Covid Tears - ಕಣ್ಣೀರಿನಿಂದ ಕೋವಿಡ್ ಸೋಂಕು; ಸಂಶೋಧಕರಿಂದ ಆತಂಕಕಾರಿ ಮಾಹಿತಿ

ಕೋವಿಡ್ ರೋಗಿಗಳ ಕಣ್ಣೀರಿನಿಂದ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಅಮೃತಸರದ ಸಂಶೋಧಕರು ಹೇಳಿದ್ದಾರೆ. ಅಧ್ಯಯನ ನಡೆಸಲಾದ ಕೊವಿಡ್ ಸೋಂಕಿತರ ಕಣ್ಣೀರಿನ ಸ್ಯಾಂಪಲ್ ಅನ್ನು ಪರೀಕ್ಷಿಸಿದಾಗ ಶೇ. 17 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • News18
  • Last Updated :
  • Share this:
ಬೆಂಗಳೂರು (ಆ. 02): ಕೋವಿಡ್ ಸೋಂಕಿನ ಮೂರನೇ ಅಲೆ ಭಾರತದಲ್ಲಿ ದಾಂಗುಡಿ ಇಡಲು ಆರಂಭಿಸಿದೆ. ಸೋಂಕು ಹೇಗೆಲ್ಲಾ ಹರಡುತ್ತದೆ ಎಂದು ಜನಸಾಮಾನ್ಯರ ಜೊತೆ ತಜ್ಞರು ಕೂಡ ತಲೆ ಕೆಡಿಸಿಕೊಂಡಿದ್ದಾರೆ. ಇಂಥ ಹೊತ್ತಲ್ಲೇ ಇನ್ನಷ್ಟು ಆತಂಕ ಮೂಡಿಸುವ ಅಂಶವೊಂದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಕೋವಿಡ್ ಸೋಂಕಿತರ ಕಣ್ಣೀರಿನ ಮೂಲಕವೂ ಇನ್ನೊಬ್ಬರಿಗೆ ಸೋಂಕು ತಗುಲಬಹುದು ಎಂದು ಪಂಜಾಬ್​ನ ಗವರ್ನ್ಮೆಂಟ್ ಮೆಡಿಕಲ್ ಕಾಲೇಜಿನ ಅಧ್ಯಯನಕಾರರು ಅಭಿಪ್ರಾಯಪಟ್ಟಿದ್ದಾರೆ. ಅಮೃತಸರದಲ್ಲಿರುವ ಈ ಕಾಲೇಜಿನ ಸಂಶೋಧಕರು ನಿರ್ದಿಷ್ಟವಾಗಿ ಆರಿಸಿದ 120 ಕೋವಿಡ್ ರೋಗಿಗಳ ಮೇಲೆ ಅಧ್ಯಯನ ನಡೆಸಿ ಈ ಅಂಶವನ್ನು ಕಂಡುಹಿಡಿದಿದ್ದಾರೆ.

ಅಧ್ಯಯನಕ್ಕೆ ಆರಿಸಲಾದ 120 ಕೋವಿಡ್ ರೋಗಿಗಳ ಪೈಕಿ 60 ಮಂದಿಗೆ ನೇತ್ರ ಸಂಬಂಧಿ ತೊಂದರೆ (Ocular Manifestations) ಇತ್ತು. ಇನ್ನುಳಿದ 60 ಮಂದಿಗೆ ಇಂಥ ಲಕ್ಷಣಗಳು ಇರಲಿಲ್ಲ. ಇವರ ಪೈಕಿ 41 ರೋಗಿಗಳಿಗೆ ಕಾಂಜಂಕ್ಟಿವಲ್ ಹೈಪರೆಮಿಯಾ, 38 ಮಂದಿಗೆ ಫಾಲಿಕುಲಾರ್ ರಿಯಾಕ್ಷನ್, 35 ಮಂದಿಗೆ ಕೆಮೋಸಿಸ್, 20 ಮಂದಿಗೆ ಕಣ್ಣಿನ ತಿರುಳು (Mucoid Discharge) ಹಾಗೂ 11 ಮಂದಿಗೆ ಕಣ್ಣಿನಲ್ಲಿ ಕಡಿತ ಕಾಣಿಸಿತ್ತು. ಇನ್ನು, ಕಣ್ಣಿನ ತೊಂದರೆಯ ಲಕ್ಷಣಗಳಿದ್ದ 60 ಮಂದಿಯ ಪೈಕಿ ಶೇ. 37 ಮಂದಿಗೆ ಸಾಧಾರಣ ಕೋವಿಡ್ ಸೋಂಕು ಇದ್ದರೆ ಇನ್ನುಳಿದವರಿಗೆ ಕೋವಿಡ್ ಸೋಂಕಿನ ತೀವ್ರತೆ ಹೆಚ್ಚು ಇತ್ತು. ಇನ್ನು, ಕಣ್ಣಿನ ಸಮಸ್ಯೆಯ ಲಕ್ಷಣಗಳಿಲ್ಲದ ಇತರ 60 ಮಂದಿಯ ಪೈಕಿ ಶೇ. 52 ಮಂದಿಗೆ ಕೋವಿಡ್ ಸೋಂಕು ಸಾಧಾರಣ ಇದ್ದರೆ ಇನ್ನುಳಿದವರ ಸೋಂಕಿನ ತೀವ್ರತೆ ತುಂಬಾ ಅಧಿಕ ಇತ್ತು ಎಂದು ಈ ಅಧ್ಯಯನದಲ್ಲಿ ತಿಳಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ವರದಿಯಾಗಿದೆ.

ಕೋವಿಡ್ ರೋಗಿಗಳ ಕಣ್ಣೀರಿನ ಸ್ಯಾಂಪಲ್ ಮೂಲಕ ನಡೆಸಲಾದ ಆರ್​ಟಿ-ಪಿಸಿಆರ್ ಪರೀಕ್ಷೆಯಲ್ಲಿ ಶೇ. 17.5 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಈ ರೀತಿ ಪಾಸಿಟಿವ್ ಬಂದಿರುವವರಲ್ಲಿ ಶೇ. 9.16 ಮಂದಿಗೆ ಕಣ್ಣು ಸಂಬಂಧಿತ ತೊಂದರೆಗಳ ಲಕ್ಷಣಗಳಿವೆ. ಶೇ. 8.33 ಮಂದಿಗೆ ಇಂಥ ಯಾವುದೇ ಲಕ್ಷಣಗಳು ಕಾಣಿಸಿಲ್ಲ. ಹೀಗಾಗಿ, ಕಣ್ಣಿನ ತೊಂದರೆಗಳು ಇಲ್ಲದಿದ್ದರೂ ಕೋವಿಡ್ ರೋಗಿಗಳ ಕಣ್ಣೀರಿನಿಂದ ಸೋಂಕು ಹರಡುವ ಸಾಧ್ಯತೆ ಇದೆ ಎಂಬುದು ಈ ಸಂಶೋಧನೆಯಿಂದ ತಿಳಿದುಬರುತ್ತದೆ ಎಂಬುದು ಅಮೃತಸರದ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಕಟಿಸಿದ ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Coronavirus: ಚೀನಾದಲ್ಲಿ ಡೆಲ್ಟಾ ರೂಪಾಂತರ ಆರ್ಭಟ, ಬೀಜಿಂಗ್ ಸೇರಿದಂತೆ ಹಲವೆಡೆ ಆತಂಕ!

ಸದ್ಯ, ಉಸಿರಾಟ, ಕೆಮ್ಮು, ಶೀನು ಇತ್ಯಾದಿ ಗಾಳಿ ಮೂಲಕ ಕೋವಿಡ್ ಸೋಂಕು ಹೆಚ್ಚಾಗಿ ಹರಡುತ್ತದೆ. ಆದರೆ, ಕಣ್ಣೀರಿನಿಂದಲೂ ಸೋಂಕು ಹರಡುವ ಸಾಧ್ಯತೆ ಇರುವುದು ಆತಂಕ ಪಡಬೇಕಾದ ವಿಷಯ ಹೌದು. ಕಣ್ಣಿನ ಸಮಸ್ಯೆಯಿಂದ ಬರುವ ರೋಗಿಗಳನ್ನ ಪರೀಕ್ಷಿಸುವಾಗ ವೈದ್ಯರು ಎಚ್ಚರ ವಹಿಸುವುದು ಅತ್ಯಗತ್ಯವಾಗಿದೆ.

ಭಾರತದಲ್ಲಿ ಹಲವು ದಿನಗಳ ಕಾಲ ನಿರಂತರವಾಗಿ ಇಳಿಕೆಯಾಗುತ್ತಿದ್ದ ಕೋವಿಡ್ ಸೋಂಕು ಈಗ್ಗೆ ಕೆಲ ದಿನಗಳಿಂದ ಏರಿಕೆ ಆಗತೊಡಗಿದೆ. 4 ಲಕ್ಷಕ್ಕಿಂತ ಕಡಿಮೆ ಸಂಖ್ಯೆಗೆ ಇಳಿದಿದ್ದ ಸಕ್ರಿಯ ಪ್ರಕರಣಗಳು ಇದೀಗ ನಾಲ್ಕೂವರೆ ಲಕ್ಷಕ್ಕಿಂತ ಹೆಚ್ಚಾಗಿವೆ. ಕೇರಳದಲ್ಲಿ ಸೋಂಕು ತೀವ್ರಗತಿಯಲ್ಲಿ ಹೆಚ್ಚುತ್ತಿದೆ. ಕರ್ನಾಟಕ ಹಾಗೂ ಆಂಧ್ರದಲ್ಲೂ ಸಕ್ರಿಯ ಪ್ರಕರಣಗಳಲ್ಲಿ ಏರಿಕೆ ಆಗುತ್ತಿದೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Vijayasarthy SN
First published: