ಭಾರತದಲ್ಲೇ ತಯಾರಾದ ಕೋವ್ಯಾಕ್ಸಿನ್ ಲಸಿಕೆಯನ್ನು ದೇಶದಲ್ಲಿ ಈಗಾಗಲೇ ಹಲವರು ಪಡೆದುಕೊಂಡಿದ್ದಾರೆ. ಇದು ಹೆಚ್ಚು ಮೆಚ್ಚುಗೆಗೂ ಪಾತ್ರವಾಗಿದೆ. ಆದರೆ, ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆ ಇನ್ನೂ ದೊರೆತಿಲ್ಲವಾದ ಕಾರಣ ವಿದೇಶದಲ್ಲಿ ಹೆಚ್ಚಿನ ಮಾನ್ಯತೆ ಇಲ್ಲ. ಈ ಹಿನ್ನೆಲೆ ಅಮೆರಿಕಕ್ಕೆ ಹೋದ ವಿದ್ಯಾರ್ಥಿಗಳಿಗೆ ಅಲ್ಲಿ ಮತ್ತೊಮ್ಮೆ ಲಸಿಕೆ ಹಾಕಿಸಿಕೊಳ್ಳಲು ಹೇಳಲಾಗಿದೆ. ರಷ್ಯಾದ ಸ್ಪುಟ್ನಿಕ್ ವ್ಯಾಕ್ಸಿನ್ ಹಾಕಿಸಿಕೊಂಡವರಿಗೂ ಇದೇ ಗತಿ..!
ಹೌದು, ಮಾರ್ಚ್ ತಿಂಗಳಿಂದ 400ಕ್ಕೂ ಹೆಚ್ಚು ಯುಎಸ್ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ಅಲ್ಲಿ ಓದುವ ವಿದ್ಯಾರ್ಥಿಗಳಿಗೆ ಶರತ್ಕಾಲದ ಸೆಮಿಸ್ಟರ್ ಆರಂಭಕ್ಕೂ ಮುಂಚಿತವಾಗಿ ಲಸಿಕೆ ಹಾಕಿಸಿಕೊಳ್ಳಿ ಎಂದು ಹೇಳುತ್ತಲೇ ಬಂದಿವೆ. ಆದರೆ ಭಾರತದ ಸ್ಥಳೀಯ ಕೋವಾಕ್ಸಿನ್ ಅಥವಾ ರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ ಚುಚ್ಚುಮದ್ದನ್ನು ಪಡೆದವರು ಮಾತ್ರ ಅಮೆರಿಕದಲ್ಲಿ ಮತ್ತೆ ಲಸಿಕೆ ಪಡೆದುಕೊಳ್ಳುವಂತೆ ಹೇಳುತ್ತಿದ್ದಾರೆ.
ಕೊಲಂಬಿಯಾ ಯೂನಿವರ್ಸಿಟಿಯ ಸ್ಕೂಲ್ ಆಫ್ ಇಂಟರ್ನ್ಯಾಷನಲ್ ಮತ್ತು ಪಬ್ಲಿಕ್ ಅಫೇರ್ಸ್‌ನಲ್ಲಿ ಈ ವರ್ಷ ಸ್ನಾತಕೋತ್ತರ ಪದವಿಯನ್ನು ಪ್ರಾರಂಭಿಸಲಿರುವ ಭಾರತದ 25 ವರ್ಷದ ವಿದ್ಯಾರ್ಥಿನಿ ಮಿಲೋನಿ ದೋಶಿ ಕೋವ್ಯಾಕ್ಸಿನ್‌ನ ಎರಡು ಡೋಸ್ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. ಆದರೆ, ಆಕೆ ಕೊಲಂಬಿಯಾದ ಕ್ಯಾಂಪಸ್‌ಗೆ ತೆರಳಿದ ನಂತರ ಅಮೆರಿಕದ ಬೇರೆ ಲಸಿಕೆ ಪಡೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ನ್ಯಾಯಾರ್ಕ್ ಟೈಮ್ಸ್ ವರದಿ ಮಾಡಿದೆ.
"ನಾನು ಎರಡು ವಿಭಿನ್ನ ಲಸಿಕೆಗಳನ್ನು ತೆಗೆದುಕೊಳ್ಳುವ ಬಗ್ಗೆ ಆತಂಕವಾಗಿದೆ. ಅಪ್ಲಿಕೇಶನ್ ಪ್ರಕ್ರಿಯೆಯು ಕಠಿಣವಾಗಿದ್ದು, ಆದರೆ, ಇದು ನಿಜಕ್ಕೂ ಅನಿಶ್ಚಿತ ಮತ್ತು ಆತಂಕ ಉಂಟು ಮಾಡುವ ಲಕ್ಷಣ'' ಎಂದು ದೋಶಿ ಪ್ರತಿಕ್ರಿಯೆ ನೀಡಿದ್ದಾಳೆ.
ಸ್ಪುಟ್ನಿಕ್ ಅಥವಾ ಕೋವ್ಯಾಕ್ಸಿನ್‌ನಂತಹ WHO ಅನುಮೋದಿಸದ ಲಸಿಕೆಯನ್ನು ಪಡೆದ ವಿದ್ಯಾರ್ಥಿಗಳಿಗೆ ಸಂಕೀರ್ಣವಾದ ಸನ್ನಿವೇಶವಿದ್ದು, ಹಲವು ಕ್ಯಾಂಪಸ್‌ಗಳು ವಿಭಿನ್ನ ಕ್ರಮಗಳನ್ನು ಪ್ರಸ್ತಾಪಿಸುತ್ತಿವೆ. ಅಲ್ಲದೆ, ವಿವಿಧ ಕಂಪನಿಗಳ ಲಸಿಕೆಗಳನ್ನು ಹಾಕಿಸಿಕೊಳ್ಳುವುದು (ಎರಡು ಬಾರಿ) ಸುರಕ್ಷಿತವಾಗಿದೆಯೇ ಎಂಬ ಬಗ್ಗೆ ಯಾವುದೇ ಡೇಟಾ ಅಸ್ತಿತ್ವದಲ್ಲಿಲ್ಲ. ಹೀಗಾಗಿ ಎರಡು ವಿಭಿನ್ನ ಕೋವಿಡ್ -19 ಲಸಿಕೆಗಳನ್ನು ಸ್ವೀಕರಿಸುವ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಅಧ್ಯಯನ ಮಾಡಲಾಗಿಲ್ಲ'' ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ (ಸಿಡಿಸಿ) ವಕ್ತಾರ ಕ್ರಿಸ್ಟನ್ ನಾರ್ಡ್‌ಲಂಡ್ ಹೇಳಿದ್ದಾರೆ. ಡಬ್ಲ್ಯುಎಚ್‌ಒ ಅನುಮತಿ ನೀಡದ ಲಸಿಕೆ ಪಡೆದವರು ಯುಎಸ್‌ನಲ್ಲಿ ಎಫ್‌ಡಿಎ ಅನುಮೋದನೆ ಪಡೆದ ಲಸಿಕೆಯ ಮೊದಲ ಡೋಸ್ ಹಾಕಿಸಿಕೊಳ್ಳುವ ಮೊದಲು ಕನಿಷ್ಠ 28 ದಿನಗಳವರೆಗೆ ಕಾಯಬೇಕು ಎಂದು ನಾರ್ಡ್‌ಲಂಡ್ ಸಲಹೆ ನೀಡಿದರು.
ಅಮೆರಿಕ ವಿದ್ಯಾರ್ಥಿಗಳಿಗೆ ಫೈಜರ್, ಮಾಡರ್ನಾ ಹಾಗೂ ಜಾನ್ಸನ್ ಅಂಡ್ ಜಾನ್ಸನ್ ಲಸಿಕೆ ಹಾಕಿಸಿಕೊಳ್ಳಬಹುದು. ಜಾಗತಿಕ ಆರೋಗ್ಯ ಸಂಸ್ಥೆಯಿಂದ ಅನುಮೋದನೆ ಪಡೆದುಕೊಂಡ 8 ಲಸಿಕೆಗಳಲ್ಲಿ ಈ ಮೂರು ಸಹ ಇದೆ. ಈ ಅಸಮಾನತೆಯು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಉಳಿಸಿಕೊಳ್ಳಲು ಪ್ರಮುಖ ಆದ್ಯತೆಯಾಗಿರುವ ಕಾಲೇಜುಗಳಿಗೆ ಅಡ್ಡಿಯಾಗಬಹುದು ಎಂದು ವಿಶ್ಲೇಷಣೆಯೊಂದು ತಿಳಿಸಿದೆ.
ಇದು ನನ್ನ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಎಂದು ಹಲವು ವಿದ್ಯಾರ್ಥಿಗಳು ವಿಚಾರಿಸುತ್ತಿದ್ದಾರೆ ಎಂದೂ ತಿಳಿದುಬಂದಿದೆ. ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಲ್ಲಿ ಆತಂಕ ಮತ್ತು ಕಾಳಜಿ ಹೆಚ್ಚಾಗಿದೆ ಎಂಬುದರಲ್ಲಿ ಯಾವುದೇ ಪ್ರಶ್ನೆಯಿಲ್ಲ ಎಂದು ಇಂಡಿಯಾನಾ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ವ್ಯವಹಾರಗಳ ಉಪಾಧ್ಯಕ್ಷೆ ಸಹ ಒಪ್ಪಿಕೊಂಡಿದ್ದಾರೆ.
ಅನೇಕ ವಿಶ್ವವಿದ್ಯಾಲಯಗಳು WHO- ಅನುಮೋದಿತ ಕೋವಿಡ್ ಲಸಿಕೆ ಪಡೆದ ವಿದ್ಯಾರ್ಥಿಗಳನ್ನು ಮಾತ್ರ ಸ್ವೀಕರಿಸುತ್ತಿವೆ. ಇನ್ನು, ಸೆಮಿಸ್ಟರ್ ಆರಂಭಕ್ಕೂ ಮುನ್ನ ಲಸಿಕೆ ಪಡೆಯುವಲ್ಲಿ ಯಶಸ್ವಿಯಾಗದವರು ಸಮಸ್ಯಾತ್ಮಕ ಪ್ರಕ್ರಿಯೆಯನ್ನು ಎದುರಿಸಲಿದ್ದಾರೆ ಎಂದೂ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಇನ್ನೊಂದೆಡೆ, ಗೊಂದಲಕ್ಕೊಳಗಾದ ಮತ್ತು ಆತಂಕಕ್ಕೊಳಗಾದ ವಿದ್ಯಾರ್ಥಿಗಳಿಂದ ಹೆಚ್ಚುತ್ತಿರುವ ಒತ್ತಡದ ಹಿನ್ನೆಲೆಯಲ್ಲಿ ಯುಎಸ್ ವಿಶ್ವವಿದ್ಯಾಲಯಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲು ಕಳೆದ ವಾರ ಭಾರತದ ಕನಿಷ್ಠ ಆರು ಪ್ರಾದೇಶಿಕ ಸರ್ಕಾರಗಳು ತುರ್ತು ಚಿಕಿತ್ಸಾಲಯಗಳನ್ನು ಘೋಷಿಸಿವೆ ಎಂದು ವರದಿಯಾಗಿದೆ.
ಆದರೆ, ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಗುರುವಾರ ಬಯೋಫಾರ್ಮಾಸ್ಯುಟಿಕಲ್ ಕಂಪನಿ ಒಕ್ಯುಜೆನ್ ಇಂಕ್ ತನ್ನ ಅಸ್ತಿತ್ವದಲ್ಲಿರುವ ಯುನೈಟೆಡ್ ಸ್ಟೇಟ್ಸ್ ಹಕ್ಕುಗಳ ಜೊತೆಗೆ ಕೆನಡಾದಲ್ಲಿ ತನ್ನ ಕೋವಿಡ್-19 ಲಸಿಕೆ ಕೋವ್ಯಾಕ್ಸಿನ್‌ನ ವಿಶೇಷ ಸಹ-ಅಭಿವೃದ್ಧಿ, ಉತ್ಪಾದನೆ ಮತ್ತು ವಾಣಿಜ್ಯೀಕರಣದ ಹಕ್ಕುಗಳನ್ನು ಹೊಂದಿರುತ್ತದೆ ಎಂದು ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ