ಬೆಂಗಳೂರು (ಮೇ. 4): ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆ ಉದ್ಭವಿಸಿದೆ. ಸೋಂಕಿತರು ಸರಿಯಾದ ಸಮಯಕ್ಕೆ ಬೆಡ್ ಸಿಗದೇ ಪರದಾಡುತ್ತಿದ್ದರೆ, ಇತ್ತ ಸೋಂಕಿತರ ಸಹಾಯಕ್ಕೆ ನಿಲ್ಲಬೇಕಾದ ಅಧಿಕಾರಿಗಳೆ ಬೆಡ್ಗಳನ್ನು ಬ್ಲಾಕ್ ಮಾಡುವ ಮೂಲಕ ಅವ್ಯವಹಾರ ನಡೆಸಿದ್ದಾರೆ ಎಂಬ ನಿಜಾಂಶ ಬಯಲಾಗಿದೆ. ಅಚ್ಚರಿಯಾದರೂ ಹೌದು, ಸಿಲಿಕಾನ್ ಸಿಟಿಯಲ್ಲಿ ಬಿಬಿಎಂಪಿ ಅಧಿಕಾರಿಗಳೇ ಪೂರ್ವ ನಿಯೋಜಿತವಾಗಿ ಬೆಡ್ಗಳನ್ನು ಬುಕ್ ಮಾಡುವ ಮೂಲಕ ಇಂತಹ ಸಂಕಷ್ಟದ ಸಮಯಲ್ಲೂ ಅವ್ಯವಹಾರ ನಡೆಸುತ್ತಿರುವುದು ಬಯಲಾಗಿದೆ. ಸಂಸದ ತೇಜಸ್ವಿ ಸೂರ್ಯ ಅವರ ತಂಡ ಈ ದಂಧೆಯನ್ನು ಬಯಲಿಗೆಳೆದಿದ್ದಾರೆ.
ಬಿಬಿಎಂಪಿ ದಕ್ಷಿಣ ವಲುದ ಕೋವಿಡ್ ವಾರ್ ರೂಂ ಅಧಿಕಾರಿಗಳು ಪ್ರಭಾವಿಗಳು ಸೇರಿದಂತೆ ಯಾರ್ಯಾರದ್ದೋ ಹೆಸರಿನಲ್ಲಿ ಸುಮಾರು 4,000ಕ್ಕೂ ಹೆಚ್ಚು ಬೆಡ್ಗಳನ್ನು ಬುಕ್ ಮಾಡಿದ್ದು, ಇವುಗಳನ್ನು ಲಕ್ಷ ಲಕ್ಷಕ್ಕೆ ಮಾರಾಟ ಮಾಡುತ್ತಿದ್ದರು. ಇವರೆಲ್ಲಾ ಐಸಿಯು, ವೆಂಟಿಲೇಟರ್ ಆಕ್ಸಿಜನ್ ಬೆಡ್ಗಳನ್ನು ಬ್ಲಾಕ್ ಮಾಡಿಕೊಳ್ಳುತ್ತಿದ್ದರು. ವಾರ್ ರೂಂನ ಅಧಿಕಾರಿಗಳ ನಿರ್ದೇಶನದಂತೆ ಹೊರಗಿರುವ ದಲ್ಲಾಳಿಗಳು ಈ ಕಾರ್ಯ ಮಾಡುತ್ತಿದ್ದರು ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ರಿಂದ ಬೆಡ್ ಬ್ಲಾಕಿಂಗ್ ದಂಧೆ ಬಯಲು ಪ್ರಕರಣದ ಬೆನ್ನಲ್ಲೇ ಈಗ ಪೊಲೀಸರು ಜಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಈ ಪ್ರಕರಣ ಸಂಬಂಧ ಇಬ್ಬರು ಬೆಡ್ ಬ್ಲಾಕಿಂಗ್ ದಂಧೆಕೋರರು ಬಂಧಿಸಲಾಗಿದೆ. ರೋಹಿತ್, ನೇತ್ರಾ ಬಂಧಿತ ಆರೋಪಿಗಳು. ರೋಹಿತ್, ನೇತ್ರಾ ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ದಂಧೆಯಲ್ಲಿ ಭಾಗಿಯಾಗಿರುವ ಇತರಿಗಾಗಿ ತೀವ್ರ ಶೋಧ ನಡೆಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ