ಭಾರತದ ಖಾಸಗಿ ಆಸ್ಪತ್ರೆಗಳಲ್ಲೇ ವ್ಯಾಕ್ಸಿನ್ ಅತ್ಯಂತ ದುಬಾರಿ.. ವಿಶ್ವದಲ್ಲೇ ಅತಿ ಹೆಚ್ಚು ದರ ನಮ್ಮಲ್ಲಿ ಏಕೆ?

ಉಚಿತ ಲಸಿಕೆ, ಲಸಿಕೆ ಮೇಲಿನ ತೆರಿಗೆ ಕಡಿತದ ನಂತರವೂ ಭಾರತ ಖಾಸಗಿ ಆಸ್ಪತ್ರೆಗಳು ಲಸಿಕೆಗೆ ದುಬಾರಿ ಬೆಲೆ ನಿಗದಿಪಡಿಸಿರುವುದು ಅಚ್ಚರಿ ಮೂಡಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ: ಸದ್ಯ ಪ್ರಪಂಚದಲ್ಲಿ ಕೊರೋನಾದಿಂದ ತೀವ್ರವಾಗಿ ನರಳುತ್ತಿರುವ ರಾಷ್ಟ್ರ ಭಾರತ. ನಿತ್ಯ ಲಕ್ಷಾಂತರ ಭಾರತೀಯರು ಸೋಂಕಿಗೆ ತುತ್ತಾಗುತ್ತಿದ್ದರೆ, ಸಾವಿರಾರು ಜನ ಸಾವಿನ ಮನೆ ಸೇರುತ್ತಿದ್ದಾರೆ. ಕೊರೋನಾ 2ನೇ ಅಲೆ ಅಬ್ಬರಿಸುತ್ತಿದ್ದು, ಇದರಿಂದ ಬಚಾವ್​ ಆಗಲು ಭಾರತ ಸರ್ಕಾರ ಲಸಿಕೆ ಅಭಿಯಾನವನ್ನು ತೀವ್ರಗೊಳಿಸಿದೆ. ದೇಶದ ಬಹುತೇಕ ರಾಜ್ಯಗಳನ್ನು ತನ್ನ ಪ್ರಜೆಗಳಿಗೆ ಉಚಿತವಾಗಿ ಲಸಿಕೆ ನೀಡುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲೂ ವ್ಯಾಕ್ಸಿನ್​ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ ವಿಶ್ವದಲ್ಲೇ ಭಾರತದ ಖಾಸಗಿ ಆಸ್ಪತ್ರೆಗಳೇ ಲಸಿಕೆಗೆ ಅತ್ಯಂತ ದುಬಾರಿ ಬೆಲೆ ನಿಗದಿಪಡಿಸಿವೆಯಂತೆ.

ಅತ್ಯಂತ ಹೆಚ್ಚು ಜನಸಂಖ್ಯೆಯಿರುವ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾದ ಭಾರತದಲ್ಲೇ ವ್ಯಾಕ್ಸಿನ್​ ಅತ್ಯಂತ ದುಬಾರಿಯಾಗಿರುವುದು ವಿಶ್ವದ ಗಮನ ಸೆಳೆದಿದೆ. ಉಚಿತ ಲಸಿಕೆ, ಲಸಿಕೆ ಮೇಲಿನ ತೆರಿಗೆ ಕಡಿತದ ನಂತರವೂ ಭಾರತ ಖಾಸಗಿ ಆಸ್ಪತ್ರೆಗಳು ಲಸಿಕೆಗೆ ದುಬಾರಿ ಬೆಲೆ ನಿಗದಿಪಡಿಸಿರುವುದು ಅಚ್ಚರಿ ಮೂಡಿಸಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿ ಡೋಸ್​ಗೆ 700 ರೂಪಾಯಿಯಿಂದ 1,500 ರೂಪಾಯಿವರೆಗೆ ದರ ನಿಗದಿ ಪಡಿಸಲಾಗಿದೆ. ಖಾಸಗಿ ಆಸ್ಪತ್ರೆಗಳು 18ರಿಂದ 44 ವರ್ಷ ವಯಸ್ಸಿನವರಿಗೆ ಇಷ್ಟು ದುಬಾರಿ ದರದಲ್ಲಿ ವ್ಯಾಕ್ಸಿನ್​ ಹಾಕುತ್ತಿವೆ.

ಸಿರಂ ಕಂಪನಿಯ ಕೋವಿಶೀಲ್ಡ್​ ಲಸಿಕೆಯ ಬೆಲೆ 250 ರೂಪಾಯಿ. ಇದನ್ನು ಖಾಸಗಿ ಆಸ್ಪತ್ರೆಯವರು 6 ಪಟ್ಟು ಹೆಚ್ಚು ಬೆಲೆಗೆ ಜನರಿಗೆ ನೀಡುತ್ತಿದೆ. ಇನ್ನು ಭಾರತ್​ ಬಯೋಟಿಕ್​ ಸಂಸ್ಥೆ ತನ್ನ ಕೋವ್ಯಾಕ್ಸಿನ್​ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಿಗೆ 1,200 ರೂಪಾಯಿಗೆ ಮಾರುತ್ತಿದೆ. ಖಾಸಗಿ ಆಸ್ಪತ್ರೆಗಳು ಇದನ್ನು 3ರಿಂದ 4 ಪಟ್ಟು ಹೆಚ್ಚಿನ ದರಕ್ಕೆ ಜನರಿಗೆ ನೀಡುತ್ತಿದೆ. ಭಾರತದ ಖಾಸಗಿ ಆಸ್ಪತ್ರೆಗಳು ವಿಧಿಸುತ್ತಿರುವಷ್ಟು ಬೆಲೆಯನ್ನು ವಿಶ್ವದ ಯಾವುದೇ ರಾಷ್ಟ್ರದ ಖಾಸಗಿ ಆಸ್ಪತ್ರೆಗಳೂ ವಿಧಿಸುತ್ತಿಲ್ಲ.

ದೇಶ ಕೊರೋನಾ ಸಂಕಷ್ಟ ಕಾಲ ಎದುರಿಸುತ್ತಿರುವಾಗಲೇ ಖಾಸಗಿ ಆಸ್ಪತ್ರೆಗಳು ದುಬಾರಿ ಬೆಲೆ ವಿಧಿಸಿ ವಸೂಲಿಗೆ ಇಳಿದಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಭಾರತದಲ್ಲಿ ಮಧ್ಯಮ ವರ್ಗದ ಜನರೇ ಹೆಚ್ಚಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸಿಕೊಳ್ಳುವುದು ಆರ್ಥಿಕ ಹೊರೆಯಾಗಲಿದೆ. ಭಾರತದ ದೊಡ್ಡ ಖಾಸಗಿ ಆಸ್ಪತ್ರೆಗಳ ಸಮೂಹವಾದ ಅಪೋಲೋ, ಮ್ಯಾಕ್ಸ್​, ಫೋರ್ಟಿಸ್​ ಹಾಗೂ ಮಣಿಪಾಲ್​ ಇಷ್ಟು ದುಬಾರಿ ದರಕ್ಕೆ ಲಸಿಕೆಯನ್ನು ನೀಡುತ್ತಿವೆ.

ದುಬಾರಿ ದರಕ್ಕೆ ಖಾಸಗಿ ಆಸ್ಪತ್ರೆಗಳು ಅವರದ್ದೇ ಕಾರಣಗಳನ್ನು ಕೊಡುತ್ತಿದೆ. ಲಸಿಕೆ ಮೇಲಿನ GST, ಸಾಗಾಣೆ ಶುಲ್ಕ, ಇನ್ನು ಆಸ್ಪತ್ರೆಯಲ್ಲಿ ಲಸಿಕೆ ನೀಡಲು ಶುಲ್ಕ, ಲಸಿಕೆ ಬಾಕ್ಸ್​ ಡ್ಯಾಮೇಜ್​, ವೇಸ್ಟೇಜ್​, ಸ್ಟೋರೇಜ್​​, ಇನ್ನು ಲಸಿಕೆ ಹಾಕುವವರು ಪಿಪಿಇ ಕಿಟ್​ ಧರಿಸುವುದು, ಸ್ಯಾನಿಟೈಸ್​ ಇವೆಲ್ಲಾ ಕಾರಣಗಳಿಂದ ಲಸಿಕೆಯ ಬೆಲೆ ದುಬಾರಿ ಆಗಿದೆ ಎನ್ನುತ್ತಿದ್ದಾರೆ. ಸರ್ಕಾರಗಳು ಉಚಿತವಾಗಿ ಲಸಿಕೆ ನೀಡುತ್ತಿದ್ದರೂ ಇಷ್ಟು ದುಬಾರಿ ಬೆಲೆ ಬೇಕಿತ್ತಾ ಎಂದು ಪ್ರಶ್ನಿಸಲಾಗುತ್ತಿದೆ. ಸುರಕ್ಷಿತವಾಗಿ ಲಸಿಕೆ ಪಡೆಯಲು ಇಚ್ಛಿಸುವವರು ಬೆಲೆ ಎಷ್ಟಾದರು ಖಾಸಗಿ ಆಸ್ಪತ್ರೆಗಳತ್ತಲೇ ಮುಖ ಮಾಡುತ್ತಾರೆ ಎನ್ನೋದು ಖಾಸಗಿ ಆಸ್ಪತ್ರೆಗಳ ವಾದವಾಗಿರೋದು ನಿಜಕ್ಕೂ ವಿಪರ್ಯಾಸ.
Published by:Kavya V
First published: