ಕೋವಿಡ್-19; ಮುಂದಿನ ಶೈಕ್ಷಣಿಕ ವರ್ಷಕ್ಕೆ 9-12 ತರಗತಿಗಳಿಗೆ ಸಿಬಿಎಸ್ಇ ಪಠ್ಯಕ್ರಮ ಶೇ.30ರಷ್ಟು ಕಡಿತ
ಕಲಿಕೆಯ ಸಾಧನೆಯ ಮಹತ್ವವನ್ನು ಪರಿಗಣಿಸಿ, ಪ್ರಮುಖ ಪರಿಕಲ್ಪನೆಗಳನ್ನು ಉಳಿಸಿಕೊಳ್ಳುವ ಮೂಲಕ ಪಠ್ಯಕ್ರಮವನ್ನು ಶೇಕಡಾ 30 ರವರೆಗೆ ಕಡಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಲ್ ತಿಳಿಸಿದ್ದಾರೆ.
ನವ ದೆಹಲಿ (ಜುಲೈ 07); ಕೇಂದ್ರ ಪ್ರೌಡ ಶಿಕ್ಷಣ ಮಂಡಳಿ (ಸಿಬಿಎಸ್ಇ) 2020-21ರ ಶೈಕ್ಷಣಿಕ ವರ್ಷಕ್ಕೆ 9 ರಿಂದ 12 ನೇ ತರಗತಿಗಳ ಪಠ್ಯಕ್ರಮವನ್ನು ಮಾರಣಾಂತಿಕ ಕೊರೋನಾ ವೈರಸ್ ಕಾರಣದಿಂದಾಗಿ ಶೇ.30 ರಷ್ಟು ಕಡಿತಗೊಳಿಸಲು ನಿಶ್ಚಯಿಸಲಾಗಿದೆ ಎಂದು ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಲ್ ಮಂಗಳವಾರ ಪ್ರಕಟಿಸಿದ್ದಾರೆ.
ಟ್ವೀಟ್ ಮೂಲಕ ಸಚಿವಾಲಯದ ನಿರ್ಧಾರವನ್ನು ಪ್ರಕಟಿಸಿರುವ ರಮೇಶ್ ಪೋಖ್ರಿಯಲ್, “ದೇಶ ಮತ್ತು ಜಗತ್ತಿನಾದ್ಯಂತ ಅಸಾಮಾನ್ಯ ಸ್ಥಿತಿ ಚಾಲ್ತಿಯಲ್ಲಿದೆ. ಈ ಪರಿಸ್ಥಿತಿಯನ್ನು ಗಮನಿಸಿ ಸಿಬಿಎಸ್ಇಗೆ ಪಠ್ಯಕ್ರಮವನ್ನು ಪರಿಷ್ಕರಿಸಲು ಮತ್ತು 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಕೋರ್ಸ್ ಲೋಡ್ ಕಡಿಮೆ ಮಾಡಲು ಸೂಚಿಸಲಾಗಿದೆ" ಎಂದು ತಿಳಿಸಿದ್ದಾರೆ.
“ಮಾನವ ಸಂಪನ್ಮೂಲ ಸಚಿವಾಲಯ ಈ ನಿರ್ಧಾರಕ್ಕೆ ಬರುವ ಮುನ್ನವೇ ನಾನು ವಿದ್ಯಾರ್ಥಿಗಳಿಗೆ ಪಠ್ಯಕ್ರಮವನ್ನು ಕಡಿಮೆ ಮಾಡುವ ಬಗ್ಗೆ ಎಲ್ಲಾ ಶಿಕ್ಷಣ ತಜ್ಞರಿಂದ ಸಲಹೆಗಳನ್ನು ಆಹ್ವಾನಿಸಿದ್ದೆ. ಈ ಕುರಿತು 1.5 ಸಾವಿರಕ್ಕಿಂತ ಹೆಚ್ಚಿನ ಸಲಹೆಗಳನ್ನು ಸ್ವೀಕರಿಸಲಾಗಿದೆ ಎಂಬ ವಿಚಾರವನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ಅಗಾಧ ಪ್ರತಿಕ್ರಿಯೆಗಾಗಿ ಎಲ್ಲರಿಗೂ ಧನ್ಯವಾದಗಳು" ಎಂದು ಮತ್ತೊಂದು ಟ್ವೀಟ್ನಲ್ಲಿ ಸಚಿವ ರಮೇಶ್ ಪೋಖ್ರಿಯಲ್ ತಿಳಿಸಿದ್ದಾರೆ.
"ಕಲಿಕೆಯ ಸಾಧನೆಯ ಮಹತ್ವವನ್ನು ಪರಿಗಣಿಸಿ, ಪ್ರಮುಖ ಪರಿಕಲ್ಪನೆಗಳನ್ನು ಉಳಿಸಿಕೊಳ್ಳುವ ಮೂಲಕ ಪಠ್ಯಕ್ರಮವನ್ನು ಶೇಕಡಾ 30 ರವರೆಗೆ ಕಡಿತಗೊಳಿಸಲು ನಿರ್ಧರಿಸಲಾಗಿದೆ" ಎಂದು ಅವರು ಮಾಹಿತಿ ನೀಡಿದ್ದಾರೆ.
COVID-19 ಸೋಂಕು ನಿಯಂತ್ರಿಸುವ ಕ್ರಮವಾಗಿ ಕೇಂದ್ರ ಸರ್ಕಾರ ಕಳೆದ ಮಾರ್ಚ್.24 ರಂದು ದೇಶದಾದ್ಯಂತ ಲಾಕ್ಡೌನ್ ಘೋಷಿಸಿತ್ತು. ಪರಿಣಾಮ ದೇಶದ ಎಲ್ಲಾ ಶಾಲಾ ಕಾಲೇಜು ವಿಶ್ವವಿದ್ಯಾಲಯಗಳನ್ನು ಮುಚ್ಚಲಾಗಿತ್ತು. ತದನಂತರದ ದಿನಗಳಲ್ಲಿ ಕೇಂದ್ರ ಸರ್ಕಾರ ಹಲವಾರು ಹಂತಗಳಲ್ಲಿ ಲಾಕ್ಡೌನ್ ಅನ್ನು ಸಡಿಲಿಕೆ ಮಾಡಿದ್ದರೂ ಸಹ ಶಾಲಾ, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಈವರೆಗೆ ತೆರೆಯಲಾಗಿಲ್ಲ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ