HOME » NEWS » Coronavirus-latest-news » COVID 19 DEAD BODIES EXCHANGED IN HAVERI SESR

ಸೋಂಕಿತರ ಶವ ಅದಲು ಬದಲು: ಹಿಂದೂ ಮಹಿಳೆಗೆ ಅಂತ್ಯಕ್ರಿಯೆ ಮಾಡಿದ ಮುಸ್ಲಿಂ ಕುಟುಂಬ

ನಿನ್ನೆ ರಾತ್ರಿ ಗದಿಗೆವ್ವ ಮೃತಪಟ್ಟ ಸಮಯದ ಆಸುಪಾಸಿನಲ್ಲಿ ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದ ಅರವತ್ತು ವರ್ಷದ ಮುಸ್ಲಿಂ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

news18-kannada
Updated:May 11, 2021, 9:07 PM IST
ಸೋಂಕಿತರ ಶವ ಅದಲು ಬದಲು: ಹಿಂದೂ ಮಹಿಳೆಗೆ ಅಂತ್ಯಕ್ರಿಯೆ ಮಾಡಿದ ಮುಸ್ಲಿಂ ಕುಟುಂಬ
ಸಾಂದರ್ಭಿಕ ಚಿತ್ರ
  • Share this:
ಹಾವೇರಿ (ಮೇ. 11): ಇಲ್ಲಿನ ಜಿಲ್ಲಾಸ್ಪತ್ರೆ ಶವಾಗಾರದ ಸಿಬ್ಬಂದಿಗಳ ಬೇಜವಾಬ್ದಾರಿಯಿಂದ ನಡೆಯಬಾರದ ಘಟನೆ ನಡೆದುಹೋಗಿದೆ. ಕೊರೋನಾ ಸೋಂಕಿನಿಂದ ಸಾವನ್ನಪ್ಪಿದವರ ಶವ ಹಸ್ತಾಂತರ ಮಾಡುವ ವೇಳೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಮೃತ ದೇಹಗಳೇ ಅದಲು ಬದಲಾಗಿವೆ. ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ನೇಶ್ವಿ ಗ್ರಾಮದ 64 ವರ್ಷದ ಗದಿಗೆವ್ವ ಎಂಬ ಮಹಿಳೆಗೆ ಅನಾರೋಗ್ಯಕ್ಕೆ ಒಳಗಾಗಿ ರಾಣೆಬೆನ್ನೂರಿನ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಅವರನ್ನು  ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಆಕೆಯ ಮಕ್ಕಳು ಊರಿಗೆ ಹೋಗಿದ್ದರು.  ನಿನ್ನೆ ಬೆಳಗಿನ ಜಾವ ಮಕ್ಕಳ ಮೊಬೈಲ್ ಗೆ ತಾಯಿ ಮೃತಪಟ್ಟಿರುವ ಸುದ್ದಿ ಬಂದಿದೆ. ಬೆಳಿಗ್ಗೆ ತಡಬಡಿಸಿ ಮಕ್ಕಳು ತಾಯಿಯ ಮುಖ ನೋಡಲು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಬಂದು ನೋಡಿದರೆ ಅಲ್ಲಿ ತಾಯಿಯ ಶವ ಇರಲಿಲ್ಲ. ತಾಯಿಯ ಶವದ ಬಗ್ಗೆ ಶವಾಗಾರದ ಸಿಬ್ಬಂದಿ ವಿಚಾರಿಸಿದಾಗ ಅದಾಗಲೇ ಇವರ ತಾಯಿಯ ಶವದ ಅಂತ್ಯಕ್ರಿಯೆ ನಡೆದಿದೆ ಅನ್ನೋ ಮಾಹಿತಿ ಗೊತ್ತಾಗಿದೆ.

ನೇಶ್ವಿ ಗ್ರಾಮದ ಮಹಿಳೆ ಶವವನ್ನ ಆಲದಕಟ್ಟಿ ಗ್ರಾಮಕ್ಕೆ ಕಳಿಸಿದ ಸಿಬ್ಬಂದಿ..!

ನಿನ್ನೆ ರಾತ್ರಿ ಗದಿಗೆವ್ವ ಮೃತಪಟ್ಟ ಸಮಯದ ಆಸುಪಾಸಿನಲ್ಲಿ ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದ ಅರವತ್ತು ವರ್ಷದ ಮುಸ್ಲಿಂ ಮಹಿಳೆಯೊಬ್ಬಳು ಮೃತಪಟ್ಟಿದ್ದಾರೆ. ಆಕೆಯ ಶವವನ್ನೂ ಗದಿಗೆವ್ವಳ ಶವದ ಜೊತೆಗೆ ಜಿಲ್ಲಾಸ್ಪತ್ರೆಯ ಶವಾಗಾರದಲ್ಲೇ ಇರಿಸಲಾಗಿತ್ತು. ಶವಾಗಾರದ ಸಿಬ್ಬಂದಿ ಬೆಳಿಗ್ಗೆ ಆಲದಕಟ್ಟಿ ಗ್ರಾಮದ ಮೃತ ಮಹಿಳೆಯ ಮಕ್ಕಳು ಹಾಗೂ ಸಂಬಂಧಿಕರು ತಮ್ಮ ತಾಯಿಯ ಶವ ಒಯ್ಯಲು ಆಸ್ಪತ್ರೆಗೆ ಬಂದಿದ್ದಾರೆ. ಆಗ ಶವಾಗಾರದ ಸಿಬ್ಬಂದಿ ಅವರ ತಾಯಿಯ ಶವದ ಬದಲು ಗದಿಗೆವ್ವಳ ಶವ ನೀಡಿದ್ದಾರೆ. ಪಿಪಿಇ ಕಿಟ್ ಅದು ಇದು ಅಂತಾ ಹಾಕಿ ಪ್ಯಾಕ್ ಮಾಡಿದ್ದರಿಂದ ಆಲದಕಟ್ಟಿ ಗ್ರಾಮದವರು ಶವ ತಮ್ಮ ತಾಯಿಯದೇ ಎಂದು ಊರಿಗೆ ಒಯ್ದು ಅಂತ್ಯ ಸಂಸ್ಕಾರ ಮಾಡಿದ್ದಾರೆ.

ಆಲದಕಟ್ಟಿ ಗ್ರಾಮದವರು ಒಯ್ದಿದ್ದು ರೋಜಾನಬಿ ಶವದ ಬದಲಾಗಿ ಗದಿಗೆವ್ವಳ ಶವ ಎನ್ನುವುದ ಗೊತ್ತಾಗಿದೆ. ಹೀಗಾಗಿ ಗದಿಗೆವ್ವಳ ಸಂಬಂಧಿಕರು ನಮಗೆ ನಮ್ಮ ತಾಯಿಯ ಶವ ಬೇಕು.  ನಾವು ನಮ್ಮ ತಾಯಿಯ ಮುಖ ನೋಡಬೇಕು ಅಂತಾ ಶವಾಗಾರದ ಬಳಿ ಕಣ್ಣೀರು ಹಾಕುತ್ತಾ ಕಾದು ಕುಳಿತಿದ್ದರು. ಇದನ್ನ ಗಮನಿಸಿದ ಶವಾಗಾರದ ಸಿಬ್ಬಂದಿ ಪೊಲೀಸರು ಹಾಗೂ ಅಧಿಕಾರಿಗಳ ನೆರವಿನೊಂದಿಗೆ ದಫನ್ ಮಾಡಿದ್ದ ಗದಿಗೆವ್ವಳ ಶವವನ್ನ ವಾಪಸ್ ತೆಗೆದು ಮಕ್ಕಳಿಗೆ ಹಸ್ತಾಂತರ ಮಾಡುವುದಾಗಿ ಹೇಳಿ ಹೋಗಿದ್ದರು.

ಶವ ತೆಗೆಯಲು ಬಿಡುವುದಿಲ್ಲ ಎಂದು ಹಠ ಹಿಡಿದ ಗ್ರಾಮಸ್ಥರು..!

ಶವ ಕೇಳಲು ಸಿಬ್ಬಂದಿಗಳು ಬರುವ ಹೊತ್ತಿಗಾಗಲೇ ಗದಿಗೆವ್ವಳ ಶವದ ಅಂತ್ಯಕ್ರಿಯೆ ಆಲದಕಟ್ಟಿಯ ರೋಜಾನಬಿಯ ಸಂಬಂಧಿಕರು ಹಾಗೂ ಗ್ರಾಮಸ್ಥರು ದಫನ್ ಮಾಡಿ ಅಂತ್ಯ ಸಂಸ್ಕಾರ ನೆರವೇರಿಸಿದ್ದರು. ಈ ವೇಳೆ ವಿಷಯ ತಿಳಿದು  ಶವವನ್ನ ಮರಳಿ ತೆಗೆಯೋದು ಬೇಡ ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಮತ್ತೊಂದೆಡೆ ನಮಗೆ ತಾಯಿಯ ಶವ ಬೇಕು, ನಾವು ನಮ್ಮ ತಾಯಿಯ ಮುಖ ನೋಡಿ ಅಂತಿಮ ದರ್ಶನ ಪಡೆಯಬೇಕು ಅಂತಾ ಗದಿಗೆವ್ವಳ ಮಕ್ಕಳು ಶವಾಗಾರದ ಬಳಿಯೇ ಕೂತಿದ್ದರು.  ಕಡೆಗೆ ಪೊಲೀಸರು ಹಾಗೂ ಶವಾಗಾರದ ಸಿಬ್ಬಂದಿ ಎರಡೂ ಕುಟುಂಬಗಳ ಮನವೊಲಿಸಲು ಹರಸಾಹಸ ನಡೆಸಿದರು.  ಅಂತಿಮವಾಗಿ ಎರಡೂ ಶವಗಳನ್ನು ಎರಡೂ ಕುಟುಂಬಗಳ ಸದಸ್ಯರು ನೀಡಿ ಅಕ್ಕ ಪಕ್ಕದಲ್ಲಿ ಅಂತ್ಯಕ್ರಿಯೆ ಮಾಡುವ ಮೂಲಕ ಪ್ರಕರಣಕ್ಕೆ ತೆರೆ ಎಳೆಯಲಾಯಿತು.

(ವರದಿ: ಮಂಜುನಾಥ ತಳವಾರ)
Published by: Seema R
First published: May 11, 2021, 9:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories