Covid-19 Vaccine: ಚಾಮರಾಜನಗರದಲ್ಲಿ ಕೊರೋನಾ ಲಸಿಕೆಗೆ ಶ್ರೀಕಾರ; ವಿಜ್ಞಾನಿಗಳಿಗೆ ಪುಷ್ಪಾರ್ಚನೆ 

ಚಾಮರಾಜನಗರ ಜಿಲ್ಲೆಯಲ್ಲಿ ಆರು ಕೇಂದ್ರಗಳಲ್ಲಿ ಕೊರೋನಾ ವಾರಿಯರ್ಸ್​ಗೆ ಕೋವಿಡ್ ಲಸಿಕೆ ಹಾಕಲಾಯಿತು. ನಗರದ ಸರ್ಕಾರಿ  ಮೆಡಿಕಲ್ ಕಾಲೇಜಿನಲ್ಲಿ  ಡಿ ಗ್ರೂಪ್ ನೌಕರ ಮಂಜುನಾಥ್ ಎಂಬುವವರಿಗೆ ಮೊದಲ ಕೋವಿಡ್ ಲಸಿಕೆ ಹಾಕುವ ಮೂಲಕ ಚಾಲನೆ ನೀಡಲಾಯಿತು.

ಚಾಮರಾಜನಗರದಲ್ಲಿ ಕೊರೋನಾ ಲಸಿಕೆ ವಿತರಣೆ ಬಳಿಕ ಸಿಹಿ ಹಂಚಿ ಸಂಭ್ರಮಿಸಿದ ಜನರು

ಚಾಮರಾಜನಗರದಲ್ಲಿ ಕೊರೋನಾ ಲಸಿಕೆ ವಿತರಣೆ ಬಳಿಕ ಸಿಹಿ ಹಂಚಿ ಸಂಭ್ರಮಿಸಿದ ಜನರು

  • Share this:
ಚಾಮರಾಜನಗರ (ಜ. 16): ಬಹುನಿರೀಕ್ಷಿತ ಕೊರೋನಾ ಲಸಿಕೆ ವಿತರಣೆ ಅಭಿಯಾನ ಆರಂಭವಾಗುತ್ತಿದ್ದಂತೆ ಗಡಿ ಜಿಲ್ಲೆಯಾದ ಚಾಮರಾಜನಗರದಲ್ಲಿ ದೇವರಿಗೆ ಈಡುಗಾಯಿ ಒಡೆದು, ಸಾರ್ವಜನಿಕರಿಗೆ ಸಿಹಿ ಹಂಚಿ, ವಿಜ್ಞಾನಿಗಳಿಗೆ ಪುಷ್ಪಾರ್ಚನೆ ಮಾಡಿ ಸಂಭ್ರಮಾಚರಣೆ ಮಾಡಲಾಗಿದೆ. ಇಂದು ಬೆಳಿಗ್ಗೆ 11 ಗಂಟೆಗೆ ದೇಶಾದ್ಯಂತ ಕೊರೋನಾ ಲಸಿಕೆ ಹಾಕುವ ಅಭಿಯಾನಕ್ಕೆ  ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡುತ್ತಿದ್ದಂತೆ ಚಾಮರಾಜನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು,  ಕೊರೊನಾ ಮಹಾಮಾರಿಯಿಂದ ಭಾರತೀಯರಿಗೆ ರಕ್ಷಣೆ ದೊರೆಯುತ್ತಿರುವುದಕ್ಕೆ ಚಾಮರಾಜೇಶ್ವರನಿಗೆ ಕರ್ಪೂರ ಹಚ್ಚಿ, ಈಡುಗಾಯಿ ಒಡೆದು ಪೂಜೆ ಸಲ್ಲಿಸಿದರು. ಪುಷ್ಪಾರ್ಚನೆ ಮಾಡಿ ವಿಜ್ಞಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಕೊರೊನಾ ಲಸಿಕೆಯನ್ನು ಕಂಡುಹಿಡಿದ ವಿಜ್ಞಾನಿಗಳಿಗೆ ಜೈಕಾರ ಹಾಕಿದರು. ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ಕಳೆದ ಒಂದು ವರ್ಷದಿಂದ ಕೋಟ್ಯಂತರ ಭಾರತೀಯರು  ಕಾತುರದಿಂದ ಕಾಯುತ್ತಿದ್ದ ಕ್ಷಣ ಬರುತ್ತಿದ್ದಂತೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು. ಕೊರೋನಾ ಸೋಂಕಿಗೆ ಲಸಿಕೆ ಕಂಡು ಹಿಡಿದ ವಿಜ್ಞಾನಿಗಳಿಗೆ ಜಯಘೋಷ ಹಾಕುತ್ತಾ ಹೂ ಎರಚುತ್ತಾ  ಸಂಭ್ರಮಾಚರಣೆ ಮಾಡಿದ ಅವರು ಚಾಮರಾಜೇಶ್ವರ ದೇಗುಲದ ಮುಂದೆ ಕರ್ಪೂರ ಹಚ್ಚಿ, ಈಡುಗಾಯಿ ಒಡೆದು ದೇವರಿಗೆ  ಕೃತಜ್ಞತೆ ಸಲ್ಲಿಸಿದರು. ಕರ್ತವ್ಯ ನಿರತ ಪೊಲೀಸರು ಸೇರಿದಂತೆ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ಡಿ ಗ್ರೂಪ್ ನೌಕರನಿಗೆ ಮೊದಲ ಲಸಿಕೆ:

ಚಾಮರಾಜನಗರ ಜಿಲ್ಲೆಯಲ್ಲಿ ಆರು ಕೇಂದ್ರಗಳಲ್ಲಿ ಕೊರೋನಾ ವಾರಿಯರ್ಸ್​ಗೆ ಕೋವಿಡ್ ಲಸಿಕೆ ಹಾಕಲಾಯಿತು. ನಗರದ ಸರ್ಕಾರಿ  ಮೆಡಿಕಲ್ ಕಾಲೇಜಿನಲ್ಲಿ  ಡಿ ಗ್ರೂಪ್ ನೌಕರ ಮಂಜುನಾಥ್ ಎಂಬುವವರಿಗೆ ಮೊದಲ ಕೋವಿಡ್ ಲಸಿಕೆ ಹಾಕುವ ಮೂಲಕ ಚಾಲನೆ ನೀಡಲಾಯಿತು. ಲಸಿಕೆ ಹಾಕುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ತಳಿರು -ತೋರಣ, ಬಲೂನು ಕಟ್ಟಿ ರಂಗೋಲಿ ಹಾಕಿ ಹಬ್ಬದ ವಾತಾವರಣ ಸೃಷ್ಟಿಸಲಾಗಿತ್ತು.

ಇದನ್ನೂ ಓದಿ: Covid-19 Vaccine: ಬೆಂಗಳೂರಿನ ಎಲ್ಲೆಲ್ಲಿ ಇಂದು ಕೊರೋನಾ ಲಸಿಕೆ ಲಭ್ಯ?; ಇಲ್ಲಿದೆ ಪೂರ್ತಿ ಮಾಹಿತಿ

ಮೊದಲು ಕೋವಿಡ್ ಲಸಿಕೆ ಪಡೆದ ಡಿ. ಗ್ರೂಪ್ ನೌಕರ ಮಂಜುನಾಥ್ ಲವಲವಿಕೆಯಿಂದಲೇ ಇದ್ದು ತಮಗೆ ಯಾವುದೇ ಭಯವಾಗಲಿ ಆತಂಕವಾಗಲಿ ಇಲ್ಲ ಎಂದು ಪ್ರತಿಕ್ರಿಯಿಸಿದರು. ಎರಡನೆಯವರಾಗಿ ಮೆಡಿಕಲ್ ಕಾಲೇಜಿನ ಡೀನ್ ಹಾಗು ನಿರ್ದೇಶಕ ಡಾ.ಸಂಜೀವ್ ಕೋವಿಡ್ ಲಸಿಕೆ ಪಡೆಯುವ ಮೂಲಕ ಇತರ ಆರೋಗ್ಯ ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

ವಿಶೇಷವೆಂದರೆ ಜಿಲ್ಲೆಯ ಸರ್ಕಾರಿ  ಕಾಲೇಜಿನಲ್ಲಿ ಕೋವ್ಯಾಕ್ಸಿನ್ ಲಸಿಕೆ ಹಾಕಿದರೆ ಉಳಿದ ಐದು ಕೇಂದ್ರಗಳಲ್ಲಿ ಕೋವಿಶೀಲ್ಡ್ ಲಸಿಕೆ ಹಾಕಲಾಯಿತು. ಕೋವ್ಯಾಕ್ಸಿನ್ ಗೂ ಕೋವಿಶೀಲ್ಡ್ ಗೂ ಅಷ್ಟೇನೂ ವ್ಯತ್ಯಾಸವಿಲ್ಲ. ಎರಡೂ ಸಹ ಟ್ರಯಲ್ ರನ್ ಆಗಿ ಬಂದಿವೆ. ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಡೀನ್ ಡಾ. ಸಂಜೀವ್ ಹೇಳಿದರು.

ಚಾಮರಾಜನಗರ ಜಿಲ್ಲೆಗೆ 4 ಸಾವಿರ  ಡೋಸ್ ಕೋವಿಶೀಲ್ಡ್ ಹಾಗೂ 320 ಡೋಸ್ ಕೋವ್ಯಾಕ್ಸಿನ್ ಬಂದಿದ್ದು, ಮೊದಲ ಹಂತದಲ್ಲಿ 814 ಮಂದಿಗೆ  ಲಸಿಕೆ ಹಾಕಿ ನಂತರ ಹಂತಹಂತವಾಗಿ ಉಳಿದವರಿಗೆ ಲಸಿಕೆ ಹಾಕಲಾಗುವುದು ಎಂದು  ಡಿ.ಹೆಚ್.ಓ.  ಡಾ. ಎಂ.ಸಿ. ರವಿ ತಿಳಿಸಿದರು.

(ವರದಿ: ಎಸ್. ನಂದೀಶ್ )
Published by:Sushma Chakre
First published: