ನವ ದೆಹಲಿ (ಮೇ 10); ದೆಹಲಿಯಲ್ಲಿ ಕೊರೋನಾ ದಿನದಿಂದ ದಿನಕ್ಕೆ ಕೈಮೀರುತ್ತಲೇ ಇದೆ. ಸೋಂಕಿತರ ಹಾಗೂ ಸಾವಿನ ಸಂಖ್ಯೆ ಅಧಿಕವಾಗುತ್ತಲೇ ಇದೆ. ಹೀಗಾಗಿ ಎಲ್ಲರಿಗೂ ಲಸಿಕೆ ನೀಡುವುದೊಂದೇ ಕೊರೋನಾವನ್ನು ಸೋಲಿಸಲು ಪರಿಹಾರ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಸಹ ಮೇ.01 ರಿಂದ 18 ರಿಂದ 44 ವರ್ಷದವರಿಗೆ ಕೊರೋನಾ ಲಸಿಕೆ ಕಡ್ಡಾಯ ಎಂದು ಹೇಳಿತ್ತು. ಆದರೆ, ಯಾವ ರಾಜ್ಯಗಳಿಗೂ ಈವರೆಗೆ ಅಗತ್ಯಕ್ಕೆ ತಕ್ಕಷ್ಟು ಲಸಿಕೆಯನ್ನು ನೀಡಲಾಗಿಲ್ಲ. ಪರಿಣಾಮ ಎಲ್ಲಾ ರಾಜ್ಯದಲ್ಲೂ ಕೊರೋನಾ ಲಸಿಕೆ ಖಾಲಿಯಾಗಿದೆ. ಇದಕ್ಕೆ ರಾಷ್ಟ್ರ ರಾಜಧಾನಿ ದೆಹಲಿಯೂ ಹೊರತಾಗಿಲ್ಲ. ಈ ಬಗ್ಗೆ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಕಳವಳ ವ್ಯಕ್ತಪಡಿಸಿರುವ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್, "ದೆಹಲಿಯಲ್ಲಿ ನಾಳೆ ಕೋವಾಕ್ಸೀನ್ ಖಾಲಿಯಾದರೆ, ಇನ್ನೂ ನಾಲ್ಕು ದಿನಗಳಲ್ಲಿ ಕೋವಿಶೀಲ್ಡ್ ಸಹ ಮುಗಿಯಲಿದೆ" ಎಂದು ಆತಂಕ ಹೊರಹಾಕಿದ್ದಾರೆ.
"ದೆಹಲಿಯಲ್ಲಿ ಕೇವಲ ಒಂದು ದಿನ ಕೊವಾಕ್ಸಿನ್ ಉಳಿದಿದೆ ಮತ್ತು ಕೋವಿಶೀಲ್ಡ್ ಲಸಿಕೆ ಮೂರರಿಂದ ನಾಲ್ಕು ದಿನಗಳು ಮಾತ್ರ ಉಳಿದಿವೆ. ನಮಗೆ ಬೇಗನೆ ಲಸಿಕೆಗಳು ಬೇಕಾಗುತ್ತವೆ. ಹೀಗಾಗಿ ಕೇಂದ್ರ ಸರ್ಕಾರ ಸಾಧ್ಯವಾದಷ್ಟು ಬೇಗ ದೆಹಲಿಗೆ ಲಸಿಕೆಯನ್ನು ಪೂರೈಸಬೇಕು. ಇಲ್ಲದಿದ್ದರೆ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟ" ಎಂದು ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.
ದೆಹಲಿ ಸರ್ಕಾರವು ತಿಂಗಳಿಗೆ ಸುಮಾರು 85 ಲಕ್ಷ ಡೋಸ್ ಪಡೆದರೆ ಮೂರು ತಿಂಗಳಲ್ಲಿ ಇಡೀ ರಾಷ್ಟ್ರ ರಾಜಧಾನಿಗೆ ಲಸಿಕೆ ಹಾಕಬಹುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ ಮರು ದಿನವೇ ದೆಹಲಿಯಲ್ಲಿ ಲಸಿಕೆ ಅಲಭ್ಯತೆ ಕಾಡಲಾರಂಭಿಸಿದೆ. ಪ್ರಸ್ತುತ ನಗರದಲ್ಲಿ ಪ್ರತಿದಿನ ಸುಮಾರು 1 ಲಕ್ಷ ಲಸಿಕೆ ನೀಡಲಾಗುತ್ತಿದೆ. ಇದನ್ನು 3 ಲಕ್ಷಕ್ಕೆ ಏರಿಸುವ ಗುರಿ ಇದೆ ಎಂದು ಅರವಿಂದ ಕೇಜ್ರಿವಾಲ್ ಇತ್ತೀಚೆಗೆ ಹೇಳಿದ್ದರು.
ಭಾರತದಲ್ಲಿ ಕೊರೋನಾ ಆತಂಕ:
ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಕೊರೋನಾ ಸೋಂಕು ಹರಡುವಿಕೆ ಶರವೇಗವನ್ನು ಪಡೆದುಕೊಂಡಿದೆ. ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ. ಏಪ್ರಿಲ್ 4ರಿಂದ ದಿನ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು, ಏಪ್ರಿಲ್ 14ರಿಂದ ದಿನ ಒಂದರಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನರು, ಏಪ್ರಿಲ್ 21ರಿಂದ ದಿನ ಒಂದರಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಜನರು ಹಾಗೂ ಏಪ್ರಿಲ್ 30ರಿಂದ ದಿನ ಒಂದರಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದರು. ಈಗ ತುಸು ಕಡಿಮೆಯಾಗಿ ಮೂರೂವರೆ ಲಕ್ಷಕ್ಕೂ ಹೆಚ್ಚು ಜನ ಸೋಂಕು ಪೀಡಿತರಾಗುತ್ತಿದ್ದಾರೆ.
ಭಾನುವಾರ 3,66,161 ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಗುಣ ಆಗಿರುವವರು 3,53,818 ಜನ ಮಾತ್ರ. ಇದರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,26,62,575ಕ್ಕೆ ಏರಿಕೆ ಆಗಿದೆ. ಇದಲ್ಲದೆ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಭಾನುವಾ 3,754 ಜನರು ಬಲಿ ಆಗಿದ್ದು ಈವರೆಗೆ ಮಹಾಮಾರಿ ಕೊರೋನಾಗೆ ಬಲಿ ಆದವರ ಸಂಖ್ಯೆ 2,46,116ಕ್ಕೆ ಏರಿಕೆ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ