ಕೊರೋನಾ ಬಿಕ್ಕಟ್ಟು; ಲಾಕ್​ಡೌನ್​ ವಿಸ್ತರಣೆಗೆ ಪ್ರಧಾನಿ ಮೋದಿ ನಿರ್ಧಾರ; ಭಾನುವಾರ ಸಂಜೆ ಘೋಷಣೆ ಸಾಧ್ಯತೆ

ಸದ್ಯದ ಈ ಎಲ್ಲ ಬೆಳವಣಿಗೆಗಳಿಂದ ಪ್ರಸ್ತುತ ವಿಧಿಸಲಾಗಿರುವ ಲಾಕ್​ಡೌನ್​ ಅನ್ನು ಏಪ್ರಿಲ್​ 14ರ ನಂತರವೂ ವಿಸ್ತರಣೆಗೆ ಕೇಂದ್ರ ಚಿಂತನೆ ನಡೆಸಿದೆ. ಭಾನುವಾರ ಸಂಜೆ ಈ ಸಂಬಂಧ ಪ್ರಧಾನಿ ಮೋದಿ ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ.

ಪ್ರಧಾನಿ ಮೋದಿ.

ಪ್ರಧಾನಿ ಮೋದಿ.

 • Share this:
  ನವದೆಹಲಿ: ಮಾರಕ ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಮಾರ್ಚ್ 24ರಿಂದ ಏಪ್ರಿಲ್ 14ರವರೆಗೆ ಒಟ್ಟು 21 ದಿನಗಳ ಕಾಲ ದೇಶವನ್ನು ಲಾಕ್​ಡೌನ್​ ಮಾಡಲಾಗಿದೆ. ಏತನ್ಮಧ್ಯೆ ಮಾರಕ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಮಂಗಳವಾರಕ್ಕೆ ಮುಕ್ತಾಯಗೊಳ್ಳಲಿರುವ ಲಾಕ್​ಡೌನ್​ಅನ್ನು ವಿಸ್ತರಿಸುವ ಸಾಧ್ಯತೆ ಇದೆ. ಬಹುಶಃ ಭಾನುವಾರ ಸಂಜೆ ಪ್ರಧಾನಿ ಮೋದಿ ಅವರು ಲಾಕ್​ಡೌನ್​ ವಿಸ್ತರಣೆ ಘೋಷಣೆ ಮಾಡಲಿದ್ದಾರೆ.

  ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ಅವರು ಶನಿವಾರ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆ ನಡೆಸಿದ ನಂತರ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ದಿನದಿಂದ ದಿನಕ್ಕೆ ಮಾರಕ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್​ಡೌನ್​ ವಿಸ್ತರಣೆ ಮಾಡುವಂತೆ ಹಲವು ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿವೆ.

  ಒಂದು ವೇಳೆ ಲಾಕ್​ಡೌನ್​ ಮುಂದುವರೆಸಿದರೂ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಕೆಲವು ವಲಯಗಳನ್ನು ನಿರ್ಬಂಧಮುಕ್ತಗೊಳಿಸುವ ಸಾಧ್ಯತೆ ಇದೆ. ಆದಾಗ್ಯೂ, ಅಗತ್ಯ ವಸ್ತುಗಳ ಸರಬರಾಜು ಹೊರತುಪಡಿಸಿ, ಉಳಿದ ಎಲ್ಲ ಅಂತರರಾಜ್ಯ ಸಂಪರ್ಕ ಸೇವೆ ನಿರ್ಬಂಧ ಮುಂದುವರೆಯಲಿದೆ ಎಂದು ಮೂಲಗಳು ತಿಳಿಸಿವೆ.

  ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಿ ಮೋದಿ ಸಭೆಗೆ ಎರಡು ದಿನ ಬಾಕಿ ಇರುವಂತೆಯೇ ಒಡಿಶಾ ರಾಜ್ಯ ಸರ್ಕಾರ ಲಾಕ್​ಡೌನ್​ ಅನ್ನು ಏಪ್ರಿಲ್​ 30ರವರೆಗೆ ವಿಸ್ತರಣೆ ಮಾಡಿದ ಮೊದಲ ರಾಜ್ಯವಾಗಿದೆ.

  ತೆಲಂಗಾಣದ ಕೆ.ಚಂದ್ರಶೇಖರ್​ ರಾವ್​ ಸೇರಿದಂತೆ ಇತರೆ ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್​ಡೌನ್​ ಮುಂದುವರೆಸುವಂತೆ ಬಲವಾಗಿ ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ಲಾಕ್​ಡೌನ್​ನಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಭಾರೀ ನಷ್ಟ ಉಂಟಾಗಿದೆ. ಆದರೆ, ಜನರ ಸುರಕ್ಷತೆ ನಮ್ಮ ಮೊದಲ ಆದ್ಯತೆ ಎಂಬುದು ಎಲ್ಲರ ಅಭಿಪ್ರಾಯವಾಗಿದೆ.

  ಇದನ್ನು ಓದಿ: ವಿಶ್ವಾದ್ಯಂತ ಕೊರೋನಾಗೆ 95,699 ಮಂದಿ ಬಲಿ; 16 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

  ತೆಲಂಗಾಣದ ಸಿಎಂ ಕೆಸಿಆರ್​ ಅವರು ಕನಿಷ್ಠ ಪಕ್ಷ ಜೂನ್​ ಕೊನೆಯವರೆಗಾದರೂ ಲಾಕ್​ಡೌನ್​ ವಿಸ್ತರಿಸಬೇಕು ಎಂದು ಹೇಳಿದ್ದಾರೆ. ಕೊರೋನಾ ವೈರಸ್​ ವಿರುದ್ದ ಹೋರಾಡಲು ಲಾಕ್​ಡೌನ್​ ಒಂದೇ ಸದ್ಯಕ್ಕೆ ಇರುವ ಪ್ರಬಲ ಅಸ್ತ್ರ. ಮತ್ತು ಅಮೆರಿಕ, ಸ್ಪೇನ್​ ಮತ್ತು ಇಟಲಿಯಂತಹ ದೇಶಗಳು ಎದುರಿಸುತ್ತಿರುವ ಸಮಸ್ಯೆಗಳು ನಮ್ಮಲ್ಲಿ ಮರುಕಳಿಸಿದಂತೆ ತಡೆಗಟ್ಟಲು ಸಾಧ್ಯ ಎಂದು ಕೆಸಿಆರ್​ ಅವರು ಮಾಧ್ಯಮ ಸಂವಾದದಲ್ಲಿ ಹೇಳಿದ್ದರು.

  ಪ್ರಧಾನಿ ಮೋದಿ ಅವರು ನಡೆಸಿದ ಸರ್ವಪಕ್ಷಗಳ ಸಭೆಯಲ್ಲೂ ದೇಶಾದ್ಯಂತ ಹೇರಲಾಗಿರುವ ಲಾಕ್​ಡೌನ್​ಅನ್ನು ಒಂದೇ ಬಾರಿಗೆ ತೆಗೆದುಹಾಕುವುದು ಬೇಡ. ಬದಲಿಗೆ ಹಂತಹಂತವಾಗಿ ನಿರ್ಬಂಧ ಸಡಿಲಿಸುವಂತೆ ವಿರೋಧ ಪಕ್ಷಗಳ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

  ಸದ್ಯದ ಈ ಎಲ್ಲ ಬೆಳವಣಿಗೆಗಳಿಂದ ಪ್ರಸ್ತುತ ವಿಧಿಸಲಾಗಿರುವ ಲಾಕ್​ಡೌನ್​ ಅನ್ನು ಏಪ್ರಿಲ್​ 14ರ ನಂತರವೂ ವಿಸ್ತರಣೆಗೆ ಕೇಂದ್ರ ಚಿಂತನೆ ನಡೆಸಿದೆ. ಭಾನುವಾರ ಸಂಜೆ ಈ ಸಂಬಂಧ ಪ್ರಧಾನಿ ಮೋದಿ ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ.


  First published: