ಕೊರೋನಾ ಸೋಂಕು ಬಂದ ಬಳಿಕ ಸೋಂಕಿತರು ಮನೆಯಲ್ಲೇ ಇದ್ದರೆ ಅವರು ಕಡ್ಡಾಯವಾಗಿ ಹೋಂ ಐಸೊಲೇಷನ್ ಅಥವಾ ಪ್ರತ್ಯೇಕವಾಗೇ ಇರಬೇಕು. ಈ ವೇಳೆ ಸೋಂಕಿತ ಆರೈಕೆ ಮಾಡುವವರನ್ನು ಹೊರತುಪಡಿಸಿ ಬೇರೆ ಯಾರನ್ನೂ ಭೇಟಿ ಮಾಡುವಂತೆ ಇಲ್ಲ. ಈ ಹಿನ್ನೆಲೆ ಒಬ್ಬರೇ ಇರುವುದರಿಂದ ಸೋಂಕಿತರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಇರುತ್ತದೆ. ಆದರೆ, ತೆಲಂಗಾಣದಲ್ಲೊಮದು ವಿಚಿತ್ರವಾದ ಪ್ರಕರಣ ಬೆಳಕಿಗೆ ಬಂದಿದೆ. ಕೋವಿಡ್ ಪಾಸಿಟಿವ್ ಬಂದ ಅತ್ತೆ ತಾನೊಬ್ಬರೇ ಪ್ರತ್ಯೇಕವಾಗಿರಲು ಅಸಮಾಧಾನಗೊಂಡು ಸೇಡು ತೀರಿಸಿಕೊಳ್ಳಲು ತನ್ನ ಸೊಸೆಯನ್ನು ಬಲವಂತವಾಗಿ ತಬ್ಬಿಕೊಂಡು, ಅವರಿಗೂ ಸಹ ಸೋಂಕು ತಗುಲಿಸಿದ್ದಾರೆ ಎಂದು ವರದಿಯಾಗಿದೆ. ಅತ್ತೆಯ ಈ ಕ್ರಮದಿಂದ ಸೊಸೆಯೂ ಕೋವಿಡ್ - 19 ವೈರಸ್‌ಗೆ ತುತ್ತಾಗಿದ್ದು, ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಸೊಸೆ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ಗೊತ್ತಾದ ತಕ್ಷಣ ತೆಲಂಗಾಣದ ಸೋಮರಿಪೇಟಾ ಎಂಬ ಗ್ರಾಮದ ಮನೆಯಿಂದ ಆಕೆಯನ್ನು ಹೊರಕ್ಕೆ ಹಾಕಲಾಗಿದೆ ಎಂದೂ ವರದಿಯಾಗಿದೆ. ನಂತರ ಮೇ 29 ರಂದು ಆಕೆಯ ಸಹೋದರಿ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿರುವ ತನ್ನ ಹೆತ್ತವರ ಮನೆಗೆ ಕರೆದೊಯ್ದಳು. ಸುಮಾರು 20 ರ ಆಸುಪಾಸಿನಲ್ಲಿರುವ ಸೊಸೆ ಇದರಿಂದ ಅಸಮಾಧಾನಗೊಂಡು ಕಂದಾಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದು, ಅವರು ಮೇ 31 ರಂದು ವಿಡಿಯೋ ಸಂದರ್ಶನದ ಮೂಲಕ ಸೊಸೆಯನ್ನು ಭೇಟಿಯಾಗಿದ್ದಾರೆ.
ಅತ್ತೆ ಕೋವಿಡ್ ಸೋಂಕಿಗೊಳಗಾದ ಬಳಿಕ ಕುಟುಂಬದ ಪ್ರತಿಯೊಬ್ಬರೂ ಆಕೆಯಿಂದ ದೂರವಾಗಿದ್ದಕ್ಕೆ ಅಸಮಾಧಾನಗೊಂಡಿದ್ದರು. ಆಕೆ ಪ್ರತ್ಯೇಕವಾಗಿದ್ದರು. ಒಂದು ಸ್ಥಳದಲ್ಲಿ ಅವರಿಗೆ ಆಹಾರ ನೀಡಲಾಗುತ್ತಿತ್ತು. ನಾನು ನನ್ನ ಮಕ್ಕಳನ್ನೂ ಸಹ ಅಜ್ಜಿಯನ್ನು ಭೇಟಿ ಮಾಡಲು ಬಿಡುತ್ತಿರಲಿಲ್ಲ. ಇದರಿಂದ ಅತ್ತೆ ಕೋಪ ಮಾಡಿಕೊಂಡಿದ್ದರು ಹಾಗೂ ನನಗೂ ಸೋಂಕು ಅಂಟಿಸಲು ಬಯಸಿದ್ದರು ಎಂದು ಸೊಸೆ ಹೇಳಿದ್ದಾರೆ. ಅಲ್ಲದೆ, "ನಾನು ಕೋವಿಡ್ -19 ಸೋಂಕಿಗೆ ಒಳಗಾಗಬೇಕು ಎಂದು ನನ್ನ ಅತ್ತೆ ನನ್ನನ್ನು ತಬ್ಬಿಕೊಂಡರು" ಎಂದು ಮಹಿಳೆ ಆರೋಗ್ಯ ಸಂದರ್ಶಕರಿಗೆ ವಿಡಿಯೋ ಸಂದರ್ಶನದಲ್ಲಿ ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
"ನಾನು ಸಾಯುವಾಗ ನೀವೆಲ್ಲರೂ ಸಂತೋಷದಿಂದ ಬದುಕಲು ಬಯಸುತ್ತೀರಾ?" ಎಂದು ಹೇಳುತ್ತಾ, ಅತ್ತೆ ತನ್ನ ಸೊಸೆಯನ್ನು ತಬ್ಬಿಕೊಳ್ಳಲು ಪ್ರಾರಂಭಿಸಿದಳು ಎಂದು ತಿಳಿದುಬಂದಿದೆ.
ಇದನ್ನು ಓದಿ: ರಾತ್ರಿ ಮಲಗುವ ವೇಳೆ ಬಾಳೆಹಣ್ಣು ತಿನ್ನಬಾರದೇ? ಅಸಲಿ ವಿಷಯ ಇಲ್ಲಿದೆ
ಮಹಿಳೆ ಈಗ ಚಿಕಿತ್ಸೆಗೆ ಒಳಗಾಗಿದ್ದು, ಸಹೋದರಿಯ ಮನೆಯಲ್ಲಿ ಪ್ರತ್ಯೇಕವಾಗಿದ್ದಾಳೆ. ಈಕೆಯ ಪತಿ 7 ತಿಂಗಳ ಹಿಂದೆ ಟ್ರ್ಯಾಕ್ಟರ್ ಚಾಲಕನ ಕೆಲಸ ಮಾಡಲು ಒಡಿಶಾಗೆ ಹೋಗಿದ್ದಾರೆ. ಅವರು ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಅಂದಿನಿಂದ ತನ್ನ ಅತ್ತೆ - ಮಾವನ ಮನೆಯಲ್ಲೇ ಸೊಸೆ ವಾಸ ಮಾಡುತ್ತಿದ್ದಳು.
ಇದನ್ನು ಓದಿ: ಕನ್ನಡಿಗರ ಸ್ವಾಭಿಮಾನಕ್ಕೆ ಮಣಿದ ಗೂಗಲ್; ಕೊಳಕು ಭಾಷೆ ಪ್ರಮಾದಕ್ಕೆ ಅಂತ್ಯ
ಆದರೆ, ತನಗೆ ಕೊರೊನಾ ಸೋಂಕು ಬಂದ ಬಳಿಕ ಸೊಸೆಯ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿದೆ, ತನ್ನ ಮೊಮ್ಮಕ್ಕಳನ್ನು ನೋಡಲು ಸಹ ಸೊಸೆ ಬಿಡುತ್ತಿಲ್ಲ ಎಂದು ಆಕೆ ಆಕ್ರೋಶಗೊಂಡಿರಬಹುದು ಎಂದು ಅಧಿಕಾರಿಗಳು ಸಹ ತಿಳಿಸಿದ್ದಾರೆ.
ಇನ್ನು, ಸೊಸೆಯ ಮನೆಗೆ ಅಧಿಕಾರಿಗಳು ಭೇಟಿ ನೀಡಿದ್ದು, ಆಕೆಯ ಚಿಕಿತ್ಸೆಗೆ ಬೇಕಾದ ಔಷಧಿಗಳನ್ನು ನೀಡಿದ್ದಾರೆ. ಅಲ್ಲದೆ, ಅತ್ತೆಯ ಮೇಲೆ ಕೇಸ್ ಹಾಕುವುದಾದರೆ ನಾವು ದೂರು ದಾಖಲಿಸಿಕೊಳ್ಳಲು ಸಿದ್ಧ ಎಂದೂ ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ, ಈ ಸಂಬಂಧ ನಾವು ಆಕೆಗೆ ಸಹಾಯ ಮಾಡುವುದಾಗಿಯೂ ಅಧಿಕಾರಿಗಳು ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ