ನವದೆಹಲಿ(ಸೆ. 25): ಕೊರೋನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಡೆಂಘೀ ಜ್ವರ ಕಾಣಿಸಿದೆ. ಅವರ ರಕ್ತದ ಪ್ಲೇಟ್ಲೆಟ್ಗಳ ಸಂಖ್ಯೆ ಗಣನೀಯವಾಗಿ ಇಳಿದಿದೆ. ಸರ್ಕಾರಿ ಸ್ವಾಮ್ಯದ ಲೋಕನಾಯಕ ಜಯಪ್ರಕಾಶ್ ಆಸ್ಪತ್ರೆಯಲ್ಲಿದ್ದ ಅವರನ್ನ ಈಗ ಖಾಸಗಿ ಮ್ಯಾಕ್ಸ್ ಆಸ್ಪತ್ರೆಗೆ ವರ್ಗಾಯಿಸಿ ಅಲ್ಲಿ ಐಸಿಯುನಲ್ಲಿಡಲಾಗಿದೆ. ಕೊರೋನಾ ವೈರಸ್ ಮತ್ತು ಡೆಂಘೀ ಜ್ವರ ಎರಡೂ ಒಟ್ಟಿಗೆ ಇರುವ ಪ್ರಕರಣಗಳ ಅಪರೂಪ ಎನ್ನಲಾಗಿದೆ.
ಸೆಪ್ಟೆಂಬರ್ 14ರಂದು ಮನೀಶ್ ಸಿಸೋಡಿಯಾ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಮನೆಯಲ್ಲೇ ಐಸೋಲೇಶನ್ನಲ್ಲಿದ್ದ ಅವರು ಜ್ವರ ಹಾಗೂ ಉಸಿರಾಟದ ತೊಂದರೆ ಹೆಚ್ಚಾಗಿ ಮೊನ್ನೆ ಸೆಪ್ಟೆಂಬರ್ 23ರಂದು ಲೋಕನಾಯಕ ಜಯಪ್ರಕಾಶ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಅವರ ರಕ್ತದ ಪ್ಲೇಟ್ ಲೆಟ್ಗಳ ಸಂಖ್ಯೆ ಮತ್ತು ಆಕ್ಸಜನ್ ಮಟ್ಟ ಇಳಿಮುಖವಾಗುತ್ತಿರುವುದು ಕಂಡುಬಂದ ಬೆನ್ನಲ್ಲೇ ನಿನ್ನೆ ಅವರನ್ನ ದೆಹಲಿಯ ಸಾಕೇತ್ ಬಳಿ ಇರುವ ಖಾಸಗಿ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು.
ಇದನ್ನೂ ಓದಿ: ಕೊರೋನಾ ಬಳಿಕ ಆಫ್ರಿಕನ್ ಹಂದಿ ಜ್ವರದ ಭೀತಿ; 12 ಸಾವಿರ ಹಂದಿ ಕೊಲ್ಲಲು ಅಸ್ಸಾಮ್ ಸರ್ಕಾರ ಆದೇಶ
ಒಬ್ಬ ವ್ಯಕ್ತಿಯ ಪ್ರತೀ ಮೈಕ್ರೋಲೀಟರ್ ರಕ್ತದಲ್ಲಿ 1.4-4.5 ಲಕ್ಷದವರೆಗೆ ಪ್ಲೇಟ್ಲೆಟ್ ಇರಬೇಕು. ಆದರೆ, ಸಿಸೋಡಿಯಾ ಅವರ ರಕ್ತದಲ್ಲಿ ಒಂದು ಲಕ್ಷಕ್ಕಿಂತ ಕಡಿಮೆ ಪ್ಲೇಟ್ಲೆಟ್ಗಳಿವೆ. ಇವರ ಬ್ಲಡ್ ಪ್ಲೇಟ್ಲೆಟ್ ಸಂಖ್ಯೆ ಸುಧಾರಿಸದೇ ಹೋದಲ್ಲಿ ಬಾಹ್ಯವಾಗಿ ಅವರಿಗೆ ಪ್ಲೇಟ್ಲೆಟ್ ಹಾಕುವ ಸಾಧ್ಯತೆ ಇದೆ. 48 ವರ್ಷದ ಮನೀಶ್ ಸಿಸೋಡಿಯಾ ಅವರಿಗೆ ಹೈಪರ್ ಟೆನ್ಷನ್ ಕೂಡ ಇದೆ. ಡೆಂಘಿ ಮತ್ತು ಕೋವಿಡ್ ಎರಡೂ ಒಟ್ಟಿಗೆ ಬಂದಿರುವ ಹಿನ್ನೆಲೆಯಲ್ಲಿ, ವೈದ್ಯರು ಎಚ್ಚರಿಕೆಯಿಂದ ಚಿಕಿತ್ಸೆ ನೀಡುತ್ತಿದ್ದಾರೆ.
ಇದೇ ವೇಳೆ, ಉಪಮುಖ್ಯಮಂತ್ರಿಗಳು ಎಲ್ಎನ್ಜೆಪಿ ಆಸ್ಪತ್ರೆಯ ವೈದ್ಯರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಇಲ್ಲಿ ರೋಗಿಗಳನ್ನ ನೋಡಿಕೊಳ್ಳುತ್ತಿರುವ ರೀತಿ ನಿಜಕ್ಕೂ ಉತ್ತಮವಾಗಿದೆ. ಇಲ್ಲಿನ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಸಿಸೋಡಿಯಾ ಅವರು ವಿಡಿಯೋ ಮೂಲಕ ಸಂದೇಶ ನೀಡಿದ್ಧಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ