ನವದೆಹಲಿ (ಜೂನ್ 19): 'ರಾಷ್ಟ್ರ ರಾಜಧಾನಿದಲ್ಲಿ ಆನ್ಲಾಕ್ ಆಗುತ್ತಿದಂತೆ ಜನರು ಕೋವಿಡ್ ಮಾನದಂಡವನ್ನು ಮರೆತು ಓಡಾಡುತ್ತಿದ್ದಾರೆ. ಇದು ಮುಂದುವರಿದರೆ 3ನೇ ಅಲೆ ತ್ವರಿತವಾಗಿ ಬರಲಿದೆ' ಎಂದು ದೆಹಲಿ ಹೈಕೋರ್ಟ್ ಎಚ್ಚರಿಕೆ ನೀಡಿದ್ದು, ಪ್ರಸ್ತತ ಸ್ಥಿತಿಗತಿಗಳ ವರದಿ ನೀಡುವಂತೆ ಕೇಂದ್ರ ಹಾಗೂ ದೆಹಲಿ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ನಿಯಮಗಳನ್ನು ಪಾಲಿಸದವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಅಂಗಡಿಗಳ ಮಾಲೀಕರಿಗೆ ಈ ಕುರಿತು ಸರಿಯಾದ ನಿರ್ದೇಶನ ನೀಡಬೇಕು ಎಂದೂ ಹೇಳಿದೆ. ದೆಹಲಿಯಲ್ಲಿ ಹಂತ ಹಂತವಾಗಿ ಅನ್ಲಾಕ್ ಪ್ರಕ್ರಿಯೆ ಆಗುತ್ತಿದ್ದಂತೆ ಮಾರುಕಟ್ಟೆಗಳಲ್ಲಿ ಮತ್ತು ರೆಸ್ಟೊರಂಟ್ಗಳಲ್ಲಿ ಜನ ನುಗ್ಗುತ್ತಿದ್ದಾರೆ. ಹೀಗೆ ಜನರು ಸುರಕ್ಷತೆಯ ಮಾನದಂಡಗಳನ್ನು ಅನುಸರಿಸದಿದ್ದರೆ ದೆಹಲಿ 2ನೇ ಅಲೆಗಿಂತ ತೀವ್ರವಾದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ವೈದ್ಯರೂ ಎಚ್ಚರಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ನಗರದ ವಿವಿಧೆಡೆಗಳಲ್ಲಿ, ಮಾರುಕಟ್ಟೆಗಳಲ್ಲಿ ಜನದಟ್ಟಣೆಯ ದೃಶ್ಯಗಳು, ವರದಿಗಳನ್ನು ನೋಡಿದ ನಂತರ ವೈದ್ಯರು ಈ ಹೇಳಿಕೆಯನ್ನು ನೀಡಿದ್ದಾರೆ. ಸರ್ಕಾರ ನೀಡಿರುವ ಕೋವಿಡ್ ಮಾರ್ಗದರ್ಶಿಗಳನ್ನು ಅನೇಕ ಜನರು ಅನುಸರಿಸುತ್ತಿಲ್ಲ. ಅನೇಕರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಓಡಾಗುತ್ತಿದ್ದಾರೆ. ಅಂತಹವರಿಂದ ಪೂರ್ಣ ದೆಹಲಿಯೇ ಸಂಕಷ್ಟಕ್ಕೀಡಾಗುವ ಪರಿಸ್ಥಿತಿ ಬರಲಿದೆ ಎನ್ನುವುದು ವೈದ್ಯರ ಮಾತು.
'ಕೋವಿಡ್ ಸುರಕ್ಷತಾ ಮಾನದಂಡಗಳನ್ನು ಜನರು ಅನುಸರಿಸದಿದ್ದರೆ ಹಾಗೂ ಈ ನಿಯಮಗಳನ್ನು ಉಲ್ಲಂಘಿಸುವವರಿಗೆ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ನಿಜಕ್ಕೂ ನಾವು ಮತ್ತೆ ತೊಂದರೆಗೆ ಸಿಲುಕುತ್ತೇವೆ ಎಂದು ಇಲ್ಲಿನ ಅಪೋಲೊ ಆಸ್ಪತ್ರೆಗಳ ಹಿರಿಯ ಸಲಹೆಗಾರ ಡಾ. ಸುರಂಜಿತ್ ಚಟರ್ಜಿ ಹೇಳಿದ್ದಾರೆ.
'ಹೇಗೆ ಏಪ್ರಿಲ್ನಲ್ಲಿ ಗರಿಷ್ಠ 28,000 ಪ್ರಕರಣಗಳಿಂದ, 131 ಪ್ರಕರಣಗಳಿಗೆ ನಾವು ಬಂದಿದ್ದೇವೆ. ಈ ರೀತಿಯ ಜಾದು ನಡೆಯಲು ಲಾಕ್ಡೌನ್ ಪ್ರಮುಖ ಕಾರಣ ಎನ್ನುವುದಾರೆ. ಜನರೇ ಅರ್ಥ ಮಾಡಿಕೊಳ್ಳಬೇಕು ಮತ್ತು ಆನ್ಲಾಕ್ ಆಗುತ್ತಿರುವುದರಿಂದ ನಾವೇ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು. ಆದರೆ, ಜನರು ನಿರ್ಲಕ್ಷ್ಯ ಮಾಡಿದರೆ, ಮಾಸ್ಕ್ ಧರಿಸದೆ ಅಥವಾ ಸರಿಯಾಗಿ ಧರಿಸದೆ ಓಡಾಡಿದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ, ಹೀಗೆ ನಿಯಮ ಪಾಲಿಸದವರ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಖಂಡಿತ ಅಪಾಯ ಕಟ್ಟಿಟ್ಟ ಬುತ್ತಿ. ಅಲ್ಲದೆ, ಮುಂದಿನ ಮೂರನೇ ಅಲೆಯು ಎರಡನೇ ಅಲೆಗಿಂತ ಹೆಚ್ಚು ತೀವ್ರವಾಗಿರುತ್ತದೆ' ಎಂದು ಪಿಟಿಐಗೆ ತಿಳಿಸಿದರು.
'ಲಾಕ್ಡೌನ್ನಿಂದಾಗಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆಯೇ ಹೊರತು, ರೋಗದ ತೀವ್ರತೆ ಹಾಗೆಯೇ ಇದೆ. ಮೂರನೇ ಅಲೆಯ ಭೀತಿ ನಿಜವೇ ಹೊರತು ಊಹಾಪೋಹವಲ್ಲ. ಜನರು ಮುಂದೆ ಪರಿತಪಿಸುವ ಬದಲು ಎಚ್ಚರಿಕೆಯಿಂದ ಇದ್ದು, ಮಾರ್ಗಸೂಚಿಯನ್ನು ಸರಿಯಾಗಿ ಪಾಲಿಸಿದರೆ, ನಾವು ಕೋರೋನದಿಂದ ಆಗುವ ಅಪಾಯವನ್ನು ತಡೆಯಬಹುದು' ಎಂದು ಫೋರ್ಟೀಸ್ ಆಸ್ಪತ್ರೆಯ ಶ್ವಾಸಕೋಶ ವಿಭಾಗದ ಸಹಾಯಕ ವೈದ್ಯರಾದ ಡಾ. ರಿಚಾ ಸರೀನ್ ಒತ್ತಿ ಹೇಳಿದರು.
ಲಾಕ್ಡೌನ್ ಹೇರಿದಾಗಿನಿಂದ, ಕೋವಿಡ್ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅನೇಕರಿಗೆ ದಂಡ ವಿಧಿಸಲಾಗಿದೆ ಮತ್ತು ದೆಹಲಿ ಸರ್ಕಾರವು ಹಂತಹಂತವಾಗಿ ಅನ್ಲಾಕ್ ಮಾಡಿದ ನಂತರ ಪ್ರಕರಣಗಳು ಹೆಚ್ಚಾಗಲು ಪ್ರಾರಂಭಿಸಿದರೆ ಮತ್ತೆ ನಿರ್ಬಂಧಗಳನ್ನು ವಿಧಿಸಲಾಗುವುದು ಎಂದು ಹೇಳಲಾಗಿದೆ. ಈಗಾಗಲೇ ದೆಹಲಿ ಮಾತ್ರವಲ್ಲದೆ ಕರ್ನಾಟಕ, ತಮಿಳುನಾಡು ಮುಂತಾದ ಅನೇಕ ರಾಜ್ಯಗಳಲ್ಲಿ ಹಂತಹಂತವಾಗಿ ಅನ್ಲಾಕ್ ಪ್ರಕ್ರಿಯೆ ನಡೆಸಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ