Covid Vaccines - ಭಾರತದಲ್ಲಿ ತಯಾರಾಗುತ್ತಿರುವ ಕೋವಿಡ್ ವ್ಯಾಕ್ಸಿನ್​ಗಳ ಬಗ್ಗೆ ತಿಳಿದುಕೊಳ್ಳಬೇಕಾದ ಮಾಹಿತಿ

ಕೊರೋನಾ ವೈರಸ್ ನಿಗ್ರಹಕ್ಕಾಗಿ ತಯಾರಾಗುತ್ತಿರುವ ವ್ಯಾಕ್ಸಿನ್ಗಳು ಈಗ ಯಾವ ಹಂತದಲ್ಲಿವೆ? ಇವುಗಳ ಬೆಲೆ ಎಷ್ಟು? ತಯಾರಿಕೆಯ ಪ್ರಕ್ರಿಯೆ ಹೇಗಿರುತ್ತದೆ? ಹೇಗೆ ಸರಬರಾಜಾಗುತ್ತದೆ ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ:

ಕೋವಿಡ್ ಲಸಿಕೆ

ಕೋವಿಡ್ ಲಸಿಕೆ

  • News18
  • Last Updated :
  • Share this:
ಕೊರೋನಾ ವೈರಸ್ ಇಡೀ ವಿಶ್ವವನ್ನು ತಲ್ಲಣಗೊಳಿಸಿದೆ. ಚೀನಾದಲ್ಲಿ ಮೊದಲ ಪ್ರಕರಣ ಬೆಳಕಿಗೆ ಬಂದು 8 ತಿಂಗಳು ಗತಿಸಿವೆ. ವಿಶ್ವಾದ್ಯಂತ ಎರಡೂವರೆ ಕೋಟಿ ಪ್ರಕರಣಗಳು ದಾಖಲಾಗಿವೆ. ನಿತ್ಯವೂ ಲಕ್ಷಾಂತರ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಭಾರತ, ಅಮೆರಿಕ, ಬ್ರೆಜಿಲ್ ದೇಶಗಳು ಈಗ ಹಾಟ್ ಸ್ಟಾಟ್ ಎನಿಸಿವೆ. ಭಾರತದಲ್ಲಿ 37 ಲಕ್ಷಕ್ಕೂ ಹೆಚ್ಚು ಕೇಸ್​ಗಳು ಬೆಳಕಿಗೆ ಬಂದಿವೆ. ಅದರಲ್ಲಿ 66 ಸಾವಿರದಷ್ಟು ಮಂದಿ ಬಲಿಯಾಗಿದ್ದಾರೆ. ಕರ್ನಾಟಕವಂತೂ ಒಂದೇ ದಿನಕ್ಕೆ 9 ಸಾವಿರ ಪ್ರಕರಣ ದೃಢಪಟ್ಟಿರುವ ಹಂತಕ್ಕೆ ಬಂದಿದೆ. ಈ ಹಂತದಲ್ಲಿ ಎಲ್ಲರ ಚಿತ್ತ ಕೋವಿಡ್ ವ್ಯಾಕ್ಸಿನ್​ಗಳತ್ತ ನೆಟ್ಟಿದೆ. ಭಾರತದಲ್ಲಿ ಒಟ್ಟು 7 ಲಸಿಕೆಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಿದೆ. ಹಾಗಾದರೆ, ವ್ಯಾಕ್ಸಿನ್ ಎಂದರೇನು? ಹೇಗೆ ತಯಾರಾಗುತ್ತದೆ? ಯಾರೆಲ್ಲಾ ಲಸಿಕೆ ತಯಾರಿಸುತ್ತಿದ್ದಾರೆ ಎಂಬ ವಿವರ ಇಲ್ಲಿದೆ:

ಐಸಿಎಂಆರ್ ಸಹಯೋಗದಲ್ಲಿ ಭಾರತ್ ಬಯೋಟೆಕ್​ನಿಂದ Covaxin, ಝೈಡಸ್ ಕಾಡಿಲಾ ಸಂಸ್ಥೆಯಿಂದ ZyCoV-D, ಹಾಗೂ ಆಕ್ಸ್​ಫರ್ಡ್ ಸಹಯೋಗದಲ್ಲಿ ಸೆರಮ್ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯಿಂದ AZD-1222 ವ್ಯಾಕ್ಸಿನ್​ಗಳು ಬಹುತೇಕ ಅಂತಿಮ ಹಂತದ ಪ್ರಯೋಗಗಳಿಗೆ ಒಡ್ಡಿಕೊಂಡಿವೆ.

ವ್ಯಾಕ್ಸಿನ್ ಕಾರ್ಯನಿರ್ವಹಣೆ ಹೇಗೆ?

ಔಷಧಕ್ಕೂ ಲಸಿಕೆಗೂ ಏನು ವ್ಯತ್ಯಾಸ ಎಂದು ಪ್ರಶ್ನೆ ಮೂಡಬಹುದು. ಔಷಧ ಎಂದರೆ ರೋಗ ಬಂದಾಗ ನೀಡುವ ಮದ್ದು. ಆದರೆ, ಲಸಿಕೆಯು ರೋಗ ಬರುವ ಮುನ್ನ ದೇಹದಲ್ಲಿ ರೋಗನಿರೋಧಕ ಶಕ್ತಿ ತುಂಬಲು ಸಹಾಯವಾಗುತ್ತದೆ. ವ್ಯಕ್ತಿಯ ದೇಹಕ್ಕೆ ನಿಜವಾಗಿಯೂ ವೈರಸ್ ಸೋಂಕು ತಗುಲಿಸಿ ಅವರಲ್ಲಿ ಪ್ರತಿರೋಧಕ ಶಕ್ತಿಯನ್ನು ಜಾಗೃತಗೊಳಿಸುವ ಕೆಲಸವನ್ನು ಲಸಿಕೆ ಮಾಡುತ್ತದೆ. ಸಮುದಾಯದಲ್ಲಿ ಹರ್ಡ್ ಇಮ್ಯೂನಿಟಿಗೆ ಕಾರಣವಾಗಿ ಆ ಮೂಲಕ ರೋಗ ಹರಡಲು ಸಾಧ್ಯವಾಗದಂತೆ ಮಾಡುತ್ತದೆ.

ಎಷ್ಟು ವಿಧದ ಲಸಿಕೆಗಳಿವೆ?

ಕೊರೋನಾ ವಿರುದ್ಧ ಪರಿಣಾಮಕಾರಿ ಎನಿಸುವ ನಾಲ್ಕು ಥರದ ಲಸಿಕೆಗಳನ್ನ ಗುರುತಿಸಲಾಗಿದೆ. ಮೊದಲನೆಯದು, ನಿಷ್ಕ್ರಿಯ ಸ್ಥಿತಿಯಲ್ಲಿರುವ ವೈರಸ್ ಅನ್ನು ಆಧಾರವಾಗಿಸಿಕೊಂಡು ತಯಾರಿಸಿದ ಲಸಿಕೆ; ಎರಡನೆಯದು, ಕೋರೋನಾ ವೈರಸ್​ನ ಒಂದು ಅಣುವನ್ನು (Antigen) ಹೊತ್ತುಕೊಂಡಿರುವ ಹಾಗೂ ಸೋಂಕು ಹರಡದಂಥ ಬೇರೊಂದು ವೈರಾಣುವಿನ ಆಧಾರದಲ್ಲಿ ತಯಾರಿಸಿದ ಲಸಿಕೆ; ಮೂರನೆಯದು, ವೈರಾಣುವಿನ ಡಿಎನ್​ಎ ಮತ್ತು ಆರ್​ಎನ್​ಎ ವಂಶವಾಹಕ ಇರುವ ನ್ಯೂಕ್ಲಿಕ್-ಆ್ಯಸಿಡ್ ಆಧಾರಿತವಾಗಿ ತಯಾರಿಸುವ ಲಸಿಕೆ; ನಾಲ್ಕನೆಯದು, ಪ್ರೋಟೀನ್ ಸಬ್​ಯ್ಯೂನಿಟ್ ವ್ಯಾಕ್ಸಿನ್. ಇದು ಕೊರೋನಾ ವೈರಸ್​ನ ಪ್ರೋಟೀನ್ ಹಾಗೂ ಪ್ರತಿರೋಧ ಉತ್ತೇಜಕದ ಸಂಯೋಗವಾಗಿರುತ್ತದೆ.

ಲಸಿಕೆ ತಯಾರಿಸುವ ವಿಧಾನಗಳೇನು?

ಒಂದು ವ್ಯಾಕ್ಸಿನ್ ತಯಾರಿಕೆಗೆ ಬಹಳ ಸಂಕೀರ್ಣ ಹಾಗೂ ಸುದೀರ್ಘ ಪ್ರಕ್ರಿಯೆ ಬೇಕಾಗುತ್ತದೆ. ಆರೋಗ್ಯವಂತರಿಗೆ ಇದನ್ನು ನೀಡುವುದರಿಂದ ಬಹಳ ಎಚ್ಚರಿಕೆಯಿಂದ ಇದರ ಪ್ರಯೋಗ ನಡೆಸಬೇಕಾಗುತ್ತದೆ. ಅದಕ್ಕೆಂದೇ ಬಹಳ ವ್ಯಾಪಕ ಪರೀಕ್ಷೆಗಳ ಅಗತ್ಯವಿರುತ್ತದೆ. ಲಸಿಕೆ ಪರಿಪೂರ್ಣವಾಗಿ ಹಾಗೂ ಸುರಕ್ಷಿತವಾಗಿ ತಯಾರಾಗಬೇಕಾದರೆ 5 ವರ್ಷವಾದರೂ ಬೇಕು ಎನ್ನುತ್ತಾರೆ ಪರಿಣಿತರು. ಆದರೆ, ಕೊರೋನಾ ವೈರಸ್ ವಿಶ್ವದೆಲ್ಲೆಡೆ ನಾಗಾಲೋಟ ನಡೆಸುತ್ತಿರುವುದರಿಂದ ಸಾಧ್ಯವಾದಷ್ಟು ಬೇಗ ಲಸಿಕೆ ತಯಾರಿಕೆ ಮುಗಿಸಲು ಅನೇಕ ದೇಶಗಳು ಮುಂದಾಗಿವೆ.

ಮೂರು ಹಂತದ ಪ್ರಯೋಗಗಳು:

ಮೊದಲ ಹಂತ: ಲಸಿಕೆ ತಯಾರಿಕೆಗೆ ಮೂರು ಹಂತಗಳನ್ನ ವಿಭಾಗಿಸಲಾಗಿದೆ. ಮೊದಲ ಹಂತದಲ್ಲಿ ಪ್ರಯೋಗಾಲಯದಲ್ಲಿ ಕೋಶಗಳ ಮೇಲೆ ಇದರ ಪರೀಕ್ಷೆ ನಡೆಯುತ್ತದೆ. ಆ ಬಳಿಕ ಇಲಿ, ಕೋತಿಯಂಥ ಪ್ರಾಣಿಗಳ ಮೇಲೆ ಪ್ರಯೋಗಿಸಿ ಅದರ ಸುರಕ್ಷತೆಯ ವಾಸ್ತವತೆಯನ್ನು ಅರಿಯಲಾಗುತ್ತದೆ. ಈ ಹಂತದಲ್ಲೇ ಲಸಿಕೆಯ ಬಹುಭಾಗದ ಹಣೆಬರಹ ಗೊತ್ತಾಗಿಹೋಗುತ್ತದೆ. ಇದು ಪ್ರೀಕ್ಲಿನಿಕಲ್ ಅಧ್ಯಯನ ಎನ್ನುತ್ತಾರೆ. ಸಾಮಾನ್ಯವಾಗಿ ಇದಕ್ಕೆ 6 ತಿಂಗಳಿಂದ 2 ವರ್ಷದವರೆಗೆ ಇದಕ್ಕೆ ಸಮಯ ಬೇಕಾಗಬಹುದು. ಇದಾದ ಬಳಿಕ ಲಸಿಕೆ ನಿಯಂತ್ರಣ ಸಂಸ್ಥೆಗೆ ಎಲ್ಲಾ ವಿವರ ನೀಡಿ ಮಾನವ ಪ್ರಯೋಗಕ್ಕೆ ಅನುಮತಿ ಪಡೆಯಬೇಕಾಗುತ್ತದೆ. ಆರೋಗ್ಯವಂತರಾಗಿರುವ 20-80 ವ್ಯಕ್ತಿಗಳಿಗೆ ಈ ವ್ಯಾಕ್ಸಿನ್ ನೀಡಿ ಯಾವುದೇ ಅಡ್ಡಪರಿಣಾಮವಾಗದೇ ಹೋದಾಗ ಎರಡನೇ ಹಂತದ ಪ್ರಯೋಗಕ್ಕೆ ಅನುಮತಿ ಸಿಗುತ್ತದೆ.

ಎರಡನೇ ಹಂತ: ಇದು ಬಹಳ ಮುಖ್ಯವಾದ ಹಂತ. ಇಲ್ಲಿ ಸಾವಿರಾರು ಜನರ ಮೇಲೆ ವ್ಯಾಕ್ಸಿನ್ ಪ್ರಯೋಗ ಮಾಡಬೇಕಾಗುತ್ತದೆ. ಸೋಂಕಿನ ಅಪಾಯ ಹೆಚ್ಚು ಇರುವ ವರ್ಗದ ಜನರನ್ನೂ, ಅಂದರೆ ಮಕ್ಕಳು, ವೃದ್ಧರು ಮೊದಲಾದವರನ್ನು ಪ್ರಯೋಗಕ್ಕೆ ಬಳಸಿಕೊಳ್ಳಬೇಕು. ಇದು ಒಂದು ನಿರ್ದಿಷ್ಟ ಸ್ಥಳದಲ್ಲಿ ಒಂದೇ ಸಮುದಾಯದ ಜನರ ಮೇಲೆ ನಡೆಯುವ ಪ್ರಯೋಗವಲ್ಲ. ಬೇರೆ ಬೇರೆ ಭಾಗಗಳಲ್ಲಿ ಯಾದೃಚ್ಛಿಕವಾಗಿ (Random) ಜನರನ್ನು ಈ ಪ್ರಯೋಗಕ್ಕೆ ಬಳಸಿಕೊಳ್ಳಬೇಕು. ಹಾಗೆಯೇ, ಮಾನಸಿಕವಾಗಿಯೂ ಇದರ ಪ್ರಯೋಗ ಆಗಬೇಕು. ಮಾನಸಿಕವಾಗಿ ಅಂದರೆ, ಪ್ರಯೋಗಕ್ಕೆ ತೆರೆದುಕೊಳ್ಳುವ ಒಬ್ಬ ವ್ಯಕ್ತಿಗೆ ಲಸಿಕೆ ನೀಡುವುದಾಗಿ ಹೇಳಲಾಗುತ್ತದೆ. ಆದರೆ, ಲಸಿಕೆ ಬದಲು ಯಾವುದೇ ಪರಿಣಾಮ ಬೀರದ ಬೇರೊಂದು ಔಷಧವನ್ನು ನೀಡಲಾಗುತ್ತದೆ. ಮಾನಸಿಕವಾಗಿ ಆತನ ಮೇಲೆ ಆಗುವ ಪರಿಣಾಮವನ್ನೂ ಅವಲೋಕಿಸಲಾಗುತ್ತದೆ.

ಮೂರನೇ ಹಂತ: ಇಲ್ಲಿ ಕನಿಷ್ಠ 20 ಸಾವಿರ ಜನರ ಮೇಲಾದರೂ ಲಸಿಕೆಯ ಪ್ರಯೋಗ ಆಗಬೇಕಾಗುತ್ತದೆ. ಆಗ ಮಾತ್ರ ಇದರ ಸುರಕ್ಷತೆಯ ಪ್ರಮಾಣವನ್ನು ಅಂದಾಜು ಮಾಡಲು ಸಾಧ್ಯ ಎನ್ನುವುದು ತಜ್ಞರ ಅಭಿಪ್ರಾಯ. ಈ ಲಸಿಕೆ ಎಷ್ಟು ಪರಿಣಾಮಕಾರಿ? ಪರಿಣಾಮಕಾರಿಯಾದರೂ ಎಷ್ಟು ಸಮಯದವರೆಗೆ ಅದು ಸುರಕ್ಷಾ ಕವಚ ಒದಗಿಸುತ್ತದೆ ಇತ್ಯಾದಿಯನ್ನು ಗಮನಿಸಬೇಕಾಗುತ್ತದೆ. ಲಸಿಕೆ ಪಡೆದ ವ್ಯಕ್ತಿಗೆ ಸಹಜ ರೀತಿಯಲ್ಲಿ ಸೋಂಕು ತಗುಲಿಸಿ ಆತನಲ್ಲಿ ಆಗುವ ಪರಿಣಾಮವನ್ನೂ ಗಮನಿಸಬೇಕು. ಇವೆಲ್ಲವೂ ಈ ಅಂತಿಮ ಹಂತದಲ್ಲಿರುತ್ತದೆ. ಈ ಮೂರು ಹಂತಗಳು ಯಶಸ್ವಿಯಾದರೆ ಲಸಿಕೆಯ ಉತ್ಪಾದನೆಗೆ ಹಸಿರು ನಿಶಾನೆ ಸಿಗುತ್ತದೆ.

ಲಸಿಕೆ ಉತ್ಪಾದನೆ ಮತ್ತು ವಿತರಣೆಯ ಸವಾಲು:

ಇಡೀ ವಿಶ್ವಕ್ಕೆ ಲಸಿಕೆ ಬೇಕಾಗಿದೆ. ಅಂದರೆ 700 ಕೋಟಿಯಷ್ಟು ಲಸಿಕೆಗಳ ಅಗತ್ಯತೆ ಇದೆ. ಲಸಿಕೆ ಉತ್ಪಾದನೆ ಆದ ಬಳಿಕ ಬಹಳ ಸುರಕ್ಷಿತವಾಗಿ ವಿವಿಧ ಸ್ಥಳಗಳಲ್ಲಿ ಸಾಗಿಸುವುದು ಬಹಳ ತಲೆನೋವಿನ ಕೆಲಸ. ಸ್ವಲ್ಪ ಯಡವಟ್ಟಾದರೂ ಜನರ ಪ್ರಾಣಕ್ಕೆ ಸಂಚಕಾರ ಆಗಬಲ್ಲುದು. ಭಾರತದಲ್ಲಿ ಪೋಲಿಯೋ ಲಸಿಕೆಯ ಅನುಭವ ಇರುವುದರಿಂದ ಇಲ್ಲಿ ಲಸಿಕೆ ವಿತರಣೆ ಸಮರ್ಪಕವಾಗಿ ನಡೆಯುವ ನಿರೀಕ್ಷೆ ಇದೆ.

ಇದರ ಬೆಲೆ ಎಷ್ಟು?

ಒಂದೊಂದು ಕಂಪನಿಯ ವ್ಯಾಕ್ಸಿನ್​ನ ಬೆಲೆ ಭಿನ್ನವಾಗಿರುತ್ತದೆ. 200 ರೂಪಾಯಿಯಿಂದ ಹಿಡಿದು 30 ಸಾವಿರ ರೂಪಾಯಿಯರೆಗೂ ಇದರ ಬೆಲೆ ಇರಬಹುದು. ಆಕ್ಸ್​ಫರ್ಡ್ ವಿವಿಯ ಲಸಿಕೆ 1,000 ರೂಪಾಯಿಗೆ ಲಭ್ಯವಿರಲಿದೆ ಎಂದು ಆ ಕಂಪನಿ ಹೇಳಿದೆ. ಒಂದೇ ಡೋಸ್ ಮಾತ್ರ ಸಾಕು. ಕೆಲ ಲಸಿಕೆಗಳಿಗೆ 3 ಡೋಸ್​ಗಳು ಅಗತ್ಯ ಇರುತ್ತದೆ. ಭಾರತ್ ಬಯೋಟೆಕ್ ಸಂಸ್ಥೆ ತಯಾರಿಸುತ್ತಿರುವ ಲಸಿಕೆಯ ಬೆಲೆ ತುಸು ಕಡಿಮೆ ಇರಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಯಾರೂ ಕೂಡ ಈ ಹಂತದಲ್ಲಿ ಇನ್ನೂ ಬೆಲೆ ನಿಗದಿಪಡಿಸಿಲ್ಲ.

ಮಾಹಿತಿ ಕೃಪೆ: Vishwanath Pilla, Money Control
ಇದರ ಇಂಗ್ಲೀಷ್ ಲೇಖನಕ್ಕೆ ಇಲ್ಲಿ ಕ್ಲಿಕ್ ಮಾಡಿ
Published by:Vijayasarthy SN
First published: