವಿಡ್ ಲ್ಯಾಬ್
  • News18
  • Last Updated: August 10, 2020, 5:49 PM IST
  • Share this:
ಚೆನ್ನೈ(ಆ. 10): ಭಾರತದಲ್ಲಿ ಕೆಲ ಸಂಸ್ಥೆಗಳು ಪ್ರತ್ಯೇಕವಾಗಿ ಲಸಿಕೆ ತಯಾರಿಸುತ್ತಿವೆ. ಅಂಥ ಸಂಸ್ಥೆಗಳಲ್ಲಿ ಹೈದರಾಬಾದ್​ನ ಭಾರತ್ ಬಯೋಟೆಕ್ ಸಂಸ್ಥೆ ಕೂಡ ಒಂದಾಗಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ (ಐಸಿಎಂಆರ್) ಹಾಗೂ ನ್ಯಾಷನಲ್ ಇನ್ಸ್​ಟಿಟ್ಯೂಟ್ ಆಫ್ ವೈರಾಲಜಿ ಸಂಸ್ಥೆಗಳೊಂದಿಗಿನ ಸಹಯೋಗದಲ್ಲಿ ಭಾರತ್ ಬಯೋಟೆಕ್ ತಯಾರಿಸುತ್ತಿರುವ ಕೋವ್ಯಾಕ್ಸಿನ್ ಲಸಿಕೆಯ ಕ್ಲಿನಿಕಲ್ ಟ್ರಯಲ್ ಎರಡನೇ ಹಂತಕ್ಕೆ ಕಾಲಿಡುತ್ತಿದೆ. 30 ದಿನಗಳ ಹಿಂದೆ ಪ್ರಾರಂಭವಾದ ಮೊದಲ ಹಂತದ ಕ್ಲಿನಿಕಲ್ ಟ್ರಯಲ್ ಯಶಸ್ವಿಯಾಗಿ ಮುಗಿದಿದೆ. ಈ ಸಂದರ್ಭದಲ್ಲಿ ಮಾತನಾಡಿದ ಭಾರತ್ ಬಯೋಟೆಕ್ ಸಂಸ್ಥೆಯ ಛೇರ್ಮನ್ ಕೃಷ್ಣ ಏಲ್ಲಾ ಅವರು, ಲಸಿಕೆ ತಯಾರಿಸಲು ಅಪರಿಮಿತ ಒತ್ತಡ ಇದ್ದರೂ ಸುರಕ್ಷತೆ ಮತ್ತು ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ಧಾರೆ.

‘ಕೋವಿಡ್-19 ಎಂಡ್​ಗೇಮ್ ಸೀನೇರಿಯೋಸ್’ ವಿಚಾರವಾಗಿ ಚೆನ್ನೈ ಇಂಟರ್​ನ್ಯಾಷನಲ್ ಸೆಂಟರ್​ನ ಸದಸ್ಯರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡುತ್ತಿದ್ದ ಭಾರತ್ ಬಯೋಟೆಕ್ ಇಂಟರ್​ನ್ಯಾಷನಲ್ ಕಂಪನಿಯ ಎಂಡಿಯೂ ಆದ ಕೃಷ್ಣ ಏಲ್ಲಾ ಅವರು, ತಪ್ಪು ವ್ಯಾಕ್ಸಿನ್ ತಯಾರಿಸಿ ಹೆಚ್ಚು ಜನರನ್ನು ಕೊಲ್ಲವಂತಹ ಸ್ಥಿತಿ ಬರದಂತೆ ಎಚ್ಚರ ವಹಿಸುತ್ತೇವೆ ಎಂದು ತಿಳಿಸಿದ್ದಾರೆ.

ಲಸಿಕೆ ಯಾವಾಗ ಪೂರ್ಣಗೊಳ್ಳಬಹುದು ಎಂಬ ಪ್ರಶ್ನೆಗೆ ಅವರು, ಅತ್ಯುಚ್ಚಮ ರೀತಿಯಲ್ಲಿ ಕ್ಲಿನಿಕಲ್ ರೀಸರ್ಚ್ ಮಾಡಬೇಕು. ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಸಮುದಾಯಗಳು ಗಮನಿಸುತ್ತಿರುತ್ತಾರೆ. ಇದು ದೇಶಕ್ಕೆ ಹಾಗೂ ನಮಗೆ ಪ್ರತಿಷ್ಠೆಯ ವಿಚಾರ. ಸಂಶೋಧನೆಗೆ ಮಹತ್ವ ಕಡಿಮೆ ಮಾಡುವುದಿಲ್ಲ. ಅತ್ಯುತ್ತಮ ಗುಣಮಟ್ಟದ ವ್ಯಾಕ್ಸಿನ್ ತಯಾರಿಸುತ್ತೇವೆ ಎಂದು ಹೇಳಿದ್ಧಾರೆ.

ಇದನ್ನೂ ಓದಿ: Pranab Mukherjee: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಕೊರೋನಾ ಪಾಸಿಟಿವ್​​

ಭಾರತದಲ್ಲಿರುವ ಲಸಿಕೆ ತಯಾರಿಕೆ ಉದ್ಯಮವು ಯೂರೋಪ್ ಮತ್ತು ಅಮೆರಿಕದಲ್ಲಿರುವುದಕ್ಕಿಂತ ಯಾವುದರಲ್ಲೂ ಕಡಿಮೆ ಇಲ್ಲ. ನಮ್ಮ ಕಂಪನಿಗಳು ಜಿಎಸ್​ಕೆಗಿಂತಾಗಲೀ ಸನೋಫಿ ಕಂಪನಿಗಿಂತಾಗಲೀ ಕೀಳಾಗಿಲ್ಲ. ತಂತ್ರಜ್ಞಾನ ಮತ್ತು ಕ್ಲಿನಿಕಲ್ ರಿಸರ್ಚ್​ನಲ್ಲಿ ನಾವು ಚೀನಾಗಿಂತ ಬಹಳ ಮುಂದಿದ್ದೇವೆ. ಭಾರತೀಯ ಕಂಪನಿಗಳ ಸಾಮರ್ಥ್ಯದ ಬಗ್ಗೆ ಜನರಿಗೆ ಸಂಶಯ ಇದೆ. ಆದರೆ, ರೋಟಾವೈರಸ್, ಪೋಲಿಯೋ ಮತ್ತಿತರ ರೋಗಗಳಿಗೆ ಲಸಿಕೆ ತಯಾರಿಸಿ ಸೈ ಎನಿಸಿದ್ದೇವೆ. ಇಲ್ಲಿ ಕ್ಲಿನಿಕಲ್ ಟ್ರಯಲ್, ತಯಾರಿಕೆಯ ಅನುಭವ ಬಹಳ ಇದೆ ಎಂದು ಕೃಷ್ಣ ಏಲ್ಲ ಹೇಳಿಕೊಂಡಿದ್ದಾರೆ.

ಭಾರತದ ಲಸಿಕೆ ತಯಾರಕರು ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಲಸಿಕೆ ತಯಾರಿಸಲು ಸಿದ್ಧಹಸ್ತವೆನಿಸಿದ್ದಾರೆ. ಜಾಗತಿಕ ದೈತ್ಯ ಸಂಸ್ಥೆಯಾದ ಜಿಎಸ್​ಕೆ ರೋಟಾವೈರಸ್ ಲಸಿಕೆಯನ್ನು 85 ಡಾಲರ್​ಗೆ (ಸುಮಾರು 6 ಸಾವಿರ ರೂಪಾಯಿ) ಬಿಡುಗಡೆ ಮಾಡಿದ್ದರು. ಅದೇ ಲಸಿಕೆಯನ್ನು ಅಷ್ಟೇ ಗುಣಮಟ್ಟ ಮತ್ತು ಮಾದರಿಯಲ್ಲಿ ತಯಾರಿಸಿ ನಾವು ಕೇವಲ 1 ಡಾಲರ್​ಗೆ (ಸುಮಾರು 70 ರೂಪಾಯಿ) ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದ್ದೆವು ಎಂದು ಹೇಳಿದ ಭಾರತ್ ಬಯೋಟೆಕ್ ಸಂಸ್ಥೆಯ ಮುಖ್ಯಸ್ಥರು, ಕೋವ್ಯಾಕ್ಸಿನ್ ಲಸಿಕೆಯನ್ನೂ ಕಡಿಮೆ ಬೆಲೆಗೆ ಹೊರತರುವುದಾಗಿ ಭರವಸೆ ನೀಡಿದ್ಧಾರೆ.

ಇದನ್ನೂ ಓದಿ: ಬೈರುತ್ ಸ್ಫೋಟದ ನಂತರ ಎಚ್ಚೆತ್ತ ಅಧಿಕಾರಿಗಳು; ಚೆನ್ನೈ ಬಂದರಿನಲ್ಲಿಟ್ಟಿದ್ದ 700 ಟನ್​ ಅಮೋನಿಯಂ ನೈಟ್ರೇಟ್​ ಸ್ಥಳಾಂತರಭಾರತದಲ್ಲಿ ದಿನೇ ದಿನೇ ಪ್ರಕರಣಗಳ ಪ್ರಮಾಣ ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆ 50 ಸಾವಿರ ಗಡಿ ಮುಟ್ಟುವತ್ತ ಸಾಗಿದೆ. ಪರಿಸ್ಥಿತಿ ಕೈಮೀರಿ ಹೋಗುವಂತೆ ಇದ್ದು ಆದಷ್ಟು ಬೇಗ ಲಸಿಕೆ ತಯಾರಾಗಲೆಂದು ಸರ್ಕಾರ ಕೂಡ ಎದುರು ನೋಡುತ್ತಿದೆ. ಇದು ಲಸಿಕೆ ತಯಾರಿಕೆಯ ಮೇಲೆ ಒತ್ತಡ ಬೀಳುತ್ತಿದೆ. ಕೃಷ್ಣ ಏಲ್ಲಾ ಕೂಡ ಇದನ್ನು ಒಪ್ಪಿಕೊಳ್ಳುತ್ತಾರೆ. ಕೋವ್ಯಾಕ್ಸಿನ್ ಲಸಿಕೆಯನ್ನು ಬೇಗ ತಯಾರಿಸುವಂತೆ ಭಾರೀ ಒತ್ತಡ ಇದೆ. ಆದರೆ, ಗುಣಮಟ್ಟಕ್ಕೆ ರಾಜಿಯಾಗದೇ, ಎಲ್ಲಾ ಅತ್ಯಗತ್ಯ ಮಾನದಂಡಗಳನ್ನ ಅನುಸರಿಸಿ ಪರೀಕ್ಷೆಗಳನ್ನ ನಡೆಸಿಯೇ ವ್ಯಾಕ್ಸಿನ್ ತಯಾರಿಸುತ್ತೇವೆ ಎಂದಿದ್ದಾರೆ.

ಇದೇ ವೇಳೆ, ಕೊರೋನಾ ವೈರಸ್ ರೋಗದ ಬಗ್ಗೆ ಜನರು ಅನಗತ್ಯವಾಗಿ ಕಂಗಾಲಾಗುವುದು ಬೇಡ. ಇದರಿಂದ ಬೇರೆ ರೀತಿಯ ಸಮಸ್ಯೆಗಳು ತಲೆದೋರಬಹುದು. ಕೋವಿಡ್-19ಗಿಂತ ರಸ್ತೆ ಅಪಘಾತಗಳಿಗೆ ಜನರು ಹೆಚ್ಚಾಗಿ ಬಲಿಯಾಗುತ್ತಾರೆ ಎಂಬುದು ತಿಳಿದಿರಲಿ ಎಂದೂ ಕೃಷ್ಣ ಏಲ್ಲಾ ಅವರು ಸಂದೇಶ ನೀಡಿದ್ದಾರೆ.
Published by: Vijayasarthy SN
First published: August 10, 2020, 5:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading