ನವದೆಹಲಿ(ಜೂನ್ 21): ವಿಶ್ವದ ಬಹುತೇಕ ರಾಷ್ಟ್ರಗಳು ಕೊರೋನಾ ರೋಗದ ವಿರುದ್ಧ ಸಂಪೂರ್ಣ ಪ್ರಯತ್ನ ಹಾಕಿ ಹೋರಾಟ ಮಾಡುತ್ತಿವೆ. ವೈದ್ಯಕೀಯ ವ್ಯವಸ್ಥೆಯ ಬಹುಪಾಲು ಈ ಕೋವಿಡ್-19 ವಿರುದ್ಧದ ಹೋರಾಟಕ್ಕೇ ಮೀಸಲಾಗಿದೆ. ಬೇರೆ ಬೇರೆ ರೋಗಗಳಿಂದ ಬಳಲುತ್ತಿರುವವರಿಗೆ ಸರಿಯಾದ ಚಿಕಿತ್ಸೆ ಸಿಗದೆ ಪರದಾಡುವ ಪರಿಸ್ಥಿತಿ ಬಂದಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಅವರು ಈ ವಿಚಾರದಲ್ಲಿ ಜಗತ್ತಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಕೋವಿಡ್-19 ರೋಗವೊಂದಕ್ಕೇ ಎಲ್ಲರೂ ತಲೆಕೆಡಿಸಿಕೊಳ್ಳುವುದು ತರವಲ್ಲ. ಬೇರೆ ರೋಗಿಗಳಿಗೆ ಚಿಕಿತ್ಸೆಯ ಅಗತ್ಯವಿರುತ್ತದೆ ಎಂದು ಸೌಮ್ಯಾ ಸ್ವಾಮಿನಾಥನ್ ಹೇಳಿದರು.
ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಲೇ ನಮ್ಮ ವೈದ್ಯಕೀಯ ವ್ಯವಸ್ಥೆ ಪ್ರಬಲಗೊಳ್ಳುತ್ತದೆ. ಇದರಿಂದ ಮುಂದೆ ಇಂಥ ರೋಗ ಬಂದರೆ ಎದುರಿಸಲು ಸುಲಭಸಾಧ್ಯವಾಗುತ್ತದೆ. ಹಾಗೆಯೇ, ಕೋವಿಡ್-19 ಈ ವಿಶ್ವದ ಕೊನೆಯ ಸಾಂಕ್ರಾಮಿಕ ರೋಗವಲ್ಲ. ರೋಗಗಳು ಬರುತ್ತಲೇ ಇರುತ್ತವೆ. ಅವುಗಳನ್ನ ಸಮರ್ಥವಾಗಿ ಎದುರಿಸಬಹುದು ಎಂದು ಡಬ್ಲ್ಯೂಎಚ್ಒ ಮುಖ್ಯ ವಿಜ್ಞಾನಿ ತಿಳಿಸಿದರು.
ಇದನ್ನೂ ಓದಿ: ಭಾರತದಲ್ಲಿ ಕೋವಿಡ್-19 ಕಾವು: ಒಂದೇ ದಿನ 15,400 ಕೇಸ್, 4.10 ಲಕ್ಷ ದಾಟಿದ ಸೋಂಕಿತರ ಸಂಖ್ಯೆ
ನ್ಯೂಸ್18 ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು ಲಾಕ್ಡೌನ್ ತಂತ್ರಗಾರಿಕೆ ಬಗ್ಗೆ ಪ್ರಸ್ತಾಪ ಮಾಡಿದರು. ಭಾರತದಂಥ ಜನಸಂಖ್ಯೆ ಪ್ರಮಾಣ ಹೆಚ್ಚಿರುವ ದೇಶಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಲಾಕ್ಡೌನ್ ನಿಯಮಗಳನ್ನ ರೂಪಿಸಬೇಕು. ಗ್ರಾಮೀಣ ಭಾಗಕ್ಕೆ ಬೇರೆ ನಿಯಮ, ನಗರಗಳಿಗೆ ಬೇರೆ ನಿಯಮಗಳಿರಬೇಕು. ಭಾರತದ ನಗರಗಳಲ್ಲಿ ಹೆಚ್ಚು ಜನಸಂಖ್ಯೆ ಕೇಂದ್ರಿತವಾಗಿರುವುದರಿಂದ ಇಲ್ಲಿ ಸೋಂಕು ಹರಡುವುದನ್ನು ನಿಗ್ರಹಿಸಲು ಬಹಳ ಕಷ್ಟ. ನೋಡನೋಡುತ್ತಿದ್ದಂತೆಯೇ ಕ್ಲಸ್ಟರ್ಗಳು ಹೆಚ್ಚುತ್ತಾ ಹೋಗುತ್ತದೆ. ಈ ಕ್ಲಸ್ಟರ್ಗಳ ಏರಿಕೆಯನ್ನ ನಿಗ್ರಹಿಸಬೇಕು. ಕ್ಲಸ್ಟರ್ಗಳಲ್ಲಿ ವೈರಸ್ ಹರಡುವಿಕೆಯನ್ನ ನಿಗ್ರಹಿಸಲು ಗಮನ ಕೊಡಬೇಕು. ಇದಕ್ಕೆ ಪರೀಕ್ಷೆ, ಕ್ವಾರಂಟೈನ್ ಇತ್ಯಾದಿಯನ್ನು ವ್ಯಾಪಕವಾಗಿ ಮಾಡಬೇಕು ಎಂದು ಅವರು ಸಲಹೆ ನೀಡಿದರು.
- ಪೂರ್ಣಿಮಾ ಮುರಳಿ, CNN-News18 ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ