news18-kannada Updated:January 16, 2021, 8:46 AM IST
ಸಾಂದರ್ಭಿಕ ಚಿತ್ರ,
ಬೆಂಗಳೂರು (ಜ. 16): ಇಂದು ದೇಶಾದ್ಯಂತ ಕೊರೊನಾ ವ್ಯಾಕ್ಸಿನೇಷನ್ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ವ್ಯಾಕ್ಸಿನೇಷನ್ ಇರಲಿದೆ. ಹಾಗಿದ್ದರೆ, ಬೆಂಗಳೂರಿನಲ್ಲಿ ಕೊರೋನಾ ವ್ಯಾಕ್ಸಿನೇಷನ್ ಹೇಗಿರುತ್ತದೆ? ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಬಿಬಿಎಂಪಿ ವ್ಯಾಪ್ತಿಯಲ್ಲಿ 6 ಲಸಿಕಾ ಕೇಂದ್ರಗಳಲ್ಲಿ ಕೊರೋನಾ ಲಸಿಕೆಯನ್ನು ನೀಡಲಾಗುತ್ತದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ 5 ಲಸಿಕಾ ಕೇಂದ್ರಗಳಲ್ಲಿ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ನೀಡಲಾಗುತ್ತದೆ. ಸರ್ಕಾರಿ ಹಾಗೂ ಖಾಸಗಿ ಮೆಡಿಕಲ್ ಕಾಲೇಜಿನಲ್ಲೂ ಲಸಿಕೆ ನೀಡಲಾಗುತ್ತದೆ.
ಈಗಾಗಲೇ ಬಿಬಿಎಂಪಿ ಹಾಗೂ ಬೆಂಗಳೂರು ನಗರ ವ್ಯಾಪ್ತಿಗೆ ವ್ಯಾಕ್ಸಿನ್ ಹಾಗೂ ಸಿರಿಂಜ್ ನೀಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಕ್ಟೋರಿಯಾ ಆಸ್ಪತ್ರೆ, ಸಿವಿ ರಾಮನ್ ನಗರ ಜನರಲ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ, ಕೆಸಿ ಜನರಲ್ ಆಸ್ಪತ್ರೆ, ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜ್, ಮಲ್ಲಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೋನಾ ಲಸಿಕೆಗಳನ್ನು ನೀಡಲಾಗುತ್ತದೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕೆ.ಆರ್ ಪುರ ತಾಲೂಕು ಆಸ್ಪತ್ರೆ, ಆನೇಕಲ್ ತಾಲೂಕು ಆಸ್ಪತ್ರೆ, ಯಲಹಂಕ ತಾಲೂಕು ಆಸ್ಪತ್ರೆ, ಕಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಈಸ್ಟ್ ಪಾಯಿಂಟ್ ಮೆಡಿಕಲ್ ಕಾಲೇಜಿನಲ್ಲಿ ಕೊರೋನಾ ಲಸಿಕೆಗಳನ್ನು ವಿತರಿಸಲಾಗುತ್ತದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿರುವ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಇಂದು ಬೆಳಗ್ಗೆ 10.30ಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಕೊರೋನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಆರೋಗ್ಯ ಸಚಿವ ಡಾ. ಕೆ. ಸುಧಾಕರ, ಆರೋಗ್ಯ ತಜ್ಞರ ಸಮ್ಮುಖದಲ್ಲಿ ಚಾಲನೆ ನೀಡಲಿದ್ದಾರೆ. ಇದಕ್ಕಾಗಿ ಬಿಎಂಸಿಯನ್ನು ಬಲೂನುಗಳಿಂದ ಅಲಂಕರಿಸಿ, ಎಲ್ಇಡಿ ವ್ಯವಸ್ಥೆ ಮಾಡಿ ಮದುವಣಗಿತ್ತಿಯಂತೆ ಸಿಂಗರಿಸಲಾಗಿದೆ. ಸಿಎಂ ಆಗಮನ ಹಿನ್ನೆಲೆ ಭಾರೀ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಇದನ್ನೂ ಓದಿ: Covid-19 Vaccine: ಕೊರೋನಾ ಲಸಿಕೆ ಅಭಿಯಾನಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ; ಆರೋಗ್ಯ ಕಾರ್ಯಕರ್ತರಿಗೆ ಮೊದಲ ಆದ್ಯತೆ
ಇಂದು ಕರ್ನಾಟಕದ 243 ಕೇಂದ್ರಗಳಲ್ಲಿ ಮೊದಲ ಲಸಿಕೆಯನ್ನು ಪೌರ ಕಾರ್ಮಿಕರಿಗೆ ನೀಡಲು ನಿರ್ಧಾರ ಮಾಡಲಾಗಿದೆ. ಸ್ವಚ್ಛತಾ ಕಾರ್ಮಿಕರಿಗೆ ಮೊದಲ ಲಸಿಕೆ ಕೊಟ್ಟು ವಿಶೇಷ ಗೌರವ ಸಲ್ಲಿಕೆ ಮಾಡಲು ನಿರ್ಧರಿಸಲಾಗಿದೆ. ರಾಜ್ಯದ 243 ಕೇಂದ್ರಗಳಲ್ಲಿ ಒಟ್ಟು 24,300 ಜನರಿಗೆ ಲಸಿಕೆ ಹಂಚಿಕೆ ಮಾಡಲಾಗುವುದು. ಪ್ರತಿ ಕೇಂದ್ರದಲ್ಲಿ ನೋಂದಣಿ ಮಾಡಿಕೊಂಡವರಿಗೆ ಲಸಿಕೆ ನೀಡಲಾಗುವುದು. ಪರಿಶೀಲನೆಗೆಂದು 4 ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ.
ಮೊದಲು ನೋಂದಣಿ ಕೊಠಡಿ ಇರಲಿದ್ದು, ಇಲ್ಲಿ ಫಲಾನುಭವಿಗಳ ವಿವರ ಪರಿಶೀಲನೆ ಮಾಡಲಾಗುವುದು. ಲಸಿಕೆ ಸರದಿ ಸಂಖ್ಯೆ ಪಡೆದ ಬಳಿಕ ನಿರೀಕ್ಷಣಾ ಕೊಠಡಿಗೆ ಫಲಾನುಭವಿಗಳ ಸ್ಥಳಾಂತರ ಮಾಡಲಾಗುವುದು. ವೈದ್ಯ, ನರ್ಸ್, ಅರವಳಿಕೆ ತಜ್ಞರು ಕೊಠಡಿಯಲ್ಲಿ ಲಸಿಕೆ ನೀಡುವರು. 30 ನಿಮಿಷಗಳ ಕಾಲ ನಿಗಾ ವಹಿಸಲಾಗುವುದು. ಒಂದುವೇಳೆ ಲಸಿಕೆ ಪಡೆದವರು ಅಸ್ವಸ್ಥರಾದರೆ ಆಸ್ಪತ್ರೆಗೆ ದಾಖಲು ಮಾಡಲಾಗುವುದು. ಇಲ್ಲದಿದ್ದರೆ ಮನೆಗೆ ತೆರಳಲು ಅವಕಾಶ ನೀಡಲಾಗುವುದು.
ದೇಶಾದ್ಯಂತ ಇಂದು ಕೊರೋನಾ ವ್ಯಾಕ್ಸಿನೇಷನ್ ಆರಂಭಗೊಳ್ಳಲಿದ್ದು, ಕೋವಿಡ್ ವಿರುದ್ದ ಹೋರಾಡಿದ್ದ ಫ್ರಂಟ್ಲೈನ್ ಕಾರ್ಯಕರ್ತರಿಗೆ ಮೊದಲು ಲಸಿಕೆ ನೀಡಲಾಗುವುದು. ಬೆಳಗ್ಗೆ 10.30ಕ್ಕೆ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಕರ್ನಾಟಕದಲ್ಲೂ ಲಸಿಕೆ ಹಂಚಿಕೆ ಮಾಡಲಾಗುವುದು.
Published by:
Sushma Chakre
First published:
January 16, 2021, 8:46 AM IST